ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದಿ ಬಳಕೆ: ಬಿಎಂಟಿಸಿ ವಿರುದ್ಧ ಟ್ವಿಟರ್‌ನಲ್ಲಿ ಆಕ್ರೋಶ

Last Updated 31 ಜನವರಿ 2020, 19:54 IST
ಅಕ್ಷರ ಗಾತ್ರ

ಬೆಂಗಳೂರು: ಬಿಎಂಟಿಸಿ ಬಸ್ ನಿಲ್ದಾಣಗಳಲ್ಲಿ ‌ಅಳವಡಿಸಲು ಉದ್ದೇಶಿಸಿರುವ ಮಾಹಿತಿ ಫಲಕದಲ್ಲಿ ಹಿಂದಿ ಭಾಷೆಯನ್ನೂ ಪರಿಗಣಿಸಲು ಮುಂದಾಗಿರುವುದರ ವಿರುದ್ಧ ಶುಕ್ರವಾರ ಟ್ವಿಟರ್‌ನಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಬಸ್‌ ಯಾವ ಸಮಯಕ್ಕೆ ನಿಲ್ದಾಣಕ್ಕೆ ಬರಲಿದೆ, ಬಸ್ ಈಗ ಎಲ್ಲಿದೆ, ಎಲ್ಲಿಗೆ ಹೋಗಲಿದೆ ಎಂಬುದರ ನೈಜ ಸಮಯದ ಮಾಹಿತಿಯನ್ನು ಪ್ರಯಾಣಿಕರಿಗೆ ನೀಡಲು ಮುಂದಾಗಿದೆ. ಈ ಸಂಬಂಧ ಆ್ಯಪ್ ಸಿದ್ಧಪಡಿಸಲು ಬಿಎಂಟಿಸಿ ಟೆಂಡರ್ ಆಹ್ವಾನಿಸಿದೆ.

ಒಂದು ಸಾವಿರ ಸ್ಥಳಗಳ ಮಾಹಿತಿಯೂ ಈ ಆ್ಯಪ್‌ನಲ್ಲಿ ಲಭ್ಯವಾಗಲಿದೆ. ಆ್ಯಪ್‌ ಅನ್ನು ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಬಳಕೆ ಮಾಡಲು ಅವಕಾಶ ಇರುವಂತೆ ಸಿದ್ಧಪಡಿಸಲು ಉದ್ದೇಶಿಸಿದೆ.

‘ಈ ಹಿಂದೆ ಮೆಟ್ರೊ ನಿಲ್ದಾಣಗಳಲ್ಲಿ ಹಿಂದಿ ಫಲಕ ಅಳವಡಿಸಿದಾಗ ಕನ್ನಡಿಗರು ನಡೆಸಿದ ಹೋರಾಟವನ್ನು ನೆನಪಿಸಿಕೊಳ್ಳಬೇಕು. ಈ ಪ್ರಸ್ತಾವನೆಯನ್ನು ಈಗಲೇ ಕೈಬಿಡಬೇಕು. ಕನ್ನಡಿಗರು ದುರ್ಬಲರಲ್ಲ, ಜೋಕೆ’ ಎಂದು ಅಸಮಾಧಾನವನ್ನು ಟ್ವೀಟಿಗರು ಹೊರ ಹಾಕಿದ್ದಾರೆ.

‘ಈಗ ಹಿಂದಿಯೂ ಇರಲಿ ಎಂದು ಅವಕಾಶ ನೀಡಿದರೆ, ಮುಂದೊಂದು ದಿನ ಕನ್ನಡವೂ ಇರಲಿ ಎಂಬಂತ ಸ್ಥಿತಿ ಬರಲಿದೆ. ಅದಕ್ಕೆ ಅವಕಾಶ ಕೊಡಬೇಡಿ’ ಎಂದು ಒತ್ತಾಯಿಸಿದ್ದಾರೆ.‌

‘ಬಿಎಂಟಿಸಿ ಬಸ್‌ಗಳು ಬೆಂಗಳೂರಿನಿಂದ ಬಿಹಾರದವರೆಗೆ ಸಂಚರಿಸಲಿವೆಯೇ, ನಗರದ ಒಳಗೇ ಸಂಚರಿಸುವ ಬಸ್‌ಗಳಿಗೆ ಹಿಂದಿ ಭಾಷೆಯ ಅಗತ್ಯವೇನು’ ಎಂದು ಪ್ರಶ್ನಿಸಿದ್ದಾರೆ.

‌‘ಹಿಂದಿ ಎಷ್ಟು ರಾಜ್ಯಗಳಲ್ಲಿ ಇದೆ. ಅದು ರಾಷ್ಟ್ರ ಭಾಷೆ ಹೇಗಾಗುತ್ತದೆ. ದೆಹಲಿಯಲ್ಲೂ ಕನ್ನಡಿಗರಿದ್ದಾರೆ ಎಂಬ ಕಾರಣಕ್ಕೆ ಕನ್ನಡದಲ್ಲಿ ಫಲಕಗಳನ್ನು ಹಾಕಲಾಗಿದೆಯೇ, ಬೆಂಗಳೂರಿನಲ್ಲಿ ಹಿಂದಿಗೆ ಏಕೆ ಪ್ರಾಧಾನ್ಯತೆ’ ಎಂದು ಕಿಡಿ ಕಾರಿದ್ದಾರೆ.

‘ಹಿಂದಿಯಲ್ಲಿ ಫಲಕ ಅಳವಡಿಸುವ ಉದ್ದೇಶ ಇಲ್ಲ. ಆದರೆ, ಮುಂದೊಂದು ದಿನ ಹಿಂದಿ ಕಡ್ಡಾಯವಾದರೆ ಸಾಫ್ಟ್‌ವೇರ್‌ನಲ್ಲಿ ಅವಕಾಶ ಇರಲಿ ಎಂಬುದಷ್ಟೇ ನಮ್ಮ ಉದ್ದೇಶವಾಗಿತ್ತು. ಈ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ’ ಎಂದು ಬಿಎಂಟಿಸಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಭಾಷಾ ನೀತಿ ಉಲ್ಲಂಘನೆ: ನಾಗಾಭರಣ

‘ಬಿಎಂಟಿಸಿ ರಾಜ್ಯ ಸರ್ಕಾರದ ನಿಗಮವಾಗಿದ್ದು, ಹಿಂದಿಯಲ್ಲಿ ಫಲಕ ಬರೆಸಲು ಟೆಂಡರ್ ಕರೆದಿರುವುದು ಭಾಷಾ ನೀತಿಯ ಉಲ್ಲಂಘನೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಹೇಳಿದ್ದಾರೆ.

ಈ ಸಂಬಂಧ ಸಾರಿಗೆ ಸಚಿವ ಮತ್ತು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿರುವ ಅವರು, ‘ಈ ಟೆಂಡರ್‌ ಅನ್ನು ಕೂಡಲೇ ಸ್ಥಗಿತಗೊಳಿಸಿ ದ್ವಿಭಾಷೆ ನೀತಿ ಅನುಸರಿಸಲು ಬಿಎಂಟಿಸಿಗೆ ಸೂಚನೆ ನೀಡಬೇಕು’ ಎಂದು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT