ಭಾನುವಾರ, ಮೇ 31, 2020
27 °C
ಹೆಚ್ಚಿನವರಿಗೆ ಮಾಸಿಕ ₹5 ಸಾವಿರಕ್ಕಿಂತ ಕಡಿಮೆ ವೇತನ

ವಲಸೆ ಕಾರ್ಮಿಕರ ಸ್ಥಿತಿ–ಗತಿ: ವೇತನ ಕಡಿಮೆ, ಸೌಲಭ್ಯಗಳೂ ದೂರ

ಸಿದ್ದು ಆರ್‌.ಜಿ.ಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ರಾಜ್ಯದ ಆಯ್ದ 10 ಜಿಲ್ಲೆಗಳಲ್ಲಿ ನಡೆಸಿದ ಮಾದರಿ ಸಮೀಕ್ಷೆಯಲ್ಲಿ, 1,541 ವಲಸೆ ಕಾರ್ಮಿಕರು ಮಾಸಿಕ ₹5 ಸಾವಿರಕ್ಕಿಂತ ಕಡಿಮೆ ವೇತನ ಪಡೆಯುತ್ತಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ. 

ದಕ್ಷಿಣ ಕನ್ನಡ, ಬೀದರ್‌, ಬಳ್ಳಾರಿ, ಮಂಡ್ಯ, ಮೈಸೂರು, ಕೊಡಗು, ಬೆಳಗಾವಿ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೋವಿಡ್‌–19 ಸಂಬಂಧ ಶಿಬಿರಗಳಲ್ಲಿದ್ದ  ಕಾರ್ಮಿಕರ ಬಗ್ಗೆ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ಹೊರಬಿದ್ದಿದೆ. 

‘₹ 5 ಸಾವಿರಕ್ಕಿಂತ ಕಡಿಮೆ ವೇತನ ನೀಡುವುದು ದಿನಗೂಲಿ ನೌಕರರ ಕನಿಷ್ಠ ವೇತನ ಕಾನೂನಿಗೆ ವಿರುದ್ಧ. ಕಾರ್ಮಿಕ ಇಲಾಖೆ ವತಿಯಿಂದ 1,541 ಕಾರ್ಮಿಕರ ಬಗ್ಗೆ ವಿಚಾರಣೆ ನಡೆಸಿ, ಒಂದು ವೇಳೆ ಈ ಸಂಗತಿ ಸತ್ಯಾಂಶದಿಂದ ಕೂಡಿದ್ದರೆ, ಸಂಬಂಧಪಟ್ಟ ಮಾಲೀಕರು ಅಥವಾ ಉದ್ಯೋಗದಾತರ ವಿರುದ್ಧ ಕಾನೂನು ಕ್ರಮ ಜರುಗಿಸಬಹುದು’ ಎಂದು ಸಾಂಖ್ಯಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಮುಖ್ಯಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. 

1,884 ಮಂದಿ ₹15 ಸಾವಿರಕ್ಕಿಂತ ಕಡಿಮೆ ವೇತನ ಪಡೆಯುತ್ತಿದ್ದಾರೆ ಎಂದು ತಿಳಿಸಲಾಗಿದೆ. ಒಟ್ಟಾರೆ ವಲಸೆ ಕಾರ್ಮಿಕರಿಗೆ ಸರ್ಕಾರದಿಂದ ದೊರೆಯುವ ಎಲ್ಲ ಮೂಲಸೌಕರ್ಯಗಳನ್ನು ಒದಗಿಸಲು ಸಂಬಂಧಪಟ್ಟ ಇಲಾಖೆಗಳು ಕ್ರಮ ವಹಿಸಲು ಸೂಚಿಸಬಹುದು ಎಂದು ಪತ್ರದಲ್ಲಿ ತಿಳಿಸಲಾಗಿದೆ.  

785 ಕಾರ್ಮಿಕರಿಗೆ ‘ಆಧಾರ್‌’ ಇಲ್ಲ: 3,862 ವಲಸೆ ಕಾರ್ಮಿಕರನ್ನು ಸಮೀಕ್ಷೆ ನಡೆಸಲಾಗಿದೆ. ಇವರಲ್ಲಿ 1,885 ಕಾರ್ಮಿಕರಿಗೆ ಬ್ಯಾಂಕ್‌ ಖಾತೆ ಇಲ್ಲ. 785 ಕಾರ್ಮಿಕರಿಗೆ ಆಧಾರ್‌ ಕಾರ್ಡ್‌ ಇಲ್ಲ. 835 ಕಾರ್ಮಿಕರಿಗೆ ಪಡಿತರ ಚೀಟಿ ಇಲ್ಲ. 2,541 ಕಾರ್ಮಿಕರು ಗ್ಯಾಸ್‌ ಸಂಪರ್ಕ ಹೊಂದಿಲ್ಲ. 2,652 ಕಾರ್ಮಿಕರಿಗೆ ಸ್ವಗ್ರಾಮಗಳಲ್ಲಿ ಸ್ವಂತ ಸೂರು ಇರುವುದಿಲ್ಲ ಎಂಬ ಅಂಶಗಳನ್ನು ನಮೂದಿಸಲಾಗಿದೆ. 

ಸಮೀಕ್ಷೆಯಲ್ಲಿ ಪಾಲ್ಗೊಂಡ 2,924 ಪುರುಷರು ಮತ್ತು 901 ಮಹಿಳೆಯರಲ್ಲಿ ಶೇ 38ರಷ್ಟು ಮಂದಿ ಪ್ರಾಥಮಿಕ, ಶೇ 14ರಷ್ಟು ಮಂದಿ ಮಾಧ್ಯಮಿಕ ಹಾಗೂ ಶೇ 13ರಷ್ಟು ಮಂದಿ ಪ್ರೌಢಶಿಕ್ಷಣ ವಿದ್ಯಾರ್ಹತೆ ಪಡೆದಿದ್ದಾರೆ. 1,756 ಮಂದಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ್ದು, 2,109 ಮಂದಿ ಇತರೆ ವರ್ಗಕ್ಕೆ ಸೇರಿದ್ದಾರೆ. 2,030 ಮಂದಿ 30 ವರ್ಷದೊಳಗಿನವರು ಮತ್ತು 1,349 ಮಂದಿ 50 ವರ್ಷದೊಳಗಿನವರು ಎಂದು ಮಾಹಿತಿ ಕಲೆ ಹಾಕಲಾಗಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು