ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ| ಪ್ರಾಮಾಣಿಕ ನಾಯಕತ್ವದ ಕೊರತೆ: ಅವಸಾನದತ್ತ ಹಾಪ್‌ಕಾಮ್ಸ್

ಕೆಎಂಎಫ್‌ಗೆ ಸಿಕ್ಕ ನೆರವೂ ಸಿಗಲಿಲ್ಲ
Last Updated 10 ನವೆಂಬರ್ 2019, 4:19 IST
ಅಕ್ಷರ ಗಾತ್ರ

ಬೆಂಗಳೂರು: ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘ ಎಂದರೆ ಯಾರಿಗೂ ಅರ್ಥವಾಗಲಿಕ್ಕಿಲ್ಲ. ಆದರೆ, ಹಾಪ್‌ಕಾಮ್ಸ್ ಎಂದರೆ ಎಲ್ಲರಿಗೂ ಪರಿಚಿತ. ದೇಶದಲ್ಲೇ ಸಹಕಾರಿ ಕ್ಷೇತ್ರದಲ್ಲಿ ಭರವಸೆ ಉಳಿಸಿಕೊಂಡಿರುವ ಹಣ್ಣು–ತರಕಾರಿ ಬೆಳೆಗಾರರ ಸಹಕಾರಿ ಸಂಸ್ಥೆ. ಆದರೆ, ಕಾಲದ ಜೊತೆ ಹೆಜ್ಜೆ ಹಾಕುವಲ್ಲಿ ಹಿಂದೆ ಬಿದ್ದು ಜಾಗತಿಕ ಮಟ್ಟದಲ್ಲಿ ಬ್ರ್ಯಾಂಡ್‌ ಆಗಿ ಬೆಳೆಯುವ ಅವಕಾಶವನ್ನು ಕಳೆದುಕೊಂಡಿದೆ.

ಬೆಳೆಗಾರರು ಮತ್ತು ಗ್ರಾಹಕರಿಗೆ ಮಧ್ಯವರ್ತಿಗಳ ಶೋಷಣೆ ತಪ್ಪಿಸಿ ಸಮರ್ಥ ಮಾರುಕಟ್ಟೆ ಸೌಕರ್ಯ ಕಲ್ಪಿಸುವ ಉದ್ದೇಶದಿಂದ ಸ್ಥಾಪಿತವಾದ ಸಂಸ್ಥೆ ಇದು. ದ್ರಾಕ್ಷಿ ಬೆಳೆಗೆ ಮಾರುಕಟ್ಟೆ ಕಲ್ಪಿಸಲು ಡಾ.ಎಂ.ಎಚ್.ಮರೀಗೌಡರ ದೂರದೃಷ್ಟಿ ಫಲವಾಗಿ 1959ರಲ್ಲಿ ಆರಂಭಗೊಂಡ ದ್ರಾಕ್ಷಿ ಬೆಳೆಗಾರರ ಸಹಕಾರಿ ಸಂಘ ತನ್ನ ಕಾರ್ಯವ್ಯಾಪ್ತಿ ವಿಸ್ತರಿಸಿಕೊಂಡು 1965 ರಿಂದ ಹಣ್ಣು ಮತ್ತು ತರಕಾರಿ ವಹಿವಾಟು ಪ್ರಾರಂಭಿ ಸಿತು. 1986-87ರಿಂದ ಹಾಪ್‌ಕಾಮ್ಸ್ ಹೆಸರಿನಿಂದ ಕಾರ್ಯನಿರ್ವಹಿಸುತ್ತಿದೆ.

ತೋಟಗಾರಿಕಾ ಮಹಾಮಂಡಳ ಅಸ್ತಿತ್ವಕ್ಕೆ ಬರುವ ಮುನ್ನ ಹಾಪ್‌ಕಾಮ್ಸ್ ರಾಜ್ಯವ್ಯಾಪ್ತಿ ಹೊಂದಿತ್ತು. ಈಗ ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ರಾಮನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ಸೇರಿದಂತೆ ಒಂದು ಹಾಪ್‌ಕಾಮ್ಸ್‌ ಇದೆ. ಉಳಿದಂತೆ 19 ಜಿಲ್ಲೆಗಳಲ್ಲಿ ಹಾಪ್‌ಕಾಮ್ಸ್‌ಗಳು ಜಿಲ್ಲಾ ಮಟ್ಟಕ್ಕೆ ಸೀಮಿತವಾಗಿವೆ. ಸಂಸ್ಥೆಯ 60ರ ದಶಕದ ಹೊಸ್ತಿಲಿನಲ್ಲಿ ನಿಂತು ಸಿಂಹಾವಲೋಕನ ಮಾಡಿದರೆ ಆಶಾದಾಯಕ ಸ್ಥಿತಿ ಕಾಣುವುದಿಲ್ಲ.

ಆಧುನಿಕ ಮಾರುಕಟ್ಟೆ ವ್ಯವಸ್ಥೆಗೆ ತೆರೆದುಕೊಳ್ಳದಿರುವುದು, ಪೂರೈಕೆ ಜಾಲ ರೂಪಿಸಿಕೊಳ್ಳದಿರುವುದು, ವ್ಯವಸ್ಥೆಯಲ್ಲಿನ ಲೋಪಗಳು, ಮಾರುಕಟ್ಟೆ ಏರಿಳಿತಗಳ ಅಸಮರ್ಪಕ ನಿರ್ವಹಣೆ, ಮೌಲ್ಯವರ್ಧನೆ ಅವಕಾಶಗಳನ್ನು ಬಳಸಿಕೊಳ್ಳದಿರುವುದು, ವಿಸ್ತರಣೆ– ತಂತ್ರಜ್ಞಾನ ಅಳವಡಿಕೆಗೆ ನಿರಾಸಕ್ತಿ, ಆಡಳಿತದಲ್ಲಿ ಅದಕ್ಷತೆ, ಭ್ರಷ್ಟಾಚಾರ,ಗುಂಪುಗಾರಿಕೆ, ಹಳಿತಪ್ಪಿರುವ ಆಡಳಿತ...ಹೀಗೆ ಹತ್ತು ಹಲವು ಕಾರಣಗಳಿಂದ ಹಾಪ್‌ಕಾಮ್ಸ್ ನಿರೀಕ್ಷಿತ ಮಟ್ಟದಲ್ಲಿ ಬೆಳವಣಿಗೆ ಕಾಣಲಿಲ್ಲ.

ಸರ್ಕಾರದಿಂದ ಬಾಡಿಗೆರಹಿತ ಜಮೀನು ಸೌಕರ್ಯ ಇದ್ದರೂ ಗ್ರಾಹಕ ರಿಗೆ ಪೈಪೋಟಿ ದರದಲ್ಲಿ ಉತ್ಪನ್ನಗಳನ್ನು ನೀಡುತ್ತಿಲ್ಲ. ಆದರೆ, ಹಾಪ್‌ಕಾಮ್ಸ್‌ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಗ್ರಾಹಕರಲ್ಲಿ ತಕ್ಕಮಟ್ಟಿಗೆ ತೃಪ್ತಿ ಇದೆ. 1.3 ಕೋಟಿ ಜನರಿಗೆ ನೆಲೆ ಕಲ್ಪಿಸಿರುವ ಬೆಂಗಳೂರು ನಗರ, ಹಣ್ಣು– ತರ ಕಾರಿಗೂ ದೊಡ್ಡ ಮಾರುಕಟ್ಟೆ. ಕೇರಳ ದಿಂದ ವಲಸೆ ಬಂದು ಸಣ್ಣಪುಟ್ಟ ತರಕಾರಿ ಅಂಗಡಿ ತೆರೆದು ಲಾಭ ಗಳಿಸುವ ಸಾವಿರಾರು ವರ್ತಕರಿದ್ದಾರೆ. ಅವರಿಗೂ ಹಾಪ್‌ಕಾಮ್ಸ್ ದರಗಳಲ್ಲಿ ಹೆಚ್ಚಿನ ವ್ಯತ್ಯಾಸ ಇಲ್ಲ. ಬೆಂಗಳೂರು ಹಾಪ್‌ಕಾಮ್ಸ್‌ ವ್ಯಾಪ್ತಿಯಲ್ಲಿ 225 ಶಾಶ್ವತ ಮಳಿಗೆಗಳಿದ್ದು, ಅವು ತೆವಳುತ್ತಾ ವಹಿವಾಟು ನಡೆಸುತ್ತಿವೆ. ಸಂಸ್ಥೆಯು ರೈತರಿಂದ ನಿತ್ಯ ಗರಿಷ್ಠ 100 ಟನ್‌ಗಳಷ್ಟನ್ನು ಮಾತ್ರ ಖರೀದಿಸುತ್ತಿದೆ.

ಸೀಮಿತ ಮಾರಾಟ ವ್ಯವಸ್ಥೆ ಗಮನದಲ್ಲಿಟ್ಟುಕೊಂಡು ಬೇಡಿಕೆ ಆಧಾರದಲ್ಲಿ ಹಾಪ್ ಕಾಮ್ಸ್ ರೈತರಿಂದ ಹಣ್ಣು, ತರಕಾರಿ ಖರೀದಿಸುತ್ತಿದೆ. ಇತರೆ ಖಾಸಗಿ ಖರೀದಿದಾರರಂತೆ ಮತ್ತೊಂದು ಖರೀದಿ ಕೇಂದ್ರದಂತೆ ಇದೆಯೇ ಹೊರತು, ರೈತರ ಉತ್ಪನ್ನಗಳಿಗೆ ಖಚಿತ ಮಾರುಕಟ್ಟೆ ಒದಗಿಸುವ ಸಂಸ್ಥೆಯಾಗಿ ಉಳಿದಿಲ್ಲ. ಐದು ಜಿಲ್ಲೆಗಳಲ್ಲಿ ವ್ಯಾಪಿಸಿರುವ ಬೆಂಗ ಳೂರು ಹಾಪ್‌ಕಾಮ್ಸ್‌ನ ರೈತ ಸದಸ್ಯರು 6780 ಮಾತ್ರ. ಹೊಸ ರೈತರು ಸದಸ್ಯತ್ವ ಪಡೆದು ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ಕಂಡುಕೊಳ್ಳುವ ಸಾಧ್ಯತೆ ಕಾಣುತ್ತಿಲ್ಲ. ಹೀಗಾಗಿ, ಇದು ಬೆರಳೆಣಿಕೆ ರೈತರಿಗೆ ಮಾತ್ರ ಅನುಕೂಲ ಕಲ್ಪಿಸಿದೆ ಎಂದು ರೈತರೇ ದೂರುತ್ತಾರೆ.

‘ಕೆಲವು ರೈತರು ಹಾಪ್‌ಕಾಮ್ಸ್‌ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಹೆಚ್ಚಿನ ಸಂದರ್ಭದಲ್ಲಿ ಅವರಿಂದ ಮಾತ್ರ ಸಂಸ್ಥೆ ಹಣ್ಣು/ ತರಕಾರಿ ಖರೀದಿಸುತ್ತದೆ. ಯಾವುದಾದರೂ ತರಕಾರಿಗೆ ಅಥವಾ ಹಣ್ಣಿಗೆ ಬೇಡಿಕೆ ಸೃಷ್ಟಿಯಾದಾಗ ಮಾತ್ರ ನಮ್ಮಂತಹ ರೈತರಿಂದಲೂ ಉತ್ಪನ್ನ ಖರೀದಿಸಲು ಮುಂದಾಗುತ್ತದೆ’ ಎಂಬುದು ಅನೇಕ ರೈತರು ದೂರು.

‘ಒಂದು ಟನ್‌ ಬಾಳೆಹಣ್ಣು ಮಾರಲು ಮುಂದಾದರೆ, ಬೇಡಿಕೆ ಇಲ್ಲ ಮುಂದಿನ ವಾರ ತನ್ನಿ ಎನ್ನುತ್ತಾರೆ. ನಾವು 1,000 ಕೆ.ಜಿ ಹಣ್ಣು ನೀಡಿದರೂ 950 ಕೆ.ಜಿ.ಗೆ ಮಾತ್ರ ಬಿಲ್‌ ನೀಡುತ್ತಾರೆ. ತಂದ ಹಣ್ಣು ಖಾಲಿಯಾದರೆ ಸಾಕು ಎಂದು ಮಾರುವ ಸ್ಥಿತಿ ಇದೆ’ ಎಂದು ರೈತರೊಬ್ಬರು ಬೇಸರ ತೋಡಿಕೊಂಡರು.

‘ಹಾಪ್‌ಕಾಮ್ಸ್‌ಗೆ ತರಕಾರಿ ಹಾಕಿದರೆ ನೀಡಿದಷ್ಟು ತೂಕಕ್ಕೆ ಬಿಲ್‌ ಕೊಡುವುದಿಲ್ಲ. ಚಿಲ್ಲರೆ ಮಾರಾಟ ಮಾಡುವಾಗ ತೂಕದಲ್ಲಿ ಏರುಪೇರಾಗುತ್ತದೆ ಎಂಬ ನೆಪ ಹೇಳಿ 110 ಕೆ.ಜಿ. ತರಕಾರಿ ಪಡೆದರೆ 100 ಕೆ.ಜಿ.ಗೆ ಮಾತ್ರ ಬಿಲ್‌ ನೀಡುತ್ತಾರೆ. ಖಾಸಗಿ ಕೇಂದ್ರಗಳಲ್ಲಿ ದಲ್ಲಾಳಿಗಳಿಗೆ ಕೊಡುವ ಹಣವನ್ನು ಈ ರೀತಿ ಕಳೆದು ಕೊಳ್ಳುತ್ತೇವೆ’ ಎಂಬುದು ಅವರ ಅಳಲು.

‘ಖಾಸಗಿ ಮಾರುಕಟ್ಟೆಗಳಲ್ಲಿ ದಲ್ಲಾಳಿಗಳಿಗೆ ಶೇ 10 ಕಮಿಷನ್‌ ನೀಡಬೇಕು. ಹಾಪ್‌ಕಾಮ್ಸ್‌ನಲ್ಲಿ ಅಂತಹ ಪರಿಪಾಠವಿಲ್ಲ. ಇದರಿಂದ ರೈತರಿಗೆ ಅನುಕೂಲವೇ ಜಾಸ್ತಿ. ಹಣ್ಣು ತರಕಾರಿ ಮಾರಾಟ ಒಂದು ದಿನ ತಡವಾದರೂ ತೂಕ ಕಳೆದುಕೊಳ್ಳುತ್ತವೆ. ಖಾಸಗಿಯವರಿಗೆ ಮಾರಾಟ ಮಾಡಿದಾಗಲೂರೈತರು ನೈಜ ತೂಕದಷ್ಟೇ ಪ್ರಮಾಣದಲ್ಲಿ ಬಿಲ್‌ ಪಾವತಿ ಆಗುವುದಿಲ್ಲ. ಹಣ್ಣು ತರಕಾರಿ ವ್ಯಾಪಾರದಲ್ಲಿ ಇದು ಸ್ವಾಭಾವಿಕ’ ಎಂಬುದು ಅಧಿಕಾರಿಗಳ ಸಮಜಾಯಿಷಿ.

ಸಕಾಲದಲ್ಲಿ ಬಿಲ್‌ ಸಿಗುವುದಿಲ್ಲ. ಕೆಲವೊಮ್ಮೆ ಮುಂಜಾನೆ ತರಕಾರಿ ಹಾಕಿದರೂ ಸಂಜೆವರೆಗೆ ಬಿಲ್‌ಗೆ ಕಾಯಬೇಕು. ದೊಡ್ಡ ಪ್ರಮಾಣದಲ್ಲಿ ತರಕಾರಿ ಮಾರಿದರೆ ಬಿಲ್‌ಗೆ ವಾರಗಟ್ಟಲೆ ಕಾಯಬೇಕು ಎಂಬುದು ರೈತರ ಇನ್ನೊಂದು ಆರೋಪ. ‘ರೈತರ ಸಣ್ಣ ಬಿಲ್‌ಗಳನ್ನು ತಕ್ಷಣ ನೀಡುತ್ತೇವೆ. ₹ 25 ಸಾವಿರದವರೆಗಿನ ಬಿಲ್‌ಗಳನ್ನು 15 ದಿನಗಳಲ್ಲಿ, ₹ 25 ಸಾವಿರಕ್ಕೂ ಹೆಚ್ಚಿನ ಬಿಲ್‌ಗಳನ್ನು ತಿಂಗಳ ಒಳಗೆ ಪಾವತಿಸುತ್ತೇವೆ’ ಎನ್ನುತ್ತಾರೆ ಹಾಪ್‌ಕಾಮ್ಸ್‌ ಅಧಿಕಾರಿಗಳು. ಒಟ್ಟಾರೆ ರೈತಸ್ನೇಹಿ ದೈತ್ಯ ಸಂಸ್ಥೆಯಾಗಿ ಬೆಳೆಯಬಹುದಾಗಿದ್ದ ಎಲ್ಲ ಅವಕಾಶಗಳನ್ನೂ ಕೈಚೆಲ್ಲಿರುವ ಹಾಫ್ ಕಾಮ್ಸ್ ಅವಸಾನದ ಹಾದಿಯಲ್ಲಿದೆ.

ಹಾರ್ಟಿ ಬಜಾರ್‌– ಹೊಸ ಪ್ರಯತ್ನ
ರಿಲಯನ್ಸ್‌ ಫ್ರೆಷ್‌, ಫಾರ್ಮ್‌ ಫ್ರೆಷ್‌, ಮೋರ್ ಮುಂತಾದ ಖಾಸಗಿ ಕಂಪನಿಗಳಿಗೆ ಪೈಪೋಟಿ ಎದುರಿಸಲು ಹಾಪ್‌ಕಾಮ್ಸ್‌ ‘ಹಾರ್ಟಿ ಬಜಾರ್‌’ ಎಂಬ ಆಧುನಿಕ ಮಳಿಗೆಗಳನ್ನು ಆರಂಭಿಸಿದೆ. ಸದ್ಯಕ್ಕೆ ಎಲೆಕ್ಟ್ರಾನಿಕ್‌ ಸಿಟಿ, ಬಾಣಸವಾಡಿ ಬಳಿಯ ಕಸ್ತೂರಿ ನಗರ ಹಾಗೂ ಸದಾಶಿವನಗರದಲ್ಲಿ ಹಾರ್ಟಿ ಬಜಾರ್‌ಗಳಿವೆ.

’ಹಾರ್ಟಿ ಬಜಾರ್‌ಗಳಲ್ಲಿ ಹಣ್ಣು ತರಕಾರಿ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಗ್ರಾಹಕರ ಎಲ್ಲ ರೀತಿಯ ಬೇಡಿಕೆಗಳನ್ನು ಪೂರೈಸುವ ಪ್ರಯತ್ನ ಮಾಡಿದ್ದೇವೆ. ಸೂಪರ್‌ ಮಾರ್ಕೆಟ್‌ ರೀತಿ ಇವು ಕಾರ್ಯನಿರ್ವಹಿಸುತ್ತವೆ. ನಾನಾ ಹಣ್ಣು ತರಕಾರಿಗಳು, ಒಣಹಣ್ಣುಗಳು, ಸಾಂಬಾರ ಪದಾರ್ಥಗಳು ಹಾಗೂ ಮೌಲ್ಯವರ್ಧಿತ ಉತ್ಪನ್ನಗಳು ಇಲ್ಲಿ ಲಭ್ಯ. ಇವುಗಳ ಪ್ರದರ್ಶನವೂ ಆಕರ್ಷಕವಾಗಿದ್ದು, ಗ್ರಾಹಕರನ್ನು ಸೆಳೆಯುವಂತಿದೆ’ ಎಂದು ಹಾಪ್‌ಕಾಮ್ಸ್‌ ಅಧಿಕಾರಿಗಳು ಮಾಹಿತಿ ನೀಡಿದರು.

ಕೋಲ್ಡ್‌ ಸ್ಟೋರೇಜ್‌ ಇಲ್ಲ!
ಬೆಂಗಳೂರು ನಗರದಲ್ಲಿ 225 ಮಳಿಗೆಗಳನ್ನು ಹೊಂದಿರುವ ಹಾಪ್‌ಕಾಮ್ಸ್‌ ಇದುವರೆಗೂ ಒಂದೇ ಒಂದು ಕೋಲ್ಡ್‌ ಸ್ಟೋರೇಜ್‌ ಘಟಕವನ್ನು ಹೊಂದಿಲ್ಲ.

‘ಕೇಂದ್ರ ಸರ್ಕಾರದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (ಆರ್‌ಕೆವಿವೈ) ₹ 6 ಕೋಟಿ ನೆರವಿನಿಂದ 20 ಕಡೆ ಕೋಲ್ಡ್ ಸ್ಟೊರೇಜ್‌ಗಳನ್ನು ಸ್ಥಾಪಿಸಲು ಪ್ರಸ್ತಾವ ಸಿದ್ಧಪಡಿಸಿದ್ದೇವೆ. ಆನ್‌ಲೈನ್ ಮಾರುಕಟ್ಟೆ ಪ್ರವೇಶಿಸಲು ಮತ್ತು ಸಂಚಾರಿಮಳಿಗೆ ಸಂಖ್ಯೆ ಹೆಚ್ಚಿಸಲು ಸಿದ್ಧತೆ ನಡೆದಿದೆ’ ಎಂದು ಹಾಪ್‌ಕಾಮ್ಸ್‌ ವ್ಯವಸ್ಥಾಪಕ ನಿರ್ದೇಶಕ ಬಿ.ಎನ್‌.ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT