ಪಾದಚಾರಿ ಮಾರ್ಗ ರಸ್ತೆಯಲ್ಲೇ ಪಾರ್ಕಿಂಗ್‌

ಮಂಗಳವಾರ, ಮಾರ್ಚ್ 26, 2019
33 °C
ಮೆಟ್ರೊ ನಿಲ್ದಾಣಗಳ ಬಳಿ ಪಾರ್ಕಿಂಗ್‌ ಅವ್ಯವಸ್ಥೆ

ಪಾದಚಾರಿ ಮಾರ್ಗ ರಸ್ತೆಯಲ್ಲೇ ಪಾರ್ಕಿಂಗ್‌

Published:
Updated:
Prajavani

ಮೆಟ್ರೊ ಸಿಟಿ ಖ್ಯಾತಿಯ ಬೆಂಗಳೂರಿನಲ್ಲಿ ಪಾದಚಾರಿ ಮಾರ್ಗಗಳು ಯಾರಿಗಾಗಿ ಇವೆ? ಕೆಲವೆಡೆ ಅವುಗಳು ಅಕ್ಕ ಪಕ್ಕದ ಅಂಗಡಿ, ಮಳಿಗೆಯವರಿಂದ ಒತ್ತುವರಿ ಆಗಿದ್ದರೆ, ಇನ್ನೂ ಕೆಲವೆಡೆ ಪಾದಚಾರಿ ಮಾರ್ಗಗಳಲ್ಲಿಯೇ ಸಣ್ಣ ಪುಟ್ಟ ಪೆಟ್ಟಿಗೆ ಅಂಗಡಿಗಳೂ ತಲೆ ಎತ್ತಿವೆ. ಆದರೆ ಕಿ.ಮೀ ಗಟ್ಟಲೆ ಪಾದಚಾರಿ ಮಾರ್ಗಗಳು ಒತ್ತುವರಿ ಆಗಿರುವುದು ಗೊತ್ತಿದೆಯಾ?

ಅದೂ ಒಂದಲ್ಲ, ಎರಡಲ್ಲ, ಹತ್ತಾರು ಕಡೆಗಳಲ್ಲಿ! ಬೆಳಿಗ್ಗೆ 6 ಗಂಟೆಯಿಂದ ಆರಂಭವಾಗುವ ಈ ಒತ್ತುವರಿ, ರಾತ್ರಿ 10ರವರೆಗೂ ಇರುತ್ತದೆ. ಆ ನಂತರವಷ್ಟೇ ಅಲ್ಲಿ ಪಾದಚಾರಿ ಮಾರ್ಗಗಳು ಗೋಚರಿಸುವುದು. ಅಲ್ಲಿಯವರೆಗೆ ಅಲ್ಲಿ ಪಾದಚಾರಿ ಮಾರ್ಗಗಳು ಇವೆ ಎಂಬುದರ ಸಣ್ಣ ಗುರುತೂ ಕಾಣುವುದಿಲ್ಲ!!

ಹೌದು, ಅವು ನಗರದ ವಿವಿಧೆಡೆ ಇರುವ ಮೆಟ್ರೊ ರೈಲು ನಿಲ್ದಾಣಗಳ ಬಳಿಯ ಪಾದಚಾರಿ ಮಾರ್ಗಗಳು. ಈ ಮಾರ್ಗಗಳನ್ನು ಒತ್ತುವರಿ ಮಾಡಿಕೊಳ್ಳುವವರು ಮೆಟ್ರೊದಲ್ಲಿ ಸಂಚರಿಸುವ ಪ್ರಯಾಣಿಕರು. ಅವರು ತಮ್ಮ ಬೈಕ್‌, ಕಾರುಗಳನ್ನು ಪಾದಚಾರಿ ಮಾರ್ಗಗಳಲ್ಲಿ ನಿಲ್ಲಿಸಿ ಹೋಗುತ್ತಾರೆ. ಅದೂ ಒಂದಲ್ಲ, ಎರಡಲ್ಲ, ಸಾವಿರಾರು ವಾಹನಗಳು ಪ್ರತಿ ಮೆಟ್ರೊ ನಿಲ್ದಾಣಗಳ ಬಳಿಯ ಪಾದಚಾರಿ ಮಾರ್ಗಗಳನ್ನು ಆವರಿಸುತ್ತಿವೆ.

ಬೆಳಿಗ್ಗೆ ಬಂದು ಅಲ್ಲಿ ನಿಲ್ಲುವ ವಾಹನಗಳು ತೆರವಾಗುವುದು ಸಂಜೆ ಅಥವಾ ರಾತ್ರಿಯಾದ ಮೇಲೆಯೇ. ಹಾಗಾಗಿ ಮೆಟ್ರೊ ನಿಲ್ದಾಣಗಳ ಬಳಿ ಪಾದಚಾರಿಗಳಿಗೆ ನಡೆದಾಡಲು ಜಾಗವೇ ಇರುವುದಿಲ್ಲ. ಅವರು ರಸ್ತೆ ಮಧ್ಯದಲ್ಲಿಯೇ ನಡೆದಾಡಬೇಕು. ವಾಹನದಟ್ಟಣೆಯಿರುವ ಪ್ರದೇಶಗಳಲ್ಲಿಯಂತೂ ಪಾದಚಾರಿಗಳು ಹರಸಾಹಸ ಪಡಬೇಕು.

ಒಂದೆರಡು ವರ್ಷಗಳಲ್ಲಿಯೇ ಮೆಟ್ರೊ ಬೆಂಗಳೂರು ಮಹಾನಗರದ ಜನರ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಇದು ನಗರದ ಪ್ರಮುಖ ಸಾರಿಗೆ ಸಂಪರ್ಕವೂ ಹೌದು. ಬಿಎಂಟಿಸಿ ಬಸ್‌, ಆಟೊಗಳಲ್ಲಿ ಹೋಗುವವರು ಮೆಟ್ರೊಗೇ ಆದ್ಯತೆ ನೀಡುತ್ತಾರೆ. ಬೈಕ್‌ ಮತ್ತು ಕಾರಿನಲ್ಲಿ ಹೋಗುವವರು ಸಮೀಪದ ಮೆಟ್ರೊ ನಿಲ್ದಾಣದ ಬದಿಯಲ್ಲಿನ ಪಾದಚಾರಿ ಮಾರ್ಗಗಲಲ್ಲಿ ನಿಲ್ಲಿಸಿ ಮೆಟ್ರೊ ಏರುತ್ತಾರೆ. ಇದು ಪಾದಚಾರಿಗಳ, ಇತರ ವಾಹನ ಸವಾರರ ಹಾಗೂ ಸ್ಥಳೀಯ ನಿವಾಸಿಗಳ ನೆಮ್ಮದಿ ಕೆಡಿಸಿರುವುದಂತೂ ದಿಟ.

ಮೈಸೂರು ರಸ್ತೆ (ನಾಯಂಡಹಳ್ಳಿ), ಮಾಗಡಿ ರಸ್ತೆ, ಇಂದಿರಾನಗರ, ಬೈಯಪ್ಪನಹಳ್ಳಿ, ಬಸವನಗುಡಿ, ನಾಗಸಂದ್ರ, ದಾಸರಹಳ್ಳಿ ಸೇರಿದಂತೆ ಕೆಲವೆಡೆ ಸುಸಜ್ಜಿತ ಪಾರ್ಕಿಂಗ್‌ ವ್ಯವಸ್ಥೆಯನ್ನು ಮೆಟ್ರೊ ಮಾಡಿದೆ. ಆದರೆ ಉಳಿದ ಪ್ರದೇಶಗಳಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಇಲ್ಲದೆ ಮೆಟ್ರೊ ಪ್ರಯಾಣಿಕರು ಪರದಾಡುವಂತಾಗಿದೆ. ಹಾಗಾಗಿ ಅವರೆಲ್ಲ ನಿಲ್ದಾಣಗಳ ಬಳಿಯ ಪಾದಚಾರಿ ಮಾರ್ಗಗಳು, ಸರ್ವಿಸ್‌ ರಸ್ತೆಗಳಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿ ಹೋಗುತ್ತಿದ್ದಾರೆ.

‘ಮೆಟ್ರೊ’ ಪುರವಣಿ ದೀಪಾಂಜಲಿ ನಗರ, ಅತ್ತಿಗುಪ್ಪೆ, ವಿಜಯನಗರ, ಬಾಲಗಂಗಾಧನಾಥ ಸ್ವಾಮೀಜಿ ನಿಲ್ದಾಣಗಳ ಬಳಿ ಪರಿಶೀಲನೆ ನಡೆಸಿದಾಗ ಕಂಡು ಬಂದ ದೃಶ್ಯಗಳು ಇಲ್ಲಿವೆ.

**

ದೀಪಾಂಜಲಿನಗರ: ರಸ್ತೆಯಲ್ಲೇ ಪಾರ್ಕಿಂಗ್‌

ಮೈಸೂರು ರಸ್ತೆ ಕಡೆಯಿಂದ ಹೊರಡುವ ಮಾರ್ಗದಲ್ಲಿ ಎದುರಾಗುವ ಎರಡನೇ ನಿಲ್ದಾಣ. ಇಲ್ಲಿ ಅಂದಾಜು 100 ಬೈಕ್‌ಗಳನ್ನು ನಿಲ್ಲಿಸುವಷ್ಟು ಜಾಗ ಮೆಟ್ರೊ ಆವರಣದಲ್ಲಿದೆ. ಆದರೆ ಈ ನಿಲ್ದಾಣದಿಂದ ನಿತ್ಯ ಸಾವಿರಾರು ಪ್ರಯಾಣಿಕರು ಸಂಚರಿಸುತ್ತಾರೆ. ಗಿರಿನಗರ, ರಿಂಗ್‌ ರಸ್ತೆ, ಜ್ಞಾನಭಾರತಿ, ಚಂದ್ರಾಬಡಾವಣೆ, ನಾಯಂಡಹಳ್ಳಿ, ರಾಜರಾಜೇಶ್ವರಿನಗರ ಭಾಗದ ಕೆಲ ಬೈಕ್ ಸವಾರರು ತಮ್ಮ ಬೈಕ್‌ಗಳನ್ನು ದೀಪಾಂಜಲಿ ನಗರದ ಪಾದಚಾರಿ ಮಾರ್ಗದಲ್ಲಿ ನಿಲ್ಲಿಸಿ ಮೆಟ್ರೊ ಏರುತ್ತಾರೆ. ಇಲ್ಲಿನ ರಸ್ತೆಯೊಂದರ ಪಾದಚಾರಿ ಮಾರ್ಗವಿರಲಿ ಆ ರಸ್ತೆಯ ಮುಕ್ಕಾಲು ಭಾಗವೇ ಬೈಕ್‌, ಕಾರು, ಟಿ.ಟಿ, ಲಾರಿ, ಆಟೊಗಳಿಂದ ಆವೃತವಾಗಿರುತ್ತದೆ. ಈ ರಸ್ತೆಯಲ್ಲಿ ಸಾಗುವ ವಾಹನ ಸವಾರರು, ನಡೆದಾಡುವ ಪಾದಚಾರಿಗಳು ಹಿಡಿಶಾಪ ಹಾಕಿಕೊಂಡೇ ಹೋಗುವಂತ ಸ್ಥಿತಿ ಇದೆ.

ಇಲ್ಲಿ ನಿಲ್ಲಿಸುವ ಕಾರು, ಟಿ.ಟಿಗಳ ಚಾಲಕರು ತಮ್ಮ ವಾಹನಗಳನ್ನು ತೆಗೆಯುವಾಗ, ದ್ವಿಚಕ್ರ ವಾಹನಗಳನ್ನು ಹೇಗೆಂದರೆ ಹಾಗೆ ಎಳೆದು ಹಾಕುತ್ತಾರೆ. ಇದರಿಂದ ರಸ್ತೆ ಇನ್ನಷ್ಟು ಕಿರಿದಾಗುತ್ತದೆ. ಕೆಲ ಕಾರುಗಳಿಗೆ ಇದು ಕಾಯಂ ಪಾರ್ಕಿಂಗ್ ತಾಣವಾಗಿದ್ದು, ತಿಂಗಳಾದರೂ ತೆಗೆಯದಿರುವುದು ಕಂಡು ಬರುತ್ತದೆ.

ಇಲ್ಲಿ ವಾಹನ ನಿಲ್ಲಿಸುತ್ತಿದ್ದ ಗಿರಿನಗರದ ನಿವಾಸಿ ಪ್ರದ್ಯಮ್ನ ಅವರನ್ನು ವಿಚಾರಿಸಿದಾಗ, ‘ನಾನು ನಿತ್ಯ ಕಚೇರಿಗೆ ಹೋಗಲು ಮೆಟ್ರೊ ಬಳಸುತ್ತೇನೆ. ಮನೆಯಿಂದ ನಿಲ್ದಾಣಕ್ಕೆ ಬರಲು ಬಸ್‌ ಸೌಕರ್ಯ ಇಲ್ಲ. ಆಟೊದವರು ₹ 100 ಕೇಳುತ್ತಾರೆ. ಅಷ್ಟೆಲ್ಲ ಹೇಗೆ ಕೊಡುವುದು. ಅದಕ್ಕಾಗಿ ಬೈಕ್‌ ತೆಗೆದುಕೊಂಡು ಬಂದು ದೀಪಾಂಜಲಿನಗರದಲ್ಲಿ ರಸ್ತೆ ಬದಿಯಲ್ಲಿಯೇ ರಿಸ್ಕ್‌ ತೆಗೆದುಕೊಂಡು ನಿಲ್ಲಿಸಿ ಹೋಗುತ್ತೇನೆ. ವ್ಯವಸ್ಥಿತವಾದ ಪಾರ್ಕಿಂಗ್‌ ವ್ಯವಸ್ಥೆಯನ್ನು ಕಲ್ಪಿಸಬೇಕಾದದ್ದು ಮೆಟ್ರೊದ ಜವಾಬ್ದಾರಿ. ಈ ನಿಟ್ಟಿನಲ್ಲಿ ಮೆಟ್ರೊ ಬೇಗ ಕೆಲಸ ಮಾಡಲಿ’ ಎನ್ನುತ್ತಾರೆ.

ಇಲ್ಲಿಯೇ ಬೈಕ್‌ ನಿಲ್ಲಿಸುತ್ತಿದ್ದ ರಾಜರಾಜೇಶ್ವರಿ ನಗರದ ರಾಜೇಶ್‌ ಅವರನ್ನು ಪ್ರಶ್ನಿಸಿದರೆ, ‘ನಾಯಂಡಹಳ್ಳಿ ಬಳಿ ಮೆಟ್ರೊ ಪಾರ್ಕಿಂಗ್‌ ವ್ಯವಸ್ಥೆ ಚೆನ್ನಾಗಿ ಇದೆ. ಅಲ್ಲಿ ಪಾರ್ಕಿಂಗ್‌ ಶುಲ್ಕ ದುಬಾರಿ. ದಿನಕ್ಕೆ ₹ 30 ಪಾವತಿಸಬೇಕು. ನಿತ್ಯ ಸಂಚರಿಸುವವರಿಗೆ ಇಷ್ಟು ಪಾವತಿಸುವುದು ಕಷ್ಟ. ಆದ್ದರಿಂದ ದೀಪಾಂಜಲಿ ನಗರಕ್ಕೆ ಬಂದು ಬೈಕ್‌ ನಿಲ್ಲಿಸುತ್ತೇನೆ. ಇಲ್ಲಿ ಪಾರ್ಕಿಂಗ್‌ ಶುಲ್ಕ ಇಲ್ಲ. ಗಾಡಿಯನ್ನು ಸ್ವಂತ ರಿಸ್ಕ್‌ ಮೇಲೆಯೇ ಬಿಟ್ಟು ಹೋಗುತ್ತೇನೆ. ಎರಡು ವರ್ಷಗಳಿಂದ ಹೀಗೆ ಮಾಡುತ್ತಿದ್ದೇನೆ. ಪಾರ್ಕಿಂಗ್‌ ಶುಲ್ಕವನ್ನು ₹ 10 ಅಥವಾ ₹15 ಇಟ್ಟರೆ ಅನುಕೂಲವಾಗುತ್ತದೆ’ ಎಂದು ವಿವರಿಸುತ್ತಾರೆ.

**

ಅತ್ತಿಗುಪ್ಪೆ: ಸರ್ವಿಸ್‌ ರಸ್ತೆ ತಿಂದ ಪಾರ್ಕಿಂಗ್‌

ಅತ್ತಿಗುಪ್ಪೆ ಮೆಟ್ರೊ ನಿಲ್ದಾಣದ ಎರಡೂ ಬದಿಯ ಸರ್ವಿಸ್‌ ರಸ್ತೆಯನ್ನು ಮೆಟ್ರೊ ಪ್ರಯಾಣಿಕರ ದ್ವಿಚಕ್ರ ವಾಹನಗಳು ನಿತ್ಯ ಆವರಿಸಿಕೊಳ್ಳುತ್ತವೆ. ಸರ್ವೀಸ್‌ ರಸ್ತೆಯೇ ಅಲ್ಲದೆ ಅಕ್ಕ ಪಕ್ಕದ ಇತರ ರಸ್ತೆಗಳ ಮನೆಗಳ ಮುಂದೆಲ್ಲ ಮೆಟ್ರೊ ಪ್ರಯಾಣಿಕರ ವಾಹನಗಳು ನಿಂತಿರುತ್ತವೆ. ಬಂಟರ ಸಂಘದ ಅಕ್ಕ ಪಕ್ಕದ ರಸ್ತೆಗಳು, ಶರಾವತಿ ಆಸ್ಪತ್ರೆ ಆಜು–ಬಾಜಿನ ರಸ್ತೆಗಳು ಮತ್ತು ಅವುಗಳ ಪಾದಚಾರಿ ಮಾರ್ಗಗಳು ಬೈಕ್‌ ಪಾರ್ಕಿಂಗ್‌ಗೆ ಬಳಕೆಯಾಗುತ್ತಿವೆ. ಆರ್‌ಪಿಸಿ ಲೇಔಟ್‌ನಿಂದ್‌ ಆರಂಭವಾಗಿ ಮಾರುತಿ ಮೆಡಿಕಲ್ಸ್‌ವರೆಗಿನ ಸರ್ವೀಸ್‌ ರಸ್ತೆಯ ಪಾದಚಾರಿ ಮಾರ್ಗ ಸಂಪೂರ್ಣವಾಗಿ ಪಾರ್ಕಿಂಗ್‌ ತಾಣವಾಗಿ ಪರಿವರ್ತಿತವಾಗಿದೆ.

ರಸ್ತೆ ಬದಿಯಲ್ಲಿನ ಅಂಗಡಿ ಮಳಿಗೆಯವರಿಗೆ, ನಿವಾಸಿಗಳಿಗೆ, ಆಸ್ಪತ್ರೆಯವರಿಗೆ ತಮ್ಮ ವಾಹನಗಳನ್ನು ತೆಗೆದುಕೊಂಡು ಹೋಗಲು, ಬರಲು ಕಷ್ಟವಾಗುತ್ತಿದೆ. ಅಲ್ಲದೆ ಈ ಎರಡು ಸರ್ವೀಸ್‌ ರಸ್ತೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳು, ಸ್ಟಡಿ ಸೆಂಟರ್‌ಗಳು, ಶಾಲೆಗಳು, ಪಿ.ಜಿಗಳು ಇದ್ದು, ಅಲ್ಲಿನ ಜನರೂ ಪಾದಚಾರಿ ಮಾರ್ಗ ಬಳಸಲಾಗದ ಸ್ಥಿತಿ ನಿರ್ಮಾಣವಾಗಿದೆ.

‘ಸರ್ವಿಸ್‌ ರಸ್ತೆಯ ಅರ್ಧ ಭಾಗವನ್ನು ಬೈಕ್‌ಗಳೇ ನುಂಗಿವೆ. ಆಸ್ಪತ್ರೆಗೆ ಆ್ಯಂಬುಲೆನ್ಸ್‌ ಬರುವುದಕ್ಕೆ, ಹೋಗುವುದಕ್ಕೆ ಹಾಗೂ ರೋಗಿಗಳ ಸಂಬಂಧಿಕರ ವಾಹನಗಳು ಬಂದು ಹೋಗುವುದಕ್ಕೂ ಸಮಸ್ಯೆಯಾಗುತ್ತಿದೆ ಎನ್ನುತ್ತಾರೆ’ ಶರಾವತಿ ಆಸ್ಪತ್ರೆಯ ಸಿಬ್ಬಂದಿ. ಪಕ್ಕದ ಬಂಟ್ಸ್‌ ಸಂಘದ ಬಳಿಯ ಸರ್ವಿಸ್‌ ರಸ್ತೆಯಲ್ಲಿ ಆಟೊ ಹೋಗಲೂ ಪರದಾಡಬೇಕಾದ ಸ್ಥಿತಿ ಇದೆ.

‘ಈ ರಸ್ತೆಯಲ್ಲಿನ ನಿವಾಸಿಗಳ ವಾಹನಗಳನ್ನು ನಿಲ್ಲಿಸಲೇ ಇಲ್ಲಿ ಜಾಗ ಇಲ್ಲದಂತಾಗಿದೆ. ಬೆಳಿಗ್ಗೆಯಿಂದಲೇ ಎಲ್ಲ ಜಾಗವನ್ನೂ ಮೆಟ್ರೊ ಪ್ರಯಾಣಿಕರ ವಾಹನಗಳೇ ಆವರಿಸಿರುತ್ತವೆ. ವ್ಯವಸ್ಥಿತ ಪಾರ್ಕಿಂಗ್ ಸೌಕರ್ಯ ಕೊಡದೆ ಮೆಟ್ರೊ ಆಡಳಿತ ವರ್ಗ ನಿಲ್ದಾಣಗಳ ಬಳಿಯ ನಿವಾಸಿಗಳಿಗೆ ಕಿರಿ ಕಿರಿ ಉಂಟಾಗುವಂತೆ ಮಾಡುತ್ತಿದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಇಲ್ಲಿನ ನಿವಾಸಿ ನಾಗೇಶ್‌.

**

ವಿಜಯನಗರದಲ್ಲೂ ಕಿರಿಕಿರಿ

ವಿಜಯನಗರದ ನಿಲ್ದಾಣದ ಆಜು ಬಾಜಿನ ಸರ್ವಿಸ್‌ ರಸ್ತೆಯ ಚಿತ್ರಣದಲ್ಲೂ ಬದಲಾವಣೆ ಇಲ್ಲ. ಇಲ್ಲಿನ ಪಾದಚಾರಿ ಮಾರ್ಗಗಗಳು ಬೈಕ್‌ ಪಾರ್ಕಿಂಗ್‌ನ ವಶವಾಗಿವೆ. ‘ಸರ್ವಿಸ್‌ ರಸ್ತೆಯಲ್ಲಿ ಹಲವಾರು ಅಂಗಡಿ, ಮಳಿಗೆಗಳಿವೆ. ಅಲ್ಲಿಗೆ ವ್ಯಾಪಾರಕ್ಕೆ ಬರುವ ಗ್ರಾಹಕರು ತಮ್ಮ ಗಾಡಿಗಳನ್ನು ಎಲ್ಲಿ ನಿಲ್ಲಿಸಬೇಕು ಎಂಬ ಚಿಂತೆಯಲ್ಲಿ ಮುಂದಕ್ಕೆ ಹೋಗುತ್ತಾರೆ. ಇದರಿಂದ ನಾವು ಗ್ರಾಹಕರನ್ನು ಕಳೆದುಕೊಳ್ಳುತ್ತಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಇಲ್ಲಿನ ಮೊಬೈಲ್‌ ಅಂಗಡಿಯೊಂದರ ಸಿಬ್ಬಂದಿ ರಿಷಬ್‌.

‘ಪಾದಚಾರಿ ಮಾರ್ಗಗಳು ಪಾದಚಾರಿಗಳಿಗೆ ಮೀಸಲಿರಬೇಕು. ಅವುಗಳನ್ನು ಒತ್ತುವರಿ ಮಾಡಿಕೊಳ್ಳುವುದು ಸರಿಯಲ್ಲ. ಮೆಟ್ರೊದಿಂದ ನಮಗೆಲ್ಲ ತೊಂದರೆ ಆಗಿದೆ. ನಿತ್ಯ ಸರ್ವಿಸ್‌ ರಸ್ತೆಯಲ್ಲಿ ನಡೆದಾಡುವುದಕ್ಕೂ ಆಗುತ್ತಿಲ್ಲ. ಹೂವು, ಹಣ್ಣು, ತರಕಾರಿ ತರುವುದಕ್ಕೆ ಇಲ್ಲಿಗೆ ಬರಬೇಕು. ಆದರೆ ಎಲ್ಲಿ ನಡೆಯುವುದು. ನಮ್ಮ ನಡಿಗೆಯ ಜಾಗವನ್ನೆಲ್ಲ ಮೆಟ್ರೊ ಪ್ರಯಾಣಿಕರು ಕಸಿದುಕೊಂಡಿದ್ದಾರೆ. ತನ್ನ ನಿಲ್ದಾಣದ ಬಳಿ ಸುಸಜ್ಜಿತ ಪಾರ್ಕಿಂಗ್‌ ತಾಣ ಕಟ್ಟಿಸಿ, ಪ್ರಯಾಣಿಕರಿಗೆ ಅನಕೂಲ ಮಾಡಿಕೊಡಬೇಕಾದ ಮೆಟ್ರೊ ನಿಗಮ ಕೈಚೆಲ್ಲಿ ಕೂತಿದೆ. ಇದರಿಂದ ನಿಲ್ದಾಣಗಳ ಬಳಿಯ ನಿವಾಸಿಗಳಿಗೆ ತೊಂದರೆ ಆಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ವಿಜಯನಗರದ ನಿವಾಸಿ ಗಾಯತ್ರಿದೇವಿ.

**

ಬಾಲಗಂಗಾಧರನಾಥ ಸ್ವಾಮೀಜಿ ನಿಲ್ದಾಣದಲ್ಲಿ ಹೆಚ್ಚುತ್ತಿರುವ ಬೈಕ್‌ ಕಳವು ಪ್ರಕರಣ

ಇಲ್ಲಿನ ಎರಡೂ ಬದಿಯ ಸರ್ವಿಸ್‌ ರಸ್ತೆಗಳು ಮೆಟ್ರೊ ಪ್ರಯಾಣಿಕರ ಬೈಕ್‌ಗಳಿಂದಲೇ ಆವೃತವಾಗಿವೆ. ಕಾಂಗರೂ ಆಸ್ಪತ್ರೆಯಿಂದ ಬಿಎಸ್‌ಎನ್‌ಎಲ್ ಕಚೇರಿಯವರೆಗೂ ಸರ್ವಿಸ್‌ ರಸ್ತೆಯಲ್ಲಿ ಪಾದಚಾರಿ ಮಾರ್ಗ ಕಾಣುವುದಿಲ್ಲ. ಅಂತೆಯೇ ಮುಂದುವರೆದು ಶನಿಮಹಾತ್ಮ ದೇವಸ್ಥಾನದ ಪಕ್ಕದ ರಸ್ತೆಯ ಎರಡೂ ಬದಿಯಲ್ಲಿ ವಾಹನಗಳನ್ನು ಅನಧಿಕೃತವಾಗಿ ನಿಲ್ಲಿಸಲಾಗುತ್ತಿದೆ. ಇಲ್ಲಿ ವಾಹನಗಳ ಕಳವು ಕೂಡ ದಾಖಲಾಗುತ್ತಿದೆ. ಕೆಲಸಕ್ಕೆ ಹೋಗುವ ಆತುರದಲ್ಲಿ ಕೆಲ ಪ್ರಯಾಣಿಕರು ತಮ್ಮ ವಾಹನಗಳ ಕೀಲಿಯನ್ನು ವಾಹನಗಳಲ್ಲೇ ಬಿಟ್ಟು ಹೋಗಿರುವ ಹಲವು ಪ್ರಕರಣಗಳೂ ಇಲ್ಲಿ ವರದಿಯಾಗಿವೆ.

ವಿಜಯನಗರ ಪೊಲೀಸ್‌ ಠಾಣೆ ಇಬ್ಬರು ಪೊಲೀಸ್‌ ಸಿಬ್ಬಂದಿಯನ್ನು ಇಲ್ಲಿನ ವಾಹನಗಳ ನೋಡಿಕೊಳ್ಳಲೆಂದೇ ನಿಯೋಜಿಸಿದೆ. ಇಲ್ಲಿ ಕೆಲಸ ಮಾಡುತ್ತಿದ್ದ ಪೊಲೀಸ್‌ ಸಿಬ್ಬಂದಿ ಶಿವಮೂರ್ತಿ ನಾಯ್ಕ್‌ ಅನ್ನು ವಿಚಾರಿಸಿದರೆ, ‘ಇಲ್ಲಿ ರಾಯಲ್‌ ಎನ್‌ಫೀಲ್ಡ್‌ ಬೈಕ್‌ ಕಳ್ಳತನವಾದ ವರದಿಯಾಗಿದೆ. ಹಾಗಾಗಿ ಡಿಸೆಂಬರ್‌ನಿಂದ ಇಬ್ಬರು ಸಿಬ್ಬಂದಿಯನ್ನು ವಾಹನಗಳ ಕಾಯಲೆಂದೇ ಉನ್ನತ ಅಧಿಕಾರಿಗಳು ನಿಯೋಜಿಸಿದ್ದಾರೆ. ನಾವು ಬೆಳಿಗ್ಗೆ 8ರಿಂದ ರಾತ್ರಿ 8 ಗಂಟೆಯವರೆಗೆ ವಾಹನಗಳನ್ನು ಕಾಯುತ್ತಿರುತ್ತೇವೆ’ ಎನ್ನುತ್ತಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !