ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡೇ ವಾರಕ್ಕೆ 35 ಅಧಿಕಾರಿಗಳ ವರ್ಗಾ

Last Updated 7 ಆಗಸ್ಟ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಅಧಿಕಾರ ವಹಿಸಿಕೊಂಡ ಅಲ್ಪ ಸಮಯದಲ್ಲೇ 35ಕ್ಕೂ ಹೆಚ್ಚು ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ.

ಹಿಂದಿನ ಮೈತ್ರಿ ಸರ್ಕಾರದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಈಗ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಅಂತಹುದೇ ಕೆಲಸ ಮುಂದುವರಿದಿದೆ. ಈ ರೀತಿ ವರ್ಗಾವಣೆ ಮಾಡುತ್ತಿದ್ದರೆ ಅಧಿಕಾರಿ ವರ್ಗ ದಕ್ಷತೆಯಿಂದ ಕೆಲಸ ಮಾಡುವುದು ಹೇಗೆ ಎಂದು ವಿಪಕ್ಷಗಳು ಪ್ರಶ್ನಿಸುತ್ತಿವೆ.

ಜುಲೈ 26ರಂದು ಯಡಿಯೂರಪ್ಪ ಅಧಿಕಾರ ವಹಿಸಿಕೊಳ್ಳುವ ಮುನ್ನ ರಾಜ್ಯದಲ್ಲಿ ರಾಜಕೀಯ ಅಸ್ಥಿರತೆಕಾಡಿತ್ತು.ಇಂಥ ಪರಿಸ್ಥಿತಿಯನ್ನು ಗಮನಿಸಿದ ಐಎಎಸ್, ಐಪಿಎಸ್ ಅಧಿಕಾರಿಗಳು ಒಂದು ರೀತಿಯಲ್ಲಿ ನಿರ್ಲಿಪ್ತ ಮನೋಭಾವ ತಾಳಿದ್ದರು. ಕಳೆದ 14 ತಿಂಗಳ ಅಂತರದಲ್ಲಿ ಮತ್ತೊಂದು ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಹೊಸ ಆಡಳಿತ ವ್ಯವಸ್ಥೆಗೆ ಹೊಂದಿಕೊಳ್ಳಬೇಕಿದೆ. ಜನಪರ ಆಡಳಿತ ನೀಡುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದಿರುವ ಯಡಿಯೂರಪ್ಪ ಅವರು ತಮ್ಮ ವೇಗಕ್ಕೆ ಸ್ಪಂದಿಸುವ ಹಿರಿಯ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳನ್ನು ನೇಮಿಸಿಕೊಳ್ಳುವುದು ಅನಿವಾರ್ಯವೂ ಆಗಿದೆ ಎಂದು ಆಡಳಿತ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ಮೈತ್ರಿ ಸರ್ಕಾರದ ಅವಧಿಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಅಧಿಕಾರಿಗಳು ಸಹಜವಾಗಿ ಪ್ರಮುಖ ಹಾಗೂ ಆಯಕಟ್ಟಿನ ಹುದ್ದೆಗಳಿಗೆ ಬರಲು ಬಯಸುತ್ತಾರೆ. ಕಾಂಗ್ರೆಸ್– ಜೆಡಿಎಸ್‌ ನಾಯಕರಿಗೆ ಹತ್ತಿರದಲ್ಲಿದ್ದ ಅಧಿಕಾರಿಗಳನ್ನು ಈ ಸರ್ಕಾರದಲ್ಲಿ ಪ್ರಮುಖ ಹುದ್ದೆಗಳಿಂದ ದೂರವಿಡಲಾಗುತ್ತದೆ. ಸರ್ಕಾರಗಳು ಬದಲಾದ ಸಂದರ್ಭಗಳಲ್ಲಿ ಈ ರೀತಿಯ ಸ್ಥಾನ ಪಲ್ಲಟ ಸಾಮಾನ್ಯ ಎನ್ನಲಾಗುತ್ತಿದೆ.

ಮುಖ್ಯಮಂತ್ರಿ ತಮ್ಮ ಕಚೇರಿಗೆ ಬೇಕಾದ ಅಗತ್ಯ ಸಿಬ್ಬಂದಿಯನ್ನು ಮೊದಲಿಗೆ ನೇಮಿಸಿಕೊಳ್ಳುತ್ತಾರೆ. ನಂತರದ ದಿನಗಳಲ್ಲಿಆಡಳಿತದಲ್ಲಿ ಬದಲಾವಣೆ ತರಲು, ಸಚಿವ ಸಂಪುಟದ ಸಹೋದ್ಯೋಗಿಗಳಿಂದ ಬರುವ ಪ್ರತಿಕ್ರಿಯೆ ನೋಡಿಕೊಂಡು ವರ್ಗಾವಣೆ ಮಾಡಲಾಗುತ್ತದೆ. ಕೆಲವು ಅಧಿಕಾರಿಗಳಿಗೆ ಒಂದೆರಡು ದಿನಗಳಲ್ಲೇ ಎರಡು–ಮೂರು ಬಾರಿ ವರ್ಗಾವಣೆ ಮಾಡಲಾಗಿದೆ.ಸಚಿವ ಸಂಪುಟ ರಚನೆಗೂ ಮುನ್ನ ಅಧಿಕಾರಿಗಳ ವರ್ಗಾವಣೆಗೆ ಆತುರ ತೋರುತ್ತಿರುವುದಕ್ಕೆ ಅಧಿಕಾರಿ ವರ್ಗದಲ್ಲಿ ಆತಂಕ ವ್ಯಕ್ತವಾಗಿದೆ.

ಕೆಲಸದ ಸಾಮರ್ಥ್ಯ ನೋಡಿ ವರ್ಗಾವಣೆ ಮಾಡುವುದಿಲ್ಲ. ತಮ್ಮ ಪರವಾಗಿ ಕೆಲಸ ಮಾಡುವ ಅಧಿಕಾರಿಗಳನ್ನು ಆಯಕಟ್ಟಿನ ಜಾಗಕ್ಕೆ ನಿಯೋಜಿಸಲಾಗುತ್ತದೆ. ಜೂನ್‌ನಲ್ಲಿ ಬೆಂಗಳೂರು ಪೊಲೀಸ್ ಕಮಿಷನರ್ಆಗಿ ವರ್ಗಾವಣೆಗೊಂಡಿದ್ದ ಅಲೋಕ್ ಕುಮಾರ್ ಬಗ್ಗೆ ಬಿಜೆಪಿ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ ಸಮಯದಲ್ಲಿ ಹಾಗೂ ಚಿಕ್ಕಬಳ್ಳಾಪುರ ಶಾಸಕ ಕೆ.ಸುಧಾಕರ್‌ಗೆ ಸರಿಯಾಗಿ ರಕ್ಷಣೆ ನೀಡಲಿಲ್ಲ, ಹಿಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಅವರಿಗೆ ಹತ್ತಿರದವರು ಎಂಬ ಕಾರಣಕ್ಕೆ ವರ್ಗಾವಣೆ ಮಾಡಲಾಗಿದೆ ಎಂದು ಆರೋಪ ಕೇಳಿಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT