ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಎಲ್‌ಸಿ ಚುನಾವಣೆ: ಟಿಕೆಟ್‌ಗಾಗಿ ಕಾಂಗ್ರೆಸ್‌ನಲ್ಲಿ ಭಾರಿ ಪೈಪೋಟಿ

ಸಿದ್ದರಾಮಯ್ಯ ಮನೆಗೆ ಕಾಂಗ್ರೆಸ್‌ ನಾಯಕರ ದಂಡು
Last Updated 13 ಜೂನ್ 2020, 13:50 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆಯಿಂದ ವಿಧಾನಪರಿಷತ್ತಿನ ಏಳು ಸ್ಥಾನಗಳಿಗೆ ಇದೇ 29ರಂದು ನಡೆಯಲಿರುವ ಚುನಾವಣೆಯಲ್ಲಿ ಟಿಕೆಟ್‌ಗಾಗಿ ಕಾಂಗ್ರೆಸ್‌ನಲ್ಲಿ ಭಾರಿ ಪೈಪೋಟಿ ಏರ್ಪಟ್ಟಿದೆ. ಹಲವು ಕಾಂಗ್ರೆಸ್​​ ನಾಯಕರು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಶನಿವಾರ ಕೂಡಾ ಒತ್ತಡ ಹಾಕಿದ್ದಾರೆ.

ನಿವೃತ್ತಿಯಾಗುತ್ತಿವವರು ಪುನರಾಯ್ಕೆ ಬಯಸಿದರೆ, ಮತ್ತೆ ಹಲವರು ಹಿರಿತನ ಪರಿಗಣಿಸಬೇಕೆಂದು ಒತ್ತಾಯಿಸಿದ್ದಾರೆ. ಕೆಲವರು ಮಹಿಳಾ ಕೋಟಾ, ಹಿಂದುಳಿದ, ಅಲ್ಪಸಂಖ್ಯಾತ ಕೋಟಾ ಮುಂದಿಟ್ಟು ಒತ್ತಡ ತಂತ್ರ ಅನುಸರಿಸುತ್ತಿದ್ದಾರೆ.

ಸಿದ್ದರಾಮಯ್ಯ ಅವರ ಸರ್ಕಾರಿ ನಿವಾಸಕ್ಕೆ ಶನಿವಾರ ಬೆಳಿಗ್ಗೆ ಬಂದ ಮಾಜಿ ಸಚಿವ ಎಂ.ಆರ್. ಸೀತಾರಾಂ, ತನಗೆ ಎಂಎಲ್‌ಸಿ ಟಿಕೆಟ್​ ನೀಡಬೇಕೆಂದು ಬೇಡಿಕೆಯಿಟ್ಟರು.

ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸೀತಾರಾಂ, ‘35 ವರ್ಷಗಳಿಂದ ಪಕ್ಷದಲ್ಲಿದ್ದೇನೆ. ಎರಡು ವರ್ಷಗಳಿಂದ ನನಗೆ ಯಾವುದೇ ಸ್ಥಾನ ಸಿಕ್ಕಿಲ್ಲ. ಹಾಗೆಂದು, ನಾನು ಕಾಂಗ್ರೆಸ್ ಪಕ್ಷ ಬಿಟ್ಟು ಹೋಗಿಲ್ಲ. ನಾನು ನಿಷ್ಠಾವಂತ ಕಾರ್ಯಕರ್ತ. ಹೀಗಾಗಿ ನನಗೆ ಟಿಕೆಟ್ ಕೊಡಿ ಎಂದು ಕೇಳಿದ್ದೇನೆ’. ‘ಪಕ್ಷದ ಹಿತದೃಷ್ಠಿಯಿಂದ ನಾನು ಎಲ್ಲವನ್ನೂ ತ್ಯಾಗ ಮಾಡಿದ್ದೇನೆ. ಈಗಲಾದರೂ ನಮಗೆ ಅವಕಾಶ ಕೊಡಬೇಕು. ಹಿಂದುಳಿದ ವರ್ಗದಡಿ ನಾನು ಟಿಕೆಟ್‌ ಕೇಳುತ್ತಿದ್ದೇನೆ’ ಎಂದು ಹೇಳಿದರು.

ಆ ಬೆನ್ನಲ್ಲೇ ಎಂಎಲ್​​ಸಿ ಅಬ್ದುಲ್ ಜಬ್ಬಾರ್ ಕೂಡ ಭೇಟಿ ನೀಡಿದರು. ‘ನನಗೆ ಮತ್ತೊಂದು ಬಾರಿ ವಿಧಾನಪರಿಷತ್‌ ಸದಸ್ಯನಾಗಲು ಅವಕಾಶ ಮಾಡಿಕೊಡಿ’ ಎಂದು ಮನವಿ ಮಾಡಿದರು.

ನಂಜನಗೂಡು ಕ್ಷೇತ್ರದ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಕೂಡ ಇದೇ ಬೇಡಿಕೆ ಇಟ್ಟಿದ್ದಾರೆ. ಕೇಶವಮೂರ್ತಿ ಪರ ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ಲಾಬಿ ಮಾಡುತ್ತಿದ್ದಾರೆ. ನೇಕಾರ ಸಮುದಾಯದ ಮುಖಂಡರಾದ ಲಕ್ಷ್ಮೀನಾರಾಯಣ ಕೂಡ ಟಿಕೆಟ್​​ ಬಯಸಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ.

ಇನ್ನು, ಮಾಜಿ ಸಚಿವ ಚೆಲುವರಾಯಸ್ವಾಮಿ ಮತ್ತು ಎಸ್.​ಆರ್. ಪಾಟೀಲ ಅವರೂ ಸಿದ್ದರಾಮಯ್ಯ ಮುಂದೆ ಇದೇ ಬೇಡಿಕೆ ಇಟ್ಟಿದ್ಧಾರೆ. ಅವರನ್ನು ಭೇಟಿ ಮಾಡಿ ಚರ್ಚಿಸಿದ ಬಳಿಕ ಒಂದೇ ಕಾರಿನಲ್ಲಿ ಎಚ್.ಸಿ. ಮಹಾದೇವಪ್ಪ, ಚೆಲುವರಾಯಸ್ವಾಮಿ ಮತ್ತು ಸಿದ್ದರಾಮಯ್ಯ ಗೌಪ್ಯ ಸ್ಥಳಕ್ಕೆ ತೆರಳಿದರು.

ಎಚ್.ಎಂ.ರೇವಣ್ಣ, ಐವಾನ್ ಡಿಸೋಜಾ, ನಸೀರ್ ಅಹ್ಮದ್, ಎಂ.ಸಿ ವೇಣುಗೋಪಾಲ್ ಮರು ಆಯ್ಕೆ ಬಯಸಿದರೆ, ಮಾಜಿ ಸಚಿವೆ ರಾಣಿಸತೀಶ್, ಮೋಟಮ್ಮ ಬೇಡಿಕೆ ಮುಂದಿಟ್ಟಿದ್ದಾರೆ. ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಕೆಪಿಸಿಸಿ ಸಾಮಾಜಿಕ ಮಾಧ್ಯಮದ ಮುಖ್ಯಸ್ಥ ನಟರಾಜ್ ಗೌಡ, ಸೂರಜ್ ಹೆಗ್ಡೆ, ನಿವೇದಿತ್‌ ಆಳ್ವಾ ಕೂಡಾ ಮನವಿ ಸಲ್ಲಿಸಿದ್ದಾರೆ. ಮುದ್ದಹನುಮೇಗೌಡ ತಮಗೆ ಅವಕಾಶ ಕೊಟ್ಟೇ ಕೊಡುತ್ತಾರೆಂಬ ನಿರೀಕ್ಷೆಯಲ್ಲಿದ್ದಾರೆ.

ಹಿಂದುಳಿದ ನಾಯಕರ ಸಮಾಲೋಚನೆ:‌ ಮತ್ತೊಂದೆಡೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ವಿಧಾನ ಪರಿಷತ್ ಸದಸ್ಯ ಎಚ್.ಎಂ. ರೇವಣ್ಣರ ಅವರ ಮಹಾಲಕ್ಷ್ಲೀಪುರ ನಿವಾಸದಲ್ಲಿ ಶನಿವಾರ ನಡೆದ ಹಿಂದುಳಿದ ನಾಯಕರೊಂದಿಗಿನ ಉಪಹಾರ ಕೂಟದಲ್ಲಿ ಭಾಗವಹಿಸಿದರು. ಮಾಜಿ ಮೇಯರ್ ಜೆ. ಹುಚ್ಚಪ್ಪ, ಪ್ರೊ. ಬಿ.ಕೆ ರವಿ, ಕಾಂತರಾಜು, ಹನುಮಂತೇಗೌಡ ಮುಖಂಡರು ಡಿ.ಕೆ. ಶಿವಕುಮಾರ್ ಜೊತೆ ಸಮಾಲೋಚನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT