ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದ್ಯಕ್ಕೆ ಬಸ್‌ ಪ್ರಯಾಣ ದರ ಏರಿಕೆ ಇಲ್ಲ: ಸವದಿ ಸ್ಪಷ್ಟನೆ

Last Updated 26 ಜನವರಿ 2020, 19:46 IST
ಅಕ್ಷರ ಗಾತ್ರ

ಬಳ್ಳಾರಿ: ‘ಸಾರಿಗೆ ಇಲಾಖೆಯು ನಷ್ಟ ಅನುಭವಿಸುತ್ತಿದೆ. ಆದರೂ ಸದ್ಯಕ್ಕೆ ಬಸ್‌ ಪ್ರಯಾಣ ದರವನ್ನು ಏರಿಸುವುದಿಲ್ಲ’ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಇಂಧನ ದರ ಏರಿಕೆ, ಬಿಡಿಭಾಗಗಳ ಬೆಲೆ ಏರಿಕೆ, ಮೆಟ್ರೊ ರೈಲು ಬಳಕೆ, ಉಚಿತ ಬಸ್‌ ಪಾಸ್‌ ವ್ಯವಸ್ಥೆಯಿಂದ ಇಲಾಖೆಗೆ ನಷ್ಟ ಹೆಚ್ಚಿದೆ. ಬಿಎಂಟಿಸಿಗೆ ಪ್ರತಿ ದಿನ ₹ 1 ಕೋಟಿ ನಷ್ಟವಾಗುತ್ತಿದೆ’ ಎಂದು ಹೇಳಿದರು.

‘ಆದಾಯ ಗಳಿಕೆಯಲ್ಲಿ ಸಾರಿಗೆ ಇಲಾಖೆಯು ನಾಲ್ಕನೇ ಸ್ಥಾನದಲ್ಲಿದೆ. ಮಾರ್ಚ್‌ ಅಂತ್ಯದ ವೇಳೆಗೆ ಈ ಪರಿಸ್ಥಿತಿಯಲ್ಲಿ ಸುಧಾರಣೆ ಕಾಣಬಹುದೆಂಬ ನಿರೀಕ್ಷೆ ಇದೆ. ಎಲೆಕ್ಟ್ರಿಕಲ್‌ ಬಸ್ ಸೌಕರ್ಯವನ್ನು ನೀಡಲು ವಿದೇಶಿ ಕಂಪನಿಗಳು ಮುಂದೆ ಬಂದಿವೆ. ಅವುಗಳಿಗೆ ನಮ್ಮ ಸಂಚಾರ ಮಾರ್ಗ ಮತ್ತು ನಿಲ್ದಾಣಗಳನ್ನು ಬಿಟ್ಟುಕೊಟ್ಟರೆ ಆದಾಯದಲ್ಲಿ ನಮಗೆ ಶೇ 60, ಅವರಿಗೆ ಶೇ 40 ಹಂಚಿಕೆ ಮಾಡಿಕೊಳ್ಳುವ ಪ್ರಸ್ತಾಪವನ್ನು ಮುಂದಿಟ್ಟಿವೆ. ಸೋಮವಾರ ನಡೆಯಲಿರುವ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗುವುದು’ ಎಂದರು.

‘ನಿಗಮದ ಚಾಲಕರು ಮತ್ತು ನಿರ್ವಾಹಕರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂಬ ಆಗ್ರಹದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ನೇಮಿಸಿರುವ ಸಮಿತಿಯ ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ರಾಜ್ಯದಲ್ಲಿ ದುಬಾರಿ ವಾಹನಗಳನ್ನು ಖರೀದಿಸುತ್ತಿರುವವರು ತೆರಿಗೆ ಹಣ ಉಳಿಸಲು ಹೊರರಾಜ್ಯಗಳಲ್ಲಿ ನೋಂದಣಿ ಮಾಡಿಸುತ್ತಿದ್ದಾರೆ. ಇಲಾಖೆಯ ಆದಾಯಕ್ಕೆ ಹೊಡೆತ ಬೀಳುತ್ತಿದೆ. ಈ ನಿಟ್ಟಿನಲ್ಲಿ ಒಂದೇ ದೇಶ ಒಂದೇ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತರಲು ಕೇಂದ್ರ ಚಿಂತಿಸುತ್ತಿರುವುದು ಸ್ವಾಗತಾರ್ಹ. ಆ ನಿಟ್ಟಿನಲ್ಲಿ ಕೇಂದ್ರದ ಭೂಸಾರಿಗೆ ಸಚಿವರು ಎಲ್ಲ ರಾಜ್ಯಗಳ ಸಾರಿಗೆ ಸಚಿವರ ಸಭೆ ಕರೆಯಬೇಕು’ ಎಂದು ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT