ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸಿಎಂ–ಸಚಿವರ ನಡುವೆ ಸಮನ್ವಯ ಇಲ್ಲ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌

Last Updated 29 ಮಾರ್ಚ್ 2020, 8:33 IST
ಅಕ್ಷರ ಗಾತ್ರ

ಬೆಂಗಳೂರು: 'ಕೊರೊನಾ ಪಿಡುಗು ನಿವಾರಣೆ ವಿಚಾರದಲ್ಲಿ ಉಪ ಮುಖ್ಯಮಂತ್ರಿ ಮತ್ತು ಸಚಿವರ ನಡುವೆ ಸಮನ್ವಯ ಇಲ್ಲ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

ವಿಧಾನಸೌಧದಲ್ಲಿ ಭಾನುವಾರ ನಡೆದ ಸರ್ವ ಪಕ್ಷಗಳ ನಾಯಕರ ಸಭೆಯಲ್ಲಿ ಮಾತನಾಡಿದ ಅವರು, 'ಒಬ್ಬೊಬ್ಬರು ಒಂದೊಂದು ಹೇಳಿಕೆ ಕೊಟ್ಟು ಜನರಲ್ಲಿ ಗೊಂದಲ, ಭಯ ಮೂಡಿಸುತ್ತಿದ್ದಾರೆ. ನಾನು ಅವರ ಹೆಸರು ಹೇಳಲು ಹೋಗುವುದಿಲ್ವ. ಆದರೆ, ಅವರಲ್ಲಿ ಸಮನ್ವಯ ತರುವ ಜವಾಬ್ದಾರಿ ಮುಖ್ಯಮಂತ್ರಿ ಆಗಿ ನಿಮ್ಮದು. ಇಲ್ಲದಿದ್ದರೆ ಜನ ಮತ್ತಷ್ಟು ಹೆದರಿ ಹೋಗುತ್ತಾರೆ' ಎಂದು ಯಡಿಯೂರಪ್ಪ ಅವರಿಗೆ ಹೇಳಿದರು.

'ಕೊರೊನಾ ವಿಚಾರದಲ್ಲಿ ನಾವು ರಾಜಕೀಯ ಮಾಡಲು ಹೋಗುವುದಿಲ್ಲ. ಸರ್ಕಾರದ ಎಲ್ಲ ಸಕಾರಾತ್ಮಕ ಕ್ರಮಗಳಿಗೆ ನಮ್ಮ ಪಕ್ಷದ ಮತ್ತು ವೈಯಕ್ತಿಕವಾಗಿ ನನ್ನ ಬೆಂಬಲವಿದೆ' ಎಂದೂ ಅವರು ಹೇಳಿದರು.

'ಕೊರೊನಾ ನಿಯಂತ್ರಣ, ಪರಿಸ್ಥಿತಿ ನಿರ್ವಹಣೆಗೆ ಸರ್ಕಾರದ ಕ್ರಮಗಳು ವಿಶ್ವ ಆರೋಗ್ಯ ಸಂಸ್ಥೆಯ ನಿಯಮಗಳಿಗೆ, ಮಾರ್ಗಸೂಚಿಗಳಿಗೆ ಅನುಗುಣವಾಗಿ ಇರಬೇಕೇ ಹೊರತು ಸರಕಾರದ ಪ್ರತಿನಿಧಿಗಳ, ಯಾವುದೋ ರಾಜಕೀಯ ಪಕ್ಷದ ತತ್ವ, ಸಿದ್ಧಾಂತ, ರಾಜಕೀಯ ಲಾಭಕ್ಕೆ ಬಳಕೆ ಆಗಬಾರದು. ಕೊರೊನಾ ಇಡೀ ರಾಜ್ಯದ, ದೇಶದ, ವಿಶ್ವದ ಸಮಸ್ಯೆ. ಬರೀ ಆಡಳಿತರೂಢ ಸರ್ಕಾರದ, ಪಕ್ಷದ ಸಮಸ್ಯೆ ಅಲ್ಲ. ಇದು ಎಲ್ಲರ ಸಮಸ್ಯೆ. ಎಲ್ಲರೂ ಒಗ್ಗೂಡಿ ಹೋರಾಡಬೇಕು. ಈ ವಿಚಾರದಲ್ಲಿ ಒಬ್ಬರು ಹೆಚ್ಚು, ಒಬ್ಬರು ಕಡಿಮೆ ಎಂಬುದಿಲ್ಲ ಎಂದು ವಿವರಿಸಿದರು.

ಕೊರೊನಾ ವ್ಯಾಪಕವಾಗಿ ಹರಡುವ ಭೀತಿ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಿಸಿದ ಪರಿಣಾಮ ದಿನನಿತ್ಯದ ವಸ್ತುಗಳು, ಆಹಾರ ಸಿಗದೆ ಜನ ಕಂಗಾಲಾಗಿದ್ದಾರೆ. ಇಲ್ಲಿ ಇರಲೂ ಆಗದೆ, ತಮ್ಮೂರಿಗೆ ಹೋಗಲು ಆಗದೆ ಪರಿತಪಿಸುತ್ತಿದ್ದಾರೆ. ಇದಕ್ಕೊಂದು ಸ್ಪಷ್ಟ ಪರಿಹಾರ ಕಲ್ಪಿಸಬೇಕು' ಎಂದು ಹೇಳಿದರು.

'ಸಾಮಾನ್ಯ ಜನ, ಕೊರೊನಾ ಸೋಂಕು ನಿವಾರಣೆಗೆ ಹೋರಾಡುತ್ತಿರುವ ವೈದ್ಯಕೀಯ, ಅರೆ ವೈದ್ಯಕೀಯ ಸಿಬ್ಬಂದಿ, ಪೊಲೀಸರು, ಪೌರಕಾರ್ಮಿಕರು ಯಾರಿಗೂ ಮಾಸ್ಕ್ ಸಿಗುತ್ತಿಲ್ಲ. ಇದನ್ನು ಉಚಿತವಾಗಿ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ರಕ್ಷಕರಿಗೇ ಸುರಕ್ಷೆ ಇಲ್ಲದಿದ್ದರೆ ಹೇಗೆ?' ಎಂದೂ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT