ಮಂಗಳವಾರ, ಮಾರ್ಚ್ 31, 2020
19 °C

ಯುಗಾದಿ ವಿಶೇಷ | ಕತ್ತಲು ಬೆಳಕುಗಳ ಸರಸ ವಿರಸ

ಎಸ್. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

ಮತ್ತೊಮ್ಮೆ ಯುಗಾದಿ ಬಂದಿದೆ. ಯುಗದ ಆದಿ, ಎಂದರೆ ಯುಗದ ಆರಂಭವೇ ಯುಗಾದಿ. ಯುಗ ಎಂದರೆ ಅದು ಒಂದು ವರ್ಷವೂ ಆಗಬಹುದು, ಒಂದು ಯುಗವೂ ಆಗಬಹುದು. ಯುಗದ ಕಲ್ಪನೆ ನಮಗೆ ಸುಲಭವಾಗಿ ಎಟುಕುವುದಿಲ್ಲ; ಆದುದರಿಂದ ಯುಗಾದಿಯನ್ನು ವರ್ಷಕ್ಕೆ ಸೀಮಿತಮಾಡಿಕೊಂಡಿದ್ದೇವೆ. ಹೀಗಾಗಿ ನಮಗೆ ವರ್ಷದ ಆರಂಭವೇ ಯುಗಾದಿ ಎನಿಸಿದೆ.

ನಾಮ–ರೂಪಗಳಿಲ್ಲದೆ ನಮ್ಮ ಅರಿವಿಗೆ ಯಾವುದೂ ನಿಲುಕದು. ನಾಮ ಎಂದರೆ ಹೆಸರು, ರೂಪ ಎಂದರೆ ಆಕಾರ. ಈ ಕಾರಣದಿಂದಲೇ ವರ್ಷಗಳಿಗೂ ಹೆಸರುಗಳನ್ನು ನೀಡಿದ್ದೇವೆ. ಇಂದಿನಿಂದ ಆರಂಭವಾಗಲಿರುವ ಹೊಸ ವರ್ಷದ ಹೆಸರು ‘ಶಾರ್ವರಿ‘. ‘ರಾತ್ರಿ’ ಎಂಬುದು ಅದರ ಅರ್ಥಗಳಲ್ಲಿ ಒಂದು. ಸದ್ಯ ಇಡಿಯ ಜಗತ್ತು ಎದುರಿಸುತ್ತಿರುವ ಗಂಭೀರ ಸಮಸ್ಯೆಯನ್ನೇ ಈ ಹೆಸರು ಧ್ವನಿಸುವಂತಿದೆ.

ರಾತ್ರಿ ಎಂದರೆ ಕತ್ತಲು. ಕತ್ತಲು ಎಂದರೆ ಭಯ. ಭಯ ಎಂದರೆ ಮಾನಸಿಕ ಒತ್ತಡ. ಅದರಿಂದ ನೆಮ್ಮದಿಯ ಹಾಳು. ನೆಮ್ಮದಿಯಿಲ್ಲದ ಜೀವನಕ್ಕೆ ಅರ್ಥವಾದರೂ ಏನಿದ್ದೀತು?

ಜಗತ್ತಿನಾದ್ಯಂತ ಇಂದು ಕೊರೋನಾ ವೈರಸ್‌ನಿಂದಾಗಿ ಕತ್ತಲು ಆವರಿಸಿದೆ, ಭೀತಿ ಎದುರಾಗಿದೆ. ಈ ಸಂದರ್ಭದಲ್ಲಿ ‘ಶಾರ್ವರಿ‘ಯ ಆಗಮನವಾಗಿದೆ. ಯುಗಾದಿಯ ಹಬ್ಬ ಈ ವರ್ಷ ಆತಂಕದ ಕಾಲವಾಗಿದೆ, ದಿಟ. ಆದರೆ ನಾವು ಈಗಿನ ಪರಿಸ್ಥಿತಿಯಿಂದ ಕಂಗಾಲಾಗಬೇಕಿಲ್ಲ. ಈ ಸಂದೇಶವನ್ನು ಯುಗಾದಿಪರ್ವದ ತಾತ್ವಿಕತೆಯೇ ಹೇಳುತ್ತಿದೆ.

ಯುಗಾದಿಗೆ ರೂಪವೂ ಇದೆ. ಅದೇ ನಾವು ಆಚರಿಸುವ ವಿಧಿ–ವಿಧಾನಗಳು. ಯುಗಾದಿಹಬ್ಬದ ಆಚರಣೆಗಳಲ್ಲಿ ಪ್ರಮುಖವಾದುದು ಬೇವು–ಬೆಲ್ಲಗಳ ಸೇವನೆ. ಜೀವನದಲ್ಲಿ ಬೆಲ್ಲ, ಎಂದರೆ ಸಿಹಿ ಮಾತ್ರವೇ ಇರದು; ಬೇವು, ಕಹಿಯೂ ಇರುತ್ತದೆ. ಜೀವನದಲ್ಲಿ ಎರಡನ್ನೂ ಸ್ವೀಕರಿಸುವ ಧೈರ್ಯವನ್ನು ದಕ್ಕಿಸಿಕೊಳ್ಳಬೇಕು ಎಂಬುದೇ ಈ ಹಬ್ಬದ ದಿಟವಾದ ಆಶಯ. ಇದೇ ನೂತನ ವರ್ಷದ ಸಂಭ್ರಮದಲ್ಲಿ ನಾವು ಅಂತರಂಗದಲ್ಲಿ ಧರಿಸಬೇಕಾದ ಹೊಸ ‘ಬಟ್ಟೆ’.

ರಾತ್ರಿ ಬಂದಿದೆ; ಕತ್ತಲು ಕವಿದಿದೆ, ನಿಜ. ಅದರೆ ಕಾಲಚಕ್ರ ಅಲ್ಲಿಗೇ ನಿಲ್ಲದು; ರಾತ್ರಿ ಆದಮೇಲೆ ಬೆಳಕು ಮೂಡಲೇಬೇಕು. ಇದೇ ಸೃಷ್ಟಿಧರ್ಮ. ‘ಅಗೋ! ಅಲ್ಲಿ ನೋಡು ಕತ್ತಲೆಯು ಬೆಳಕಿಗೆ ಜನ್ಮವನ್ನು ನೀಡುತ್ತಿದೆ‘ ಎಂದು ಉದ್ಗರಿಸಿದ್ದಾನೆ, ಖಲೀಲ್‌ ಗಿಬ್ರಾನ್‌. ಹೌದು, ಕತ್ತಲೆಯಲ್ಲಿ ಬೆಳಕೂ ಅಡಗಿದೆ, ಬೆಳಕಿನಲ್ಲಿ ಕತ್ತಲೂ ಕುಳಿತಿದೆ. ಈ ಕಾಣ್ಕೆಯನ್ನು ಅನುಸಂಧಾನಿಸುವುದೇ ಈ ಯುಗಾದಿಯ ಆಚರಣೆ. ಎಂದರೆ ಸಿಹಿ ಇದ್ದಾಗ ಹಿಗ್ಗುವುದೂ, ಕಹಿ ಇದ್ದಾಗ ಕುಗ್ಗುವುದೂ ಸಲ್ಲದು; ಎರಡೂ ಚಕ್ರದಂತೆ ನಿರಂತರ ಸುತ್ತುತ್ತಲೇ ಇರುತ್ತವೆ ಎನ್ನುತ್ತದೆ ಯುಗಾದಿ. ಈ ಸಂದೇಶವನ್ನು ಪ್ರಕೃತಿಯಲ್ಲಿಯೇ ಕಾಣಬಹುದಾಗಿದೆ.

ಮೊನ್ನೆಯವರೆಗೂ ಎಲೆ–ಹೂವು–ಕಾಯಿ–ಹಣ್ಣುಗಳಿಂದ ತುಂಬಿದ್ದ ಮರ ನೆನ್ನೆ ಬೆತ್ತಲಾಗಿ ಅದರ ಸೌಂದರ್ಯವನ್ನು ಕಳೆದುಕೊಂಡಿತ್ತು; ಆದರೆ ಇಂದು ಮತ್ತೆ ಅದು ನಳನಳಿಸುತ್ತಿದೆ. ನಮ್ಮ ಜೀವನವೂ ಹೀಗೆಯೇ. ಸುಖ–ದುಃಖ, ಬೆಳಕು–ಕತ್ತಲು, ರಾತ್ರಿ–ಹಗಲು – ಇವುಗಳಲ್ಲಿ ಯಾವುದೋ ಒಂದು ಮಾತ್ರವೇ ಇರದು; ಒಂದರಲ್ಲಿ ಇನ್ನೊಂದು ಅಡಗಿರುತ್ತದೆ. ಹೀಗಾಗಿ ನಾವು ಜೀವನವನ್ನು ಸಮಚಿತ್ತದಿಂದ ಸ್ವೀಕರಿಸುವುದೇ ಯುಗಾದಿಯ ದಿಟವಾದ ಹೋಳಿಗೆ.

ಹೌದು, ಮನೆಬಾಗಿಲಿಗೆ ತೋರಣ ವನ್ನು ಕಟ್ಟಿ, ಪಾಯಸ–ಹೋಳಿಗೆ ಗಳನ್ನು ಸವಿದು, ಬಂಧುಮಿತ್ರರೊಂದಿಗೆ ಸಂತಸದಿಂದ ನಲಿಯುವ ವಾತಾವರಣ ಈ ವರ್ಷ ಇಲ್ಲದಿರಬಹುದು. ಆದರೆ ಪ್ರಕೃತಿಮಾತೆ ತನ್ನ ಒಡಲನ್ನು ಹಸಿರಿನಿಂದ ಅಲಂಕರಿಸಿಕೊಂಡಿದ್ದಾಳೆ; ಅದನ್ನು ಮನೆಯ ಕಿಟಕಿಯಿಂದಲೇ ನೋಡಿ ಮನಸ್ಸನ್ನು ತುಂಬಿಸಿಕೊಳ್ಳೋಣ. ನಮ್ಮ ಮನೆಯ ಮುಂದಿರುವ ಮರದ ರೆಂಬೆ–ಕೊಂಬೆಗಳೇ ಯುಗಾದಿಯ ತೋರಣ; ಹಕ್ಕಿಗಳ ಉಲಿಯೇ ಹಬ್ಬದ ಸಂಭ್ರಮ; ಧೈರ್ಯವೇ ನಮ್ಮ ಬಂಧು–ಮಿತ್ರರು; ಎಲ್ಲರ ಒಳಿತಿಗಾಗಿ ನಾವು ಸಂಯಮದಿಂದ ನಡೆದುಕೊಳ್ಳುವುದೇ ದೇವಸ್ಥಾನದಲ್ಲಿ ಸಲ್ಲಿಸುವ ಪೂಜೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು