ಬುಧವಾರ, ಆಗಸ್ಟ್ 4, 2021
23 °C
ವರ್ಕ್‌ ಫ್ರಂ ಹೋಮ್‌ನಲ್ಲೂ ಸ್ತ್ರೀಯರಿಗೆ ತಪ್ಪದ ಕಾಟ

ಲೈಂಗಿಕ ಕಿರುಕುಳದ ಮತ್ತೊಂದು ಮುಖ: ಸಹಾಯವಾಣಿಗೆ ಮೊರೆ

ಸುಕೃತ ಎಸ್‌. Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊರೊನಾ ಕಾಲದಲ್ಲಿ ಮನೆಯಿಂದಲೇ ಕಚೇರಿ ಕೆಲಸ ನಿರ್ವಹಿಸುತ್ತಿರುವ ಮಹಿಳೆಯರು ಹೊಸ ಮಾದರಿಯ ‘ಆನ್‌ಲೈನ್‌ ಲೈಂಗಿಕ ಕಿರುಕುಳ’ಕ್ಕೆ ಒಳಗಾಗುತ್ತಿದ್ದಾರೆ.

ಮಹಿಳಾ ಹಕ್ಕುಗಳ ರಕ್ಷಣೆಗಾಗಿ ಕೆಲಸ ಮಾಡುತ್ತಿರುವ ಹಲವು ಎನ್‌ಜಿಒಗಳಿಗೆ ಕರೆ ಮಾಡುತ್ತಿರುವ ನೊಂದ ಮಹಿಳೆಯರು ತಮ್ಮ ಸಂಕಷ್ಟಗಳನ್ನು ಹೇಳಿಕೊಳ್ಳುತ್ತಿದ್ದಾರೆ.

ದೂರುಗಳ ಸರಮಾಲೆ: ‘ನೀನು ವಿಡಿಯೊ ಕಾಲ್‌ಗೆ ಬರಲೇಬೇಕು, ನಿನ್‌ ಮುಖನ ದಿನಕ್ಕೆ ಒಮ್ಮೆಯಾದರೂ ನೋಡಬೇಕು, ಆಗ ನನ್ನ ಇಡೀ ದಿನ ಚೆನ್ನಾಗಿರುತ್ತೆ’–ಹೀಗೆ ಕಚೇರಿ ಕೆಲಸದ ನೆಪ ಮಾಡಿಕೊಂಡು ಕರೆ ಮಾಡುವ ಪುರುಷರು ಮಾತಿಗಿಳಿಯಲು ಆರಂಭಿಸುತ್ತಾರೆ ಎಂದು ಅನೇಕ ಮಹಿಳೆಯರು ದೂರು ಕೇಂದ್ರದಲ್ಲಿ ಕಷ್ಟ ತೋಡಿಕೊಂಡಿದ್ದಾರೆ.

‘ಕಚೇರಿಯ ತುರ್ತು ಕೆಲಸ ಇದೆ. ಈಗಲೇ ವಿಡಿಯೊ ಕಾಲ್‌ ಮಾಡಿ ಎನ್ನುತ್ತಾರೆ. ವಿಡಿಯೊ ಕಾಲ್‌ ಮಾಡಿದರೆ, ಅರೆಬರೆ ಬಟ್ಟೆ ಹಾಕಿಕೊಂಡ ಮ್ಯಾನೇಜರ್‌ಗಳು, ಟೀಂ ಲೀಡರ್‌ಗಳು ಅಸಭ್ಯವಾಗಿ ವರ್ತಿಸುತ್ತಾರೆ. ಜತೆಗೆ, ಪ್ರತಿ ದಿನವೂ ಪದೇ ಪದೇ ಕರೆ ಮಾಡಿ, ಹೇಗಿದ್ದೀಯಾ, ಏನು ಮಾಡುತ್ತಿದ್ದೀಯಾ, ಯಾವ ಬಟ್ಟೆ ಹಾಕಿಕೊಂಡಿದ್ದೀಯಾ, ಏನು ಅಡುಗೆ ಮಾಡಿದ್ದೀಯಾ ಎಂದು ಪ್ರಶ್ನಿಸು
ತ್ತಾರೆ’ ಎಂಬುದು ಮಹಿಳಾ ಉದ್ಯೋಗಿಯ ಅಳಲು.

‘ರಾತ್ರಿ 11–12 ಗಂಟೆಗೆ ಕರೆ ಬರುತ್ತದೆ. ಕಚೇರಿಯ ತುರ್ತು ಕೆಲಸ ಇದೆ. ವಿಡಿಯೊ ಕಾಲ್‌ ಮಾಡು ಎನ್ನುತ್ತಾರೆ. ಮಾಡಿದರೆ, ಅಂಥ ತುರ್ತು ಕೆಲಸವೇನೂ ಆಗಿರುವುದಿಲ್ಲ. ಒಂದು ಮೇಲ್‌ ಮಾಡಿದರೆ ಸಾಕಾಗುತ್ತದೆ. ಅರ್ಧ ಗಂಟೆ ಮಾತನಾಡಿದರೆ, ಐದು ನಿಮಿಷ ಮಾತ್ರ ಕೆಲಸದ ಕುರಿತ ಮಾತು. ಬಾಕಿ ಮಾತೆಲ್ಲ ಅನವಶ್ಯಕವಾಗಿರುತ್ತದೆ ಎನ್ನುತ್ತಾ ಕಣ್ಣು ತುಂಬಿಕೊಳ್ಳುತ್ತಾರೆ ಮತ್ತೊಬ್ಬ ಮಹಿಳೆ’ ಎಂದು ಸಹಾಯವಾಣಿ ನಿರ್ವಹಿಸುವವರು ವಿವರಿಸುತ್ತಾರೆ.

ಹೊಸ ಕಾನೂನು ರೂಪಿಸಿ: ‘ಕಚೇರಿಯಲ್ಲಿ ನಡೆಯುವ ಲೈಂಗಿಕ ಕಿರುಕುಳ ತಡೆಗೆ ಕಾನೂನುಗಳಿವೆ. ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆ ಕಾಯ್ದೆ (ತಡೆ, ನಿರ್ಬಂಧ, ಪರಿಹಾರ) 2013 ಇದರಲ್ಲಿ ಒಂದು. ಈ ಕಾಯ್ದೆಯಲ್ಲಿ ‘ಕೆಲಸದ ಸ್ಥಳ’ ಎಂದರೆ ಯಾವುದು ಎನ್ನುವುದನ್ನು ವಿವರಿಸಲಾಗಿದೆ.

ಆದರೆ, ಇಲ್ಲಿ ಮನೆಯಿಂದ ಕೆಲಸ ಮಾಡುವಾಗ ಆಗುವ ಲೈಂಗಿಕ ಕಿರುಕುಳದಿಂದ ರಕ್ಷಣೆ ನೀಡುವ ಬಗ್ಗೆ ಯಾವುದೇ ನಿಖರ ಉಲ್ಲೇಖ ಇಲ್ಲ. ಆದರೆ, ಈ ಕಾಯ್ದೆಯನ್ನು ಇಂಥ ಸಂದರ್ಭದಲ್ಲಿ ಅನ್ವಯಿಸಬಹುದು ಅಷ್ಟೆ. ಆದ್ದರಿಂದ ಮಹಿಳೆಯರು ಅನುಭವಿಸುತ್ತಿರುವ ಕಿರುಕುಳ ತಪ್ಪಿಸಲು ಹೊಸ ಕಾನೂನು ರೂಪಿಸುವ ಜರೂರು ಇದೆ’ ಎಂಬುದು ಮಹಿಳಾ ಹೋರಾಟಗಾರರ ಬೇಡಿಕೆ.

‘ಕೆಲಸ ತೊರೆಯುವ ಸ್ಥಿತಿ’
‘ಕೊರೊನಾ ಕಾರಣ ಉದ್ಯೋಗ ನಷ್ಟದ ವರದಿಯನ್ನು ಪತ್ರಿಕೆಗಳಲ್ಲಿ ನಿತ್ಯ ಓದುತ್ತಿದ್ದೇವೆ. ಕಿರುಕುಳದ ವಿಚಾರಕ್ಕೆ ಕೆಲಸ ಬಿಟ್ಟರೆ, ಮತ್ತೆ ಬೇರೆ ಕಡೆ ಕೆಲಸ ಸಿಗುತ್ತದೆ ಎನ್ನುವ ನಂಬಿಕೆ ಇಲ್ಲ. ಆದ್ದರಿಂದ ಸಹಿಸಿಕೊಳ್ಳಬೇಕಾದ ಸ್ಥಿತಿ ಇದೆ’ ಎಂಬುದು ಸಂತ್ರಸ್ತರ ನೋವಿನ ನುಡಿ.

‘ನೀನೇ ಅವರಿಗೆ ಸಲುಗೆ ನೀಡಿರುತ್ತೀಯಾ. ನಕ್ಕು ಮಾತನಾಡಿರುತ್ತೀಯಾ ಎನ್ನುತ್ತಾರೆ ಮನೆಯವರು. ಇನ್ನೂ ಹೆಚ್ಚಿಗೆ ಹೇಳಿದರೆ, ಕೆಲಸ ಬಿಟ್ಟುಬಿಡು ಎನ್ನುತ್ತಾರೆ’ ಎಂಬುದು ಮಹಿಳೆಯರ ಅಳಲು. 

*
‘ಸುಗ್ರೀವಾಜ್ಞೆ ಹೊರಡಿಸಿ’
ಸ್ತ್ರೀತನದ ಗಾಂಭೀರ್ಯಕ್ಕೆ ಧಕ್ಕೆ ತರುವುದು (ಐಪಿಸಿ ಸೆಕ್ಷನ್‌ 354) ಮತ್ತು ಗೌರವವಿಲ್ಲದ ರೀತಿ ಮಾತನಾಡುವುದು (ಐಪಿಸಿ ಸೆಕ್ಷನ್‌ 354ಡಿ), ಐಟಿ ಕಾಯ್ದೆ ಮತ್ತು ‘ಉದ್ಯೋಗ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ತಡೆ ಕಾಯ್ದೆ 2013‘ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ. ವರ್ಕ್‌ ಫ್ರಂ ಹೋಮ್‌ ಮಾಡುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ಸಹ ಮೇಲಿನ ಕಾಯ್ದೆ ವ್ಯಾಪ್ತಿಗೆ ತರಲು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಬೇಕು.
–ಕೆ.ಪಿ. ಶ್ರೀಪಾಲ್, ವಕೀಲರು, ಶಿವಮೊಗ್ಗ‌

*
ಕೆಲವು ಧೈರ್ಯವಂತ ಮಹಿಳೆಯರು ನಮ್ಮ ಸಹಾಯವಾಣಿಗೆ ಕರೆಯಾದರೂ ಮಾಡಿದ್ದಾರೆ. ಇನ್ನೂ ಎಷ್ಟೋ ಮಹಿಳೆಯರು ತಮ್ಮಷ್ಟಕ್ಕೆ ಸಂಕಟ ಅನುಭವಿಸುತ್ತಿದ್ದಾರೆ. 
ಮೀನಾಕ್ಷಿ ಗಿರಿಧರ್, ‘ದುರ್ಗಾ’‌ ಎನ್‌ಜಿಒ ಕಾರ್ಯಕ್ರಮ ನಿರ್ದೇಶಕಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು