ಶುಕ್ರವಾರ, ಸೆಪ್ಟೆಂಬರ್ 18, 2020
24 °C

ಮೆಟ್ರೋ ರೈಲಿನ 6 ಬೋಗಿಗಳಲ್ಲಿ ತಾಂತ್ರಿಕ ದೋಷ: ಸೇವೆಯಲ್ಲಿ ವ್ಯತ್ಯಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆರು ಬೋಗಿಗಳ ಮೆಟ್ರೊ ರೈಲಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಸೋಮವಾರ ಬೆಳಗ್ಗೆ 'ನಮ್ಮ ಮೆಟ್ರೊ' ಸೇವೆಯಲ್ಲಿ ವ್ಯತ್ಯಯ ಉಂಟಾಯಿತು.

ರೈಲುಗಳು ನಿಗದಿತ ಸಮಯದಲ್ಲಿ ಸಂಚರಿಸದ ಕಾರಣ ಪ್ರಯಾಣಿಕರು ಸಮಸ್ಯೆ ಎದುರಿಸಿದರು.

ಈ ಕುರಿತು 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ಬೆಂಗಳೂರು ಮೆಟ್ರೊ ರೈಲು ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿ.ಎಲ್. ಯಶವಂತ ಚೌಹಾಣ್, 'ಮೈಸೂರು ರಸ್ತೆ ಕಡೆಯಿಂದ ಬೈಯಪ್ಪನಹಳ್ಳಿಗೆ ಸಾಗುತ್ತಿದ್ದ ಆರು ಬೋಗಿಗಳ ಮೆಟ್ರೊ ರೈಲಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತು. ಹಾಗಾಗಿ ರೈಲನ್ನು ಟ್ರಿನಿಟಿ ನಿಲ್ದಾಣದಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸಿದೆವು. ಪರಿಶೀಲನೆ ಸಲುವಾಗಿ ಖಾಲಿ ರೈಲನ್ನು ಡಿಪೊಗೆ ಕಳುಹಿಸಬೇಕಾಯಿತು. ಈ ಪ್ರಕ್ರಿಯೆಯಿಂದಾಗಿ ಉಳಿದ ರೈಲುಗಳ ಸಂಚಾರವೂ ಸ್ವಲ್ಪ ವಿಳಂಬ ಆಗಿದೆ. ಆದರೆ, ಬೆಳಿಗ್ಗೆ 10 ಗಂಟೆ ವೇಳೆಗೆ ಸೇವೆಯು ಯಥಾಸ್ಥಿತಿಗೆ ಬಂದಿದೆ' ಎಂದು ತಿಳಿಸಿದರು.

'ಕಬ್ಬನ್ ಪಾರ್ಕ್ ಮೆಟ್ರೊ ನಿಲ್ದಾಣದ ಬಳಿ ಸಾಗುವಾಗಲೇ ರೈಲಿನಲ್ಲಿ ದೋಷ ಕಾಣಿಸಿಕೊಂಡಿತು. ನಂತರ ಪದೇ ಪದೇ ದೋಷ ಕಂಡುಬಂದಿದ್ದರಿಂದ ಟ್ರಿನಿಟಿ ನಿಲ್ದಾಣದಲ್ಲಿ ಎಲ್ಲ ಪ್ರಯಾಣಿಕರನ್ನು ಇಳಿಸಿದ್ದೇವೆ. ಪ್ರಯಾಣಿಕರಿಗೆ ಸಮಸ್ಯೆ ಆಗಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇವೆ' ಎಂದರು.

ಸಾಮಾನ್ಯವಾಗಿ ಬೆಳಿಗ್ಗೆ 8ರಿಂದ 10.30ರವರೆಗೆ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚು ಇರುತ್ತದೆ. ಇದೇ ಅವಧಿಯಲ್ಲಿ ದೋಷ ಕಾಣಿಸಿಕೊಂಡಿದ್ದರಿಂದ ಕಚೇರಿಗೆ ಹೋಗುವವರು ಸಮಸ್ಯೆ ಎದುರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು