ಎಂಎಸ್‌ಎಂಇ ವ್ಯಾಖ್ಯಾನ ಬದಲಾಯಿಸದಂತೆ ಆಗ್ರಹ

7

ಎಂಎಸ್‌ಎಂಇ ವ್ಯಾಖ್ಯಾನ ಬದಲಾಯಿಸದಂತೆ ಆಗ್ರಹ

Published:
Updated:

ಹುಬ್ಬಳ್ಳಿ: ಕೇಂದ್ರ ಸರ್ಕಾರವು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ವ್ಯಾಖ್ಯಾನ ಬದಲಾವಣೆ ಮುಂದಾಗಿದೆ. ಸಣ್ಣ ಕೈಗಾರಿಕೆಗಳ ಅವನತಿಗೆ ಕಾರಣವಾಗುವ ಬದಲಾವಣೆಯನ್ನು ಯಾವುದೇ ಕಾರಣಕ್ಕೂ ಮಾಡಬಾರದು ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಬಸವರಾಜ ಜವಳಿ ಆಗ್ರಹಿಸಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ₹ 5 ಕೋಟಿ ಬಂಡವಾಳ ಹೂಡುವವರನ್ನು ಸಣ್ಣ ಹಾಗೂ ₹ 25 ಕೋಟಿ ಬಂಡವಾಳ ಹೂಡುವವರನ್ನು ಮಧ್ಯಮ ಕೈಗಾರಿಕೆ ಎಂದು ಪರಿಗಣಿಸಲಾಗುತ್ತಿತ್ತು. ಈಗ ಆ ವ್ಯಾಪ್ತಿಗೆ ₹ 250 ಕೋಟಿಯವರೆಗೆ ಹೂಡಿಕೆ ಮಾಡುವವರನ್ನು ತರಲಾಗುತ್ತಿದೆ. ಹಾಗೆ ಮಾಡಿದರೆ, ಸಣ್ಣ ಕೈಗಾರಿಕೆಗಳು ಮುಚ್ಚಿ ಹೋಗಲಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಯಾವುದೇ ಬದಲಾವಣೆ ಮಾಡುವ ಮುನ್ನ ಸರ್ಕಾರವು ಎಲ್ಲ ಪಾಲುದಾರ ಸಂಘ–ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಅದರ ಪರಿಣಾಮ ಹಾಗೂ ಸಾಧಕ–ಬಾಧಕಗಳ ಬಗ್ಗೆ ಚರ್ಚಿಸಬೇಕು ಎಂದರು.

ಜಿಎಸ್‌ಟಿ ಜಾರಿಗೊಳಿಸಿರುವುದು ಸ್ವಾಗತಾರ್ಹ. ಜಿಎಸ್‌ಟಿಯಿಂದಾಗಿ ಬೇರೆ ರಾಜ್ಯದ ಕಂಪನಿಗಳೊಂದಿಗೆ ಸ್ಪರ್ಧಿಸಿ ವಿವಿಧ ಸಂಸ್ಥೆಗಳಿಗೆ ಕಚ್ಚಾ ವಸ್ತುಗಳನ್ನುಪೂರೈಸಲು ಸಾಧ್ಯವಾಗುತ್ತಿದೆ. ಆದರೆ, ಕೆಲವು ಲೋಪದೋಷಗಳಿವೆ. ಅವುಗಳನ್ನು ಸರಿಪಡಿಸಬೇಕು. ಜೀವನಾವಶ್ಯಕ ವಸ್ತುಗಳ ಮೇಲೆ ಶೇ 12 ರಷ್ಟು ತೆರಿಗೆ ವಿಧಿಸುತ್ತಿದ್ದು, ಅದನ್ನು ಶೇ 5ಕ್ಕೆ ಇಳಿಸಬೇಕು ಎಂದು ಆಗ್ರಹಿಸಿದರು.

₹ 20 ಲಕ್ಷದೊಳಗೆ ವಹಿವಾಟು ಮಾಡುವವರಿಗೆ ಜಿಎಸ್‌ಟಿ ಅನ್ವಯವಾಗುವುದಿಲ್ಲ ಎನ್ನುತ್ತಾರೆ. ಆದರೆ, ಅವರಿಂದ ವಸ್ತುಗಳನ್ನು ಖರೀದಿಸುವ ಎಲ್ಲ ಕಂಪನಿಗಳವರು ಜಿಎಸ್‌ಟಿ ನಂಬರ್‌ ಕೇಳುವುದರಿಂದ ಅವರೂ ಇದರ ವ್ಯಾಪ್ತಿಗೆ ಬರುತ್ತಿದ್ದಾರೆ. ಇದನ್ನು ತಪ್ಪಿಸುವ ಕೆಲಸ ಆಗಬೇಕು. ಇ–ವೇ ಬಿಲ್‌ ಪದ್ಧತಿ ಕೈಬಿಡಬೇಕು ಎಂದರು.

ಉದ್ಯಮಿಗಳ ಅನುಕೂಲಕ್ಕಾಗಿ ಕಾಸಿಯಾ ಶ್ರೇಷ್ಠತೆ ಮತ್ತು ನಾವೀನ್ಯತೆ ಕೇಂದ್ರ ಸ್ಥಾಪಿಸಲಾಗಿದೆ. ಇದರಿಂದ ಇಂದೇ ಸೂರಿನಡಿ ಮಾರುಕಟ್ಟೆ ಕೌಶಲಾಭಿವೃದ್ಧಿಯ ಎಲ್ಲ ನೆರವು ಸಿಗಲಿದೆ. ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ ಆಯೋಜಿಸಲು ಸಾಧ್ಯವಾಗುತ್ತದೆ. ಉದ್ಯಮಿಗಳಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಕಾಸಿಯಾ ರತ್ನ ಪ್ರಶಸ್ತಿ ನೀಡಲಾಗುವುದು ಎಂದು ಹೇಳಿದರು.

ಸೂಕ್ಷ್ಮ ಉದ್ಯಮಗಳ ಅಭಿವೃದ್ಧಿ, ಉಪಕರಣ ಕೊಠಡಿ ಮತ್ತು ವಿನ್ಯಾಸ ಹಾಗೂ ತಂತ್ರಜ್ಞಾನ ಕೇಂದ್ರ ಆರಂಭ, ಕಾಸಿಯಾ ಮಾಹಿತಿ ಕೇಂದ್ರ, ಮಾರುಕಟ್ಟೆ ಅಭಿವೃದ್ಧಿಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ಕಾಸಿಯಾ ಉದ್ಯಮಿಗಳ ನೆರವಿಗೆ ನಿಂತಿದೆ ಎಂದರು.

ಬೃಹತ್‌ ಉದ್ಯಮಗಳು ಬರುವುದನ್ನು ಸಂಸ್ಥೆಯು ಸ್ವಾಗತಿಸುತ್ತಿದೆ. ಅವರಿಗೆ ಬೇಕಾದ ಕಚ್ಚಾ ವಸ್ತುಗಳನ್ನು ಸ್ಥಳೀಯ ಸಣ್ಣ ಉದ್ಯಮಿಗಳಿಂದ ತೆಗೆದುಕೊಳ್ಳಬೇಕು. ಆದರೆ, ಸ್ಥಳೀಯವಾಗಿ ಖರೀದಿಸದ್ದರಿಂದ ತೊಂದರೆಯಾಗುತ್ತಿದೆ. ಸರ್ಕಾರ ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದಲ್ಲಿ ಕೈಗಾರಿಕೆಗಳಿಗೆ ಹೆಚ್ಚಿನ ತೆರಿಗೆ ವಿಧಿಸಲಾಗುತ್ತಿದೆ. ಅದನ್ನು ಕಡಿಮೆ ಮಾಡಲು ಸರ್ಕಾರ ಸಮ್ಮತಿಸಿದ್ದು, ಕೂಡಲೇ ಜಾರಿಗೆ ತರಬೇಕು. ಕೈಗಾರಿಕಾ ಪ್ರದೇಶಗಳು ಮೂಲ ಸೌಕರ್ಯಗಳ ಕೊರತೆಯಿಂದ ಬಳಲುತ್ತಿವೆ. ಸೌಕರ್ಯ ಒದಗಿಸಲು ₹ 50 ಕೋಟಿ ಬಿಡುಗಡೆಯಾಗಿದೆ. ತೆರಿಗೆಯ ಒಂದಷ್ಟು ಹಣವನ್ನು ಆಯಾ ಕೈಗಾರಿಕಾ ಪ್ರದೇಶದ ಸಂಘಗಳೇ ಇಟ್ಟುಕೊಂಡು ನಿರ್ವಹಣೆಗೆ ಅವಕಾಶ ನೀಡಬೇಕು ಎಂಬ ಪ್ರಸ್ತಾವ ಸಲ್ಲಿಸಲಾಗಿದೆ ಎಂದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !