ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಶಾ ಕಾರ್ಯಕರ್ತೆಯರಿಗೆ ರಕ್ಷಣೆ ಇಲ್ಲ: ಎಚ್‌ಡಿಕೆ ಕಿಡಿ

ಮಂಡ್ಯ ಜಿಲ್ಲಾಧಿಕಾರಿ ವಿರುದ್ಧ ಜೆಡಿಎಸ್‌ ನಾಯಕ ಗರಂ; ಕ್ರಮಕ್ಕೆ ಆಗ್ರಹ
Last Updated 24 ಏಪ್ರಿಲ್ 2020, 12:39 IST
ಅಕ್ಷರ ಗಾತ್ರ

ಮೈಸೂರು: ‘ಆಶಾ ಕಾರ್ಯಕರ್ತೆಯರಿಗೆ ರಕ್ಷಣೆಯೇ ಸಿಗದಾಗಿದೆ. ಈ ವಿಷಯದಲ್ಲಿ ಕೇಂದ್ರ–ರಾಜ್ಯ ಸರ್ಕಾರ ನೀಡಿದ ಹೇಳಿಕೆಗಳು ಘೋಷಣೆಗಷ್ಟೇ ಸೀಮಿತವಾಗಿವೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಶುಕ್ರವಾರ ಇಲ್ಲಿ ವಾಗ್ದಾಳಿ ನಡೆಸಿದರು.

ಸ್ಥಳೀಯರ ದೌರ್ಜನ್ಯ, ಕಿರುಕುಳದಿಂದ ಮನನೊಂದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಹುರುಳಿಕ್ಯಾತನಹಳ್ಳಿಯ ಆಶಾ ಕಾರ್ಯಕರ್ತೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದು, ಚಿಕಿತ್ಸೆಗಾಗಿ ದಾಖಲಾಗಿದ್ದ ಮೈಸೂರಿನ ವಿದ್ಯಾರಣ್ಯ ನರ್ಸಿಂಗ್‌ ಹೋಂಗೆ ಭೇಟಿ ನೀಡಿ, ಸಂತ್ರಸ್ತೆಯ ಆರೋಗ್ಯ ವಿಚಾರಿಸಿದ ಬಳಿಕ ಪತ್ರಕರ್ತರ ಜತೆ ಎಚ್‌ಡಿಕೆ ಮಾತನಾಡಿದರು.

‘ಹುರುಳಿಕ್ಯಾತನಹಳ್ಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸದೆ ಪೊಲೀಸ್ ಠಾಣೆಯ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಸ್ಥಳೀಯ ಪಿಡಿಒ ಕನಿಷ್ಠ ಸೌಜನ್ಯಕ್ಕೂ ಯೋಗಕ್ಷೇಮ ವಿಚಾರಿಸಿಕೊಂಡಿಲ್ಲ’ ಎಂದು ಅವರು ಹರಿಹಾಯ್ದರು.

‘ಮಂಡ್ಯ ಜಿಲ್ಲಾಧಿಕಾರಿ, ಆಶಾ ಕಾರ್ಯಕರ್ತೆಯ ಮೇಲಧಿಕಾರಿಗಳ ಮೇಲೆ ಒತ್ತಡ ಹಾಕಿ ರಾಜಿ ಸಂಧಾನಕ್ಕೆ ಯತ್ನಿಸಿದ್ದಾರೆ. ಈ ಘಟನೆ ಹಿಂದೆ ರಾಜಕೀಯ ಪಿತೂರಿ ಅಡಗಿದೆ. ರಾಜಕೀಯ ಒತ್ತಡಕ್ಕೆ ಮಣಿದು ಇಂತಹ ಕೆಲಸ ಮಾಡಿದ್ದಾರೆ. ಇವರ ವಿರುದ್ಧ ಕ್ರಮ ಜರುಗಿಸಿ. ಇವರು ಅಧಿಕಾರಿಗಳಾ ?’ ಎಂದು ಕುಮಾರಸ್ವಾಮಿ ಕಿಡಿಕಾರಿದರು.

‘ಸಂತ್ರಸ್ತೆ ಭಯದಿಂದ ಇನ್ನೂ ಹೊರ ಬಂದಿಲ್ಲ. ಮಾನಸಿಕ ಒತ್ತಡಕ್ಕೆ ಸಿಲುಕಿದ್ದಾರೆ. ಕೊರೊನಾ ಕೆಲಸದ ನಿಮಿತ್ತ ಮಾಹಿತಿ ಪಡೆಯಲು ಹೋದಾಗ ಅವಿನಾಶ್ ಮತ್ತು ಆತನ ತಂದೆ ರಸ್ತೆಯಲ್ಲೇ ಅವಾಚ್ಯವಾಗಿ ನಿಂದಿಸಿ, ಅಪಮಾನ ಮಾಡಿದ್ದಾರೆ. ನೆರವಿಗೆ ಬರಬೇಕಿರುವ ಪಿಡಿಒ ಸಹ ಬಂದಿಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವ ಬದಲು, ರಾಜಕೀಯ ಒತ್ತಡಕ್ಕೆ ಮಂಡ್ಯ ಜಿಲ್ಲೆಯ ಅಧಿಕಾರಿಗಳು ಮಣಿದಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಈ ಘಟನೆ ಸರ್ಕಾರಕ್ಕೆ ಗಂಭೀರತೆ ಇಲ್ಲ ಎನ್ನುವುದನ್ನು ಪ್ರದರ್ಶಿಸಿದೆ. ವಿರೋಧ ಪಕ್ಷವಾಗಿ ಇಂತಹ ಸಂದರ್ಭದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬಾರದು ಎಂದು ಸುಮ್ಮನಿದ್ದೇವೆ. ಇದನ್ನು ನಮ್ಮ ದೌರ್ಬಲ್ಯ ಎಂದು ಪರಿಗಣಿಸಿದರೆ, ಹೋರಾಟಕ್ಕೆ ನಾವೂ ಸಿದ್ಧರಿದ್ದೇವೆ’ ಎಂದು ಕುಮಾರಸ್ವಾಮಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಶಾಸಕರಾದ ಸಾ.ರಾ.ಮಹೇಶ್, ಅಶ್ವಿನ್‌ಕುಮಾರ್, ರವೀಂದ್ರ ಶ್ರೀಕಂಠಯ್ಯ ಜತೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT