ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಸಂಕಷ್ಟಕ್ಕೆ ಮಿಡಿಯುವ ಸ್ವಯಂ ಸೇವಕರು

ಮೈಸೂರಿನಲ್ಲಿ ವಾರ್ತಾ ಇಲಾಖೆಯ ಕೊರೊನಾ ವಾರಿಯರ್ಸ್‌ ಸೇವೆ ಸ್ಮರಣಾರ್ಹ
Last Updated 8 ಮೇ 2020, 2:31 IST
ಅಕ್ಷರ ಗಾತ್ರ

ಮೈಸೂರು: ಲಾಕ್‌ಡೌನ್‌ನ ಮೂರನೇ ಅವಧಿಯಿದು. ಕೊಂಚ ಸಡಿಲಿಕೆಯಿದೆ. ಆದರೂ ಬಿಡುವಿಲ್ಲದ ಚಟುವಟಿಕೆ ಇವರದ್ದು. ಜನರ ತುರ್ತು ಅವಶ್ಯಕತೆ ಕೊಂಚ ತಗ್ಗಿದರೂ, ಅಸಹಾಯಕರ ಮೊರೆ ನಿಂತಿಲ್ಲ... ಇಂತಹವರ ಸೇವೆಗೆ ಸದಾ ಸಿದ್ಧರಾಗಿದ್ದಾರೆ ವಾರ್ತಾ ಮತ್ತು ಸಾರ್ವಜನಿಕ ಇಲಾಖೆಯ ಕೊರೊನಾ ವಾರಿಯರ್ಸ್‌.

ಮೊದಲ ಅವಧಿಯ ಲಾಕ್‌ಡೌನ್‌ ಆರಂಭಗೊಂಡಾಗಲೇ ‘ಕೊರೊನಾ ವಾರಿಯರ್ಸ್‌’ ಪಡೆಯೂ ಸೇವೆಗೆ ಸಜ್ಜಾಯಿತು. ಆರಂಭದ ದಿನಗಳಲ್ಲಿ 570 ಯುವ ಜನರು ನೋಂದಣಿ ಮಾಡಿಸಿಕೊಂಡರು. ವಾರ್ತಾ ಇಲಾಖೆ ನೀಡಿದ ಗುರುತಿನ ಚೀಟಿ ನೇತು ಹಾಕಿಕೊಂಡು, ಸಂಕಷ್ಟದಲ್ಲಿದ್ದವರ ಮನೆ ಬಾಗಿಲಿಗೆ ಸೇವೆ ಒದಗಿಸಿದರು.

ಎರಡನೇ ಅವಧಿಯ ಲಾಕ್‌ಡೌನ್‌ ಮತ್ತಷ್ಟು ಭದ್ರತೆಯಿಂದ ಜಾರಿಗೊಂಡಿತು. ಆಗಲೂ 200ಕ್ಕೂ ಹೆಚ್ಚು ಯುವ ಜನರು ಸಕ್ರಿಯರಾಗಿ ಮೈಸೂರಿಗರ ಸಂಕಷ್ಟಕ್ಕೆ ಮಿಡಿದರು. ಮೂರನೇ ಅವಧಿಯ ಲಾಕ್‌ಡೌನ್‌ ಕೊಂಚ ಸಡಿಲಿಕೆಯಿಂದ ಶುರುವಾದರೂ, ಕೆಂಪು ವಲಯದಲ್ಲಿರುವ ಅಸಹಾಯಕರ ಸೇವೆಗಾಗಿ 50ಕ್ಕೂ ಹೆಚ್ಚು ಸಕ್ರಿಯರು ಇಂದಿಗೂ ಅದೇ ಉತ್ಸಾಹದಿಂದ ಸೇವೆ ಸಲ್ಲಿಸುತ್ತಿರುವುದು ಶ್ಲಾಘನಾರ್ಹ.

8 ತಂಡ ರಚನೆ: ಕೊರೊನಾ ವಾರಿಯರ್ಸ್‌ ಪಡೆಗೆ ಸಂಶೋಧನಾ ವಿದ್ಯಾರ್ಥಿ ನಿಶಿತಾ ಕೃಷ್ಣಸ್ವಾಮಿ ಸಂಚಾಲಕರಾಗಿ ನೇಮಕಗೊಂಡರು. ಇದರ ಬೆನ್ನಿಗೆ ಎರಡು ವಾಟ್ಸ್‌ಆ್ಯಪ್ ಗ್ರೂಪ್ ಮಾಡಿಕೊಂಡು, ನೊಂದವರು, ಸಂಕಷ್ಟಿತರ ಅಳಲು ಆಲಿಸಿ, ನೆರವಿಗೆ ಮುಂದಾದರು. ಇದಕ್ಕಾಗಿಯೇ ಎಂಟು ತಂಡ ರಚಿಸಿಕೊಂಡಿದ್ದು ವಿಶೇಷ.

ಪಡಿತರ ವಿತರಣೆ, ಕಿಟ್ ತಯಾರಿಕೆ, ಹಾಲು ವಿತರಣೆ, ಬೀದಿ ನಾಯಿ, ಪ್ರಾಣಿಗಳಿಗೆ ಆಹಾರ ಪೂರೈಕೆ, ಮಾರುಕಟ್ಟೆಗಳಲ್ಲಿ ಜನ ಜಾಗೃತಿ ಮೂಡಿಸುವುದು, ಔಷಧ ತಲುಪಿಸುವಿಕೆ, ನೊಂದವರ ಅಳಲಿನ ಸತ್ಯಾಸತ್ಯತೆಯನ್ನು ವೇಗವಾಗಿ ಪತ್ತೆ ಹಚ್ಚುವಿಕೆ, ಸಾರ್ವಜನಿಕವಾಗಿ ಜಾಗೃತಿ ಮೂಡಿಸುವ ತಂಡ ರಚಿಸಿಕೊಂಡು, ಇಬ್ಬಿಬ್ಬರು ಒಂದೊಂದು ತಂಡದ ಮೇಲುಸ್ತುವಾರಿ ಹೊತ್ತರು. ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಕ್ಕೆ ಮೈಸೂರಿಗರಿಂದ ಮೆಚ್ಚುಗೆಯನ್ನು ಪಡೆದಿದೆ ಈ ಯುವ ಸ್ವಯಂ ಸೇವಕರ ತಂಡ.

ಗಡಿಯಿಂದ ಗಡಿಗೆ ಔಷಧಿ...

ಮೈಸೂರಿನ ಕೊರೊನಾ ವಾರಿಯರ್ಸ್‌ಗಳು ತುಮಕೂರು, ಚಾಮರಾಜನಗರ, ಬೆಂಗಳೂರಿನಲ್ಲಿದ್ದ ರೋಗಿಗಳಿಗೂ ಔಷಧಿ ತಲುಪಿಸಿದೆ.

ಔಷಧಿಯ ಬೇಡಿಕೆ ಬರುತ್ತಿದ್ದಂತೆ ಕಾರ್ಯಪ್ರವೃತ್ತರಾದ ವಾರಿಯರ್ಸ್‌, ನಿಗದಿತ ಔಷಧಿಯನ್ನು ಖರೀದಿಸಿ ನೆರೆಯ ಜಿಲ್ಲೆಯ ವಾರಿಯರ್ಸ್‌ಗೆ ಗಡಿಯಲ್ಲಿ ನೀಡಿದರು. ಅದನ್ನು ಅವರು ಸಂಬಂಧಿಸಿದ ಜಿಲ್ಲೆಯ ಗಡಿಗೆ ತಲುಪಿಸಿದರು. 10ಕ್ಕೂ ಹೆಚ್ಚು ರೋಗಿಗಳಿಗೆ ಈ ರೀತಿ ಔಷಧಿ ಒದಗಿಸಿದ್ದಾರೆ ಮೈಸೂರಿನ ವಾರಿಯರ್ಸ್‌.

ಹೆಂಗೆಳೆಯರ ಸಂಕಷ್ಟಕ್ಕೂ ಸ್ಪಂದನೆ...

ಲಾಕ್‌ಡೌನ್‌ನಲ್ಲಿ ಹಾಸ್ಟೆಲ್‌ ಹಾಗೂ ಮನೆಯಲ್ಲೇ ಬಂಧಿಯಾಗಿದ್ದ ನೂರಕ್ಕೂ ಹೆಚ್ಚು ಹೆಣ್ಣುಮಕ್ಕಳಿಗೆ ಸ್ಯಾನಿಟರಿ ನ್ಯಾಪ್‌ಕಿನ್, ಡೆಟಾಲ್, ಸ್ಯಾನಿಟೈಸರ್, ಲೈಫ್‌ಬಾಯ್ ಸಾಬೂನಿನ ಕಿಟ್‌ನ್ನು ದಾನಿಗಳ ನೆರವಿನಿಂದ ಈ ತಂಡ ಒದಗಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT