ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರು ಪ್ರವೇಶ | ರಾಜ್ಯದ ಹಲವೆಡೆ ಉತ್ತಮ ಮಳೆ

Last Updated 10 ಜೂನ್ 2020, 20:48 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಹಲವೆಡೆ ಬುಧವಾರ ಉತ್ತಮ ಮಳೆಯಾಗಿದೆ. ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮುಂಗಾರು ಪ್ರವೇಶವಾದ ನಂತರ ಮೊದಲ ಬಾರಿಗೆ ನಿರಂತರವಾಗಿ ಮಳೆ ಸುರಿದಿದೆ.

ಬೆಳಿಗ್ಗೆಯಿಂದಲೇ ಮಂಗಳೂರು ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಮಳೆ ಸುರಿಯಿತು. ಮೂಡುಬಿದಿರೆಯಲ್ಲಿ ಸಿಡಿಲು ಬಡಿದು ಮನೆಗೆ ಹಾನಿಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಸೇರಿದಂತೆ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದೆ.

ಜೋರು ಮಳೆ:ಶಿವಮೊಗ್ಗ ನಗರ ಹಾಗೂ ಸುತ್ತಮುತ್ತ ಅರ್ಧ ತಾಸು ಬಿರುಸಿನ ಮಳೆಯಾಯಿತು. ಹೊಸನಗರ, ಆನಂದಪುರ, ರಿಪ್ಪನ್‌ಪೇಟೆ, ತೀರ್ಥಹಳ್ಳಿ, ಕೋಣಂದೂರು, ಶಿಕಾರಿಪುರ, ಸಾಗರ, ಭದ್ರಾವತಿ, ಸೊರಬ ಸುತ್ತಮುತ್ತ ಜೋರು ಮಳೆಯಾಗಿದೆ.

ದಾವಣಗೆರೆ ನಗರ ಸೇರಿ ಜಿಲ್ಲೆಯ ಕೆಲವೆಡೆ ಸಾಧಾರಣ ಮಳೆಯಾಗಿದೆ. ಉಚ್ಚಂಗಿದುರ್ಗದಲ್ಲಿ ಉತ್ತಮ ಮಳೆಯಾಗಿದೆ.ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ, ನಾಯಕನಹಟ್ಟಿಯಲ್ಲಿ ಹದ ಮಳೆಯಾಗಿದೆ.

ನಾಗಮಂಗಲ ತಾಲ್ಲೂಕಿನಲ್ಲಿ ಬುಧವಾರ ಮಧ್ಯಾಹ್ನ ಆಲಿಕಲ್ಲು, ಬಿರುಗಾಳಿ ಸಮೇತ ಒಂದು ಗಂಟೆ ಧಾರಾಕಾರ ಮಳೆ ಸುರಿಯಿತು. ಬಿರುಗಾಳಿಗೆ ಕೆಲವೆಡೆ ಮರಗಳು ನೆಲಕ್ಕುರುಳಿವೆ.

ಕೊಡಗು ಜಿಲ್ಲೆಯಲ್ಲೂ ಉತ್ತಮ ಮಳೆಯಾಗಿದ್ದು, ಮುಂಗಾರು ಬಿರುಸು ಪಡೆಯುವ ಲಕ್ಷಣಗಳು ಕಾಣಿಸುತ್ತಿವೆ. ಮೈಸೂರು ನಗರ, ಜಯಪುರ, ನಂಜನಗೂಡು ಸೇರಿದಂತೆ ಜಿಲ್ಲೆಯ ಕೆಲವೆಡೆ ಸಾಧಾರಣ ಮಳೆಯಾಗಿದೆ.

ಕಲಬುರ್ಗಿ, ಬೀದರ್ ಮತ್ತು ರಾಯಚೂರು ಜಿಲ್ಲೆಗಳ ವಿವಿಧೆಡೆ ಬುಧವಾರ ಉತ್ತಮ ಮಳೆಯಾಯಿತು.

ಕಲಬುರ್ಗಿ ನಗರ ಸೇರಿ ಜಿಲ್ಲೆಯ ಚಿಂಚೋಳಿ, ಚಿತ್ತಾಪುರ, ಕಮಲಾಪುರ ಮತ್ತು ಸೇಡಂ ತಾಲ್ಲೂಕಿನ ವಿವಿಧೆಡೆ ಮಳೆಯಾಯಿತು. ಬೀದರ್ ನಗರ, ಭಾಲ್ಕಿ ಮತ್ತು ಹುಮನಾಬಾದ್ ತಾಲ್ಲೂಕಿನಲ್ಲಿ ಧಾರಾಕಾರ ಮಳೆ ಸುರಿಯಿತು. ಬೀದರ್‌ನ ಬಹುತೇಕ ರಸ್ತೆಗಳಲ್ಲಿ ನೀರು ಸಂಗ್ರಹಗೊಂಡು ವಾಹನಗಳ ಸಂಚಾರಕ್ಕೆ ಅಡಚಣೆಯಾಯಿತು. ಕಾರವಾರ ನಗರದಲ್ಲಿ ಅರ್ಧ ಗಂಟೆ ಸಾಧಾರಣ ಮಳೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT