ಭಾನುವಾರ, ಡಿಸೆಂಬರ್ 8, 2019
19 °C
ಟಾಟಾ ಸ್ಮಾರಕ ಆಸ್ಪತ್ರೆಯ ಡಾ.ಉಮೇಶ್ ಮಹಾಂತಶೆಟ್ಟಿ ಬೇಸರ

‘ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆ: ಸರ್ಕಾರದಿಂದ ಬಾರದ ಪ್ರತಿಕ್ರಿಯೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಕಾರವಾರ: ‘ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಕ್ಯಾನ್ಸರ್ ಆಸ್ಪತ್ರೆಗಳನ್ನು ಸ್ಥಾಪಿಸುವ ಬಗ್ಗೆ ಆರು ವರ್ಷಗಳ ಹಿಂದೆಯೇ ಪ್ರಸ್ತಾವ ಸಲ್ಲಿಸಲಾಗಿತ್ತು. ಆದರೆ, ರಾಜ್ಯ ಸರ್ಕಾರದಿಂದ ಈವೆರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ’ ಎಂದು ಮುಂಬೈನ ಟಾಟಾ ಸ್ಮಾರಕ ಆಸ್ಪತ್ರೆಯ (ಟಿಎಂಎಚ್) ಗ್ರಂಥಿ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಉಮೇಶ್ ಮಹಾಂತಶೆಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.

‘ಪ್ರಜಾವಾಣಿ’ ಜತೆ ದೂರವಾಣಿ ಮೂಲಕ ಮಾತನಾಡಿದ ಅವರು, ‘ಕಾರವಾರ, ಮಂಗಳೂರು, ರಾಯಚೂರು ಮತ್ತು ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಆಸ್ಪತ್ರೆ ತೆರೆಯಲು ಟಿಎಂಎಚ್ ಉದ್ದೇಶಿಸಿತ್ತು. ಈ ಸಂಬಂಧ 2012–13ರಲ್ಲೇ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಹೇಳಿದರು.

‘ರಾಜ್ಯ ಸರ್ಕಾರದ ಅಂದಿನ ಪ್ರಧಾನ ಕಾರ್ಯದರ್ಶಿ ಜತೆ ನಾವು ಬೆಂಗಳೂರಿನಲ್ಲಿ ಒಂದೆರಡು ಸಭೆಗಳನ್ನೂ ಮಾಡಿದೆವು. ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ಜತೆಗೂ ಚರ್ಚಿಸಿದೆವು. ರೇಡಿಯೋಥೆರಪಿಗೆ ಅಗತ್ಯವಾದ ಮೂಲಸೌಕರ್ಯ, ಅವುಗಳ ಯಂತ್ರಗಳನ್ನು ಟಿಎಂಎಚ್‌ನಿಂದ ನೀಡಲಾಗುತ್ತದೆ ಎಂದು ತಿಳಿಸಿದ್ದೆವು. ನಮ್ಮ ಪ್ರಸ್ತಾವಕ್ಕೆ ಒಪ್ಪಿಗೆ ಸಿಕ್ಕಿ ಒಂದಷ್ಟು ಕಡತಗಳು ಓಡಾಡಿದವು. ಬಳಿಕ ಏನಾಯ್ತು ಎಂದು ಲಿಖಿತವಾಗಿ ಯಾವ ಮಾಹಿತಿಯನ್ನೂ ನೀಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

‘ಕ್ಯಾನ್ಸರ್ ರೋಗಿಗಳಿಗೆ ಗ್ರಾಮೀಣ ಭಾಗದಲ್ಲೂ ಚಿಕಿತ್ಸೆ ದೊರಕಿಸುವುದು ಸಂಸ್ಥೆಯ ಉದ್ದೇಶವಾಗಿದ್ದು, ರೇಡಿಯೇಷನ್‌ಗೆ ಚಿಕಿತ್ಸೆ ನೀಡುವುದು ಆದ್ಯತೆಯಾಗಿದೆ. ಜಿಲ್ಲಾ ಆಸ್ಪತ್ರೆ ಅಥವಾ ವೈದ್ಯಕೀಯ ಕಾಲೇಜು ಇರುವ ಪ್ರದೇಶದಲ್ಲೇ ಕ್ಯಾನ್ಸರ್ ಆಸ್ಪತ್ರೆ ಆರಂಭಿಸುತ್ತೇವೆ. ಇತರ ವಿವಿಧ ಚಿಕಿತ್ಸೆಗಳನ್ನು ವೈದ್ಯಕೀಯ ಕಾಲೇಜಿನಲ್ಲಿ ಪಡೆದುಕೊಳ್ಳಬಹುದು ಎಂದು ತಿಳಿಸಿದ್ದೆವು’ ಎಂದು ಹೇಳಿದರು.

‘ಕಾರವಾರದಲ್ಲಿ ಆಸ್ಪತ್ರೆ ಸ್ಥಾಪನೆ ಸಂಬಂಧ ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೆಶಕ ಡಾ.ಶಿವಾನಂದ ದೊಡ್ಡಮನಿ ರಾಜ್ಯ ಸರ್ಕಾರದೊಂದಿಗೆ ಚರ್ಚಿಸಿದರು. ಅದರ ಫಲಿತಾಂಶವೇನು ಎಂಬ ಬಗ್ಗೆಯೂ ನಮಗೆ ಮಾಹಿತಿ ಲಭಿಸಿಲ್ಲ’ ಎಂದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು