ಭಾನುವಾರ, ಜನವರಿ 26, 2020
28 °C
ಕಾಂಗ್ರೆಸ್‌ ವಿರುದ್ಧ ಮೋದಿ ಕಿಡಿ

ಪಾಕ್‌ನಿಂದ ಬಂದ ದಲಿತರು, ಶೋಷಿತರು, ಪೀಡಿತರ ಪರವಾಗಿ ಹೋರಾಟ ಮಾಡಿ ತೋರಿಸಿ: ಮೋದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ದೇಶದ ಸಂಸತ್ತಿನ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸುವ ಬದಲು, ಪಾಕಿಸ್ತಾನದಿಂದ ಬಂದ ದಲಿತರು, ಪೀಡಿತರು, ಶೋಷಿತರ ಪರವಾಗಿ ಘೋಷಣೆ ಕೂಗಿ, ಹೋರಾಟ ಮಾಡಿ ತೋರಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್‌ ಮತ್ತು ಅವರನ್ನು ಬೆಂಬಲಿಸುವ ಪಕ್ಷಗಳಿಗೆ ಹೇಳಿದ್ದಾರೆ.

ನಿಮಗೆ ಘೋಷಣೆ ಕೂಗಲೇಬೇಕೆಂದಿದ್ದರೆ, ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಹೋರಾಡಿ,
ಮೆರವಣಿಗೆ ಮಾಡಲೇಬೇಕೆಂದಿದ್ದರೆ, ಪಾಕಿಸ್ತಾನದಿಂದ ಬಂದ ದಲಿತರು, ಶೋಷಿತರು, ಪೀಡಿತರ ಪರವಾಗಿ ಮಾಡಿ ತೋರಿಸಿ
ಧರಣಿ ಮಾಡಲೇಬೇಕೆಂದಿದ್ದರೆ, ಪಾಕಿಸ್ತಾನದ ಕುಕೃತ್ಯಗಳ ವಿರುದ್ಧ ಮಾಡಿ ತೋರಿಸಿ ಎಂದು ಕಾಂಗ್ರೆಸ್‌ ಮತ್ತವರ ಸಹಯೋಗಿಗಳು ಮತ್ತು ಸಿಎಎ ಪ್ರತಿಭಟನಾಕಾರರ ವಿರುದ್ಧ ಹರಿಹಾಯ್ದಿದ್ದಾರೆ.

ಇಲ್ಲಿನ ಸಿದ್ಧಗಂಗಾ ಮಠದ ಆವರಣದಲ್ಲಿ ಡಾ.ಶಿವಕುಮಾರ ಸ್ವಾಮೀಜಿ ವಸ್ತು ಸಂಗ್ರಹಾಲಯಕ್ಕೆ ಶಂಕುಸ್ಥಾಪನೆ ಮಾಡಿದ ಬಳಿಕ ಅವರು ಮಾತನಾಡಿದರು.

ಕೆಲವು ವಾರಗಳ ಹಿಂದೆ ಈ ದೇಶದ ಪರಮೋಚ್ಚ ನೀತಿ ನಿರೂಪಣಾ ಕೇಂದ್ರವಾಗಿರುವ ಸಂಸತ್ತು, ಪೌರತ್ವ ತಿದ್ದುಪಡಿ ಕಾಯ್ದೆಗೆ ಅನುಮೋದನೆ ನೀಡಿತು. ಆದರೆ ಕಾಂಗ್ರೆಸ್, ಅವರನ್ನು ಬೆಂಬಲಿಸುವ ಪಕ್ಷಗಳು ಮತ್ತು ಅವರೇ ಸೃಷ್ಟಿಸಿದ ವ್ಯವಸ್ಥೆಯೊಂದು, ಭಾರತದ ಸಂಸತ್ತಿನ ವಿರುದ್ಧವೇ ಎದ್ದು ನಿಂತಿವೆ. ಅವರಿಗೆ ನಮ್ಮ ಮೇಲೆ ಯಾವ ರೀತಿಯ ಆಕ್ರೋಶವಿದೆಯೋ, ಅದೇ ರೀತಿಯ ಧ್ವನಿ ಈಗ ದೇಶದ ಸಂಸತ್ತಿನ ವಿರುದ್ಧ ಕಾಣಿಸುತ್ತಿದೆ. ಇವರು ಸಂಸತ್ತಿನ ವಿರುದ್ಧವೂ ಆಂದೋಲನ ಶುರು ಮಾಡಿದ್ದಾರೆ. ಪಾಕಿಸ್ತಾನದಿಂದ ಬಂದ ದಲಿತರು, ಪೀಡಿತರು, ಶೋಷಿತರ ವಿರುದ್ಧ ಅವರು ಆಂದೋಲನ ಮಾಡುತ್ತಿದ್ದಾರೆ ಎಂದು ಮೋದಿ ಕಾಂಗ್ರೆಸ್‌ ಮತ್ತು ಪ್ರತಿಭಟನಾನಿರತರ ವಿರುದ್ಧ ಹರಿಹಾಯ್ದರು. 

ಪಾಕಿಸ್ತಾನದ ಜನ್ಮ ಆಗಿದ್ದೇ ಧರ್ಮದ ಆಧಾರದಲ್ಲಿ ಆ ಸಮಯದಲ್ಲೇ ಪಾಕಿಸ್ತಾನದಲ್ಲಿ ಬೇರ ಧರ್ಮದ ಜನರ ಮೇಲೆ ಅತ್ಯಾಚಾರ, ದೌರ್ಜನ್ಯಗಳು ಆಗಲಾರಂಭಿಸಿದವು. ಹಿಂದೂ, ಸಿಖ್, ಜೈನರ ವಿರುದ್ಧ ಧರ್ಮದ ಆಧಾರದಲ್ಲಿ ಹಿಂಸಾಚಾರ ಆರಂಭವಾಯಿತು. ಅವರೆಲ್ಲರೂ ತಮ್ಮ ಮನೆ ಬಿಟ್ಟು ಭಾರತಕ್ಕೆ ಆಗಮಿಸಿದರು, ಇಲ್ಲಿ ಬರಲು ಮಜಬೂರ್ ಆದರು. ಪಾಕಿಸ್ತಾನೀಯರು ಹಿಂದೂಗಳ ಮೇಲೆ, ಸಿಕ್ಖರ ಮೇಲೆ, ಜೈನರು, ಕ್ರೈಸ್ತರ ಮೇಲೆ ದಬ್ಬಾಳಿಕೆ ಮಾಡಿದರು. ಆದರೆ, ಕಾಂಗ್ರೆಸ್ - ಮತ್ತವರ ಸಹಯೋಗಿಗಳು ಪಾಕಿಸ್ತಾನೀಯರ ವಿರುದ್ಧ ಮಾತನಾಡುವುದಿಲ್ಲ. ಪ್ರತಿಯೊಬ್ಬ ದೇಶವಾಸಿಗಳ ಮೇಲೆ - ಪಾಕಿಸ್ತಾನದಿಂದ ತಮ್ಮ ಧರ್ಮವನ್ನು, ತಮ್ಮ ಜೀವವನ್ನು ಉಳಿಸಲು, ತಮ್ಮ ಹೆಣ್ಣುಮಕ್ಕಳನ್ನು ಬಲಾತ್ಕಾರದಿಂದ ತಪ್ಪಿಸಲು ಭಾರತಕ್ಕೆ ಶರಣಾದರು. ಪಾಕಿಸ್ತಾನದಲ್ಲಿ ದೌರ್ಜನ್ಯಕ್ಕೆ ತುತ್ತಾದ ಪಾಕಿಸ್ತಾನೀಯರ ಪರವಾಗಿ ಮಾತನಾಡಲು ಅವರಿಗೆ ಪುರುಸೊತ್ತಿಲ್ಲ. ಅವರ ಬಾಯಿಗೆ ಬೀಗ ಬಿದ್ದಿದೆ. ಇದು ಯಾಕೆ? ಎಂದು ಪ್ರಶ್ನೆ ಮಾಡಿದರು.

ಶರಣಾರ್ಥಿಗಳಿಗೆ ಸಹಾಯ ಮಾಡುವುದು ನಮ್ಮ ದೇಶವಾಸಿಗಳ ಕರ್ತವ್ಯ. ಪಾಕಿಸ್ತಾನದಿಂದ ಬಂದ ಹಿಂದುಗಳು, ಹೆಚ್ಚಿನವರು ನಮ್ಮ ದಲಿತ ಸಹೋದರ ಸಹೋದರಿಯರಿಗೆ ಸಹಾಯ ಮಾಡಬೇಕಾಗಿರುವುದು ನಮ್ಮ ರಾಷ್ಟ್ರೀಯ ಹೊಣೆಗಾರಿಕೆ. ಪಾಕಿಸ್ತಾನದಿಂದ ಬಂದ ಕ್ರೈಸ್ತರು, ಜೈನರು, ಸಿಕ್ಖರಿಗೂ ಸಹಾಯ ಮಾಡುವುದು ನಮ್ಮ ಜವಾಬ್ದಾರಿ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ಕುತಂತ್ರಗಳಿಗೆ ಕಡಿವಾಣ ಹಾಕುವುದು ಈಗಿನ ಅಗತ್ಯ. ನಿಮಗೆ ಆಂದೋಲನ ಮಾಡಲೇಬೇಕೆಂದಿದ್ದರೆ, ಪಾಕಿಸ್ತಾನದ ಹಿಂದಿನ 70 ವರ್ಷಗಳ ಕುಕೃತ್ಯಗಳ ವಿರುದ್ಧ ಆಂದೋಲನ ಮಾಡಿ. ಧ್ವನಿಯೆತ್ತಬೇಕಿದೆ, ನಿಮ್ಮೊಳಗೆ ಈ ಬಗ್ಗೆ ಧೈರ್ಯ ವಹಿಸಬೇಕಿದೆ ಎಂದರು.

ಪಡೋಸಿ ದೇಶದಲ್ಲಿ ಧಾರ್ಮಿಕ ಹಿಂಸಾಚಾರಕ್ಕೆ ನಲುಗಿರುವ ಅಲ್ಪಸಂಖ್ಯಾತರಿಗೆ ಗೌರವ ನೀಡುವ ಕೆಲಸವನ್ನು ಭಾರತ ಮಾಡುತ್ತಿದೆ. ರೈತರಿಗೆ ನೇರ ಸಹಾಯ, ಶ್ರಮಿಕರು, ಸಣ್ಣ ವ್ಯಾಪಾರಿಗಳಿಗೆ ಸಾಮಾಜಿಕ ಸುರಕ್ಷತೆಯ ಸಂಕಲ್ಪವು ಸಾಕಾರಗೊಳ್ಳುತ್ತಿದೆ. ಆತಂಕವಾದದ ವಿರುದ್ಧದ ಭಾರತದ ನೀತಿ ರೀತಿ ಬದಲಾವಣೆಯ ಸಂಕಲ್ಪ ಸಿದ್ಧವಾಗುತ್ತಿದೆ ಹಾಗೇ ಜಮ್ಮು ಮತ್ತು ಕಾಶ್ಮೀರದಿಂದ 370 ತೊಲಗಿಸಿ, ಆತಂಕ ಮತ್ತು ಅನಿಶ್ಚಿತತೆಯನ್ನು ದೂರ ಮಾಡಲಾಗಿದೆ. ರಾಮ ಮಂದಿರ ರಚಿಸುವ ಮಾರ್ಗವೂ ಶಾಂತಿಯಿಂದಲೇ ರೂಪಿಸಲಾಗಿದೆ. ಎಂದು ಮೋದಿ ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು