ಗುರುವಾರ , ಏಪ್ರಿಲ್ 9, 2020
19 °C

ದೇವಸ್ಥಾನಗಳ ಆದಾಯ ಸೋರಿಕೆ ತಡೆಗೆ ಕ್ರಮ: ಸಚಿವ ಶ್ರೀನಿವಾಸ ಪೂಜಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಜರಾಯಿ ಇಲಾಖೆ ದೇವಸ್ಥಾನಗಳ ಆದಾಯ ಸೋರಿಕೆ ತಡೆಗಟ್ಟಲು ಮತ್ತು ದೇವಸ್ಥಾನಗಳ ಒತ್ತುವರಿ ತೆರವುಗೊಳಿಸಿ ಆಸ್ತಿ ಸಂರಕ್ಷಣೆಗೆ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಈ ಸಂಬಂಧ ಮುಜರಾಯಿ ಇಲಾಖೆ ಆಯುಕ್ತರಿಂದ ವಿಸ್ತೃತ ವರದಿ ಕೇಳಿರುವುದಾಗಿ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಅನೇಕ ದೇವಸ್ಥಾನಗಳು ಮುಜರಾಯಿ ಇಲಾಖೆ ಅಧೀನದಿಂದ ಕೈತಪ್ಪಿ ಹೋಗಿವೆ. ಅವುಗಳನ್ನು ಮರಳಿ ಇಲಾಖೆ ವ್ಯಾಪ್ತಿಗೆ ಪಡೆಯಲಾಗುವುದು. ಪ್ರಮುಖ ದೇವಸ್ಥಾನಗಳಲ್ಲಿ ಆದಾಯ ಸೋರಿಕೆ ಆಗುತ್ತಿರುವ ಬಗ್ಗೆ ದೂರುಗಳು ಬಂದಿವೆ. ಎಷ್ಟು ಪ್ರಮಾಣದಲ್ಲಿ ಆದಾಯ ಸೋರಿಕೆ ಆಗುತ್ತಿದೆ ಮತ್ತು ಯಾವ ರೂಪದಲ್ಲಿ ಆಗುತ್ತಿದೆ ಎಂಬ ಮಾಹಿತಿ ಇಲ್ಲ. ಅಧ್ಯಯನ ವರದಿ ಈ ಕುರಿತು ಸ್ಪಷ್ಟ ಚಿತ್ರಣ ನೀಡಲಿದೆ. ಆಯುಕ್ತರು ಮೂರು ತಿಂಗಳಲ್ಲಿ ವರದಿ ಸಲ್ಲಿಸಲಿದ್ದಾರೆ ಎಂದು ಅವರು ಹೇಳಿದರು.

ಬಹಳಷ್ಟು ಕಡೆಗಳಲ್ಲಿ ದೇವಸ್ಥಾನಗಳ ಆಸ್ತಿ ಒತ್ತುವರಿಯಾಗಿವೆ. ಈ ಬಗ್ಗೆ ಇಲಾಖೆಯಲ್ಲಿ ನಿಖರ ಮಾಹಿತಿ ಇಲ್ಲ. ಭೂದಾಖಲೆಗಳು ಮತ್ತು ಆರ್‌ಟಿಸಿ ದಾಖಲೆಗಳನ್ನು ಪರಿಶೀಲಿಸಿದಾಗ ದೇವಸ್ಥಾನಗಳ ಆಸ್ತಿಗಳ ರಕ್ಷಣೆ ಸಾಧ್ಯ. ಅಲ್ಲದೆ, 33 ಸಾವಿರ ದೇವಸ್ಥಾನಗಳ ಮಾಹಿತಿ ಕಂಪ್ಯೂಟರೀಕರಿಸಲು ಉದ್ದೇಶಿಸಲಾಗಿದೆ ಎಂದು ವಿವರಿಸಿದರು.

ಬೆಳಗಾವಿ ಜಿಲ್ಲೆ ಸವದತ್ತಿ ಎಲ್ಲಮ್ಮ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ಮಾಸ್ಟರ್‌ ಪ್ಲಾನ್‌ ರೂಪಿಸಲಾಗುವುದು. ಅಲ್ಲಿ ಶುಚಿತ್ವ ಮತ್ತು ಒಳಚರಂಡಿ ಸಮಸ್ಯೆಗಳಿವೆ. ಇವುಗಳನ್ನು ಸರಿಪಡಿಸುವುದರ ಜತೆಗೆ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು. ಇದಕ್ಕಾಗಿ ಸಮಗ್ರ ಯೋಜನಾ ವರರಿಯನ್ನು ಪಡೆಯಲಾಗುವುದು ಎಂದು ಶ್ರೀನಿವಾಸ್‌ ಪೂಜಾರಿ ತಿಳಿಸಿದರು.

ರಾಜ್ಯದ ಪ್ರಮುಖ 25 ದೇವಸ್ಥಾನಗಳಲ್ಲಿ ಗೋಶಾಲೆಗಳನ್ನು ಆರಂಭಿಸಲಾಗುವುದು. ಇವುಗಳ ನಿರ್ವಹಣೆ ಬಗ್ಗೆ ರಾಮಚಂದ್ರಾಪುರ ಮಠದ ಮಾರ್ಗದರ್ಶನ ಪಡೆಯಲಾಗುವುದು. ಗೋಶಾಲೆಗಳನ್ನು ಸರ್ಕಾರವೇ ನಡೆಸಲಿದೆ. ದೇಶಿ ತಳಿ ಸಂರಕ್ಷಣೆಗೆ ಇಲ್ಲಿ ಒತ್ತು ನೀಡಲಾಗುವುದು ಎಂದು ವಿವರಿಸಿದರು.

‘ಸಪ್ತಪದಿ’ ಅರ್ಜಿ ಸಲ್ಲಿಕೆಗೆ ಕಡೆ ದಿನ
ಸಪ್ತಪದಿ ಯೋಜನೆಯಡಿ ಸರಳ ವಿವಾಹಕ್ಕೆ ಅರ್ಜಿ ಸಲ್ಲಿಕೆಗೆ ಮಾರ್ಚ್‌ 27 ಕಡೆ ದಿನವಾಗಿದೆ. ಈವರೆಗೆ 200 ಜೋಡಿಗಳ ಸರಳ ವಿವಾಹಕ್ಕೆ ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಸಚಿವರು ತಿಳಿಸಿದರು.

ಎ, ಬಿ ಮತ್ತು ಸಿ ದರ್ಜೆಯ ದೇವಸ್ಥಾನಗಳಲ್ಲಿ ವಿವಾಹ ನಡೆಸಲಾಗುವುದು. ಎಲ್ಲ ಜಿಲ್ಲೆಗಳಲ್ಲಿ ಎ ದರ್ಜೆಯ ದೇವಸ್ಥಾನಗಳಿಲ್ಲ. ಇಂತಹ ಕಡೆಗಳಲ್ಲಿ ಬಿ ಮತ್ತು ಸಿ ದರ್ಜೆಯ ದೇವಸ್ಥಾನಗಳಲ್ಲಿ ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಅವರು ವಿವರಿಸಿದರು.

ಪ್ರತಿ ಜೋಡಿಗೂ ಮಾಂಗಲ್ಯ ಸರ, ಸೀರೆ ಮತ್ತಿತರ ಪರಿಕರಗಳಿಗೆ ತಲಾ ₹55,000 ಖರ್ಚು ಮಾಡಲಾಗುವುದು. ಸರಳ ವಿವಾಹ ಪ್ರೋತ್ಸಾಹಿಸುವವರು ಸರ್ಕಾರದ ಪ್ರಯತ್ನದ ಜತೆ ಕೈಜೋಡಿಸಬೇಕು. ಈ ಕಾರ್ಯಕ್ರಮ ಜನಪ್ರಿಯಗೊಳಿಸಲು 30 ಜಿಲ್ಲೆಗಳಲ್ಲಿ ವಿಚಾರಸಂಕಿರಣಗಳನ್ನು ಹಮ್ಮಿಕೊಳ್ಳಲಾಗಿದೆ. ಸಪ್ತಪದಿ ರಥದ ಸಂಚಾರವೂ ನಡೆಯಲಿದೆ ಎಂದು ಶ್ರೀನಿವಾಸಪೂಜಾರಿ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು