ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದುವರಿದ ಮಳೆ: ಆಲಮಟ್ಟಿ ಜಲಾಶಯದಿಂದ 1.63 ಲಕ್ಷ ಕ್ಯುಸೆಕ್‌ ನೀರು ಹೊರಕ್ಕೆ

ಬೆಳಗಾವಿಯಲ್ಲಿ 6 ಸೇತುವೆ ಜಲಾವೃತ * ಮುನ್ನೆಚ್ಚರಿಕೆಯಾಗಿ ಶಾಲೆಗಳಿಗೆ ಇಂದು ರಜೆ
Last Updated 30 ಜುಲೈ 2019, 20:09 IST
ಅಕ್ಷರ ಗಾತ್ರ

ಬೆಂಗಳೂರು: ನೆರೆಯ ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಕಾರಣ ಆಲಮಟ್ಟಿ ಜಲಾಶಯದ ಒಳಹರಿವು ಮಂಗಳವಾರ ಹೆಚ್ಚಾಗಿದ್ದು, 1.63 ಲಕ್ಷ ಕ್ಯುಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ.

ಜಲಾಶಯದ ಎಲ್ಲ 26 ಗೇಟ್‌ಗಳ ಮೂಲಕ 1.21 ಲಕ್ಷ ಕ್ಯುಸೆಕ್‌ ಹಾಗೂ ಬಲಭಾಗದ ಕೆಪಿಸಿಎಲ್‌ ಮೂಲಕ 42 ಸಾವಿರ ಕ್ಯುಸೆಕ್‌ ನೀರನ್ನು ಹರಿಬಿಡಲಾಗುತ್ತಿದೆ. ಇದು ಈ ವರ್ಷದ ಗರಿಷ್ಠ ಹೊರ ಹರಿವು ಎಂದು ಕೆಬಿಜೆಎನ್‌ಎಲ್ ಮೂಲಗಳು ತಿಳಿಸಿವೆ.

ಶಾಲೆಗಳಿಗೆ ರಜೆ: ಮಳೆ ಹೆಚ್ಚಾಗಿರುವ ಕಾರಣ ಬೆಳಗಾವಿ ಜಿಲ್ಲೆಯ ಬೆಳಗಾವಿ, ಖಾನಾಪುರ, ಚನ್ನಮ್ಮನ ಕಿತ್ತೂರು ಹಾಗೂ ಬೈಲಹೊಂಗಲ ತಾಲ್ಲೂಕುಗಳಲ್ಲಿ ಶಾಲೆಗಳಿಗೆ ಬುಧವಾರ ರಜೆ ಘೋಷಿಸಲಾಗಿದೆ.

ಖಾನಾಪುರ ತಾಲ್ಲೂಕಿನ ಕುಂಬಾರಹಳ್ಳದಲ್ಲಿ ಪ್ರವಾಹ ಬಂದಿರುವುದರಿಂದ ಪಟ್ಟಣದ ರಾಜ್ಯ ಪೊಲೀಸ್‌ ತರಬೇತಿ ಶಾಲೆಯ 20 ವಸತಿ ಗೃಹಗಳು ಜಲಾವೃತಗೊಂಡಿವೆ.

ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ ಮೂಲಕ 91,259 ಕ್ಯುಸೆಕ್‌ ಹಾಗೂ ದೂಧ್‌ಗಂಗಾ ನದಿ ಮೂಲಕ 17,952 ಕ್ಯುಸೆಕ್‌ ನೀರು ರಾಜ್ಯಕ್ಕೆ ಹರಿದುಬರುತ್ತಿದೆ. ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಈ ನೀರು ಸಂಗಮವಾಗಿ 1,09 ಲಕ್ಷ ಕ್ಯುಸೆಕ್‌ ನೀರು ಕೃಷ್ಣಾ ನದಿಗೆ ಸೇರಿಕೊಳ್ಳುತ್ತಿದೆ. ಕೃಷ್ಣಾ, ವೇದಗಂಗಾ, ದೂಧ್‌ಗಂಗಾ ನದಿಗಳಿಗೆ ಅಡ್ಡಲಾಗಿ ನಿರ್ಮಿಸಿರುವ ಬ್ಯಾರೇಜ್‌ ಕಮ್‌ ಬ್ರಿಡ್ಜ್‌ ಹಾಗೂ ನೆಲಮಟ್ಟದ 6 ಸೇತುವೆಗಳು ಜಲಾವೃತವಾಗಿವೆ.

ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲ್ಲೂಕಿನ ಪಾಂಡ್ರಿ ನದಿಯ ಚಾಂದವಾಡಿಯಲ್ಲಿ ಸೇತುವೆ ಮೇಲೆ ನೀರು ಹರಿಯುತ್ತಿದೆ. ಸ್ಥಳೀಯರು ಜೀವದ ಹಂಗು ತೊರೆದು ಮಂಗಳವಾರ ಸೇತುವೆ ದಾಟಿದ ದೃಶ್ಯ
ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲ್ಲೂಕಿನ ಪಾಂಡ್ರಿ ನದಿಯ ಚಾಂದವಾಡಿಯಲ್ಲಿ ಸೇತುವೆ ಮೇಲೆ ನೀರು ಹರಿಯುತ್ತಿದೆ. ಸ್ಥಳೀಯರು ಜೀವದ ಹಂಗು ತೊರೆದು ಮಂಗಳವಾರ ಸೇತುವೆ ದಾಟಿದ ದೃಶ್ಯ

ಕಲ್ಲೋಳ– ಯಡೂರ, ಕಾರದಗಾ– ಭೋಜ, ಭೋಜವಾಡಿ– ಕುನ್ನೂರ, ಸಿದ್ನಾಳ– ಅಕ್ಕೋಳ, ಜತ್ರಾಟ– ಭೀವಶಿ ಹಾಗೂ ಮಲಿಕವಾಡ–ದತ್ತವಾಡ ಸೇತುವೆಗಳು ಜಲಾವೃತವಾಗಿವೆ. ಇವುಗಳಿಗೆ ಪರ್ಯಾಯ ರಸ್ತೆಗಳಿದ್ದು, ಜನರ ಓಡಾಟಕ್ಕೆ ತೊಂದರೆಯಾಗಿಲ್ಲ.

ಜೊಯಿಡಾ, ವಿಜಯಪುರ, ಬಾಗಲಕೋಟೆಯಲ್ಲಿ ಮಳೆಯಾಗಿದೆ. ಧಾರವಾಡದ ಗೌಳಿಗಲ್ಲಿ ಹಾಗೂ ಹುಬ್ಬಳ್ಳಿಯ ನಂದನಗರದಲ್ಲಿ ಮಳೆಯಿಂದ ಮೂರು ಮನೆಗಳು ಕುಸಿದಿವೆ. ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಕಸಬಾ, ಹೆತ್ತೂರು, ಯಸಳೂರು ಹಾಗೂ ಹಾನುಬಾಳು ಹೋಬಳಿ ವ್ಯಾಪ್ತಿಯಲ್ಲಿ ಮಂಗಳವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಉತ್ತಮ ಮಳೆಯಾಗಿದೆ.

ಶಿವಮೊಗ್ಗ, ಮಾಸ್ತಿಕಟ್ಟೆ, ನಗರ ಭಾಗದಲ್ಲಿ ಸಂಜೆಯ ನಂತರ ಉತ್ತಮಮಳೆಯಾದರೆ, ಹೊಸನಗರ, ತೀರ್ಥಹಳ್ಳಿ, ಕಾರ್ಗಲ್, ಭದ್ರಾವತಿ, ಸಾಗರ, ಸೊರಬ, ಶಿಕಾರಿಪುರ ತಾಲ್ಲೂಕಿನಲ್ಲಿ ಸಾಧಾರಣ ಮಳೆಯಾಗಿದೆ. ಲಿಂಗನಮಕ್ಕಿ, ಭದ್ರಾ, ತುಂಗಾ ಜಲಾಶಯಗಳಿಗೆ ಒಳಹರಿವು ಕಡಿಮೆಯಾಗಿದೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಅರ್ಧ ತಾಸು ಉತ್ತಮ ಮಳೆಯಾಯಿತು. ಹರಪನಹಳ್ಳಿ ತಾಲ್ಲೂಕಿನ ಉಚ್ಚಂಗಿದುರ್ಗದಲ್ಲಿ ಸಂಜೆ 1 ತಾಸು ರಭಸದ ಮಳೆ ಸುರಿಯಿತು.

ಶೀಲಹಳ್ಳಿ ಸೇತುವೆ ಮುಳುಗಡೆ
ಲಿಂಗಸುಗೂರು (ರಾಯಚೂರು ಜಿಲ್ಲೆ): ತಾಲ್ಲೂಕಿನ ಶೀಲಹಳ್ಳಿ ಮತ್ತು ಹಂಚಿನಾಳ ಮಧ್ಯೆ ಕೃಷ್ಣಾ ನದಿಗೆ ನಿರ್ಮಿಸಿದ ಸೇತುವೆ ಮಂಗಳವಾರ ಪ್ರವಾಹದಿಂದ ಭಾಗಶಃ ಮುಳುಗಡೆಯಾಗಿ ನಡುಗಡ್ಡೆಗಳ ಸಂಪರ್ಕ ಕಡಿತವಾಗಿದೆ. ‌

‌ನಾರಾಯಣಪುರ ಅಣೆಕಟ್ಟೆಯಿಂದ ಹೆಚ್ಚುವರಿ ನೀರನ್ನು ಕ್ರಸ್ಟ್‌ಗೇಟ್‌ ಮೂಲಕ ಕೃಷ್ಣಾ ನದಿಗೆ ಬಿಟ್ಟಿದ್ದರಿಂದ ನದಿ ಪ್ರದೇಶದಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಸೇತುವೆ ಭಾಗಶಃ ಮುಳಗಡೆಯಾಗಿ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿದೆ.

‘ಮಂಗಳವಾರ ಮಧ್ಯಾಹ್ನ ನಾರಾಯಣಪುರ ಅಣೆಕಟ್ಟೆಯಿಂದ 1,65,000 ಕ್ಯುಸೆಕ್‌ ನೀರು ಬಿಟ್ಟಿದ್ದರಿಂದ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿದೆ. ನಡುಗಡ್ಡೆ ಗ್ರಾಮಗಳಾದ ಜಲದುರ್ಗ, ಹಂಚಿನಾಳ, ಯಳಗುಂದಿ, ಯರಗೋಡಿ, ಕಡದರಗಡ್ಡಿ ಜನ ತಾಲ್ಲೂಕು ಕೇಂದ್ರ ಸೇರಿ ಇತರೆ ಪಟ್ಟಣ ಪ್ರದೇಶಗಳ ಸಂಪರ್ಕದಿಂದ ದೂರ ಉಳಿಯುವಂತಾಗಿದೆ’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT