ಭಾನುವಾರ, ಡಿಸೆಂಬರ್ 15, 2019
26 °C

ದಾವಣಗೆರೆಯಿಂದ ಮ್ಯಾನ್ಮಾರ್‌ಗೆ ‘ಬಾಂಬೆ ಬ್ಲಡ್‌’:ಪ್ರಪಂಚದ ಅತಿ ವಿರಳ ರಕ್ತದ ಗುಂಪು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಪ್ರಪಂಚದ ಅತಿ ವಿರಳ ರಕ್ತದ ಗುಂಪು ಎಂದು ವರ್ಗೀಕರಿಸಲಾಗಿರುವ ‘ಬಾಂಬೆ ಬ್ಲಡ್‌’ ಅನ್ನು ಇಲ್ಲಿನ ಎಸ್‌.ಎಸ್‌. ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ ಮತ್ತು ರಿಸರ್ಚ್‌ ಕೇಂದ್ರದ ರಕ್ತನಿಧಿ ಕೇಂದ್ರದಿಂದ ಮ್ಯಾನ್ಮಾರ್‌ಗೆ ಒಯ್ದು ಅಲ್ಲಿನ ಮಹಿಳೆಯ ಜೀವ ಉಳಿಸಲಾಗಿದೆ.

ಸಾಮಾನ್ಯವಾಗಿ ರಕ್ತವನ್ನು ಎ, ಬಿ, ಎಬಿ ಮತ್ತು ಒ ಎಂಬ ನಾಲ್ಕು ಗುಂಪುಗಳನ್ನಾಗಿ ಗುರುತಿಸಲಾಗುತ್ತದೆ. ಇದಲ್ಲದೇ ಅತಿ ವಿರಳರಲ್ಲಿ ಕಂಡು ಬರುವ ‘ಬಾಂಬೆ ಬ್ಲಡ್‌‘ ಎಂಬ ಇನ್ನೊಂದು ಗುಂಪು ಇದೆ. ಮ್ಯಾನ್ಮಾರ್‌ನ ಯಾಂಗೂನ್‌ ಜನರಲ್‌ ಆಸ್ಪತ್ರೆಯಲ್ಲಿ ತೆರೆದ ಹೃದಯ ಚಿಕಿತ್ಸೆಗೆ ಒಳಗಾದ ಮಹಿಳೆಯಲ್ಲಿ ಈ ಗುಂಪು ಕಂಡುಬಂದಿದೆ. ಅವರಿಗೆ ರಕ್ತದ ಕೊರತೆಯಾದಾಗ ರಕ್ತಕ್ಕಾಗಿ ಪಾಕಿಸ್ತಾನ, ನೇಪಾಳ ಸೇರಿ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಹುಡುಕಲಾಗಿದೆ. ಬೆಂಗಳೂರಿನಲ್ಲಿರುವ ಸಂಕಲ್ಪ ಇಂಡಿಯಾ ಫೌಂಡೇಶನ್‌ಗೂ ಈ ಬಾಂಬೆ ಬ್ಲಡ್‌ಗೆ ಬೇಡಿಕೆ ಸಲ್ಲಿಸಿದ್ದಾರೆ.

ದಾವಣಗೆರೆಯಲ್ಲಿ ಪತ್ತೆ

‘ರಾಜ್ಯದ ಎಲ್ಲ ರಕ್ತನಿಧಿ ಕೇಂದ್ರಗಳು ತಮ್ಮಲ್ಲಿ ಇರುವ ರಕ್ತದ ಗುಂಪು ಮತ್ತು ಸಂಗ್ರಹದ ವಿವರವನ್ನು ಪ್ರತಿದಿನ ಇ–ರಕ್ತಕೋಶ ವೆಬ್‌ ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಮಾಡಬೇಕು. ಬ್ಲಡ್‌ ಕಂಟ್ರೋಲ್‌ ಆಫ್‌ ಇಂಡಿಯಾದಿಂದ ಅನುಮತಿ ಪಡೆದ ಸಂಘ–ಸಂಸ್ಥೆಗಳು ಮತ್ತು ಆಸ್ಪತ್ರೆಗಳಿಗೆ ಈ ಮಾಹಿತಿಯನ್ನು ನೋಡುವ ಅವಕಾಶ ಇರುತ್ತದೆ. ಅದರಂತೆ ಸಂಕಲ್ಪ ಇಂಡಿಯಾ ಫೌಂಡೇಶನ್‌ ಹುಡುಕಿದಾಗ ದಾವಣಗೆರೆಯ ಶಾಮನೂರು ಶಿವಶಂಕರಪ್ಪ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ರಕ್ತನಿಧಿ ಕೇಂದ್ರದಲ್ಲಿ ಬಾಂಬೆ ಬ್ಲಡ್‌ ಇರುವುದು ಗೊತ್ತಾಗಿದೆ. ಅವರು ನಮ್ಮನ್ನು ಸಂಪರ್ಕಿಸಿದ್ದಾರೆ‘ ಎಂದು ಸಂಶೋಧನಾ ಕೇಂದ್ರದ ಪ್ರಾಂಶುಪಾಲ ಡಾ. ಬಿ.ಎಸ್‌. ಪ್ರಸಾದ್‌ ತಿಳಿಸಿದ್ದಾರೆ.

‘ಎರಡು ಯುನಿಟ್‌ ರಕ್ತವನ್ನು ಮ್ಯಾನ್ಮಾರ್‌ಗೆ ಕಳುಹಿಸಲು ಸರ್ಕಾರದಿಂದ ಬೇಕಾದ ಎಲ್ಲ ಅನುಮತಿಗಳನ್ನು ಸಂಕಲ್ಪ ಇಂಡಿಯಾ ಫೌಂಡೇಶನ್‌ ಪಡೆದಿದೆ. ನ.27ರಂದು ಇಲ್ಲಿಂದ ರಕ್ತವನ್ನು 2–8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಕಳುಹಿಸಲಾಗಿದೆ. ಯಾಂಗೂನ್‌ನಲ್ಲಿ ಆ ಮಹಿಳೆ ಚೇತರಿಸಿಕೊಂಡಿದ್ದಾರೆ ಎಂದು ನಮಗೆ ಶನಿವಾರ ಮಾಹಿತಿ ಬಂದಿದೆ‘ ಎಂದು ಅವರು ವಿವರ ನೀಡಿದರು.

ಏನಿದು ‘ಬಾಂಬೆ ಬ್ಲಡ್‌’?

1952ರಲ್ಲಿ ಮುಂಬೈಯಲ್ಲಿ (ಆಗಿನ ಬಾಂಬೆ) ಈ ರಕ್ತದ ಗುಂಪು ಪತ್ತೆಯಾಗಿತ್ತು. ಹಾಗಾಗಿ ಇದು ‘ಬಾಂಬೆ ಬ್ಲಡ್‌ ಗ್ರೂಪ್‌’ ಎಂದೇ ಹೆಸರಾಯಿತು.

ಪ್ರತಿ ರಕ್ತದ ಗುಂಪಿನಲ್ಲೂ ಎಚ್‌ ಆ್ಯಂಟಿಜನ್‌ ಎಂಬುದು ಇರುತ್ತದೆ. ಸಹಜವಾಗಿಯೇ ‘ಒ’ ಗುಂಪಿನವರಲ್ಲೂ ಇರುತ್ತದೆ. ಆದರೆ ‘ಒ’ ಗುಂಪು ಹೊಂದಿರುವ ಪ್ರತಿ 17 ಸಾವಿರ ಮಂದಿಯ ಪೈಕಿ ಒಬ್ಬರಲ್ಲಿ ಎಚ್‌ ಆ್ಯಂಟಿಜನ್‌ ಇರುವುದಿಲ್ಲ. ಒಟ್ಟು ಪ್ರತಿ 10 ಲಕ್ಷಕ್ಕೆ ನಾಲ್ಕು ಮಂದಿಯಲ್ಲಿ ಇದು ಕಂಡುಬರುತ್ತದೆ ಎಂದು ರಕ್ತನಿಧಿ ಕೇಂದ್ರದ ಮುಖ್ಯಸ್ಥೆ ಡಾ.ಜಿ.ಯು. ಕವಿತಾ ’ಪ್ರಜಾವಾಣಿ‘ಗೆ ಮಾಹಿತಿ ನೀಡಿದ್ದಾರೆ.

ವಾರದ ಹಿಂದೆ ಎರಡು ದಿನಗಳ ಅಂತರದಲ್ಲಿ ದಾವಣಗೆರೆ ಮತ್ತು ಚಿತ್ರದುರ್ಗದ ಇಬ್ಬರು ಯುವಕರು ಪ್ರತ್ಯೇಕವಾಗಿ ರಕ್ತದಾನ ಮಾಡಿದ್ದರು. ಅದನ್ನು ‘ಒ’ಗ್ರೂಪ್‌ ಎಂದು ಗುರುತಿಸಿ ಇಡಲಾಗಿತ್ತು. ಆನಂತರ ಅದನ್ನು ಟ್ಯೂಬ್‌ಟೆಸ್ಟ್‌ ಮಾಡಿ ವಿಭಾಗಿಸುವಾಗ ಅದು ‘ಬಾಂಬೆ ಬ್ಲಡ್‌ ಗ್ರೂಪ್‌’ ಎಂಬುದು ಪತ್ತೆಯಾಗಿತ್ತು. ಈ ಮಾಹಿತಿಯನ್ನು ಆ ಇಬ್ಬರು ಯುವಕರಿಗೆ ಇನ್ನಷ್ಟೇ ನೀಡಬೇಕಿದೆ ಎಂದು ಡಾ. ಕವಿತಾ ತಿಳಿಸಿದರು.

* ನಮ್ಮಲ್ಲಿ ತಂತ್ರಜ್ಞಾನ ಇದ್ದಿದ್ದರಿಂದ ಹಾಗೂ ಪ್ರತಿದಿನ ರಕ್ತ ಮಾದರಿಗಳ ವಿವರ ಅಪ್‌ಲೋಡ್‌ ಮಾಡುತ್ತಿದ್ದುದರಿಂದ ಇಲ್ಲಿನ ರಕ್ತ ಮ್ಯಾನ್ಮಾರ್‌ನಲ್ಲಿ ಜೀವ ಉಳಿಸಿದೆ.

-ಡಾ. ಬಿ.ಎಸ್‌. ಪ್ರಸಾದ್‌, ಪ್ರಾಂಶುಪಾಲ, ಎಸ್‌.ಎಸ್‌. ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ ಮತ್ತು ರಿಸರ್ಚ್‌ ಸೆಂಟರ್‌

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು