ಭಾನುವಾರ, ಜನವರಿ 19, 2020
24 °C
ಎಂಜಿನಿಯರಿಂಗ್‌ ಕೋರ್ಸ್‌ಗಳಿಗೆ ಕಾಮೆಡ್‌–ಕೆ, ಯೂನಿಗೇಜ್‌ ಪ್ರವೇಶ ಪರೀಕ್ಷೆ ಮೇ 10ಕ್ಕೆ

ಶುಲ್ಕ ಏರಿಸದಿರಲು ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲಭ್ಯವಿರುವ ಸೀಟುಗಳೇ ಸಂಪೂರ್ಣ ಭರ್ತಿಯಾಗದ ಕಾರಣ, 2020–21ನೇ ಶೈಕ್ಷಣಿಕ ವರ್ಷದಲ್ಲಿ ಪ್ರವೇಶ ಶುಲ್ಕ ಹೆಚ್ಚಿಸದಿರಲು ಬಹುತೇಕ ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳು ನಿರ್ಧರಿಸಿವೆ. 

ಕರ್ನಾಟಕ ಅನುದಾನರಹಿತ ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳ ಸಂಸ್ಥೆಯ (ಕುಪೆಕ) ಮೂಲಗಳ ಪ್ರಕಾರ, ರಾಜ್ಯದಲ್ಲಿನ ಒಟ್ಟು ಎಂಜಿನಿಯರಿಂಗ್‌ ಕಾಲೇಜುಗಳ ಪೈಕಿ ಶೇ 10ರಷ್ಟು ಮಾತ್ರ ಶುಲ್ಕ ಏರಿಕೆಗೆ ಆಸಕ್ತಿ ವಹಿಸಿವೆ. ಆದರೆ, ಎಂಜಿನಿಯರಿಂಗ್‌ ಕೋರ್ಸ್‌ಗಳಿಗೆ ಬೇಡಿಕೆ ಕುಗ್ಗಿರುವ ಹಿನ್ನೆಲೆಯಲ್ಲಿ ಬಹುತೇಕ ಕಾಲೇಜುಗಳು ಶುಲ್ಕ ಏರಿಸಲು ಮುಂದಾಗಿಲ್ಲ.

‘2019–20ರ ಶೈಕ್ಷಣಿಕ ವರ್ಷದಲ್ಲಿ ಶೇ 10ರಷ್ಟು ಶುಲ್ಕ ಹೆಚ್ಚಿಸಿದರೂ, ಅನೇಕ ಕಾಲೇಜುಗಳಲ್ಲಿ ಅದಕ್ಕಿಂತ ಕಡಿಮೆ ಶುಲ್ಕ ತೆಗೆದುಕೊಂಡು ಪ್ರವೇಶ ನೀಡಲಾಯಿತು. ಶೇ 90ರಷ್ಟು ಖಾಸಗಿ ಕಾಲೇಜುಗಳಲ್ಲಿ ಸರಾಸರಿ ಒಬ್ಬರು ಮಾತ್ರ ಎಂಜಿನಿಯರಿಂಗ್‌ ಕೋರ್ಸ್‌ಗೆ ಪ್ರವೇಶ ಪಡೆದಿದ್ದರು’ ಎಂದು ಅವರು ಹೇಳಿದರು. 

‘ನಮ್ಮ ಒಕ್ಕೂಟದ ಸದಸ್ಯ ಕಾಲೇಜುಗಳ ಪೈಕಿ ಶೇ 70ರಷ್ಟು ಎಂಜಿನಿಯರಿಂಗ್‌ ಕಾಲೇಜುಗಳು ಶುಲ್ಕವನ್ನು ಕಡಿಮೆ ಮಾಡಿದ್ದವು. ಈ ಬಾರಿ ಒಕ್ಕೂಟವು ಶೇ 10ರಷ್ಟು ಶುಲ್ಕ ಹೆಚ್ಚಳ ಮಾಡಲು ನಿರ್ಧರಿಸಿದೆ’ ಎಂದು ಕಾಮೆಡ್‌ ಕೆ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ. ಕುಮಾರ್‌ ಹೇಳಿದರು.

ಕಾಮೆಡ್‌–ಕೆ ಪದವಿಪೂರ್ವ ಕೋರ್ಸ್‌ಗಳ ಪ್ರವೇಶ ಪರೀಕ್ಷೆಯ ದಿನಾಂಕ ಘೋಷಿಸಿ ಮಾತನಾಡಿದ ಅವರು, ‘ಶೇ 10ರಷ್ಟು ಶುಲ್ಕ ಹೆಚ್ಚಳ ಮಾಡುವುದಾಗಿ ಕಳೆದ ವರ್ಷವೇ ಕಾಲೇಜುಗಳು ಒಪ್ಪಂದಕ್ಕೆ ಸಹಿ ಹಾಕಿದ್ದವು. ಈ ಬಾರಿಯೂ ಆ ಒಪ್ಪಂದ ಅನ್ವಯವಾಗಲಿದೆ’ ಎಂದೂ ಅವರು ಹೇಳಿದರು.

ಅಂಕಿ–ಅಂಶ

190 - ಕಾಮೆಡ್‌–ಕೆ ವ್ಯಾಪ್ತಿಯಡಿ ದೇಶದಲ್ಲಿರುವ ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳು 

16,216 -ಲಭ್ಯವಿರುವ ಸೀಟುಗಳು 

6,434 -ಕಳೆದ ಬಾರಿ ಭರ್ತಿಯಾದ ಸೀಟುಗಳು 

9,782  -ಕಳೆದ ಬಾರಿ ಖಾಲಿ ಉಳಿದಿದ್ದ ಸೀಟುಗಳು

ಪ್ರಮುಖ ದಿನಗಳು:

ನೋಂದಣಿ ಪ್ರಾರಂಭ: ಜ.16

ಆನ್‌ಲೈನ್‌ನಲ್ಲಿ ಅಣಕು ಪರೀಕ್ಷೆ: ಫೆ.5 

ಅರ್ಜಿ ಸಲ್ಲಿಕೆಗೆ ಕೊನೆಯ ದಿನ: ಏ.17

ಪರೀಕ್ಷಾ ದಿನಾಂಕ: ಮೇ 10 

ಆಸಕ್ತ ವಿದ್ಯಾರ್ಥಿಗಳು www.comedk.org ಮತ್ತು www.unigauge.com ವೆಬ್‌ಸೈಟ್‌ ಬಳಸಿ ಹೆಸರು ನೋಂದಾಯಿಸಿಕೊಳ್ಳಬಹುದು.

ಹೆಚ್ಚು ಬೇಡಿಕೆ ಯಾವುದಕ್ಕೆ ? 

ಎಂಜಿನಿಯರಿಂಗ್‌ನಲ್ಲಿ ಕಂಪ್ಯೂಟರ್‌ ಸೈನ್ಸ್‌ನ ಕೃತಕ ಬುದ್ಧಿಮತ್ತೆ, ಮಾಹಿತಿ ವಿಜ್ಞಾನ, ಯಂತ್ರ ಕಲಿಕೆ (ಮೆಷಿನ್‌ ಲರ್ನಿಂಗ್‌) ಹಾಗೂ ದತ್ತಾಂಶ ವಿಶ್ಲೇಷಣೆ ವಿಭಾಗ ಆಯ್ಕೆಗೆ ಹೆಚ್ಚು ಒಲವು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು