ಶನಿವಾರ, ಏಪ್ರಿಲ್ 17, 2021
23 °C
ಅಕ್ರಮಕ್ಕೆ ನೂರೆಂಟು ಮಾರ್ಗ l ಭ್ರೂಣ ತಿನ್ನಿಸಲು ನಾಯಿ ಸಾಕಿದ್ದ ವೈದ್ಯ ದಂಪತಿ l ಆಸ್ತಿಗಾಗಿ ವಾಮಮಾರ್ಗ

ಹೆಣ್ಣು ಭ್ರೂಣ ಹತ್ಯೆ | ಕರುಳಬಳ್ಳಿ ಕತ್ತರಿಸುವ ಮೊದಲೇ ಕೊರಳು ಕೊಯ್ಯುವ ಕಿರಾತಕರು

ಮಂಜುಶ್ರೀ Updated:

ಅಕ್ಷರ ಗಾತ್ರ : | |

Prajavani

Monday, Friday... ಇದರಲ್ಲೇನು ವಿಶೇಷ ? ಸೋಮವಾರ, ಶುಕ್ರವಾರ... ವಾರದ ಹೆಸರುಗಳು ಅಂದುಕೊಳ್ಳುವವರೇ ಹೆಚ್ಚು. ಆದರೆ, ಇವು ಬರೀ ವಾರದ ಹೆಸರುಗಳಾಗಿ ಉಳಿದಿಲ್ಲ. ಅದನ್ನೂ ಮೀರಿ ಗಂಡು ಮತ್ತು ಹೆಣ್ಣಿನ ಲಿಂಗವನ್ನು ಸೂಚಿಸುವ ಕೋಡ್‌ವರ್ಡ್‌ಗಳಾಗಿ ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ಇವು ಜನಪ್ರಿಯ.

ಗಂಡು ಮಗುವಿಗೆ Monday, ಹೆಣ್ಣು ಮಗುವಿಗೆ Friday ಅಂತಲೂ ಸೂಚ್ಯವಾಗಿ ಕರೆಯಲಾಗುತ್ತಿದೆ. ಬೆಂಗಳೂರು ನಗರದಲ್ಲಿ ಗಂಡಿಗೆ ಶಿವ ಹೆಣ್ಣಿಗೆ ಪಾರ್ವತಿ ಎಂದೂ ಕರೆಯಲಾಗುತ್ತದೆ. ಆಯಾ ಜಿಲ್ಲೆ, ಪ್ರದೇಶಕ್ಕೆ ಅನುಗುಣವಾಗಿ ಹೂವು–ಕಾಯಿ, ಗುಲಾಬಿ–ನೀಲಿ, ಜಿಲೇಬಿ–ಪೇಢಾ ಹೀಗೆ ಈ ಕೋಡ್‌ವರ್ಡ್‌ ಜಾರಿಯಲ್ಲಿವೆ. 

ಸ್ಕ್ಯಾನಿಂಗ್  ಕೊಠಡಿಯಲ್ಲಿ ಸ್ಕ್ಯಾನಿಂಗ್ ಯಂತ್ರ, ತಜ್ಞ ವೈದ್ಯ, ಸಹಾಯಕ ಬಿಟ್ಟರೆ ಇತರ ಉಪಕರಣಗಳು ಇರಬಾರದು ಎಂಬ ನಿಯಮವಿದೆ. ಆದರೆ, ಬಹುತೇಕ ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಇದು ಪಾಲನೆ ಆಗುತ್ತಿಲ್ಲ. ಗರ್ಭಿಣಿಗೆ ಮಗುವಿನ ಚಲನವಲನಗಳನ್ನು ವೈದ್ಯರ ಸ್ಕ್ಯಾನಿಂಗ್ ಯಂತ್ರದಲ್ಲೇ ತೋರಿಸಬೇಕೆಂಬ ನಿಯಮ ಮೀರಿ ದೊಡ್ಡ ಪರದೆ ಟಿವಿ ಸ್ಕ್ಕೀನ್‌ಗಳನ್ನೇ ಹಾಕಲಾಗಿದೆ. ಮಗುವಿನ ಪ್ರತಿ ಚಲನವಲನವೂ ಅಲ್ಲಿ ಸೂಕ್ಷ್ಮವಾಗಿ ಗೋಚರಿಸುತ್ತದೆ. ಸ್ಕ್ಯಾನಿಂಗ್‌ ವರದಿಯನ್ನು ಮುದ್ರಣ ಪ್ರತಿಯಲ್ಲಿ ಮಾತ್ರ ನೀಡಬೇಕು ಎಂಬ ನಿಯಮ ಮೀರಿ 3ಡಿ, 4ಡಿ ಸ್ಕ್ಯಾನಿಂಗ್ ಸಿ.ಡಿ.ಗಳನ್ನೂ ನೀಡಲಾಗುತ್ತಿದೆ.

ಯಾವುದೇ ಫೋಟೊ ಹಾಕಬಾರದು ಎಂಬ ನಿಯಮ ಉಲ್ಲಂಘಿಸಿ  ಶಿವ–ಪಾರ್ವತಿ ಸೇರಿದಂತೆ ಇನ್ನಿತರ ಗಂಡು–ಹೆಣ್ಣು ಲಿಂಗ ಸೂಚಿಸುವ ದೇವರ ಫೋಟೊಗಳನ್ನು ತೂಗುಹಾಕಲಾಗುತ್ತಿದೆ. ‘ಇಲ್ಲಿ ಭ್ರೂಣಲಿಂಗ ಪತ್ತೆ ಮಾಡುವುದಿಲ್ಲ ಮತ್ತೆ ಹೆಣ್ಣು ಭ್ರೂಣ ಹತ್ಯೆ ಮಾಡಲಾಗದು’ ಎನ್ನುವ ಸ್ಟಿಕ್ಕರ್‌ಗಳನ್ನು ನೆಪಮಾತ್ರಕ್ಕೆ ಅಂಟಿಸಲಾಗಿರುತ್ತದೆ. ವೃತ್ತಿಧರ್ಮ ಮೀರಿ ಲಿಂಗ ಪತ್ತೆ ಮಾಡಿ ಪೋಷಕರಿಗೆ ತಿಳಿಸುವುದು ನಿತ್ಯವೂ ನಡೆಯುತ್ತಿವೆ.

ರಾಜ್ಯದ ಮಂಡ್ಯ, ತುಮಕೂರು, ಪಾವಗಡ, ವಿಜಯಪುರ ಮತ್ತು ಉತ್ತರ ಕರ್ನಾಟಕದ ಗಡಿಭಾಗಗಳಲ್ಲಿ ಭ್ರೂಣಲಿಂಗ ಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆ ಅವ್ಯಾಹತವಾಗಿ ನಡೆಯುತ್ತಿದೆ. ಇದು ಗೊತ್ತಿದ್ದರೂ ಸರ್ಕಾರ ಕಣ್ಮುಚ್ಚಿ ಕುಳಿತಿದೆ.ಸೂಕ್ತ ಸಾಕ್ಷ್ಯಾಧಾರವಿಲ್ಲದೇ ಏನೂ ಮಾಡಲಾಗದು ಎಂದು ಅರಿವಿರುವ ಈ ದುರುಳರು, ಕಾಗದ ಪತ್ರದಲ್ಲಿ ‘ಸೇಫ್ ಜೋನ್‌’ಗೆಂಬಂತೆ ರೋಗಿಗಳಿಂದ ಸಹಿ ಹಾಕಿಸಿಕೊಂಡು ಆರಾಮವಾಗಿರುತ್ತಾರೆ. 

ಆಸ್ತಿ ಹಕ್ಕಿಗಾಗಿ ಬಸಿರಾದವರ ಕಥೆ!: ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವ ಆ ಮಹಿಳೆಯ ವಯಸ್ಸು 50. ಅವರಿಗೆ 24ರ ಹರೆಯದ ಒಬ್ಬಳೇ ಮಗಳಿದ್ದಾಳೆ. ಗಂಡನ ಮನೆ ಕಡೆ ಅಪಾರ ಆಸ್ತಿ ಹೊಂದಿರುವ ಆ ಮಹಿಳೆಗೆ ವಯಸ್ಸಾದಂತೆ ಆಸ್ತಿ ಕೈತಪ್ಪುವ ಭೀತಿ ಹೆಚ್ಚಾಯಿತು. ತನ್ನದೇ ಸ್ವಂತ ಗಂಡು ಮಗುವಿದ್ದರೆ ಆಸ್ತಿ ತಮ್ಮಲ್ಲೇ ಉಳಿದೀತೆಂಬ ದುರಾಸೆ ಅವರದ್ದು. 50 ವರ್ಷ ವಯಸ್ಸಿನ ನಂತರವೂ ಗಂಡುಮಗುವಿನ ಆಸೆಗಾಗಿ ಗರ್ಭಿಣಿಯಾದ ಆ ಮಹಿಳೆ ಸತತ ಮೂರು ಬಾರಿ ಗರ್ಭಪಾತ ಮಾಡಿಸಿಕೊಂಡರು. ಅದಕ್ಕಾಗಿ ಅವರು ಮೊರೆಹೊಕ್ಕಿದ್ದು ರಾಜಧಾನಿಯಲ್ಲಿ ಪರಿಚಿತರ ಪ್ರತಿಷ್ಠಿತ ಖಾಸಗಿ ನರ್ಸಿಂಗ್ ಹೋಂಗೆ.

ಪ್ರತಿ ಬಾರಿ ಗರ್ಭ ಧರಿಸಿದಾಗಲೂ ಭ್ರೂಣಲಿಂಗ ಪತ್ತೆ ಮಾಡಿ, ಅದು ಹೆಣ್ಣು ಭ್ರೂಣ ಅಂತ ತಿಳಿದ ತಕ್ಷಣವೇ ಸದ್ದಿಲ್ಲದೇ ಆಕೆ ಗರ್ಭಪಾತ ಮಾಡಿಸಿಕೊಳ್ಳುತ್ತಿದ್ದರು. ನಾಲ್ಕನೇ ಬಾರಿ ಗರ್ಭ ಕಟ್ಟಿದಾಗ ಮಗು ಗಂಡೆಂದು ತಿಳಿದು ಸಂಭ್ರಮಿಸಿದ್ದ ಆಕೆಗೆ ಆ ಗರ್ಭ ನಿಲ್ಲದೇ, ಮೂರು ತಿಂಗಳಿಗೇ ನೈಸರ್ಗಿಕವಾಗಿ ಗರ್ಭಪಾತವಾಯಿತು! ಪ್ರಕೃತಿಗೆ ವಿರುದ್ಧವಾಗಿ ಗಂಡು ಮಗುವಿನ ಆಸೆಗಾಗಿ ಗರ್ಭ ಧರಿಸಿದ್ದ ಅವರಿಗೆ ಪ್ರಕೃತಿಯೇ ತಕ್ಕಪಾಠ ಕಲಿಸಿತ್ತು!.

ಲಿಂಗ ಪತ್ತೆ ಮಾಡದಿದ್ದರೂ ಶಿಕ್ಷೆಗೊಳಗಾದ ವೈದ್ಯ

ಇನ್ನು ಕೆಲ ಪ್ರಕರಣಗಳಲ್ಲಿ ವೈದ್ಯರು ಭ್ರೂಣಲಿಂಗ ಪತ್ತೆ– ಹೆಣ್ಣು ಭ್ರೂಣಹತ್ಯೆ ಮಾಡದಿದ್ದರೂ ರೋಗಿಗಳ ದೂರಿನಿಂದ ಶಿಕ್ಷೆಗೊಳಗಾದ ಉದಾಹರಣೆಗಳೂ ಇವೆ.

ಪಾವಗಡದ ಖಾಸಗಿ ನರ್ಸಿಂಗ್ ಹೋಂವೊಂದರಲ್ಲಿ ಹಳ್ಳಿಗಾಡಿನ ಮಹಿಳೆಯೊಬ್ಬರು ಸ್ಕ್ಯಾನಿಂಗ್ ಮಾಡಿಸಿದ್ದರು. ಅಲ್ಲಿನ ವೈದ್ಯರ ಬಳಿ ಲಿಂಗಪತ್ತೆ ಮಾಡಿ ಎಂದು ಗೋಗರೆದರೂ ಆ ವೈದ್ಯ ಭ್ರೂಣಲಿಂಗ ಪತ್ತೆ ಮಾಡಲು ನಿರಾಕರಿಸಿದ್ದರು. ಕುಲದೈವದ ಮೊರೆ ಹೊಕ್ಕಿದ್ದ ಆ ಮಹಿಳೆಯ ಕುಟುಂಬಕ್ಕೆ ದೇವರು ಹೆಣ್ಣೇ ಹುಟ್ಟುವುದಾಗಿ ಶಾಸ್ತ್ರ ಹೇಳಿತ್ತಂತೆ. ನಕಲಿವೈದ್ಯರ ಬಳಿ ಆ ಮಹಿಳೆಯನ್ನು ಕರೆದೊಯ್ದ ಕುಟುಂಬ ಅಕ್ರಮವಾಗಿ ಗರ್ಭಪಾತ ಮಾಡಿಸಿತ್ತು. ಆದರೆ, ಅದು ಸಫಲವಾಗದೇ ತೀವ್ರ ರಕ್ತಸ್ರಾವಕ್ಕೊಳಗಾಗಿದ್ದ ಆ ಮಹಿಳೆಯನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತು. ಮಹಿಳೆ ಬದುಕುಳಿಯಲಿಲ್ಲ. ಈ ಬಗ್ಗೆ ಪೊಲೀಸರು ಕುಟುಂಬದವರನ್ನು ವಿಚಾರಿಸಿದಾಗ, ಜೈಲುಶಿಕ್ಷೆ ತಪ್ಪಿಸಿಕೊಳ್ಳಲು ಆ ಕುಟುಂಬ ತಪ್ಪೇ ಮಾಡದ ವೈದ್ಯರ ವಿರುದ್ಧ ದೂರು ನೀಡಿತ್ತು.

ಪರಿಣಾಮ ಜಿಲ್ಲಾ ಜಾಗೃತ ದಳ, ಆ ವೈದ್ಯರ ವೈದ್ಯಕೀಯ ನೋಂದಣಿ ಮತ್ತು ಸ್ಕ್ಯಾನಿಂಗ್ ಸೆಂಟರ್ ನೋಂದಣಿಯನ್ನೂ ರದ್ದುಪಡಿಸಿತ್ತು. ಆ ವೈದ್ಯ ಕಾನೂನು ಹೋರಾಟ ನಡೆಸಿ ನಿರಪರಾಧಿಯೆಂದು ಸಾಬೀತುಪಡಿಸುವಲ್ಲಿ ಸಫಲರೇನೋ ಆದರು. ಆದರೆ, ಅಷ್ಟೊತ್ತಿಗಾಗಲೇ ಆ ವೈದ್ಯ ಮತ್ತು ಕ್ಲಿನಿಕ್‌ ಹೆಸರಿಗೆ ಧಕ್ಕೆಯಾಗಿತ್ತು.

ಭ್ರೂಣ ತಿನ್ನಿಸಲು ನಾಯಿ ಸಾಕಿದ್ದ ವೈದ್ಯರು!

ಗುಜ್ಜರ್ ಮದುವೆ ಪ್ರಕರಣದ ತನಿಖೆಗಾಗಿ ಹೈದರಾಬಾದ್ ಕರ್ನಾಟಕದ ಜಿಲ್ಲೆಗಳಿಗೆ ಮಹಿಳಾ ಆಯೋಗದ ಹಿಂದಿನ ಅಧ್ಯಕ್ಷೆ ಮಂಜುಳಾ ಮಾನಸ ಭೇಟಿ ಕೊಟ್ಟಾಗ, ಅಲ್ಲಿನವರು ಹೇಳಿದ ಕಥೆ ಗಟ್ಟಿಗುಂಡಿಗೆಯನ್ನೂ ನಡುಗಿಸುವಂತಿದೆ.

ವೈದ್ಯದಂಪತಿಗಳಿಬ್ಬರು ಹೈದರಾಬಾದ್ ಗಡಿಭಾಗದಲ್ಲಿ ಖಾಸಗಿ ನರ್ಸಿಂಗ್ ಹೋಂ ನಡೆಸುತ್ತಿದ್ದರು. ಸರ್ಕಾರಿ ವೃತ್ತಿಯಲ್ಲಿದ್ದರೂ ಖಾಸಗಿಯಾಗಿ ಪ್ರಾಕ್ಟೀಸ್ ಮಾಡುತ್ತಿದ್ದ ವಿಷಯ ಗೊತ್ತಾಗಿ ಕೆಲಸದಿಂದ ತೆಗೆದುಹಾಕಲಾಗಿತ್ತು. ದೊಡ್ಡ ಮನೆಯಲ್ಲೇ ನರ್ಸಿಂಗ್ ಹೋಂ ನಡೆಸುತ್ತಿದ್ದ ವೈದ್ಯದಂಪತಿ, ಮನೆಯ ತಳಮಹಡಿಯ ವಿಶಾಲವಾದ ಜಾಗದಲ್ಲಿ ಹತ್ತರಿಂದ ಹನ್ನೆರಡು ಜರ್ಮನ್ ಶೆಫರ್ಡ್‌ ನಾಯಿಗಳನ್ನು ಸಾಕಿದ್ದರು.

ಸುತ್ತಮುತ್ತಲಿನ ಜನರು ಇದು ವೈದ್ಯರ ಪ್ರಾಣಿಪ್ರೀತಿ ಅಂದುಕೊಂಡಿದ್ದರು. ಆದರೆ, ಈ ಬಗ್ಗೆ ಅನುಮಾನಗೊಂಡ ಸ್ಥಳೀಯ ಮಹಿಳೆಯೊಬ್ಬರು ತಮ್ಮ ಎಂಜಿನಿಯರ್ ಮಗನ ನೆರವಿನಿಂದ ತಳಮಹಡಿಯಲ್ಲಿ ಗೊತ್ತಾಗದಂತೆ ಸೂಕ್ಷ್ಮಕ್ಯಾಮೆರಾ ಅಳವಡಿಸಿ ಪರಿಶೀಲಿಸಿದಾಗ ಬೆಚ್ಚಿಬೀಳುವ ಸತ್ಯವೊಂದು ಅನಾವರಣಗೊಂಡಿತ್ತು.

ಸರ್ಕಾರಿ ನೌಕರಿ ತೊರೆದಿದ್ದ ಈ ದಂಪತಿ ಮನೆಯಲ್ಲೇ ಸ್ಕ್ಯಾನಿಂಗ್ ಸೆಂಟರ್‌ ಮೂಲಕ ಭ್ರೂಣಲಿಂಗ ಪತ್ತೆ ಹಚ್ಚಿ, ಹೆಣ್ಣು ಭ್ರೂಣವಿದ್ದರೆ ಅದನ್ನು ಗರ್ಭಪಾತ ಮಾಡುವ ಕೆಲಸವನ್ನೂ ಸದ್ದಿಲ್ಲದೇ ಮಾಡುತ್ತಿದ್ದರು. ಮನೆ ಊರಿನ ಹೊರಗಿದ್ದ ಕಾರಣ ಯಾರಿಗೂ ಅನುಮಾನ ಬರುತ್ತಿರಲಿಲ್ಲ. ಗರ್ಭಪಾತ ಮಾಡಲು ರೋಗಿಗಳಿಂದ ಸಾವಿರಾರು ರೂಪಾಯಿ ವಸೂಲಿ ಮಾಡುತ್ತಿದ್ದ ಈ ವೈದ್ಯರು ಗರ್ಭಪಾತದ ಮೂಲಕ ಹೊರತೆಗೆದ ಹೆಣ್ಣು ಭ್ರೂಣಗಳನ್ನು ಹೊರಗೆ ವಿಲೇವಾರಿ ಮಾಡಿದರೆ ಸಮಸ್ಯೆಯಾಗುತ್ತದೆಂದು ಮನಗಂಡಿದ್ದರು. ಅದಕ್ಕಾಗಿಯೇ ಹತ್ತಾರು ಜರ್ಮನ್ ಶೆಫರ್ಡ್ ನಾಯಿಗಳನ್ನು ಸಾಕಿದ್ದರು ಮತ್ತು ಅವುಗಳಿಗೆ ಆಹಾರವಾಗಿ ಹೆಣ್ಣುಭ್ರೂಣಗಳನ್ನೇ ಕೊಡುತ್ತಿದ್ದರಂತೆ.

ಶಿಕ್ಷಾರ್ಹ ಅಪರಾಧ

* ಮೊದಲ ಅಪರಾಧಕ್ಕೆ: 3 ವರ್ಷಗಳ ಜೈಲು ಮತ್ತು ₹ 10,000 ದಂಡ

* ನಂತರದ ಅಪರಾಧಕ್ಕೆ: 5 ವರ್ಷಗಳ ಕಾರಾಗೃಹವಾಸ ಮತ್ತು ₹ 50,000 ದಂಡ

* ಇಂತಹ ಕೃತ್ಯಕ್ಕೆ ಸಹಾಯ ಕೋರುವ ವ್ಯಕ್ತಿಯೂ ಶಿಕ್ಷಾರ್ಹ

* ಮೊದಲ ಅಪರಾಧಕ್ಕೆ: 3 ವರ್ಷಗಳ ಕಾರಾಗೃಹ ಮತ್ತು ₹ 50,000 ದಂಡ

* ನಂತರದ ಅಪರಾಧಕ್ಕೆ: 5 ವರ್ಷಗಳ ಕಾರಾಗೃಹ ಮತ್ತು ₹ 1 ಲಕ್ಷ ದಂಡ
(ಈ ಕಾನೂನಿನ ಅಡಿಯಲ್ಲಿ ಎಲ್ಲ ಅಪರಾಧ ಜಾಮೀನಿಗೆ ಅರ್ಹವಲ್ಲ ಮತ್ತು ರಾಜಿ ಇಲ್ಲ)

ವೈದ್ಯಕೀಯ ಗರ್ಭಪಾತ ಕಾನೂನುಬದ್ಧ

ಭಾರತದಲ್ಲಿ ವೈದ್ಯಕೀಯ ಗರ್ಭಪಾತ ಮಾತ್ರ ಶಾಸನಬದ್ಧವಾಗಿದೆ. ಪುರುಷರು ಮತ್ತು ಮಹಿಳೆಯರ ಪ್ರಜನನ ಸ್ವಾತಂತ್ರ್ಯವನ್ನು ಬೆಂಬಲಿಸುವ ನೀತಿ ಇದು. ಗರ್ಭನಿರೋಧಕಗಳ ವೈಫಲ್ಯ, ಅತ್ಯಾಚಾರದಿಂದ ಬಸಿರು, ಮಹಿಳೆಯ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಅಪಾಯಕಾರಿಯಾವಂಥ ಸಂದರ್ಭಗಳಿದ್ದಲ್ಲಿ ವೈದ್ಯಕೀಯ ಗರ್ಭಪಾತ ಕಾಯ್ದೆ (1971)ಪ್ರಕಾರ ಗರ್ಭಪಾತಕ್ಕೆ ಅವಕಾಶವಿದೆ. 

ಗಡಿಯಾಚೆ ‘ಕಾರ್ಯಾಚರಣೆ’

ಬೆಳಗಾವಿ: ನೆರೆಯ ಮಹಾರಾಷ್ಟ್ರಕ್ಕೆ ಹೊಂದಿ ಕೊಂಡಿರುವ ಗಡಿಭಾಗದಲ್ಲಿರುವ ಅಲ್ಟ್ರಾಸೌಂಡ್‌ ಹಾಗೂ ಸ್ಕ್ಯಾನಿಂಗ್‌ ಕೇಂದ್ರಗಳಲ್ಲಿ ಲಿಂಗ ಪತ್ತೆ ಹಾಗೂ ಭ್ರೂಣ ಹತ್ಯೆ ಪ್ರಕರಣಗಳು ಸದ್ದಿಲ್ಲದೆ ವ್ಯಾಪಕವಾಗಿ ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ. ಎರಡೂ ರಾಜ್ಯಗಳ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಎಷ್ಟೇ ಪ್ರಯತ್ನ ಪಟ್ಟರೂ ಇವುಗಳನ್ನು ತಡೆಯಲು ಸಾಧ್ಯವಾಗುತ್ತಿಲ್ಲ!

ಎರಡು ವರ್ಷಗಳ ಹಿಂದೆ ರಾಜ್ಯದ ಗಡಿಯಿಂದ ಕೇವಲ 7 ಕಿ.ಮೀ ದೂರದಲ್ಲಿರುವ ಸಾಂಗ್ಲಿ ಜಿಲ್ಲೆಯ ಮಿರಜ್‌ ತಾಲ್ಲೂಕಿನ ಮೈಶಾಳೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಗರ್ಭಪಾತ ಮಾಡಿಸಿಕೊಂಡ ಬೆಳಗಾವಿ ಜಿಲ್ಲೆಯ ಮಹಿಳೆಯೊಬ್ಬರು ಸಾವಿಗೀಡಾಗಿದ್ದರು. ಈ ಪ್ರಕರಣದಲ್ಲಿ ಕಾಗವಾಡದ ವೈದ್ಯರೊಬ್ಬರು ಭಾಗಿಯಾಗಿರುವುದು ಆತಂಕ ಸೃಷ್ಟಿಸಿತ್ತು. ಈ ವೈದ್ಯನನ್ನು ಬಂಧಿಸಿದ ಪೊಲೀಸರು, ಜೈಲಿಗೆ ಅಟ್ಟಿದ್ದಾರೆ.ಇದಾದ ನಂತರ ಎರಡೂ ರಾಜ್ಯಗಳ ವೈದ್ಯರು ಪ್ರತಿ 3 ತಿಂಗಳಿಗೊಮ್ಮೆ ಸಭೆ ನಡೆಸಿ, ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ.

ಕಾರ್ಯಾಚರಣೆ ಹೇಗೆ?: ಗಡಿಭಾಗದ ಗ್ರಾಮೀಣ ಭಾಗಗಳಲ್ಲಿ ಹಾಗೂ ಕೆಲವೊಂದು ಸಮುದಾಯಗಳಲ್ಲಿ ಗಂಡು ಮಕ್ಕಳ ಬಗ್ಗೆ ವಿಪರೀತ ವ್ಯಾಮೋಹ ಇದೆ. ಇನ್ನೂ ಕೆಲವು ಕಡೆ, ಅಗರ್ಭ ಶ್ರೀಮಂತರು ಗಂಡು ಮಗುವಿನತ್ತ ಒಲವು ಹೊಂದಿದ್ದಾರೆ. ತಮ್ಮ ಆಸ್ತಿಯು ಮಗಳ ಮೂಲಕ ಅಳಿಯನಿಗೆ ಹೋಗುವುದನ್ನು ತಪ್ಪಿಸಲು ಗಂಡು ಮಗು ಬಯಸುತ್ತಾರೆ.

ಇವರು ತಮಗೆ ತೀರ ಆಪ್ತರಾದ ವೈದ್ಯರನ್ನು ಸಂಪರ್ಕಿಸಿ, ಗಡಿಯಾಚೆಗಿನ ಸ್ಕ್ಯಾನಿಂಗ್‌ ಕೇಂದ್ರಗಳಲ್ಲಿ ರಹಸ್ಯವಾಗಿ ಲಿಂಗಪತ್ತೆ ಹಚ್ಚುತ್ತಾರೆ. ಗಡಿಯಾಚೆ ನಡೆಯುವುದರಿಂದ ಇದು ಯಾರ ಗಮನಕ್ಕೂ ಬರುವುದಿಲ್ಲ. ಹಾಗೊಂದು ವೇಳೆ, ಹೆಣ್ಣು ಭ್ರೂಣವಾಗಿದ್ದರೆ, ಗೋಪ್ಯವಾಗಿ ತೆಗೆಸಿಹಾಕುತ್ತಾರೆ (ಮೈಶಾಳೆ ಪ್ರಕಾರ ಇದೇ ರೀತಿ ನಡೆದಿತ್ತು). ಮಹಿಳೆ ಹಾಗೂ ಕುಟುಂಬದ ಹೆಸರನ್ನು ಗೋಪ್ಯವಾಗಿ ಇಡಲಾಗಿರುತ್ತದೆ.

‘ಮಹಾರಾಷ್ಟ್ರದ ವೈದ್ಯಾಧಿಕಾರಿಗಳ ಜೊತೆಗೂಡಿ ನಾವು ಆಗಾಗ ಗಡಿಭಾಗದ ಸ್ಕ್ಯಾನಿಂಗ್‌ ಕೇಂದ್ರಗಳು ಹಾಗೂ ಅಲ್ಟ್ರಾಸೌಂಡ್‌ ಕೇಂದ್ರಗಳನ್ನು ತಪಾಸಣೆಗೆ ಒಳಪಡಿಸುತ್ತಿದ್ದೇವೆ. ಮೇಲಿಂದ ಮೇಲೆ ಸಭೆ ನಡೆಸುತ್ತೇವೆ. ಇಂತಹ ಪ್ರಕರಣಗಳ ಬಗ್ಗೆ ಖಚಿತ ಮಾಹಿತಿ ನೀಡುವವರೆಗೆ ₹ 50,000 ಬಹುಮಾನ ಘೋಷಿಸಿದ್ದೇವೆ. ಅಕ್ರಮ ಭ್ರೂಣ ಹತ್ಯೆ ತಡೆಯಲು ಎಲ್ಲ ಕ್ರಮಕೈಗೊಳ್ಳಲಾಗುತ್ತಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಪ್ಪಾಸಾಹೇಬ ನರಟ್ಟಿ ತಿಳಿಸಿದರು.

ಸ್ಕ್ಯಾನಿಂಗ್ ಸೆಂಟರ್‌ಗೆ ಬೀಗ

ಹಾಸನ: ಚನ್ನರಾಯಪಟ್ಟಣದ ದಂಪತಿಗಳಿಬ್ಬರು, ಹೆಣ್ಣುಭ್ರೂಣ ಹತ್ಯೆಗಾಗಿ ಜುಲೈ10ರಂದು ತುಮಕೂರು ಜಿಲ್ಲೆ ತಿಪಟೂರಿನ ಶ್ರೀವಿಜಯ ನರ್ಸಿಂಗ್ ಹೋಂಗೆ ತೆರಳಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಹಾಸನ ಮತ್ತು ತುಮಕೂರು ಜಿಲ್ಲೆಗಳ ಜಾಗೃತ ದಳಗಳು ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಂಡಿವೆ. ಸ್ಕ್ಯಾನಿಂಗ್ ಸೆಂಟರ್ ನೋಂದಣಿ ರದ್ದುಪಡಿಸಲಾಗಿದೆ. 

ಚಿತ್ರದುರ್ಗ: ಚಳ್ಳಕೆರೆಯ ಲಕ್ಷ್ಮಿ ಶ್ರೀನಿವಾಸ ನರ್ಸಿಂಗ್ ಹೋಮ್ ಮೇಲೆ ಜಾಗೃತದಳ 2019ರ ಜ.31ರಂದು ದಾಳಿ ನಡೆಸಿ ಆರು ತಿಂಗಳ ಗರ್ಭಿಣಿಯ ಭ್ರೂಣ ಪತ್ತೆ ಮಾಡುತ್ತಿರುವುದನ್ನು ‍ಪತ್ತೆ ಹಚ್ಚಿ ವೈದ್ಯರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿ, ಸ್ಕ್ಯಾನಿಂಗ್ ಸೆಂಟರ್ ಗೆ ಬೀಗ ಜಡಿಯಲಾಗಿದೆ.

ಮಾಹಿತಿ ನೀಡಿದರೆ ₹10 ಸಾವಿರ ಬಹುಮಾನ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಿಂಗಾನುಪಾತ ಕುಸಿಯುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ, ಕಾನೂನಿನ ವಿರುದ್ಧವಾಗಿ ಭ್ರೂಣ ಲಿಂಗ ಪತ್ತೆ ಮಾಡುವಂತಹ ಸ್ಕ್ಯಾನಿಂಗ್ ಸೆಂಟರ್‌ಗಳ ಮಾಹಿತಿ ನೀಡಿದವರಿಗೆ ₹10 ಸಾವಿರ ನಗದು ಬಹುಮಾನ ಹಾಗೂ ಪ್ರಶಸ್ತಿ ನೀಡಲು ಮುಂದಾಗಿದೆ.

ಭ್ರೂಣ ಹತ್ಯೆ ಕಾನೂನು ಬಾಹಿರ ಚಟುವಟಿಕೆಯಾಗಿದ್ದರೂ, ಇಂತಹ ಘಟನೆಗಳು ವರದಿಯಾಗುತ್ತಿವೆ. ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಸಾಮಾನ್ಯರಂತೆ ತೆರಳಿ ಪರಿಶೀಲನೆ ನಡೆಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಜಿಲ್ಲೆಯಲ್ಲಿ ಅನೇಕ ಸ್ಕ್ಯಾನಿಂಗ್ ಸೆಂಟರ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತಿ ವಾರ ಆರೋಗ್ಯ ಇಲಾಖೆಯಿಂದ ಅವುಗಳ ತಪಾಸಣೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಸ್ಕ್ಯಾನಿಂಗ್ ಉಪಕರಣ ಬಳಸುತ್ತಿರುವ ಹೃದ್ರೋಗ ತಜ್ಞರು ಹಾಗೂ ಮೂತ್ರಕೋಶ ತಜ್ಞರು, ಅವುಗಳನ್ನು ಸಂಬಂಧಪಟ್ಟ ರೋಗಗಳಿಗೆ ಮಾತ್ರ ಬಳಕೆ ಮಾಡಲಾಗುತ್ತಿದೆ ಎಂದು ನೋಟರಿ ಪ್ರಮಾಣ ಪತ್ರ ಮೂಲಕ ಆರೋಗ್ಯ ಇಲಾಖೆಗೆ ಸಲ್ಲಿಸುವುದನ್ನು ಕಡ್ಡಾಯ ಮಾಡಲಾಗಿದೆ.

* ಇವನ್ನೂ ಓದಿ...
ಸ್ಕ್ಯಾನಿಂಗ್ ‘ವಧಾ’ ಕೇಂದ್ರಗಳು | ಲಿಂಗ ಪತ್ತೆ, ಹೆಣ್ಣುಭ್ರೂಣ ಹತ್ಯೆ ಅವ್ಯಾಹತ 

ಲೆಕ್ಕವಿಲ್ಲದಷ್ಟು ಗರ್ಭಪಾತ ಮಾಡಿಸಿದ್ದೇನೆಂದ ವೈದ್ಯೆ

ಗಂಡಿದ್ದರೂ ಹೆಣ್ಣೆಂದು ಹತ್ಯೆ!

ಹೆಣ್ಣು ಭ್ರೂಣ ಹತ್ಯೆ | ಡಿಎಚ್‌ಒ ಕಚೇರಿಯಲ್ಲಿ ಏಜಂಟರು!

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು