ಮಂಗಳವಾರ, ಆಗಸ್ಟ್ 3, 2021
26 °C
ಕೇಂದ್ರ ಸಚಿವ ಅಂಗಡಿ- ಲಕ್ಷ್ಮಿ ವಾಗ್ವಾದ

ಲಕ್ಷ್ಮಿ ಹೆಬ್ಬಾಳಕರ ಅವರನ್ನು ಕೊಚ್ಚೆಗೆ ಹೋಲಿಸಿದ ಸಚಿವ ರಮೇಶ ಜಾರಕಿಹೊಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ನಡುವೆ ಮಾತಿನ ಚಕಮಕಿ ನಡೆಯಿತು. ಅಂಗಡಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಸಮ್ಮುಖದಲ್ಲಿ ಲಕ್ಷ್ಮಿ, ಕೇಂದ್ರ ಸರ್ಕಾರವನ್ನು ಟೀಕಿಸಿದರು. ₹ 20 ಲಕ್ಷ ಕೋಟಿ ಪ್ಯಾಕೇಜ್‌ನಲ್ಲಿ ಯಾರಿಗೆ ಎಷ್ಟು ಹಣ ಸಿಕ್ಕಿದೆ ಎಂದು ಖಾರವಾಗಿ ಪ್ರಶ್ನಿಸಿದರು.

ಜಿಲ್ಲಾ ಪಂಚಾಯಿತಿಯಲ್ಲಿ ಆಯೋಜಿಸಿದ್ದ ತಾಲ್ಲೂಕು ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಘಟನೆ ನಡೆಯಿತು.

ನೀರು ಶುದ್ಧೀಕರಣ ಘಟಕದ ಬಗ್ಗೆ ಚರ್ಚೆ ನಡೆಯುವಾಗ ಮಧ್ಯಪ್ರವೇಶಿಸಿದ ಸಚಿವ ಅಂಗಡಿ, ಅದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಚಾರದ ಕಾರ್ಯಕ್ರಮ, ಫೋಟೊ ಹಾಕಿಕೊಂಡ ಕಾರ್ಯಕ್ರಮ ಎಂದರು. ಇದಕ್ಕೆ ಸಿಟ್ಟಾದ ಶಾಸಕಿ, ತಾಲ್ಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾಜಕೀಯ ಮಾಡುವುದು ಬೇಡ. ಆರೋಪ-ಪ್ರತ್ಯಾರೋಪ ಬೇಡ. ಪೆಟ್ರೋಲ್ ಪಂಪಲ್ಲಿ, ಸಿಲಿಂಡರುಗಳ ಮೇಲೆ ಫೋಟೊ ಹಾಕಿಕೊಳ್ಳುವವರು ಯಾರು ಎಂದು ತಿಳಿದಿದೆ ಎಂದು ತಿರುಗೇಟು ನೀಡಿದರು.

2 ಕೋಟಿ ನೌಕರಿ ಕೊಡ್ತೀವಿ ಅಂದವರು ನೀವು. ನಾವು ಇರುವ ಉದ್ಯೋಗ ಉಳಿಸಿಕೊಳ್ಳಲು ಪ್ರಯತ್ನಿಸಿ ಎನ್ನುತ್ತಿದ್ದೇವೆ. ಕೋವಿಡ್-19 ಲಾಕ್ಡೌನ್ ಸಂದರ್ಭದಲ್ಲಿ ಶೇ 46ರಷ್ಟು ನೌಕರರು ಕೆಲಸ ಕಳೆದುಕೊಂಡಿದ್ದಾರೆ. ಸುಮ್ಮನೆ ಆರೋಪ ಪ್ರತ್ಯಾರೋಪ ಮಾಡಬೇಡಿ. ಶೋಬಾಜಿ ಏನೂ ಬೇಡ. ಫೋಟೊ ಹಾಕೊತಾರೆ ಅಂತ ಹೇಳಬೇಡಿ ಎಂದರು.

ಹಸಿದ ಹೊಟ್ಟೆಗಳಿಗೆ ಅನ್ನಭಾಗ್ಯ, ಉದ್ಯೋಗ ಖಾತ್ರಿ ಕೊಟ್ಟವರು ನಾವು. ಆಧಾರ್ ಕಾರ್ಡ್ ಪರಿಚಯಿಸಿದವರು ನಾವು. ಈಗ ನೀವು ಎಲ್ಲದಕ್ಕೂ ಆಧಾರ್ ಕಾರ್ಡನ್ನೇ ಹಿಡಿದುಕೊಂಡು ಓಡಾಡುತ್ತಿದ್ದೀರಿ. ಆರ್‌ಟಿಒ, ಆರ್‌ಟಿಐ ಬಗ್ಗೆಯೂ ಮಾತನಾಡಬಹುದು. ಸುಮ್ಮನೆ ಚರ್ಚೆ ಬೇಡ ಎಂದು ಅಧಿಕಾರಿಗಳು, ಜನಪ್ರತಿನಿಧಿಗಳ ಸಮ್ಮುಖದಲ್ಲಿಯೇ ಟೀಕಿಸಿದರು.

ನಂತರ ಮೈಕ್ ಆಫ್ ಮಾಡಿ ಇಬ್ಬರೂ ವಾಗ್ವಾದದಲ್ಲಿ ತೊಡಗಿದ್ದರು.

ಸಭೆ ಬಳಿಕ ಈ ಕುರಿತು ಪ್ರತಿಕ್ರಿಯಿಸಿದ ಸಚಿವ ರಮೇಶ ಜಾರಕಿಹೊಳಿ, ಅವರ ಸರ್ಕಾರ ಅವರು, ನಮ್ಮ ಸರ್ಕಾರ ನಾವು ಡಿಫೈನ್ ಮಾಡಿಕೊಳ್ಳುತ್ತೇವೆ. ಅದಕ್ಕೆ ಹೆಚ್ಚಿನ ಮಹತ್ವ ಕೊಡಬೇಕಿಲ್ಲ. ಆ ಶಾಸಕರಿಗೆ ಅನುಭವದ ಕೊರತೆ ಇದೆ. ಹೀಗಾಗಿ ಹಾಗೆಲ್ಲ ಮಾತನಾಡುತ್ತಾರೆ ಎಂದು ಪ್ರತ್ಯುತ್ತರ ನೀಡಿದರು.

ಇಬ್ಬರು ಸಚಿವರ ಮುಂದೆಯೇ ಸವಾಲು ಹಾಕಿದರೂ ನೀವು ಪ್ರತಿಕ್ರಿಯೆ ನೀಡಲಿಲ್ಲವಲ್ಲ ಎಂಬ ಪ್ರಶ್ನೆಗೆ, ‘ಕೊಚ್ಚೆಲಿ ಕಲ್ಲು ಹಾಕಿದರೆ ಏನಾಗುತ್ತದೆ?’ ಎಂದು ಸಚಿವರು ಶಾಸಕರನ್ನು ಕೊಚ್ಚೆಗೆ ಹೋಲಿಸಿದರು.

‘ಸುಳ್ಳು ಪ್ರಚಾರ, ಹೋಮ ಹವನಗಳಿಗೆ ಜನರು ಮರುಳಾಗುವುದಿಲ್ಲ. ಮುಂದಿನ ದಿನಗಳಲ್ಲಿ ಗ್ರಾಮೀಣ ಕ್ಷೇತ್ರದ ಬಗ್ಗೆ ಹೆಚ್ಚಿನ ಗಮನ ಹರಿಸುತ್ತೇನೆ’ ಎಂದು ತಿಳಿಸಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ನಾನು ಹಸ್ತಕ್ಷೇಕ ಮಾಡುವುದಿಲ್ಲ. ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಹಾಗೂ ಉಮೇಶ ಕತ್ತಿ ತೆಗೆದುಕೊಳ್ಳುವ ನಿರ್ಧಾರವನ್ನು ಬೆಂಬಲಿಸುತ್ತೇನೆ ಎಂದು ಪ್ರತಿಕ್ರಿಯೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು