ಗುರುವಾರ , ಆಗಸ್ಟ್ 13, 2020
24 °C
ಪ್ರಕರಣ ಭೇದಿಸಲು ನೆರವಾದವು ರೌಡಿ ಪರೇಡ್‌ಗಳು l ಎಸ್‌ಐಟಿ ಪತ್ತೇದಾರಿ ವಿಧಾನ ರೋಚಕ

ಗೌರಿ ಹಂತಕರ ಜಾಡು ಹಿಡಿದು...

ಎಂ.ಸಿ. ಮಂಜುನಾಥ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗೌರಿ ಲಂಕೇಶ್ ಹತ್ಯೆಯ ಆರೋಪಿ ಅಮೋಲ್ ಕಾಳೆ ಪೊಲೀಸ್ ಬಲೆಗೆ ಬೀಳುತ್ತಿದ್ದಂತೆಯೇ 600 ಮೊಬೈಲ್ ಸಂಖ್ಯೆಗಳು ಏಕಾಏಕಿ ಸ್ವಿಚ್ಡ್‌ ಆಫ್ ಆದವು. ಆದರೆ, ಪ್ರಕರಣ ಭೇದಿಸಲು ಬೇಕಾಗಿದ್ದ ಬಹುತೇಕ ಸುಳಿವುಗಳು ಕಾಳೆಯ ಡೈರಿಯಲ್ಲೇ ಸಿಕ್ಕವು!

ವಿಶೇಷ ತನಿಖಾ ತಂಡವು (ಎಸ್‌ಐಟಿ), ತಾಂತ್ರಿಕ ಹಾಗೂ ಸಾಂಪ್ರದಾಯಿಕ ಶೈಲಿಯ ತನಿಖಾ ವಿಧಾನಗಳನ್ನು ಬಳಸಿಕೊಂಡು ಇಡೀ ಜಾಲದ ಹೆಡೆಮುರಿ ಕಟ್ಟಿದೆ. ಒಬ್ಬೊಬ್ಬರನ್ನೂ ಸೆರೆಹಿಡಿಯಲು ತನಿಖಾ ತಂಡ ಅನುಸುರಿಸಿದ ಪತ್ತೇದಾರಿ ಕ್ರಮವು ಪ್ರತಿ ಹಂತದಲ್ಲೂ ಅಚ್ಚರಿ ಮೂಡಿಸುತ್ತ ಹೋಗುತ್ತದೆ.

ಫೆ.18ರಂದು ಮದ್ದೂರಿನ ನವೀನ್‌ಕುಮಾರ್‌ನನ್ನು ಸೆರೆ ಹಿಡಿದ ಎಸ್‌ಐಟಿ, ಅದಾದ ಮೂರು ತಿಂಗಳ ಬಳಿಕ ಉಡುಪಿಯಲ್ಲಿ ಪ್ರವೀಣ್ ಅಲಿಯಾಸ್ ಸುಜಿತ್‌ನನ್ನು ವಶಕ್ಕೆ ಪಡೆಯಿತು. ‘ಬಾಯ್‌ಸಾಬ್ (ಅಮೋಲ್ ಕಾಳೆ) ಸಭೆಯಲ್ಲಿ ಪಾಲ್ಗೊಳ್ಳಲು ದಾವಣಗೆರೆಗೆ ಬರುತ್ತಿದ್ದಾರೆ’ ಎಂದು ಆತ ಹೇಳಿದ್ದೇ ತಡ, ಸುಜಿತ್‌ನನ್ನು ಕರೆದುಕೊಂಡು ದಾವಣಗೆರೆಗೆ ತೆರಳಿದರು. ಬಾಯ್‌ಸಾಬ್ ಒಬ್ಬನೇ ಸಿಗುತ್ತಾನೆ ಎಂದುಕೊಂಡಿದ್ದ ಪೊಲೀಸರಿಗೆ, ಅಲ್ಲಿ ಅಮಿತ್ ದೆಗ್ವೇಕರ್ ಹಾಗೂ ಮನೋಹರ್ ಯಡವೆ ಕೂಡ ಸಿಕ್ಕಿದ್ದರು. ಆ ನಂತರ ನಡೆದ ಕಾರ್ಯಾಚರಣೆಗಳೇ ರೋಚಕ.

ಎಲ್ಲ ಕಡೆ ರೌಡಿ ಪರೇಡ್: ‘ಕಾಳೆಯ ಡೈರಿಯಲ್ಲಿ 800 ಕೋಡ್‌ವರ್ಡ್‌ಗಳು ಹಾಗೂ 600 ಮೊಬೈಲ್ ಸಂಖ್ಯೆಗಳಿದ್ದವು. ಆತನ ಬಂಧನದ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಅವೆಲ್ಲವೂ ಸ್ವಿಚ್ಡ್‌ ಆಫ್‌ ಆದವು. ಯಾವುದೇ ಮೊಬೈಲ್ ಸ್ವಿಚ್ಡ್ ಆಫ್ ಆದರೂ, ಕಡೆಯದಾಗಿ ಯಾವ ಟವರ್‌ನಿಂದ ಸಂಪರ್ಕ ಪಡೆದಿತ್ತು ಎಂಬುದು ಗೊತ್ತಾಗುತ್ತದೆ. ಆ ವಿವರ ತೆಗೆಸಿದಾಗ ಈ ಜಾಲದ ರಾಜ್ಯದ ಮೂಲೆ ಮೂಲೆಗೂ ಹರಡಿರುವುದು ಸ್ಪಷ್ಟವಾಯಿತು’ ಎಂದು ಎಸ್‌ಐಟಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಗೌರಿಗೆ ಗುಂಡಿಕ್ಕಿದ್ದು ಬಿಲ್ಡರ್ ಎಂದು ಅಮಿತ್ ದೆಗ್ವೇಕರ್ ಹೇಳಿದ್ದ. ಕಾಳೆಯ ಡೈರಿ ಪರಿಶೀಲಿಸಿದಾಗ ‘ಬಿಲ್ಡರ್’ ಎಂಬ ಕೋಡ್‌ವರ್ಡ್‌ನ ಮುಂದೆ ಒಂದು ಮೊಬೈಲ್ ಸಂಖ್ಯೆ ಇತ್ತು. ಅದು ಕಡೆಯದಾಗಿ ಸಿಂದಗಿಯ ಟವರ್‌ನಿಂದ ಸಂಪರ್ಕ ಪಡೆದಿತ್ತು. ಗೌರಿ ಮನೆಯ ಸಿ.ಸಿ ಟಿ.ವಿ ಕ್ಯಾಮೆರಾದ ದೃಶ್ಯ ಪರಿಶೀಲಿಸಿದ್ದ ಎಫ್‌ಎಸ್‌ಎಲ್, ಹಂತಕ 5.1 ಅಡಿ ಎತ್ತರದವನು ಎಂದು ವರದಿ ಕೊಟ್ಟಿತ್ತು.’

‘ಕೂಡಲೇ ಸಿಂದಗಿಗೆ ತೆರಳಿ, ಸ್ಥಳೀಯ ಪೊಲೀಸರ ಮೂಲಕ ರೌಡಿ ಪರೇಡ್ ಮಾಡಿಸಿದೆವು. ಮುಖ್ಯವಾಗಿ ಕೋಮುಗಲಭೆ ಪ್ರಕರಣಗಳಲ್ಲಿ ಭಾಗಿಯಾದವರನ್ನು ಪರೇಡ್‌ಗೆ ಕರೆಸುವಂತೆ ಸೂಚಿಸಿದ್ದೆವು. ಅಪರಾಧ ಹಿನ್ನೆಲೆವುಳ್ಳ 120 ಮಂದಿ ಮೈದಾನವೊಂದರಲ್ಲಿ ಸೇರಿದರು. ಅವರಲ್ಲಿ ವಾಘ್ಮೋರೆ ಕೂಡ ಇದ್ದ. 5 ಅಥವಾ 5.1 ಅಡಿ ಎತ್ತರವಿರುವ ವ್ಯಕ್ತಿಗಳನ್ನೇ ಗುರುತಿಸಿಕೊಂಡೆವು. ವಾಘ್ಮೋರೆ ಜಿಮ್‌ಗೆ ಹೋಗಿ ಕಟ್ಟುಮಸ್ತಿನ ದೇಹ ಬೆಳೆಸಿಕೊಂಡಿದ್ದ. ಆ ಕಾರಣಕ್ಕೇ ಆತನಿಗೆ ಕಾಳೆ ‘ಬಿಲ್ಡರ್’ ಎಂಬ ಕೋಡ್‌ವರ್ಡ್‌ ಕೊಟ್ಟಿದ್ದ. ಆ ದಿನ ಎಲ್ಲರನ್ನೂ ಮನೆಗೆ ಕಳುಹಿಸಿದೆವು. ಮರುದಿನ ಬೆಳಿಗ್ಗೆ ವಾಘ್ಮೋರೆ ಮನೆ ಬಾಗಿಲು ಬಡಿದಾಗ, ‘ಸರ್.. ನೀವು ಬಂದೇ ಬರುತ್ತೀರಾ ಎಂದು ಗೊತ್ತಿತ್ತು’ ಎನ್ನುತ್ತ ಆತನೇ ಜೀಪ್ ಹತ್ತಿ ಕುಳಿತ.’

M.N.SAMPA: ‘ವಾಘ್ಮೋರೆಯನ್ನು ವಿಚಾರಣೆಗೆ ಒಳಪಡಿಸಿದಾಗ, ತಾವು ಕುಂಬಳಗೋಡಿನ ಮನೆಯೊಂದರಲ್ಲಿ ಆಶ್ರಯ ಪಡೆದಿದ್ದಾಗಿ ಹೇಳಿದ. ಆದರೆ, ಆ ಮನೆಯ ವಿಳಾಸ ಆತನಿಗೆ ಗೊತ್ತಿರಲಿಲ್ಲ. ಹೀಗಾಗಿ, ಮತ್ತೆ ಕಾಳೆ ಡೈರಿಯ ಮೊರೆ ಹೋದೆವು. ಟವರ್ ಡಂಪ್ ತನಿಖೆ ನಡೆಸಿ, ಆ 600 ಸಂಖ್ಯೆಗಳನ್ನು ಪರಿಶೀಲಿಸಿದಾಗ ಒಂದು ಸಂಖ್ಯೆ ಆಗಸ್ಟ್‌ನಲ್ಲಿ ಕುಂಬಳಗೋಡು ಸಮೀಪದ ಟವರ್‌ನಿಂದ ಸಂ‍ಪರ್ಕ ಪಡೆದಿತ್ತು. ಆ ಸಂಖ್ಯೆಯ ಮುಂದೆ M.N.SAMPA ಎಂದು ಬರೆದಿತ್ತು.’

‘ಅದರ ಕರೆ ವಿವರ (ಸಿಡಿಆರ್) ಪರಿಶೀಲಿಸಿದಾಗ, ಮನೆ ಬ್ರೋಕರ್‌ ವೊಬ್ಬರಿಗೆ ಕರೆ ಹೋಗಿರುವುದು ಗೊತ್ತಾಯಿತು. ಆತನನ್ನು ಕರೆಸಿ ವಿಚಾರಣೆ ಮಾಡಿದೆವು. ಆಕ್ಯುಪಂಕ್ಚರ್ ಕ್ಲಿನಿಕ್ ನಡೆಸುವುದಾಗಿ ಬಂದಿದ್ದ ನಾಟಿ ವೈದ್ಯರೊಬ್ಬರಿಗೆ ತಾನು ಕೊಡಿಸಿದ್ದ ಮನೆಗೆ ಬ್ರೋಕರ್ ಕರೆದುಕೊಂಡು ಹೋದ. ‘ನಾವು ಇದೇ ಮನೆಯಲ್ಲಿ ಇದ್ದದ್ದು’ ಎಂದು ವಾಘ್ಮೋರೆಯೂ ಒಪ್ಪಿಕೊಂಡ. ಆ ನಾಟಿ ವೈದ್ಯ ಯಡವಟ್ಟು ಮಾಡಿಬಿಟ್ಟಿದ್ದ. ಮನೆ ಮಾಲೀಕರಿಗೆ ತನ್ನ ವೈಯಕ್ತಿಕ ಮೊಬೈಲ್ ಸಂಖ್ಯೆಯನ್ನೇ ಕೊಟ್ಟುಬಿಟ್ಟಿದ್ದ. ಅದರ ಜಾಡು ಹಿಡಿದು ಹೊರಟಾಗ ಸುಳ್ಯದ ಸಂಪಾಜೆ ಗ್ರಾಮದ ಮೋಹನ್ ನಾಯಕ್ ಸೆರೆ ಸಿಕ್ಕ. ‘M.N.SAMPA’ ಎಂದರೆ, ಮೋಹನ್ ನಾಯಕ್ ಸಂಪಾಜೆ ಎಂದು ನಮಗೆ ಗೊತ್ತಾಗಿದ್ದು ಆಗಲೇ.’

ನರ ಉಬ್ಬಿದ್ದೂ ಸುಳಿವಾಯ್ತು: ‘ಕುಂಬಳಗೋಡಿನ ಮನೆಯಲ್ಲಿ ತನ್ನ ಜತೆ ಗಣೇಶ್ ಹಾಗೂ ಅಮಿತ್ ಸಹ ಇದ್ದುದಾಗಿ ಹೇಳಿದ ವಾಘ್ಮೋರೆ, ‘ಗಣೇಶ್‌ನ ಎಡಗಾಲಿನ ನರ ಉಬ್ಬಿತ್ತು. ಆತ ಸ್ನಾನ ಮಾಡಿಕೊಂಡು ಹೊರಬಂದಾಗ ಅದನ್ನು ನೋಡಿದ್ದೆ’ ಎಂಬ ಸುಳಿವು ಕೊಟ್ಟ. ಕೊನೆಗೆ, ಆತನ ವಿವರಣೆ ಆಧರಿಸಿಯೇ ಗಣೇಶ್‌ನ ರೇಖಾಚಿತ್ರ ಸಿದ್ಧಪಡಿಸಿದೆವು. ಕಾಳೆ ತನ್ನ ಡೈರಿಯಲ್ಲಿ ಅವರಿಬ್ಬರ ಹೆಸರುಗಳನ್ನು ಬರೆದುಕೊಂಡು, ಮೊಬೈಲ್ ಸಂಖ್ಯೆಯನ್ನೂ ಸೇರಿಸಿದ್ದ.

ಮತ್ತೆ ಟವರ್ ಡಂಪ್ ತನಿಖೆ ನಡೆಸಿದೆವು. ಎರಡೂ ಮೊಬೈಲ್‌ಗಳು ಹುಬ್ಬಳ್ಳಿಯಲ್ಲಿ ಸ್ವಿಚ್ಡ್‌ ಆಫ್ ಆಗಿದ್ದವು. ರೌಡಿ ಪರೇಡ್ ಮಾಡಿಸಿ, ಒಬ್ಬೊಬ್ಬರನ್ನೇ ಕೋಣೆಗೆ ಕರೆಸಿ ಕಾಲು ನೋಡಿದೆವು. ಮಿಸ್ಕಿನ್‌ ಕಾಲಿನ ನರ ಉಬ್ಬಿತ್ತು. ರೇಖಾಚಿತ್ರ ಕೂಡ ಆತನಿಗೆ ಹೋಲಿಕೆಯಾಯಿತು. ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಅಲ್ಲೇ ತಪ್ಪೊಪ್ಪಿಕೊಂಡ. ಜತೆಗಿದ್ದ ಗೆಳೆಯ ಅಮಿತ್‌ ಬದ್ದಿಯನ್ನೂ ತೋರಿಸಿದ.

‘ಸರ್’ ಪದವೇ ಸುಳಿವು: ತಮಗೆ ಶಸ್ತ್ರಾಸ್ತ್ರ ತರಬೇತಿ ಕೊಟ್ಟಿದ್ದ ವ್ಯಕ್ತಿಯನ್ನು ಬಾಯ್‌ಸಾಬ್ ಅವರು ‘ಸರ್’ ಎಂದೇ ಕರೆಯುತ್ತಿದುದಾಗಿ ಗಣೇಶ್, ಮಿಸ್ಕಿನ್ ಬಾಯ್ಬಿಟ್ಟರು. ಕಾಳೆಯೇ ‘ಸರ್’ ಎನ್ನುತ್ತಿದ್ದನೆಂದರೆ ಆತ ಹಿರಿಯ ವ್ಯಕ್ತಿ ಎಂಬುದು ಖಚಿತವಾಯಿತು. ಸರ್ ಮುಂದಿದ್ದ ಮೊಬೈಲ್ ಸಂಖ್ಯೆ ನಮ್ಮನ್ನು ಸೀದಾ ಮಡಿಕೇರಿಯತ್ತ ಕರೆದುಕೊಂಡು ಹೋಯಿತು. ಅಲ್ಲಿ ಕಾಂಗ್ರೆಸ್ ಶಾಸಕಿ ವೀಣಾ ಅಚ್ಚಯ್ಯ ಅವರಿಗೆ ಆಪ್ತ ಸಹಾಯಕನಾಗಿದ್ದ ರಾಜೇಶ್ ಬಂಗೇರನನ್ನು ವಶಕ್ಕೆ ಪಡೆದೆವು. 1997ರಿಂದಲೇ ಮಹಾರಾಷ್ಟ್ರದ ಸಂಘಟನೆಯೊಂದರಲ್ಲಿ ಗುರುತಿಸಿಕೊಂಡಿದ್ದ ಈತನ ಬಂಧನವು, ನಮಗೆ ಬಹುದೊಡ್ಡ ಬೇಟೆಯಾಯಿತು.’

‘ಶಸ್ತ್ರಾಸ್ತ್ರ ತರಬೇತಿ ಪಡೆದ ಸ್ಥಳ ತೋರಿಸುವಂತೆ ಗಣೇಶ್, ಮಿಸ್ಕಿನ್, ವಾಘ್ಮೋರೆಯನ್ನು ಬೆಳಗಾವಿಗೆ ಕರೆದು ಕೊಂಡು ಹೋದಾಗ ಭರತ್ ಕುರ್ನೆ ಸಿಕ್ಕಿಬಿದ್ದ. ಆತನ ಹೆಸರು ಡೈರಿಯಲ್ಲಿ ‘ಅಂಕಲ್’,‘ಟಮೋಟರ್’ ಎಂದಿತ್ತು. ಗೌರಿ ಹತ್ಯೆ ನಂತರ ಭರತ್ ಸುಳಿವು ಸಿಗ ಬಾರದೆಂದು 12 ಕೆ.ಜಿ.ತೂಕ ಇಳಿಸಿ ದ್ದ. ಆರೋಪಿಗಳಿಗೆ ಆಶ್ರಯ ನೀಡಿದ್ದ ಕುಣಿಗಲ್‌ನ ಸುರೇಶ್, ತನ್ನ ಮನೆಯಲ್ಲೇ ಸುಲಭವಾಗಿಯೇ ಸಿಕ್ಕಿಬಿದ್ದ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.