ಶನಿವಾರ, ಮಾರ್ಚ್ 28, 2020
19 °C

ಮೈಸೂರು ವಿವಿ: ಅತಿಥಿ ಉಪನ್ಯಾಸಕರ ಕಾಯಮಾತಿಗೆ ಹೈಕೋರ್ಟ್‌ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಮೈಸೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ 10 ವರ್ಷಗಳಿಗಿಂತ ಹೆಚ್ಚು ಕಾಲದಿಂದ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಸೇವೆಯನ್ನು ಕಾಯಂಗೊಳಿಸಲು ತಕ್ಷಣವೇ ಮುಂದಾಗಬೇಕು’ ಎಂದು ಹೈಕೋರ್ಟ್, ರಾಜ್ಯ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮತ್ತು ಮೈಸೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಅವರಿಗೆ ನಿರ್ದೇಶಿಸಿದೆ.

‘ಸೇವೆ ಕಾಯಂಗೊಳಿಸಬೇಕು’ ಎಂದು ಕೋರಿ ಮೈಸೂರು ಜಿಲ್ಲೆ ತಿ.ನರಸೀಪುರ ತಾಲ್ಲೂಕಿನ ಅಟ್ಟಹಳ್ಳಿಯ ಎಂ.ಕಾಂತರಾಜು ಒಳಗೊಂಡಂತೆ 59 ಉಪನ್ಯಾಸಕರು ಸಲ್ಲಿಸಿದ್ದ ರಿಟ್‌ ಅರ್ಜಿಗಳನ್ನು ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಭಾಗಶಃ ಮಾನ್ಯ ಮಾಡಿದೆ.

‘ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ–1976ರ ಕಲಂ 51 ಬಿ ಅಥವಾ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ–2000 ಕಲಂ 56ರ ಅಡಿಯಲ್ಲಿ ನೇಮಕಗೊಂಡು 10 ವರ್ಷಗಳಿಗೂ ಹೆಚ್ಚು ಕಾಲದಿಂದ ಕಾರ್ಯನಿರ್ವಹಿಸಿರುವ ಉಪ
ನ್ಯಾಸಕರನ್ನು ಒಂದಾವರ್ತಿ ಕ್ರಮದಲ್ಲಿ ಕಾಯಂಗೊಳಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು. ಈ ಪ್ರಕ್ರಿಯೆಯನ್ನು 2019ರ ಏಪ್ರಿಲ್‌ 23ರಿಂದ ಆರು ತಿಂಗಳ ಒಳಗಾಗಿ ಪೂರ್ಣಗೊಳಿಸಬೇಕು’ ಎಂದು ನ್ಯಾಯಪೀಠ ತಾಕೀತು ಮಾಡಿದೆ.

‘ಯಾವ ಉಪನ್ಯಾಸಕರು ಯುಜಿಸಿ ನಿಯಮಾವಳಿಯಂತೆ, ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್‍ಇಟಿ) ಅಥವಾ ರಾಜ್ಯ ಮಟ್ಟದ ಅರ್ಹತಾ ಪರೀಕ್ಷೆಯಲ್ಲಿ (ಎಸ್‍ಎಲ್‍ಇಟಿ–ಸ್ಲೆಟ್‌) ಉತ್ತೀರ್ಣರಾಗಿಲ್ಲವೊ ಹಾಗೂ ಅಗತ್ಯ ವಿದ್ಯಾರ್ಹತೆಗಳನ್ನು ಹೊಂದಿಲ್ಲವೂ ಅಂತಹವರು, ಸೇವೆ ಕಾಯಂಗೊಂಡ ನಂತರದಲ್ಲಿ ನಿಗದಿತ ಅವಧಿಯೊಳಗೆ ಅಗತ್ಯ ವಿದ್ಯಾರ್ಹತೆ ಪಡೆದುಕೊಳ್ಳಲು ಅನುವು ಮಾಡಿಕೊಡಬೇಕು. ಇದಕ್ಕಾಗಿ 2004ರ ಸೇವಾ ಕಾಯಮಾತಿ ನಿಯಮಗಳಿಗೆ ಅನುಗುಣವಾಗಿ ಅಗತ್ಯ ಷರತ್ತುಗಳನ್ನು ವಿಧಿಸಬಹುದಾಗಿದೆ’ ಎಂದು ಆದೇಶದಲ್ಲಿ ವಿವರಿಸಲಾಗಿದೆ.

‘ಸೇವೆ ಕಾಯಮಾತಿ ವೇಳೆ ವಿಶ್ವವಿದ್ಯಾಲಯದ ರೋಸ್ಟರ್ ಮತ್ತು ಮೀಸಲು ನಿಯಮಗಳನ್ನು ಪಾಲನೆ ಮಾಡಬೇಕು. ಯಾವುದೇ ಕಾರಣಕ್ಕೂ ಅರ್ಜಿದಾರರನ್ನು ಸೇವೆಯಿಂದ ಬಿಡುಗಡೆ ಮಾಡಬಾರದು ಅಥವಾ ಮುಂದುವರಿಸದೇ ಇರಕೂಡದು’ ಎಂದು ನಿರ್ದೇಶಿಸಲಾಗಿದೆ.

‘ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ–2000 ಕಲಂ 56ರ ಅನ್ವಯ ತಾತ್ಕಾಲಿಕ ನೇಮಕಾತಿ ಮುಂದುವರಿಸಿರುವುದು ಸರಿಯಲ್ಲ. ಕಲಂ 56ರ ಉಪ ನಿಯಮ (1) ರ ಅನ್ವಯ ಮಂಜೂರಾದ ಹುದ್ದೆಗಳಿಗೆ ವಿಳಂಬ ಮಾಡದಂತೆ ಕಲಂ 53, 54 ಮತ್ತು 55ರಂತೆ ಕಾಯಂ ನೇಮಕಾತಿ ಮಾಡಿಕೊಳ್ಳಬೇಕಿತ್ತು’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಸೇವೆ ಕಾಯಂ ನಿಯಮ–2004ಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು 2007ರ ಫೆಬ್ರುವರಿ 7ರಂದು ಅಧಿಸೂಚನೆ ಹೊರಡಿಸಿದೆ.

ಮಾಹಿತಿ ಇಲ್ಲ: ಆದೇಶದ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮೈಸೂರು ವಿವಿ ರಿಜಿಸ್ಟ್ರಾರ್‌ ಪ್ರೊ. ಲಿಂಗರಾಜ ಗಾಂಧಿ ಅವರು, ‘ಈ ಬಗ್ಗೆ ನನಗೆ ಈತನಕ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಹೈಕೋರ್ಟ್‌ ಆದೇಶ ನೋಡಿದ ನಂತರವೇ ಅಭಿಪ್ರಾಯ ವ್ಯಕ್ತಪಡಿಸಲು ಸಾಧ್ಯ’ ಎಂದರು.

ವಿವಿ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಪಿ.ಎಸ್‌.ರಾಜ ಗೋಪಾಲ ಪ್ರತಿಕ್ರಿಯಿಸಿ, ‘ಈ ಬಗ್ಗೆ ವಿವಿ ಸಿಂಡಿಕೇಟ್‌ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಬೇಕಿದೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು