ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಮೋದಿ ವಿಫಲ ನಾಯಕ: ಸಿದ್ದರಾಮಯ್ಯ ಟೀಕೆ

ಒಂದೇ ಒಂದು ಸಾಧನೆ ಮಾಡದ ಬಿಜೆಪಿ ಸರ್ಕಾರ * ಪ್ರಜಾವಾಣಿ ಸಂವಾದದಲ್ಲಿ ಆರೋಪ
Last Updated 13 ಮಾರ್ಚ್ 2019, 14:42 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರೊಬ್ಬ ವಿಫಲ ನಾಯಕ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.

ಪ್ರಜಾವಾಣಿ ಕಚೇರಿಯಲ್ಲಿ ನಡೆದ ‘ಪ್ರಜಾ ಮತ’ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೋದಿ ಸರ್ಕಾರ ಕಳೆದ ಐದು ವರ್ಷಗಳಲ್ಲಿ ಒಂದೇ ಒಂದು ಸಾಧನೆ ಮಾಡಿಲ್ಲ ಎಂದು ಟೀಕಿಸಿದರು.

2014ರಲ್ಲಿ ಕೊಟ್ಟಿದ್ದ ಒಂದೇ ಒಂದು ಭರವಸೆಯನ್ನು ಮೋದಿ ಈಡೇರಿಸಿಲ್ಲ. ಬದಲಿಗೆ, ಜನರ ಭಾವನೆಗಳನ್ನು ಕೆರಳಿಸುತ್ತಿದ್ದಾರೆ. ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಜನರಿಗೆ ಅಗತ್ಯವಿರುವ ವಿಷಯಗಳನ್ನು ಮಾತನಾಡುತ್ತಿಲ್ಲ. ಜನರನ್ನು ಬಾಧಿಸುವ ನಿರುದ್ಯೋಗ, ನೋಟು ಅಮಾನ್ಯ, ಭ್ರಷ್ಟಾಚಾರದ ಬಗ್ಗೆ ಬಾಯಿಬಿಟ್ಟಿಲ್ಲ ಎಂದು ಸಿದ್ದರಾಮಯ್ಯ ದೂರಿದರು.

ಮೋದಿ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಹೇಳಬೇಕು. ಅವರ ವಿರುದ್ಧ ವಾಗ್ದಾಳಿ ನಡೆಸಲು ಸಾಕಷ್ಟು ಅವಕಾಶಗಳಿವೆ. ಇದನ್ನು ಜನರ ಬಳಿಗೆ ತೆಗೆದುಕೊಂಡು ಹೋಗಬೇಕಿದೆ. ನಿರ್ದಿಷ್ಟವಾಗಿ ಮತ್ತು ಸ್ಪಷ್ಟವಾಗಿ ಇದನ್ನು ಜನರಿಗೆ ತಿಳಿಹೇಳಬೇಕಿದೆ. ಹಿಂದಿನ ಯುಪಿಎ ಸರ್ಕಾರದ ಮತ್ತು ಈಗ ಕಾಂಗ್ರೆಸ್ ಸರ್ಕಾರಗಳಿರುವ ಕಡೆ ಆಗುತ್ತಿರುವ ಸಾಧನೆಗಳನ್ನು ಬಿಂಬಿಸಬೇಕಿದೆ. ಇದು ಈಗ ನಾವು ಮಾಡಬೇಕಿರುವ ಕೆಲಸ ಎಂದು ಅವರು ಹೇಳಿದರು.

ನಿರುದ್ಯೋಗ, ರೈತರ ಸಮಸ್ಯೆ, ಮಹಿಳೆಯರ ಸಮಸ್ಯೆ, ದೇಶದ ಆರ್ಥಿಕತೆ ವಿಚಾರಗಳನ್ನು ಮುಂದಿಟ್ಟುಕೊಂಡು ಅವರು (ಬಿಜೆಪಿ) ಚುನಾವಣೆ ಎದುರಿಸಲಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.

ರೈತರ ಸಾಲ ಮನ್ನಾಕ್ಕೆ ಮನವಿ ಮಾಡಲು ನಾನು ಎರಡು ನಿಯೋಗ ತಗೊಂಡು ಪ್ರಧಾನಿಯವರ ಬಳಿ ಹೋಗಿದ್ದೆ. ಆಗ, ಸಾಲ ಮನ್ನಾ ಒಳ್ಳೆಯ ಕಾರ್ಯಕ್ರಮ ಅಲ್ಲ ಎಂದಿದ್ದರು ಮೋದಿ. ಅವರು ಈಗ ₹2000 ರೈತರಿಗೆ ಕೊಡುತ್ತಾರಲ್ಲಾ, ಅದು ಎಷ್ಟರ ಮಟ್ಟಿಗೆ ರೈತರಿಗೆ ಪ್ರಯೋಜನಕ್ಕೆ ಬರಲಿದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ರೈತರು ಬೆಳೆದ ಬೆಳೆಗೆ ಅದರ ಉತ್ಪಾದನಾ ಖರ್ಚು ಆಧರಿಸಿ ಬೆಲೆ ನಿಗದಿ ಮಾಡಬೇಕು. ಸ್ವಾಮಿನಾಥನ್ ವರದಿ ಜಾರಿಗೆ ಬಿಜೆಪಿ ಸರ್ಕಾರ ಬದ್ಧತೆ ತೋರಿಸಲಿಲ್ಲ. ಸಾಲಮನ್ನಾವೂ ಮಾಡಲಿಲ್ಲ. ಏನೂ ಮಾಡದೆ ಈಗ ₹2000 ಕೊಡುತ್ತೇವೆ, ₹6000 ಕೊಡುತ್ತೇವೆ ಅಂದರೆ ಯಾರು ನಂಬುತ್ತಾರೆ ಎಂದು ಅವರು ಪ್ರಶ್ನಿಸಿದರು.

ಪುಲ್ವಾಮಾ ದಾಳಿ ಮತ್ತು ನಂತರ ನಿರ್ದಿಷ್ಟ ದಾಳಿಯ ರಾಜಕೀಯ ಲಾಭ ಪಡೆಯಲು ಬಿಜೆಪಿ ಯತ್ನಿಸುತ್ತಿದೆ. ಅವರು ಅದರಲ್ಲಿ ಸಂಪೂರ್ಣ ವಿಫಲರಾಗುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಸಮ್ಮಿಶ್ರ ಸರ್ಕಾರದಲ್ಲಿ ಭಿನ್ನಾಭಿಪ್ರಾಯ ಇಲ್ಲ

ಸಮ್ಮಿಶ್ರ ಸರ್ಕಾರದಲ್ಲಿ ಸಣ್ಣಪುಟ್ಟ ಗೊಂದಲ ಸಾಮಾನ್ಯ. ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಪ್ರಕಾರ ಬಜೆಟ್ ಹಾಗೂ ಇತರ ಕಾರ್ಯಕ್ರಮ ರೂಪಿಸುತ್ತೇವೆ. ದೊಡ್ಡಮಟ್ಟದ ಭಿನ್ನಾಭಿಪ್ರಾಯ ಇಲ್ಲ. ಮೈತ್ರಿಯಿಂದ ಅನುಕೂಲವೇ ಹೆಚ್ಚು. ಸಾಲಮನ್ನಾಕ್ಕೆ ಇಬ್ಬರೂ ಒಪ್ಪಿಕೊಂಡಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಸೀಟು ಹಂಚಿಕೆ ಬಗ್ಗೆ 2–3 ದಿನಗಳಲ್ಲಿ ಅಂತಿಮ ನಿರ್ಧಾರ

ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ಇನ್ನೂ ಸ್ಪಷ್ಟಪಡಿಸಿಲ್ಲ. ಮೈಸೂರಿನಲ್ಲಿ ನಮಗೆ (ಕಾಂಗ್ರೆಸ್) ಹೆಚ್ಚು ಅವಕಾಶ ಇದೆ ಬಿಟ್ಟುಕೊಡಿ ಅಂತ ಕೇಳಿದ್ದೇವೆ ಅಷ್ಟೆ. ಸ್ಥಾನ ಹಂಚಿಕೆ ಬಗ್ಗೆ 2–3 ದಿನಗಳಲ್ಲಿ ಅಂತಿಮ ನಿರ್ಧಾರ ಹೊರಬರುತ್ತೆ. ಯಾವುದು ಕಾಂಗ್ರೆಸ್–ಜೆಡಿಎಸ್‌ಗೆ ಅನುಕೂಲ ಅನ್ನುವುದು ಮುಖ್ಯ. ಅದರ ಆಧಾರದ ಮೇಲೆ ಎಷ್ಟು ಸ್ಥಾನ ಅಂತ ನಿರ್ಧಾರವಾಗುತ್ತೆ. ಗೆಲುವೇ ಸೀಟು ಕೊಡಲು ಮಾನದಂಡ ಎಂದು ಅವರು ತಿಳಿಸಿದರು.

ಉತ್ತರ ಕನ್ನಡ, ವಿಜಯಪುರ, ಮೈಸೂರು, ಚಿಕ್ಕಮಗಳೂರು–ಉಡುಪಿ, ತುಮಕೂರು, ಚಿಕ್ಕಬಳ್ಳಾಪುರ ಹಾಸನ, ಮಂಡ್ಯ ಕ್ಷೇತ್ರಗಳನ್ನು ಜೆಡಿಎಸ್‌ ಕೇಳುತ್ತಿದೆ. ಹಾಸನ ಮತ್ತು ಮಂಡ್ಯದ ವಿಚಾರ ನಿರ್ಧಾರವಾಗಿದೆ ಎಂದೂ ಅವರು ಮಾಹಿತಿ ನೀಡಿದರು.

ಮಹಿಳೆಯರಿಗೂ ಅವಕಾಶ

ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶ ಸಿಕ್ಕಿದೆ. ಕರ್ನಾಟಕದಲ್ಲಿಯೂ ಹೇಗಯೇ ಅವಕಾಶ ನೀಡುತ್ತೀರಾ ಎಂದು ಕೇಳಿದ ಪ್ರಶ್ನೆಗೆ, ಕರ್ನಾಟಕದಲ್ಲಿ ಅದು ಕಷ್ಟ ಎಂದು ಸಿದ್ದರಾಮಯ್ಯ ಉತ್ತರಿಸಿದರು.

ಪ್ರಾದೇಶಿಕ ಪಕ್ಷಗಳದ್ದು ‘ವನ್ ಮ್ಯಾನ್ ಶೋ’. ಇಲ್ಲಿ ಹಾಗೆ ಮಾಡುವುದು ಕಷ್ಟ. ಮಹಿಳೆಯರಿಗೆ ಮೀಸಲು ಕೊಡುವ ಕಾನೂನು ಜಾರಿ ಮಾಡಲು ನಾನು ಒತ್ತಾಯ ಮಾಡುತ್ತಲೇ ಇದ್ದೇನೆ. ಅದನ್ನು ಜಾರಿ ಮಾಡಿದರೆ ಮಹಿಳೆಯರಿಗೆ ಶೇ 33 ಅಥವಾ ಹೆಚ್ಚು ಅವಕಾಶ ಸಿಗಲು ಸಾಧ್ಯವಾಗುತ್ತದೆ. ಆದರೂ ಇಲ್ಲಿಯೂ ಮಹಿಳೆಯರಿಗೆ ಅವಕಾಶ ನೀಡಲಿದ್ದೇವೆ ಎಂದು ಅವರು ಹೇಳಿದರು.

‘ಮೈತ್ರಿಯಿಂದ ಎರಡೂ ಪಕ್ಷಗಳಿಗೆ ಲಾಭ’

ಮೈತ್ರಿಯಿಂದ ಎರಡೂ ಪಕ್ಷಗಳಿಗೆ ಲಾಭ ಆಗುತ್ತದೆ. ಜಮಖಂಡಿ, ಬಳ್ಳಾರಿ, ರಾಮನಗರದಲ್ಲಿ ನಾವು ಗೆದ್ದಿಲ್ಲವೇ? ಮೈತ್ರಿಯಿಂದ ಇಬ್ಬರಿಗೂ ಅವಕಾಶ ಸಿಗುತ್ತದೆ ಎಂದು ಅವರು ಹೇಳಿದರು.

ಯಡಿಯೂರಪ್ಪ ವಿರುದ್ಧ ಟೀಕೆ

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ಅವರಿಗೆ ಸಾಲಮನ್ನಾ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಅವರು ಅಧಿಕಾರದಲ್ಲಿದ್ದಾಗ 2009ರಲ್ಲಿ ಮೇಲ್ಮನೆಯಲ್ಲಿ ನನ್ನ ಪ್ರಶ್ನೆಗೆ ಉತ್ತರಿಸುವಾಗ ‘ಸಿದ್ದರಾಮಯ್ಯ ನನ್ನ ಹತ್ತಿರ ನೋಟ್ ಪ್ರಿಂಟ್ ಮಾಡುವ ಮಿಷನ್ ಇಲ್ಲ‘ ಅಂತ ಹೇಳಿದ್ದರು. ಇದು ರೆಕಾರ್ಡ್ ಆಗಿದೆ. ರೈತರ ಬಗ್ಗೆ ಮಾತನಾಡಲು ಅವರಿಗೆ ಏನು ಉಳಿದಿದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

‘ಅಪಪ್ರಚಾರಕ್ಕೆ ಗುರಿಯಾದೆ’

ಅಹಿಂದ ನನ್ನನ್ನು ಪೂರ್ಣ ಪ್ರಮಾಣದಲ್ಲಿ ಕೈಹಿಡಿಯಲಿಲ್ಲ. ಅಪಪ್ರಚಾರಕ್ಕೆ ಗುರಿಯಾಗಬೇಕಾಯಿತು. ನಾನು ನನ್ನ ಪ್ರಣಾಳಿಕೆಯಲ್ಲಿ ಕೊಟ್ಟಿದ್ದ ಎಲ್ಲ ಭರವಸೆ ಈಡೇರಿಸಿದ್ದೆ. ಆದರೂ ಕರಾವಳಿಯಲ್ಲಿ ನಮಗೆ ಬೆಂಬಲ ಸಿಗಲಿಲ್ಲ. ಹಿಂದುತ್ವದ ಅಪಪ್ರಚಾರ, ಕೋಮುವಾದಿ ರಾಜಕಾರಣ, ಯಾರದೋ ಕೊಲೆಗೆ ಯಾವುದೋ ಬಣ್ಣ ಹಚ್ಚಿ ಬಿಜೆಪಿಯವರು ಗೆದ್ದರು. ಧರ್ಮ–ಜಾತಿ ದ್ವೇಷ ಬಿತ್ತುವ ಹಿಂದುತ್ವ ಆಫೀಮು ಇದ್ದಂತೆ. ಆದರೆ, ತಪ್ಪು ಮಾಡಿದ್ದವರಿಗೆ ಈಗ ಅದರ ಅರಿವಾಗಿದೆ. ಈ ಸಲ ಹಾಗೆಲ್ಲಾ ಹಿಂದುತ್ವ ಬಿಜೆಪಿಗೆ ಅನುಕೂಲ ಮಾಡಿಕೊಡಲಾರದು ಎಂದು ಸಿದ್ದರಾಮಯ್ಯ ಹೇಳಿದರು.

‘ಬಿಜೆಪಿ ಅಧಿಕಾರಕ್ಕೆ ಬಂದರೆ ಆತಂಕ’

ಬಿಜೆಪಿ ಅಧಿಕಾರಕ್ಕೆ ಬಂದರೆ ಸಮಾಜದಲ್ಲಿ ಆತಂಕದ ವಾತಾವರಣ ಮೂಡುತ್ತದೆ. ಸಮ್ಮಿಶ್ರ ಸರ್ಕಾರ ಬೀಳಲ್ಲ. ಸಣ್ಣಪುಟ್ಟ ಅಸಮಾಧಾನ ಇದ್ದೇ ಇರುತ್ತದೆ. ಮುಂದಿನ ಚುನಾವಣೆಯಲ್ಲಿ ಜನರು ಆಶೀರ್ವಾದ ಮಾಡಿದರೆ ಮತ್ತೆ ಮುಖ್ಯಮಂತ್ರಿ ಆಗುವೆ ಎಂದು ಅವರು ಹೇಳಿದರು.

‘ರಾಷ್ಟ್ರ ರಾಜಕೀಯ ಪ್ರವೇಶಿಸಲ್ಲ’

ನಾನು ಲೋಕಸಭೆಯಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಸಾಮರ್ಥ್ಯ ಇರುವ ನಾಯಕ. ಆದರೆ ನನಗಿಂತಲೂ ಉತ್ತಮ ಅಭ್ಯರ್ಥಿಗಳು ಪಕ್ಷದಲ್ಲಿದ್ದಾರೆ. ನಾನೇಕೆ ಲೋಕಸಭೆ ಚುನಾವಣೆಗೆ ನಿಲ್ಲಬೇಕು. ನಾನು ನಿಲ್ಲಬೇಕು ಎಂದು ನನ್ನ ಪಕ್ಷ ಹೇಳಲಾರದು. ನಾನು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದೂ ಇಲ್ಲ. ಕುಟುಂಬ ರಾಜಕಾರಣದ ಬಗ್ಗೆ ದೇವೇಗೌಡರ ಹೇಳಿಕೆಗೆ ನಾನು ಪ್ರತಿಕ್ರಿಯಿಸಿವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

‘ನಿರುದ್ಯೋಗ, ರೈತರ ಸಮಸ್ಯೆಯೇ ಪ್ರಮುಖ ವಿಷಯ’

ಲೋಕಸಭೆ ಚುನಾವಣೆಯಲ್ಲಿ ನಿರುದ್ಯೋಗ, ರೈತರ ಸಮಸ್ಯೆಯೇ ಮತ್ತೊಂದು ವಿಷಯವಾಗಲಿದೆ. ಭ್ರಷ್ಟಾಚಾರ ಮತ್ತು ಮಹಿಳೆಯರ ಸಮಸ್ಯೆ ಸಹ ಮುಖ್ಯವಾದವು. ಇವೆಲ್ಲವನ್ನೂ ನಾವು ಪ್ರಚಾರದ ವೇಳೆ ನಾವು ಪ್ರಸ್ತಾಪಿಸಲಿದ್ದೇವೆ ಎಂದು ಅವರು ಹೇಳಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT