ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೈ’–ದಳದ 20 ಕ್ಕೂ ಹೆಚ್ಚು ಶಾಸಕರು ಬಿಜೆಪಿಯತ್ತ: ಬಿಜೆಪಿ ನಾಯಕರ ಹೇಳಿಕೆ

‘ಆಪರೇಷನ್‌ ಕಮಲ’ದ ದಾಳ ಉರುಳಿಸಿದ ಸವದಿ, ರಮೇಶ‌ ಜಾರಕಿಹೊಳಿ
Last Updated 30 ಮೇ 2020, 1:29 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿಯ ಕೆಲವು ಶಾಸಕರ ಪ್ರತ್ಯೇಕ ಸಭೆ ನಡೆಸಿದ ಬೆನ್ನಲ್ಲೇ, ಕಾಂಗ್ರೆಸ್‌ ಮತ್ತು ಜೆಡಿಎಸ್‌ನಿಂದ 20 ಕ್ಕೂ ಹೆಚ್ಚು ಶಾಸಕರು ಬಿಜೆಪಿ ಸೇರಲು ಸಿದ್ಧರಿದ್ದಾರೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮತ್ತು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.

‘ಇದು ಮತ್ತೊಂದು ಸುತ್ತಿನ ‘ಆಪರೇಷನ್ ಕಮಲ’ದ ಸಾಧ್ಯತೆಗಿಂತ ಇಬ್ಬರೂ ತಮ್ಮ ರಾಜಕೀಯ ಎದುರಾಳಿಗಳಾದ ಉಮೇಶ‌ ಕತ್ತಿ ಹಾಗೂ ಕಾಂಗ್ರೆಸ್‌ನ ಡಿ.ಕೆ. ಶಿವಕುಮಾರ್ ಅವರ ಕಾಲೆಳೆಯಲು ಉರುಳಿಸಿದ ದಾಳ. ಆದರೆ, ನಮ್ಮ ಪಕ್ಷದ ಯಾವುದೇ ಶಾಸಕರು ಬಿಜೆಪಿಗೆ ಹೋಗುವ ಸ್ಥಿತಿಯಲ್ಲಿ ಇಲ್ಲ. ಈ ಹಿಂದೆ ಪಕ್ಷ ಬಿಟ್ಟವರ ಪಾಡು ಏನಾಗಿದೆ ಎಂಬುದು ಕಣ್ಣ ಮುಂದೆಯೇ ಇದೆ’ ಎಂದು ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದರು.

ಸವದಿ ಹೇಳಿದ್ದೇನು:‘ಬೇರೆ ಪಕ್ಷದಿಂದ 15-20 ಶಾಸಕರು ನಮ್ಮ ಪಕ್ಷಕ್ಕೆ ಬರಲು ಸಿದ್ಧರಿದ್ದಾರೆ. ಅವರನ್ನು ಬಿಜೆಪಿಗೆ ತೆಗೆದುಕೊಳ್ಳಬೇಕೋ ಬೇಡವೋ ಎಂಬುದನ್ನು ನಮ್ಮ ಹೈಕಮಾಂಡ್‌ ತೀರ್ಮಾನಿಸಲಿದೆ’ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾವೇರಿಯಲ್ಲಿ ಹೇಳಿದರು.

‘ನಮ್ಮ ಪಕ್ಷದ ಶಾಸಕರು ಮಾರಾಟಕ್ಕೆ ಇಲ್ಲ. ನಮ್ಮವರು ಪಕ್ಷ ನಿಷ್ಠೆಯನ್ನು ಹೊಂದಿದ್ದಾರೆ.ಶಾಸಕರ ರಹಸ್ಯ ಸಭೆ ಬಗ್ಗೆ ಈಗಾಗಲೇ ಉಮೇಶ ಕತ್ತಿ ಸ್ಪಷ್ಟನೆ ನೀಡಿದ್ದಾರೆ.ಉತ್ತರ ಕರ್ನಾಟಕದ ಅನೇಕ ಶಾಸಕರು ಊಟಕ್ಕಾಗಿ ಒಂದೆಡೆ ಸೇರಿದ್ದಾರೆ. ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ. ಎಲ್ಲ ಶಾಸಕರು ಯಡಿಯೂರಪ್ಪ ನಾಯಕತ್ವದಲ್ಲಿ ಒಟ್ಟಾಗಿದ್ದಾರೆ’ ಎಂದು ಸ್ಪಷ್ಟಪಡಿಸಿದರು.

22 ಶಾಸಕರು ಸಂಪರ್ಕದಲ್ಲಿ:‘ಕಾಂಗ್ರೆಸ್‌ನ 22 ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ. ಬಿಜೆಪಿ ಹೈಕಮಾಂಡ್‌ ಒಪ್ಪಿಗೆ ನೀಡಿದರೆ ವಾರದೊಳಗೆ ಕಾಂಗ್ರೆಸ್‌ನ ಐವರು ಶಾಸಕರಿಂದ ರಾಜೀನಾಮೆ ಕೊಡಿಸುತ್ತೇನೆ’ ಎಂದು ‌ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಕೊಳ್ಳೇಗಾಲದಲ್ಲಿ ಹೇಳಿದರು.

‘ಕತ್ತಿ ಅವರ ಮನೆಯಲ್ಲಿ ನಡೆದ ಪೂಜೆಯಲ್ಲಿ ಶಾಸಕರು ಭಾಗವಹಿಸಿದ್ದಾರೆ ಎಂಬ ಮಾಹಿತಿ ಇದೆ. ಅವರು ನನ್ನ ಸ್ನೇಹಿತರು. ಏನು ಅಸಮಾಧಾನ ಇದೆಯೋ ಗೊತ್ತಿಲ್ಲ. ಅವರೊಂದಿಗೆ ಮಾತನಾಡುತ್ತೇನೆ. ನಾವೆಲ್ಲರೂ ಒಟ್ಟಾಗಿದ್ದೇವೆ. ಶಾಸಕರು ಚರ್ಚಿಸಿದ ಮಾತ್ರಕ್ಕೆ ಭಿನ್ನಮತ ಇದೆ ಎಂದಲ್ಲ; ನಾವು ಕಾಂಗ್ರೆಸ್‌ನಲ್ಲಿದ್ದಾಗ ನಡೆದಿದ್ದು ಭಿನ್ನಮತ’ ಎಂದರು.

‘ನಾನು ಯಡಿಯೂರಪ್ಪ ಅವರ ಪರವಾಗಿದ್ದೇನೆ. ಸರ್ಕಾರ ಸುರಕ್ಷಿತವಾಗಿದೆ. ಇನ್ನೂ ಮೂರು ವರ್ಷ ಅಧಿಕಾರ ನಡೆಸಲಿದೆ. ನಂತರದ ಚುನಾವಣೆಯಲ್ಲೂ ಪಕ್ಷವನ್ನು ಗೆಲ್ಲಿಸಲು ಪ್ರಯತ್ನಿಸುತ್ತೇನೆ’ ಎಂದರು.

ಕೆಲವು ಶಾಸಕರು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ ಎಂಬ ಸುದ್ದಿ ಇದೆಯಲ್ಲ ಎಂಬ ಪ್ರಶ್ನೆಗೆ, ‘ಅವರೆಲ್ಲ ಏಳೆಂಟು ಬಾರಿ ಶಾಸಕರಾಗಿದ್ದಾರೆ. ಮುಳುಗುತ್ತಿರುವ ಕಾಂಗ್ರೆಸ್ ಪಕ್ಷವನ್ನು ಸೇರುವಷ್ಟು ಮೂರ್ಖರಲ್ಲ ಎಂದುಕೊಂಡಿದ್ದೇನೆ’ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT