ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ಸಂಗೀತ ವಿ.ವಿ: ಅನ್ಯ ವಿಷಯ ಪ್ರಾಧ್ಯಾಪಕರ ನೇಮಕ ಹುನ್ನಾರ

ಮೈಸೂರಿನ ಸಂಗೀತ ವಿ.ವಿ ಕುಲಪತಿಗೆ ವಿಷಯ ತಜ್ಞರ ನೇಮಕಕ್ಕೆ ಒತ್ತಾಯ
Last Updated 3 ಡಿಸೆಂಬರ್ 2018, 17:17 IST
ಅಕ್ಷರ ಗಾತ್ರ

ಮೈಸೂರು: ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಕುಲಪತಿಯನ್ನಾಗಿ ಅನ್ಯ ವಿಷಯದ ಪ್ರಾಧ್ಯಾಪಕರೊಬ್ಬರನ್ನು ನೇಮಿಸುವ ಪ್ರಯತ್ನ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.

ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಷಯದಲ್ಲಿ 10 ವರ್ಷ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದವರು ಇಲ್ಲ ಎಂಬ ಕಾರಣ ನೀಡಿ ಯುಜಿಸಿ ನಿಯಮಾವಳಿಗೆ ವಿರುದ್ಧವಾಗಿ ಬೇರೆ ವಿಷಯದ ಪ್ರಾಧ್ಯಾಪಕರನ್ನು ಕುಲಪತಿಯನ್ನಾಗಿ ನೇಮಕ ಮಾಡಲು ಹವಣಿಸಲಾಗುತ್ತಿದೆ.

ಸದ್ಯ, ಕುಲಪತಿಗಳ ಶೋಧನಾ ಸಮಿತಿಯು ಕಳೆದ ತಿಂಗಳು 22ರಂದು ಸಭೆ ಸೇರಿತ್ತು. ಒಟ್ಟು 7 ಮಂದಿ ಅರ್ಜಿ ಸಲ್ಲಿಸಿದ್ದರು. ಒಮ್ಮತದ ತೀರ್ಮಾನಕ್ಕೆ ಸಮಿತಿ ಸದಸ್ಯರು ಬಂದಿಲ್ಲ. ಡಿ. 4ರಂದು ಮತ್ತೊಂದು ಸುತ್ತಿನ ಸಭೆ ನಡೆಯಲಿದೆ.

ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಷಯದಲ್ಲಿ 10 ವರ್ಷ ಪ್ರಾಧ್ಯಾ‍ಪಕರಾಗಿ ಸೇವೆ ಸಲ್ಲಿಸಿದವರನ್ನು ಕುಲಪತಿ ಹುದ್ದೆಗೆ ನೇಮಕ ಮಾಡಬೇಕಿದೆ. ಆದರೆ, ರಾಜ್ಯದಲ್ಲಿ ಇವರ ಕೊರತೆ ಎದುರಾಗಿದೆ. ಈ ವಿಷಯದ ಪ್ರಾಧ್ಯಾಪಕರಾಗಿರುವ ಬಿ.ಎಂ.ಜಯಶ್ರೀ, ನಾಗೇಶ್‌ ಬೆಟ್ಟಕೋಟೆ, ಮಲ್ಲಿಕಾರ್ಜುನ ಅಗಡಿ ಅರ್ಜಿ ಸಲ್ಲಿಸಿದ್ದಾರೆ.

ಇಂಗ್ಲೀಷ್ ಪ್ರಾಧ್ಯಾಪಕರಾಗಿರುವ ಕೆ.ಬಿ.ಸುನೀತಾ, ಸಂವಹನ ವಿಷಯದ ಪ್ರೊ.ಅಶೋಕ, ಪ್ರಾಂಶುಪಾಲರಾಗಿ ನಿವೃತ್ತರಾಗಿರುವ ಸೌಭಾಗ್ಯ ಹಾಗೂ ಮೈಸೂರು ವಿ.ವಿ.ಯಲ್ಲಿ ಪ್ರಾಧ್ಯಾಪಕರಾಗಿರುವ ಚನ್ನರಾಜು ಸಹ ಅರ್ಜಿ ಸಲ್ಲಿಸಿದ್ದಾರೆ. ಇವರೆಲ್ಲ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಷಯದಲ್ಲಿ ತಜ್ಞರಲ್ಲ.

ಯುಜಿಸಿ ನಿಯಮಾವಳಿ ಪ್ರಕಾರ ಕುಲಪತಿಯಾಗಿ ನೇಮಕವಾಗುವವರು ವಿಷಯ ತಜ್ಞರಾಗಿದ್ದು, 10 ವರ್ಷ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರಬೇಕು. ಆದರೆ, ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಷಯ ತಜ್ಞರಾಗಿರುವ ಜಯಶ್ರೀ ಅವರು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರೂ, 63 ವರ್ಷ ಪೂರ್ಣಗೊಳಿಸಿದ್ದಾರೆ. ಇವರಿಗೆ ಕುಲಪತಿಯಾಗಿ ಸಂಪೂರ್ಣ ಸೇವಾವಧಿ ಮುಗಿಸಲು ಸಾಧ್ಯವಿಲ್ಲ. ಇನ್ನುಳಿದ ಇಬ್ಬರಲ್ಲಿ ನಾಗೇಶ್‌ ಬೆಟ್ಟಕೋಟೆ, ಮಲ್ಲಿಕಾರ್ಜುನ ಅಗಡಿ ಕ್ರಮವಾಗಿ 9 ಹಾಗೂ 7 ವರ್ಷ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಈ ಕಾರಣವನ್ನೇ ನೆಪವಾಗಿಟ್ಟುಕೊಂಡು ಅನ್ಯವಿಷಯದ ಪ್ರಾಧ್ಯಾಪಕರನ್ನೇ ಕುಲಪತಿಯಾಗಿ ನೇಮಕ ಮಾಡಲು ಸಮಿತಿ ಸದಸ್ಯರ ಮೇಲೆ ರಾಜಕೀಯ ಒತ್ತಡ ಇದೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಕರ್ನಾಟಕ ರಂಗಶಿಕ್ಷಣ ಪದವೀಧರರ ಒಕ್ಕೂಟವು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆದು ಪ್ರದರ್ಶನ ಕಲಾ ವಿಷಯದಲ್ಲಿ ಪ್ರಾಧ್ಯಾಪಕರಾಗಿರುವವರನ್ನೇ ಕುಲಪತಿಯನ್ನಾಗಿ ನೇಮಕ ಮಾಡಬೇಕು ಎಂದು ಒತ್ತಾಯಿಸಿದೆ. ಶೋಧನಾ ಸಮಿತಿಯಲ್ಲಿ ಯುಜಿಸಿಯಿಂದ ನೇಮಕವಾಗಿರುವ ಮಾಂಡವಿ ಸಿಂಗ್‌ ಅವರು ಕುಲಪತಿ ಹುದ್ದೆಗೆ ರಾಷ್ಟ್ರಮಟ್ಟದಲ್ಲಿ ಜಾಹೀರಾತು ನೀಡಬೇಕು ಎಂದು ನೀಡಿರುವ ಸಲಹೆಯನ್ನೂ ಸಮಿತಿ ಇತರ ಸದಸ್ಯರಾದ ಡಿ.ಬಿ.ನಾಯಕ, ಅಂಬಳಿಕೆ ಹಿರಿಯಣ್ಣ ಒಪ್ಪಿಲ್ಲ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT