ಶುಕ್ರವಾರ, ಸೆಪ್ಟೆಂಬರ್ 24, 2021
27 °C
ನಮ್ಮ ಮೆಟ್ರೊ –ಬಿಎಂಟಿಸಿಗೆ ಒಂದೇ ಕಾರ್ಡ್‌

ಏಕೀಕೃತ ಕಾರ್ಡ್‌ ಬಳಕೆಗೆ ‘ಎಎಫ್‌ಸಿ’ ಗೇಟ್‌ ಅಳವಡಿಕೆ

ಪ್ರಸನ್ನಕುಮಾರ ಪಿ.ಎನ್. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಮ್ಮ ಮೆಟ್ರೊ ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್‌ಗಳಲ್ಲಿ ಪ್ರಯಾಣಕ್ಕೆ ‘ಒಂದೇ ಕಾರ್ಡ್‌’ (ಕಾಮನ್‌ ಮೊಬಿಲಿಟಿ ಕಾರ್ಡ್‌) ಬಳಸಲು ಕಾಯುತ್ತಿರುವ ಪ್ರಯಾಣಿಕರಿಗೆ ಶೀಘ್ರದಲ್ಲಿ ಪರಿಹಾರ ಸಿಗಲಿದೆ.

ಕೆಂಪೇಗೌಡ ಮತ್ತು ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದಲ್ಲಿ ತಲಾ ಎರಡು ‘ಸ್ವಯಂಚಾಲಿತ ಶುಲ್ಕ ಸಂಗ್ರಹಣೆ’ (ಎಎಫ್‌ಸಿ) ಗೇಟ್‌ಗಳನ್ನು ಸ್ಥಾಪಿಸಲು ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ನಿರ್ಧರಿಸಿದೆ. ಇದರಿಂದ ಪ್ರಯಾಣಿಕರಿಗೆ ಮತ್ತಷ್ಟು ಸಹಾಯವಾಗಲಿದೆ.

ಈಗಾಗಲೇ ಮೊಬಿಲಿಟಿ ಕಾರ್ಡನ್ನು ಬಿಎಂಟಿಸಿ ಮತ್ತು ಮೆಟ್ರೊ ಪ್ರಯಾಣಿಕರ ಬಳಕೆಗೆ 4 ಎಎಫ್‌ಸಿ ಗೇಟ್‌ಗಳನ್ನು ಅಳವಡಿಸಲು ಯೋಜನೆ ರೂಪಿಸಲಾಗಿದೆ. ಪ್ರತಿ ನಿಲ್ದಾಣದಲ್ಲಿ ತಲಾ ಎರಡು ಗೇಟ್‌ಗಳಂತೆ ಅಳವಡಿಸಲಾಗುತ್ತದೆ. ಪ್ರಯಾಣಿಕರ ಪ್ರವೇಶ ಹಾಗೂ ಹೊರ ಹೋಗಲು ಗೇಟ್ ಸ್ಥಾಪಿಸಲಾಗುತ್ತದೆ.

‘ಪ್ರಾಯೋಗಿಕವಾಗಿ ಎಎಫ್‌ಸಿ ಗೇಟ್‌ಗಳನ್ನು ಅಳವಡಿಸುತ್ತಿದ್ದು, ಅದಕ್ಕೆ ಬೇಕಾದ ತಂತ್ರಜ್ಞಾನ ಕಾರ್ಯ ಪ್ರಗತಿಯಲ್ಲಿದೆ. ಇದು ಯಶಸ್ವಿಯಾದರೆ ಮಾತ್ರ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಅಳವಡಿಸಲು ಮುಂದಾಗುತ್ತೇವೆ’ ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್‌ ತಿಳಿಸಿದರು.

‘ಗೇಟ್‌ಗಳ ಅಳವಡಿಕೆಗೆ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ನಾಲ್ಕು ತಿಂಗಳು ಕಾಲಾವಕಾಶ ಕೇಳಿದೆ. ಮೊಬಿಲಿಟಿ ಕಾರ್ಡ್‌ ಈಗಾಗಲೇ ಜಾರಿಯಲ್ಲಿದೆ. ಬಿಎಂಟಿಸಿ ಬಸ್‌ ವಿತರಿಸುವ ಟಿಕೆಟ್‌ ಯಂತ್ರದಲ್ಲಿ ಮತ್ತು ಎಎಫ್‌ಸಿ ಗೇಟ್‌ನಲ್ಲಿ ಕಾರ್ಡ್‌ ಕೆಲಸ ಮಾಡುವಂತಹ ತಂತ್ರಜ್ಞಾನದ ವ್ಯವಸ್ಥೆ ರೂಪಿಸಲಾಗುತ್ತದೆ’ ಎಂದು ಹೇಳಿದರು.‌

‘ಮೆಟ್ರೊದಲ್ಲಿ ನಿತ್ಯ 7 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಹಂತ ಹಂತವಾಗಿ ಆರು ಬೋಗಿಗಳನ್ನು ಅಳವಡಿಸುವುದರಿಂದ ಪ್ರಯಾಣಿಕರ ಸಂಖ್ಯೆಯೂ ದ್ವಿಗುಣವಾಗಲಿದೆ. ಎರಡೂ ಸಾರಿಗೆ ವ್ಯವಸ್ಥೆಗಳಿಗೆ ಸರಿ ಹೊಂದುವಂತೆ ಈ ಕಾರ್ಡ್ ವಿನ್ಯಾಸಗೊಳಿಸಲಾಗಿದ್ದು, ಒಂದೇ ಕಾರ್ಡ್‌ ಪರಿಚಯಿಸಿದರೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ’ ಎಂದು ಅವರು ವಿವರಿಸಿದರು.

‘ಈಗಾಗಲೇ ಈ ಕಾರ್ಡನ್ನು ನವದೆಹಲಿಯಲ್ಲಿ ಪ್ರಾಯೋಗಿಕ ಬಳಕೆ ಆರಂಭವಾಗಿದೆ. ಅದೇ ರೀತಿ ಬೆಂಗಳೂರಿನಲ್ಲೂ ಪ್ರಾರಂಭಿಸಲು ಮುಂದಾಗಿದ್ದೇವೆ. ಈಚೆಗೆ ನವದೆಹಲಿಯಲ್ಲಿ ರಸ್ತೆ ಸಾರಿಗೆ, ದೆಹಲಿ ಮೆಟ್ರೊ ರೈಲು ನಿಗಮ, ನೀತಿ ಆಯೋಗದ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದೆ. ಮೊಬಿಲಿಟಿ ಕಾರ್ಡ್‌ ಬಳಕೆ ಬಗ್ಗೆ ಚರ್ಚೆ ನಡೆಯಿತು’ ಎಂದು ತಿಳಿಸಿದರು.

ಬಿಇಎಲ್, ಸೆಂಟರ್‌ ಫಾರ್‌ ಡೆವಲಪ್‌ಮೆಂಟ್‌ ಆಫ್‌ ಅಡ್ವಾನ್ಸಡ್‌ ಕಂಪ್ಯೂಟಿಂಗ್‌ (ಸಿ-ಡ್ಯಾಕ್‌) ಮತ್ತು ಭಾರತೀಯ ತಂತ್ರಜ್ಞಾನ ಸಂಸ್ಥೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಗೇಟ್‌ಗಳ ಅಳವಡಿಕೆಗೆ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಸಹಕಾರ ನೀಡಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು