ನರೇಗಾದಲ್ಲಿ ₹ 410 ಕೋಟಿಯ ಅಕ್ರಮ

7
ಸಾಮಾಜಿಕ ಪರಿಶೀಲನೆ ನಿರ್ದೇಶನಾಲಯದಿಂದ ಪತ್ತೆ

ನರೇಗಾದಲ್ಲಿ ₹ 410 ಕೋಟಿಯ ಅಕ್ರಮ

Published:
Updated:

ಬೆಂಗಳೂರು: ರಾಜ್ಯದಲ್ಲಿ ಪ್ರಸಕ್ತ ಸಾಲಿನ (2018–19) ಸೆಪ್ಟೆಂಬರ್‌ವರೆಗೆ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಲ್ಲಿ ₹ 410 ಕೋಟಿಯ ಅಕ್ರಮ ನಡೆದಿರುವುದು ಬಯಲಾಗಿದೆ.

ಕಾಮಗಾರಿ ನಡೆಸದೆ ಹಣ ಬಿಡುಗಡೆ, ಹೆಚ್ಚು ಹಣ ಬಿಡುಗಡೆ, ನಕಲಿ ಉದ್ಯೋಗ ಕಾರ್ಡ್‌, ಬಿಲ್‌ಗಿಂತ ಹೆಚ್ಚು ಮೊತ್ತ ಪಾವತಿ, ಒಂದೇ ಕಾಮಗಾರಿಗೆ ಎರಡು ಬಾರಿ ಹಣ ಮಂಜೂರಾತಿ ಮುಂತಾದ ಅವ್ಯವಹಾರಗಳು ನಡೆದಿವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಸಾಮಾಜಿಕ ಪರಿಶೀಲನೆ ನಿರ್ದೇಶನಾಲಯದ ಪರಿಶೀಲನೆ ವೇಳೆ ಗೊತ್ತಾಗಿದೆ.  

ರಾಜ್ಯದ 467 ಗ್ರಾಮ ಪಂಚಾಯಿತಿಗಳಲ್ಲಿ ಪರಿಶೋಧನೆ ನಡೆದಿದ್ದು, 92 ಸಾವಿರ ಪ್ರಕರಣಗಳಲ್ಲಿ ಅಕ್ರಮ ನಡೆದಿರುವುದು ಗೊತ್ತಾಗಿದೆ. ₹ 37.68 ಕೋಟಿ ಸೋರಿಕೆ ಪತ್ತೆಯಾಗಿದೆ. ₹ 373 ಕೋಟಿ ಮೊತ್ತದ ಲೆಕ್ಕಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಬರಪೀಡಿತ ಚನ್ನಪಟ್ಟಣ ಮತ್ತು ಕನಕಪುರ ತಾಲ್ಲೂಕುಗಳನ್ನು ಒಳಗೊಂಡ ರಾಮನಗರ ಜಿಲ್ಲೆಯಲ್ಲಿ ಅತೀ ಹೆಚ್ಚು ಅಕ್ರಮ ನಡೆದಿದೆ.

‘ಸೋರಿಕೆಯಾಗಿರುವ ಮೊತ್ತವನ್ನು ಸಂಬಂಧಪಟ್ಟ ಅಧಿಕಾರಿಗಳಿಂದ ವಸೂಲು ಮಾಡಬೇಕು. ಕಾಮಗಾರಿಗಳನ್ನು ದೃಢೀಕರಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಮತ್ತು ಕಿರಿಯ ಎಂಜಿನಿಯರ್‌ಗಳು ಇದಕ್ಕೆ ಹೊಣೆಗಾರರು’ ಎಂದೂ ಸಾಮಾಜಿಕ ಪರಿಶೀಲನೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೃಷ್ಣ ಬೈರೇಗೌಡ, ‘ನರೇಗಾದಲ್ಲಿ ಕೈಗೊಳ್ಳುವ ಎಲ್ಲ ಕಾಮಗಾರಿಗಳ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಲಾಗುತ್ತಿದೆ. ದೊಡ್ಡಮಟ್ಟದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಂದರ್ಭದಲ್ಲಿ ಸಣ್ಣಪುಟ್ಟ ತಪ್ಪುಗಳಾಗುವುದು ಸಹಜ. ಹಾಗೆಂದು ದುರ್ಬಳಕೆಗೆ ಅವಕಾಶ ನೀಡುವುದಿಲ್ಲ’ ಎಂದರು.

‘ಸಾಮಾಜಿಕ ಪರಿಶೀಲನೆ ಸಮರ್ಪಕವಾಗಿ ನಡೆದಿಲ್ಲ ಎಂದು ಪಿಡಿಒಗಳು ದೂರಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಆದರೆ, ತಪ್ಪಿತಸ್ಥರಿಗೆ ಶಿಕ್ಷೆ ಖಚಿತ’ ಎಂದು ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್‌.ಕೆ. ಅತೀಕ್‌ ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !