ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿಯಲ್ಲಿ ಗೌರವದ ‘ಮುಕ್ತಿ’ಗೆ ‘ಕಟ್ಟಿಗೆ ಬ್ಯಾಂಕ್‌’!

ಬೆಳಗಾವಿ ಜಿಲ್ಲೆ ನಂದಗಡ ಗ್ರಾಮ ಪಂಚಾಯಿತಿಯಲ್ಲಿ ಜಾರಿ
Last Updated 12 ಜುಲೈ 2020, 15:20 IST
ಅಕ್ಷರ ಗಾತ್ರ

ಬೆಳಗಾವಿ: ಯಾರಾದರೂ ನಿಧನರಾದರೆ ಅಂತ್ಯಕ್ರಿಯೆಗಾಗಿ ಕಟ್ಟಿಗೆ ಹೊಂದಿಸುವುದು ದುಃಖದಲ್ಲಿರುವ ಕುಟುಂಬದವರಿಗೆ ಸವಾಲಿನ ಸಂಗತಿಯೇ ಸರಿ. ಅಂತಹ ಸಂದರ್ಭದಲ್ಲಿ ನೆರವಾಗುವುದಕ್ಕಾಗಿ ಸ್ಮಶಾನದ ಬಳಿಗೇ ಕಟ್ಟಿಗೆ ಪೂರೈಸುವ ‘ಮುಕ್ತಿ’ ಹೆಸರಿನ ಯೋಜನೆಯನ್ನು ಜಿಲ್ಲೆಯ ಖಾನಾಪುರ ತಾಲ್ಲೂಕಿನ ನಂದಗಡ ಗ್ರಾಮ ಪಂಚಾಯಿತಿಯಿಂದ ಜಾರಿಗೊಳಿಸಲಾಗಿದೆ.

ಸುತ್ತಲೂ ಕಾಡಿನಿಂದ ಕೂಡಿದ್ದರೂ ಖಾನಾಪುರ ತಾಲ್ಲೂಕಿನಲ್ಲಿ ಸೌದೆ ಅಥವಾ ಕಟ್ಟಿಗೆಗೆ ಕೊರತೆ ಇದೆ. ಏಕೆಂದರೆ, ಮರ ಕಡಿಯುವುದಕ್ಕೆ ಅರಣ್ಯ ಇಲಾಖೆಯವರ ಅನುಮತಿ ಪಡೆಯಬೇಕು. ಇಲ್ಲದಿದ್ದರೆ ಅಕ್ರಮವಾಗುತ್ತದೆ. ಹೀಗಾಗಿ, ಅಂತ್ಯಕ್ರಿಯೆ ವೇಳೆ ಜನರು ಪರದಾಡುವುದು ಸಾಮಾನ್ಯವಾಗಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಂದಗಡ ಪಂಚಾಯಿತಿಯಲ್ಲಿ ‘ಕಟ್ಟಿಗೆ ಬ್ಯಾಂಕ್‌’ ಮಾಡಲಾಗಿದ್ದು, ಈಚೆಗೆ ಉದ್ಘಾಟಿಸಲಾಗಿದೆ. ಅದರ ಮೂಲಕ ಜನರಿಗೆ ಕಟ್ಟಿಗೆ ಒದಗಿಸಲಾಗುವುದು.

ಮಾದರಿ ಯೋಜನೆ:

ದೊಡ್ಡದಾದ ನಂದಗಡ ಗ್ರಾಮ ಪಂಚಾಯಿತಿಯಲ್ಲಿ ನಂದಗಡ ಗ್ರಾಮ ಮಾತ್ರವೇ ಬರುತ್ತದೆ. ಅಲ್ಲಿ 23 ವಾರ್ಡ್‌ಗಳಿದ್ದು, 9,500ಕ್ಕೂ ಹೆಚ್ಚಿನ ಜನಸಂಖ್ಯೆ ಇದೆ. ಶುದ್ಧ ನೀರು ಪೂರೈಕೆ, ತ್ಯಾಜ್ಯ ನಿರ್ವಹಣೆ, ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆ ಮೊದಲಾದ ವಿಷಯದಲ್ಲಿ ಮಾದರಿಯಾಗಿರುವ ಇಲ್ಲಿ ‘ಕಟ್ಟಿಗೆ ಬ್ಯಾಂಕ್‌’ಗೆ ದೊಡ್ಡದಾದ ಶೆಡ್ ನಿರ್ಮಿಸಲಾಗಿದೆ. ಈ ರೀತಿಯ ಯೋಜನೆ ರಾಜ್ಯದಲ್ಲೇ ಮೊದಲು ಎನ್ನಲಾಗುತ್ತಿದೆ.

ಗ್ರಾಮದವರು ಕಟ್ಟಿಗೆಗಾಗಿ 10 ಕಿ.ಮೀ. ದೂರದ ಖಾನಾಪುರ ಪಟ್ಟಣಕ್ಕೆ ಹೋಗಬೇಕಾಗಿತ್ತು. ಕೆ.ಜಿ.ಗೆ ಸರಾಸರಿ ₹ 7ರಿಂದ ₹ 8 ನೀಡಿ ತರಬೇಕಾಗಿತ್ತು. ವಾಹನದವರಿಗೆ ಸಾಗಣೆ ವೆಚ್ಚವನ್ನೂ ಭರಿಸಬೇಕಾಗುತ್ತಿತ್ತು. ಈಗ, ಪಂಚಾಯಿತಿಯಿಂದ ಕೆ.ಜಿ.ಗೆ ₹ 5ರಂತೆ ನೀಡಲಾಗುವುದು. ಅಲ್ಲದೇ, ಸ್ಥಳಕ್ಕೇ ತಂದುಕೊಡಲಾಗುವುದು. ಇದರಿಂದ ಕುಟುಂಬದವರ ಪರದಾಟ ತಪ್ಪಲಿದೆ. ದುಬಾರಿ ಬೆಲೆ ತೆರುವ ಅಗತ್ಯವೂ ಇರುವುದಿಲ್ಲ.

ಪಂಚಾಯಿತಿ ನಿಧಿಯಲ್ಲಿ:

ಪಂಚಾಯಿತಿ ನಿಧಿಯಲ್ಲಿ ₹ 1.85 ಲಕ್ಷ ವೆಚ್ಚದಲ್ಲಿ ಶೆಡ್ ನಿರ್ಮಿಸಲಾಗಿದೆ. ಅಲ್ಲಿ ಪ್ರಸ್ತುತ 5ಸಾವಿರ ಕೆ.ಜಿ. ಸೌದೆ ಸಂಗ್ರಹಿಸಲಾಗಿದೆ.

‘ಪಂಚಾಯಿತಿ ವ್ಯಾಪ್ತಿಯಲ್ಲಿ ಯಾರಾದರೂ ಮರಣ ಹೊಂದಿದರೆ ಅಂತ್ಯಕ್ರಿಯೆಗೆ ‘ಸಾರ್ಥಕ’ ಕಾರ್ಯಕ್ರಮದಲ್ಲಿ ₹ 2,500 ಸಹಾಯಧನ ನೀಡಲಾಗುತ್ತಿದೆ. ಈವರೆಗೆ 67 ಕುಟುಂಬಗಳಿಗೆ ಆರ್ಥಿಕ ನೆರವು ಒದಗಿಸಲಾಗಿದೆ. ಈಗ ‘ಮುಕ್ತಿ’ ಕಾರ್ಯಕ್ರಮ ಜಾರಿಗೆ ತರಲಾಗಿದ್ದು, ಪಂಚಾಯಿತಿ ವ್ಯಾಪ್ತಿಯಲ್ಲಿ ಯಾರೇ ಮರಣ ಹೊಂದಿದರೂ ಶವ ಸುಡಲು ಸೌದೆ ಅಥವಾ ಕಟ್ಟಿಗೆ ಬೇಕಾದಲ್ಲಿ ನಮ್ಮನ್ನು ಸಂಪರ್ಕಿಸಿದರೆ ಸುಡುವ ಸ್ಥಳಕ್ಕೇ ಮಾರುಕಟ್ಟೆ ದರಕ್ಕಿಂತ ಅತ್ಯಂತ ಕಡಿಮೆ ದರದಲ್ಲಿ ಪೂರೈಸಲಾಗುವುದು’ ಎಂದು ಪಿಡಿಒ ಕೆ.ಎಸ್. ಗಣೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅರಣ್ಯ ಇಲಾಖೆ ಹರಾಜಿನಲ್ಲಿ ಪಾಲ್ಗೊಂಡು ಖರೀದಿಸಿದ್ದ ವ್ಯಕ್ತಿಯಿಂದ ನಾವು ಕಟ್ಟಿಗೆ ಖರೀದಿಸಿದ್ದೇವೆ. ಅವರು ಕೆ.ಜಿ.ಗೆ ₹ 4ಕ್ಕೆ ಖರೀದಿಸಿದ್ದರು. ಅಷ್ಟಕ್ಕೇ ನಮಗೂ ಕೊಟ್ಟಿದ್ದಾರೆ. ಸಾಗಣೆ ವೆಚ್ಚ ಸೇರಿ ಕೆ.ಜಿ.ಗೆ ₹ 5ರಂತೆ ನೀಡುತ್ತೇವೆ. ಮಳೆಗಾಲದಲ್ಲಿ ಕಟ್ಟಿಗೆಗೆ ತೀವ್ರ ಕೊರತೆ ಉಂಟಾಗುತ್ತಿತ್ತು. ಹೀಗಾಗಿ, ಜನರಿಗೆ ನೆರವಾಗುತ್ತಿದ್ದೇವೆ. ಇದಕ್ಕೆ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳ ಸಹಕಾರ ಸಿಕ್ಕಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT