ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಕೋರ್ಟ್‌ ಮಧ್ಯಂತರ ಆದೇಶದಿಂದ ಅಡಕತ್ತರಿಯಲ್ಲಿ ಮುನಿರತ್ನ

Last Updated 28 ಏಪ್ರಿಲ್ 2020, 15:52 IST
ಅಕ್ಷರ ಗಾತ್ರ

ಬೆಂಗಳೂರು: "ನಕಲಿ ಮತದಾರರ ಗುರುತಿನ ಚೀಟಿಗೆ ಸಂಬಂಧಿಸಿದ ಕ್ರಿಮಿನಲ್ ಪ್ರಕರಣದಲ್ಲಿ ನನ್ನದೇನೂ ಪಾತ್ರವಿಲ್ಲ. ಆದ್ದರಿಂದ, ಪರಾಜಿತ ಅಭ್ಯರ್ಥಿ ಮುನಿರಾಜು ಗೌಡ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯ ಮೂಲ ವಾದಪತ್ರದ ಆರೋಪದಿಂದ ನನ್ನನ್ನು ಕೈ ಬಿಡಬೇಕು" ಎಂಬ ಮುನಿರತ್ನ ಅವರ ಮನವಿಯನ್ನು ಹೈಕೋರ್ಟ್ ಸಾರಾಸಗಟಾಗಿ ತಿರಸ್ಕರಿಸಿದೆ.

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ 2018ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮುನಿರತ್ನ ಗೆದ್ದಿದ್ದರು. ಇವರ ವಿರುದ್ಧ ಪರಾಜಯ ಅನುಭವಿಸಿದ ಅಂದಿನ ಬಿಜೆಪಿ ಅಭ್ಯರ್ಥಿ ಮುನಿರಾಜು ಗೌಡ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯ ಕುರಿತಂತೆ ಹೈಕೋರ್ಟ್ ಈ ಮಹತ್ವದ ಮಧ್ಯಂತರ ಆದೇಶ ನೀಡಿದೆ.

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠವು ಈ ಕುರಿತಂತೆ ಅರ್ಜಿದಾರರು ಮತ್ತು ಪ್ರತಿವಾದಿಗಳ ಮಧ್ಯಂತರ ಅರ್ಜಿಗಳ ಮೇಲೆ ಕಾಯ್ದಿರಿಸಿದ ಆದೇಶವನ್ನು ಪ್ರಕಟಿಸಿದೆ.

ಮುನಿರಾಜು ಗೌಡ ಅವರು ತಮ್ಮ ಚುನಾವಣಾ ತಕರಾರು ಅರ್ಜಿಯ ವಾದ ಪತ್ರದ ತಿದ್ದುಪಡಿಗೆ ಕೋರಿದ್ದ ಮಧ್ಯಂತರ ಅರ್ಜಿ ಮತ್ತು ಹಲವು ಹೊಸ ದಾಖಲೆಗಳನ್ನು ಸಲ್ಲಿಸಲು ಅವಕಾಶ ನೀಡುವಂತೆ ಕೋರಿದ್ದ ಅರ್ಜಿಯನ್ನು ನ್ಯಾಯಪೀಠ ಇದೇ ವೇಳೆ ಪುರಸ್ಕರಿಸಿದೆ.

ಆದರೆ, ಮೂಲ ಅರ್ಜಿಯಲ್ಲಿ ಮುನಿರಾಜು ಗೌಡ ಅವರು, "ನನ್ನನ್ನೇ ಚುನಾಯಿತ ಅಭ್ಯರ್ಥಿ ಎಂದು ಘೋಷಿಸಲು ನಿರ್ದೇಶಿಸಬೇಕು" ಎಂಬ ಮನವಿಯನ್ನು ತಿರಸ್ಕರಿಸಿದೆ.

ದಾವೆಯ ಪ್ಯಾರಾ ಎಂಟರಿಂದ ಮೂವತ್ತನೇ ಪ್ಯಾರಾವನ್ನು (ನಕಲಿ ಮತದಾರರ ಗುರುತಿನ ಚೀಟಿಗೆ ಸಂಬಂಧಿಸಿದಂತೆ ಮುನಿರತ್ನ ವಿರುದ್ಧದ ಆರೋಪಗಳನ್ನು ಒಳಗೊಂಡ ಅಂಶಗಳ ಪ್ಯಾರಾಗಳು) ಮೂಲ ತಕರಾರು ಅರ್ಜಿಯಿಂದ ಕೈಬಿಡಬೇಕೆಂದು ಮುನಿರತ್ನ ಕೋರಿದ್ದ ಪರಿಹಾರವನ್ನು ನ್ಯಾಯಪೀಠ ತಿರಸ್ಕರಿಸಿದೆ.

ಚುನಾವಣಾ ತಕರಾರಿನ ಮೂಲ ಅರ್ಜಿಯನ್ನು ತಿದ್ದುಪಡಿ ಮಾಡಲು ಮತ್ತು ಹೊಸ ದಾಖಲೆಗಳನ್ನು ಒದಗಿಸಲು ಮಧ್ಯಂತರ ಆದೇಶದಲ್ಲಿ ಅವಕಾಶ ಮಾಡಿಕೊಡಲಾಗಿದೆ. ಈ ಕಾರಣದಿಂದ, "ಮುನಿರತ್ನ ಚುನಾವಣಾ ಅಕ್ರಮ ಎಸಗಿ ಗೆದ್ದಿದ್ದಾರೆ. ಒಂದು ವೇಳೆ ಅಕ್ರಮ ನಡೆಯದೇ ಹೋಗಿದ್ದರೆ ಅಷ್ಟೂ ಮತಗಳು ನನಗೇ (ಮುನಿರಾಜು ಗೌಡ) ದಕ್ಕುತ್ತಿದ್ದವು" ಎಂಬ ಅಂಶವನ್ನು ಮುನಿರಾಜು ಗೌಡ
ತಿದ್ದುಪಡಿ ದಾವೆಯಲ್ಲಿ ಸೇರ್ಪಡೆ ಮಾಡಲು ಅವಕಾಶ ನೀಡಲಾಗಿದೆ.

ಮೂಲ ಅರ್ಜಿಯನ್ನು ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸಿದೆ. ಇದರಿಂದ ಮುನಿರಾಜುಗೌಡ ಅವರಿಗೆ ತನ್ನನ್ನೇ ಗೆದ್ದ ಅಭ್ಯರ್ಥಿ ಎಂದು ಘೋಷಣೆ ಮಾಡಲು ಕೋರುವಂತೆ ಪುನಃ ಮತ್ತೊಂದು ತಿದ್ದುಪಡಿ ಅರ್ಜಿ ಸಲ್ಲಿಸಲು ಈ ಆದೇಶದಿಂದ ಅವಕಾಶ ದೊರೆತಿದೆ.

"ವಿಚಾರಣೆ ಅನಿವಾರ್ಯವಾಗಲಿದೆ"

"ಒಂದು ವೇಳೆ ಚುನಾವಣಾ ಆಯೋಗವು ಚುನಾವಣೆಗೆ ಅವಕಾಶ ಕಲ್ಪಿಸಿದ್ದೇ ಆದರೆ, ಅದು ಪುನಃ ಕಾನೂನು ಸಂದಿಗ್ಧತೆಯನ್ನು ಹುಟ್ಟು ಹಾಕುತ್ತದೆ" ಎ‌ನ್ನುತ್ತಾರೆ ಅರ್ಜಿದಾರ ಮುನಿರಾಜುಗೌಡ ಪರ ವಕಾಲತ್ತು ವಹಿಸಿರುವ ವಕೀಲ ಧರಣೇಶ್.

"ಆದಾಗ್ಯೂ, ನ್ಯಾಯಪೀಠ ದಾವೆ ತಿದ್ದುಪಡಿಗೆ ಅವಕಾಶ ಕಲ್ಪಿಸಿರುವ ಕಾರಣ ಆಯೋಗವು ಈ ಆದೇಶವನ್ನು ಸೂಕ್ಷ್ಮವಾಗಿ ಪರಿಗಣಿಸಬೇಕಾಗುತ್ತದೆ" ಎಂದು ವಿವರಿಸುತ್ತಾರೆ.

"ನ್ಯಾಯಪೀಠದ ಈ ಆದೇಶದಿಂದಾಗಿ ಮುನಿರತ್ನ ಅವರು ಹೈಕೋರ್ಟ್ ನ ಕಟಕಟೆ ಏರಿ ತಮ್ಮ ವಿರುದ್ಧದ ಆರೋಪಗಳಿಗೆ ಉತ್ತರ ಕೊಡುವುದು ಅನಿವಾರ್ಯವಾಗಲಿದೆ" ಎಂದು ಅವರು ಹೇಳುತ್ತಾರೆ.

ವಿಚಾರಣೆಗೆ ಬಹುಕಾಲ ತಗುಲಬಲ್ಲದು!

"ಅರ್ಜಿಯಲ್ಲಿ ಕಾಣಿಸಿರುವ ಅಪಾರ ಪ್ರಮಾಣದ ಸಾಕ್ಷ್ಯಗಳ ವಿಚಾರಣೆಗೆ ಬಹುಕಾಲ ಹಿಡಿಯಬಹುದು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನಪ್ರತಿನಿಧಿ ಇಲ್ಲದೇ ಕ್ಷೇತ್ರವನ್ನು ಖಾಲಿ ಉಳಿಸುವುದು ಸಂವಿಧಾನದ ಮೂಲ ಸ್ವರೂಪಕ್ಕೆ ತಕ್ಕುದಲ್ಲ" ಎಂದು ನ್ಯಾಯಪೀಠ ಆದೇಶದಲ್ಲಿ ಸೂಚ್ಯವಾಗಿ ತಿಳಿಸಿದೆ.

ಅಂತೆಯೇ, "ಗೆದ್ದ ಅಭ್ಯರ್ಥಿ ಇಂತಿಷ್ಟೇ ಪ್ರಮಾಣದ ಮತಗಳನ್ನು ಅಕ್ರಮದಿಂದ ಪಡೆದಿದ್ದಾನೆ ಎಂಬುದನ್ನು ತಕರಾರು ಅರ್ಜಿಯಲ್ಲಿ ಸ್ಪಷ್ಟವಾಗಿ ತೋರಿಸಿಲ್ಲ. ಹಾಗೇ ಅಕ್ರಮವಾಗಿ ಪಡೆದ ಅಷ್ಟೂ ಮತಗಳು ಸೋತ ಅಭ್ಯರ್ಥಿಗೆ ಬರಬೇಕಾದಂತಹ ಮತಗಳಾಗಿದ್ದವು ಎಂಬ ಅಂಶವನ್ನು ಹೇಳದೇ ಇರುವುದರಿಂದ ಸೋತ ಅರ್ಜಿದಾರರನ್ನು ಗೆದ್ದ ಅಭ್ಯರ್ಥಿ ಎಂದು ಘೋಷಿಸಬೇಕೆಂಬ ಮನವಿಯನ್ನು ಮಾನ್ಯ ಮಾಡಲಾಗದು" ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಈ ಆದೇಶದಿಂದಾಗಿ ಚೆಂಡು ಈಗ ಚುನಾವಣಾ ಆಯೋಗದ ಅಂಗಳಕ್ಕೆ ಬಿದ್ದಂತಾಗಿದೆ.

"ಹೈಕೋರ್ಟ್ ಆದೇಶದಿಂದ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆ ನಡೆಸಲು ಇದ್ದ ಕಾನೂನಾತ್ಮಕ ಅಡ್ಡಿ ನಿವಾರಣೆಯಾದಂತಾಗಿದೆ.

- ಅಶೋಕ ಹಾರನಹಳ್ಳಿ, ಮುನಿರತ್ನ ಪರ ವಾದ ಮಂಡಿಸಿದ ಹಿರಿಯ ವಕೀಲರು

ಚುನಾವಣೆ ನಡೆಸುವಂತೆ ನ್ಯಾಯಪೀಠ ತನ್ನ ಆದೇಶದಲ್ಲಿ ಎಲ್ಲಿಯೂ ಸ್ಪಷ್ಟವಾಗಿ ಮತ್ತು ನಿಖರವಾಗಿ ತಿಳಿಸಿಲ್ಲ.

-ಎಂ.ಶಿವಪ್ರಕಾಶ್, ಮುನಿರಾಜು ಗೌಡ ಪರ ವಕೀಲರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT