ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕೆದಾಟು: ತಾಂತ್ರಿಕ ವರದಿಗೆ ಅನುಮತಿ ಕೋರಿಕೆ

ಕಾವೇರಿ ನೀರಾವರಿ ನಿಗಮದಿಂದ ಪರಿಸರ ಸಚಿವಾಲಯಕ್ಕೆ ಪತ್ರ
Last Updated 24 ಜೂನ್ 2019, 20:06 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸುವ ಮೇಕೆದಾಟು ಸಮಾನಾಂತರ ಜಲಾಶಯ ಯೋಜನೆಯ ತಾಂತ್ರಿಕ ಕಾರ್ಯ ವರದಿಗೆ (ಟಿಒಆರ್‌)ಅನುಮತಿ ನೀಡಬೇಕು ಎಂದು ಕೋರಿ ಕಾವೇರಿ ನೀರಾವರಿ ನಿಗಮವು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಪತ್ರ ಬರೆದಿದೆ.

ಈ ಯೋಜನೆಯಂತೆ ಮೇಕೆದಾಟುವಿನಲ್ಲಿ ನಿರ್ಮಿಸುವ ಜಲಾಶಯದಿಂದ 400 ಮೆಗಾವಾಟ್‌ ಜಲವಿದ್ಯುತ್‌ ಉತ್ಪಾದಿಸಬಹುದು. ಇದರ ಒಟ್ಟು ಯೋಜನಾ ವೆಚ್ಚ ₹9 ಸಾವಿರ ಕೋಟಿ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಶಿವನಸಮುದ್ರದಿಂದ ಆರಂಭಗೊಂಡು ರಾಜ್ಯದ ಗಡಿ ಭಾಗದ ತನಕ ಕಾವೇರಿ ನದಿ ಪಾತ್ರವನ್ನೇ ಬಳಸಿಕೊಂಡು ನಿರ್ಮಿಸುವ ಯೋಜನೆಯೇ ಮೇಕೆದಾಟು ನೀರಾವರಿ ಯೋಜನೆ. ಈ ಯೋಜನೆಗೆ ಒಟ್ಟು 5,252 ಹೆಕ್ಟೇರ್‌ ಜಮೀನು ಬೇಕು.ಇದರಲ್ಲಿ 4,996 ಹೆಕ್ಟೇರ್‌ ಮುಳುಗಡೆ ಪ್ರದೇಶವಾಗಲಿದ್ದು, ಇತರ 256 ಹೆಕ್ಟೇರ್‌ ಇತರ ನಿರ್ಮಾಣ ಕಾರ್ಯಗಳಿಗೆ ಬೇಕು. ಮುಳುಗಡೆಯಾಗುವ ಪ್ರದೇಶಗಳಲ್ಲಿ ಕಾವೇರಿ ವನ್ಯಜೀವಿ ಧಾಮದ 3,181 ಹೆಕ್ಟೇರ್‌, 1,869 ಹೆಕ್ಟೇರ್‌ ಮೀಸಲು ಅರಣ್ಯ ಪ್ರದೇಶ ಹಾಗೂ 201 ಹೆಕ್ಟೇರ್‌ ಕಂದಾಯ ಭೂಮಿ ಸೇರಿದೆ ಎಂದು ವಿವರಿಸಲಾಗಿದೆ.

ತಮಿಳುನಾಡು ಗಡಿ ಭಾಗದಿಂದ ಕೇವಲ 3.90 ಕಿ.ಮೀ.ದೂರದಲ್ಲಿ ಈ ಯೋಜನೆ ರೂಪುಗೊಳ್ಳಲಿದ್ದು, 2006ರ ಪರಿಣಾಮ ಅಧ್ಯಯನ ಅಧಿಸೂಚನೆಯಲ್ಲಿ ಹಾಗೂ 2018ರ ಆಗಸ್ಟ್‌ನಲ್ಲಿ ಮಾಡಲಾದ ತಿದ್ದುಪಡಿಯಲ್ಲಿ ಈ ಯೋಜನೆಯನ್ನುಕೆಟಗರಿ ‘ಎ’ ಯೋಜನೆ ಎಂದು ಗುರುತಿಸಲಾಗಿದೆ. ಹೀಗಾಗಿ ಕೇಂದ್ರ ಪರಿಸರ ಸಚಿವಾಲಯವೇ ಯೋಜನೆಗೆ ಅನುಮತಿ ನೀಡಬೇಕಾಗಿದೆ. ಅದರಂತೆ ನಿಗಮವು ಸಾಧ್ಯತಾ ಪೂರ್ವ ವರದಿ, ಕರಡು ತಾಂತ್ರಿಕ ಕಾರ್ಯ ವರದಿ ಸಹಿತ ಅಗತ್ಯದ ರೇಖಾಚಿತ್ರಗಳು, ನಕಾಶೆಗಳನ್ನು ಒದಗಿಸಿದೆ. ಅವುಗಳನ್ನು ಪರಿಶೀಲಿಸಿ ತಾಂತ್ರಿಕ ಕಾರ್ಯ ವರದಿಗೆ ಅನುಮತಿ ನೀಡಬೇಕು ಎಂದು ವಿವರಿಸಲಾಗಿದೆ.

2011ರ ಜನಗಣತಿಯಂತೆ 6.10 ಕೋಟಿ ಜನಸಂಖ್ಯೆ ಇರುವ ಕರ್ನಾಟಕದಲ್ಲಿ ಕೃಷ್ಣಾ, ಕಾವೇರಿಯಂತಹ ದೊಡ್ಡ ನದಿಗಳು, ಪಶ್ಚಿಮಾಭಿಮುಖವಾಗಿ ಹರಿಯುವ 13 ನದಿಗಳು ಇದ್ದಾಗ್ಯೂ, ಕುಡಿಯುವ ನೀರು ಮತ್ತು ವಿದ್ಯುತ್‌ಗೆ ಭಾರಿ ಕೊರತೆ ಇದೆ. ಮೇಕೆದಾಟು ಮತ್ತು ಇತರ ಎರಡು ಕುಡಿಯುವ ನೀರು ಯೋಜನೆಗಳಿಂದ ತಮಿಳುನಾಡಿಗೆ ಅಗತ್ಯದ 10 ಟಿಎಂಸಿ ಅಡಿ ನೀರು ಒದಗಿಸುವುದರ ಜತೆಗೆ ರಾಜ್ಯಕ್ಕೆ ಅಗತ್ಯವಾದ 177.25 ಟಿಎಂಸಿ ಅಡಿ ನೀರು ಬಳಸಿಕೊಳ್ಳುವುದು ಸಾಧ್ಯವಿದೆ ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT