ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿಧಾನ್ಯ ಸಂಸ್ಕರಣೆಗಿಲ್ಲ ಉಪಕರಣ

ದರದಲ್ಲೂ ಕುಸಿತ, ಹುಳುಬಾಧೆ: ಬೆಳೆಯಲು ರೈತರ ಹಿಂದೇಟು
Last Updated 1 ಡಿಸೆಂಬರ್ 2018, 19:20 IST
ಅಕ್ಷರ ಗಾತ್ರ

ದಾವಣಗೆರೆ: ಹದ ನೀರಿನಲ್ಲಿ ಸಮೃದ್ಧ ಸಿರಿಧಾನ್ಯ ಬೆಳೆಯುತ್ತಿದ್ದ ಮಧ್ಯ ಕರ್ನಾಟಕದ ರೈತರಲ್ಲಿ ಈಗ ಮೊದಲಿನ ಉತ್ಸಾಹ ಇಲ್ಲ. ಬೆಳೆದ ಸಿರಿಧಾನ್ಯವನ್ನು ಸಂಸ್ಕರಿಸಲು ಸಾಧ್ಯವಾಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಅಲ್ಲದೇ, ಸಿರಿಧಾನ್ಯಕ್ಕೆ ಕುಸಿದ ಬೆಲೆಯಿಂದಾಗಿ ಮಾರಾಟ ಮಾಡಲೂ ಆಗದೆ, ಹುಳುಬಾಧೆ ಹೆದರಿಕೆಯಿಂದ ಮನೆಯಲ್ಲಿ ದಾಸ್ತಾನು ಕೂಡ ಇಡಲು ಸಾಧ್ಯವಾಗದೆ ರೈತರು ಪರಿತಪಿಸುತ್ತಿದ್ದಾರೆ.

’ಖರ್ಚು ಕಡಿಮೆ, ಆರೋಗ್ಯಕ್ಕೂ ಒಳ್ಳೆಯದು ಎಂದು ಕೃಷಿ ಇಲಾಖೆ ಅಧಿಕಾರಿಗಳು ಸಿರಿಧಾನ್ಯ ಬೆಳೆಯಲು ಹೇಳಿದರು. ಅದರಂತೆ ಒಂದೂವರೆ ಎಕರೆಯಲ್ಲಿ 12 ಕ್ವಿಂಟಲ್‌ ಕೊರಲೆ ಬೆಳೆದೆ. ಆದರೆ, ಅದನ್ನು ಸಂಸ್ಕರಿಸಲು ಉಪಕರಣ ಇಲ್ಲದೆ ಮನೆಯಲ್ಲೇ ಇಟ್ಟುಕೊಂಡಿದ್ದೇನೆ. ನಾನೇ ಬೆಳೆದು ನನಗೇ ತಿನ್ನಲು ಆಗದ ಸ್ಥಿತಿ ಬಂದಿದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಚನ್ನಗಿರಿಯ ಸಂತೆಬೆನ್ನೂರು ಸಮೀಪದ ಭೀಮನೆರೆ ಗ್ರಾಮದ ರೈತ ವೆಂಕಟೇಶ್.

‘ಮೊದಲೆಲ್ಲ ಕೊರಲೆಗೆ ಕ್ವಿಂಟಲ್‌ಗೆ ₹ 4 ಸಾವಿರದಿಂದ ₹ 6 ಸಾವಿರ ತನಕ ಬೆಲೆ ಸಿಗುತ್ತಿತ್ತು. ಈಗ ದರ ಕುಸಿದಿದೆ. ಹಾಗಾಗಿ, ಕಡಿಮೆ ಬೆಲೆಗೆ ಮಾರಾಟ ಮಾಡಲು ಮನಸ್ಸು ಒಪ್ಪುತ್ತಿಲ್ಲ. ಮನೆಯಲ್ಲೇ ಇಟ್ಟರೆ ಧಾನ್ಯ ತೂಕ ಕಳೆದುಕೊಳ್ಳುತ್ತದೆಂಬ ಭಯ ಆವರಿಸಿದೆ. ಸಂಸ್ಕರಣ ಉಪಕರಣ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ನಾಯಕನಹಟ್ಟಿಯಲ್ಲಿದೆ. ಅಲ್ಲಿಗೆ ಧಾನ್ಯ ತೆಗೆದುಕೊಂಡು ಹೋಗಲು ಸಾಕಷ್ಟು ಖರ್ಚಾಗುತ್ತದೆ’ ಎನ್ನುತ್ತಾರೆ ಅವರು.

‘ಸಂಸ್ಕರಣ ಉಪಕರಣದ ಬೆಲೆ ₹ 7 ಲಕ್ಷದಿಂದ ₹ 8 ಲಕ್ಷ ಇರುವುದರಿಂದ ಸಣ್ಣ ಹಿಡುವಳಿದಾರರಿಗೆ ಖರೀದಿಸಲು ಸಾಧ್ಯವಾಗು
ತ್ತಿಲ್ಲ. ಈ ಉಪಕರಣಗಳಿಗೆ ಕೃಷಿ ಇಲಾಖೆ ನೀಡುತ್ತಿದ್ದ ಸಬ್ಸಿಡಿ ನಮ್ಮ ಜಿಲ್ಲೆಗೆ ಸಿಕ್ಕಿಲ್ಲ. ಇದರಿಂದ ನಮಗೆ ನಿರಾಸೆಯಾಗಿದೆ’ ಎನ್ನುತ್ತಾರೆ ಭೀಮನೆರೆಯ ರೈತ ವಿಶ್ವನಾಥ್.

‘ಕಳೆದ ವರ್ಷ ನಮ್ಮೂರು ಒಂದರಲ್ಲೇ 2,000 ಎಕರೆ ಪ್ರದೇಶದಲ್ಲಿ ಸಿರಿಧಾನ್ಯ ಬೆಳೆದಿದ್ದೆವು. ಈ ಬಾರಿ 500 ಎಕರೆ ಪ್ರದೇಶಕ್ಕಷ್ಟೇ ಸೀಮಿತಗೊಳಿಸಿದ್ದೇವೆ’ ಎಂದು ಕಾರಣ ನೀಡಿದರು.

‘ಒಂದೇ ಉಪಕರಣದಿಂದ ಸಿರಿ ಧಾನ್ಯ ಸಂಸ್ಕರಣೆ ಸಾಧ್ಯವಿಲ್ಲ. ಕಲ್ಲು–ಕಸ, ಜೊಳ್ಳು ಕಾಳು ತೆಗೆಯಲು ಬೇರೆ ಬೇರೆ ಉಪಕರಣಗಳು ಬೇಕು. ಮತ್ತೊಂದು ಉಪಕರಣದಿಂದ ಹಲ್ಲಿಂಗ್‌ ಮಾಡ ಬೇಕು. ಅಲ್ಲದೇ, ಒಂದೊಂದು ಧಾನ್ಯಕ್ಕೂ ಒಂದೊಂದು ಸಂಸ್ಕರಣ ಉಪಕರಣ ಬೇಕು. ಇಷ್ಟಾದರೂ ಈ ಉಪಕರಣಗಳು ಶೇ 65ರಷ್ಟು ಕಾಳನ್ನು ಮಾತ್ರ ಒಡೆಯುತ್ತವೆ. ಬಾಕಿ ಶೇ 35ರಷ್ಟು ನುಚ್ಚು ಆಗುತ್ತದೆ. ಮತ್ತೆ ಇದನ್ನು ಬೇರೆ ಬೇರೆ ಮಾಡಿಕೊಳ್ಳಬೇಕು. ಹಾಗಾಗಿ,₹ 7 ಲಕ್ಷದಿಂದ ₹ 8 ಲಕ್ಷದವರೆಗಿನ ದೊಡ್ಡ ಘಟಕವನ್ನೇ ಸ್ಥಾಪಿಸಬೇಕು’ ಎನ್ನುತ್ತಾರೆ ದಾವಣಗೆರೆ–ಚಿತ್ರದುರ್ಗ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಟಿ. ಕೃಪ.

‘ಕೆಲವು ಕೃಷಿ ವಿ.ವಿ.ಗಳಲ್ಲಿ ಈ ಉಪಕರಣಗಳನ್ನು ಕಂಡುಹಿಡಿಯಲಾಗಿದೆ. ಆದರೆ, ಅವು ಕೇವಲ ಸಿಪ್ಪೆ ತೆಗೆಯುತ್ತವೆ ಅಷ್ಟೇ. ಹಾಗಾಗಿ, ಹಿಟ್ಟಿನ ಗಿರಣಿ
ಗಳಂತೆ ಸಿರಿಧಾನ್ಯ ಸಂಸ್ಕರಣ ಘಟಕಗಳನ್ನೂ ಸ್ಥಾಪಿಸಿ 1 ಕೆ.ಜಿಗೆ ₹ 6ರಂತೆ ಸಂಸ್ಕರಣೆಗೆ ದರ ನಿಗದಿಗೊಳಿಸಲು ಯೋಜಿಸಲಾಗಿದೆ’ ಎಂದರು.
***

ಶೇ 50ರಷ್ಟು ಬೆಳೆ ಪ್ರದೇಶ ಕುಸಿತ

ಕಳೆದ ವರ್ಷ ದಾವಣಗೆರೆ ಜಿಲ್ಲೆಯಲ್ಲಿ 25,530 ಹೆಕ್ಟೇರ್ ಪ್ರದೇಶದಲ್ಲಿ ಸಿರಿಧಾನ್ಯ ಬೆಳೆಯಲಾಗಿತ್ತು. ಈ ಬಾರಿ 13,408 ಹೆಕ್ಟೇರ್‌ ಪ್ರದೇಶಕ್ಕೆ ಸೀಮಿತವಾಗಿದೆ. ಬೆಳೆ ಪ್ರದೇಶದಲ್ಲಿ ಶೇ 50ರಷ್ಟು ಕುಸಿತವಾಗಿದೆ. ಸಿರಿಧಾನ್ಯಗಳ ಸಂಸ್ಕರಣೆ ಸಮಸ್ಯೆಯಾಗಿದೆ. ಸಿರಿಧಾನ್ಯದಲ್ಲೇ ‘ರೆಡಿ ಟು ಈಟ್’ ಬಂದರೆ ಬೇಡಿಕೆ ಬರಬಹುದು. ಸಂಸ್ಕರಣ ಉಪಕರಣ ಘಟಕ ಸ್ಥಾಪನೆಗೆ ಆಹಾರ ಸಂಸ್ಕರಣ ನೀತಿ ಒಳಗೆ ಇಲಾಖೆ ₹ 5 ಕೋಟಿವರೆಗೂ ಸಹಾಯಧನ ನೀಡಲಿದೆ ಎಂದು ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದಗಲ್ ಮಾಹಿತಿ ನೀಡಿದರು.

***

ಆಸಕ್ತ ರೈತರು ಸಿರಿಧಾನ್ಯ ಸಂಸ್ಕರಣ ಘಟಕಗಳ ಸ್ಥಾಪನೆಗೆ ಮುಂದಾದರೆ ಇಲಾಖೆ ಶೇ 50ರಷ್ಟು ಸಹಾಯಧನ ನೀಡಲಿದೆ.
-ಶರಣಪ್ಪ ಮುದಗಲ್
ಕೃಷಿ ಜಂಟಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT