ಬುಧವಾರ, ಅಕ್ಟೋಬರ್ 23, 2019
27 °C
ದಾಖಲೆಯಲ್ಲಷ್ಟೇ ಬಯಲು ಶೌಚಮುಕ್ತ: ಘೋಷಿತ ಕೊಳೆಗೇರಿಗಳಲ್ಲಿಯೇ ಕಾಣದ ಶೌಚಾಲಯಗಳು

‘ಸ್ಮಾರ್ಟ್‌ಸಿಟಿ’ ಹಣೆಪಟ್ಟಿಯ ತುಮಕೂರು | ಕೆರೆಯ ಅಂಗಳವೇ ಇಲ್ಲಿ ಶೌಚಾಲಯ

Published:
Updated:
Prajavani

‘ಭಾರತ ಬಯಲು ಶೌಚಮುಕ್ತ’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಆದರೆ, ರಾಜ್ಯದಲ್ಲಿ ಈಗಲೂ ನಸುಕಿನಲ್ಲೇ ಕೈಯಲ್ಲಿ ತಂಬಿಗೆ ಹಿಡಿದು ಮಹಿಳೆಯುರು, ಪುರುಷರು, ಮಕ್ಕಳು ಬಯಲ ಕಡೆಗೆ ಹೋಗುವುದು ಮಾಮೂಲಿ ದೃಶ್ಯ. ಸರ್ಕಾರದ ದಾಖಲೆಗಳಲ್ಲಿ ಮಾತ್ರ ಬಯಲು ಶೌಚಮುಕ್ತವಾಗಿದೆ. ಈ ಕುರಿತು ‘ಪ್ರಜಾವಾಣಿ’ ಇಲ್ಲಿ ಬೆಳಕು ಚೆಲ್ಲಿದೆ.

ತುಮಕೂರು: ಮಬ್ಬು ಮಬ್ಬಾಗಿ ಬೆಳಕು ಮೂಡುವುದೇ ತಡ ಮಹಿಳೆಯರು ಗುಂಪು ಗುಂಪಾಗಿ ಚೆಂಬು ಹಿಡಿದು ಹೊರಡುವರು. ಪೂರ್ಣ ಬೆಳಕು ಮೂಡಿದಾಗ ಗಂಡಸರು, ಯುವಕರ ಸರದಿ!

‘ಸ್ಮಾರ್ಟ್‌ಸಿಟಿ’ ಹಣೆಪಟ್ಟಿಯುಳ್ಳ ತುಮಕೂರಿನ ಭಾರತಿನಗರ, ಎನ್‌.ಆರ್.ಕಾಲೊನಿ, ಕುರಿಪಾಳ್ಯ, ಲೇಬರ್ ಕಾಲೊನಿ ಸೇರಿದಂತೆ ಬಹುತೇಕ ಕೊಳೆಗೇರಿಗಳ ನಿವಾಸಿಗಳು ಶೌಚ ಬಾಧೆ ತೀರಿಸುವುದು ಕೆರೆ ಅಂಗಳದಲ್ಲಿ. ಮಕ್ಕಳು, ಯುವಕರು ರೈಲ್ವೆ ಹಳಿಗಳ ಬದಿ, ಇಲ್ಲವೆ ಪೊದೆಗಳಲ್ಲಿ.

* ಇದನ್ನೂ ಓದಿ: ಹುಬ್ಬಳ್ಳಿ: ಶೌಚಕ್ಕಾಗಿ ಕತ್ತಲಾಗುವ ತನಕ ಕಾಯುವ ದುಸ್ಥಿತಿ

ಇದು ತುಮಕೂರು ಮಹಾನಗರದ ಕೊಳೆಗೇರಿಗಳಲ್ಲಿ ಮಾತ್ರವೇ ಕಂಡು ಬರುವ ಚಿತ್ರಣವಲ್ಲ. ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಬಹುತೇಕ ಕೊಳೆಗೇರಿಗಳ ಸ್ಥಿತಿಯೂ ಇದೇ ಆಗಿದೆ.  ಜಿಲ್ಲೆಯಲ್ಲಿ ಸರ್ಕಾರ ಘೋಷಿಸಿರುವ 109 ಕೊಳೆಗೇರಿಗಳಿವೆ. ಅಘೋಷಿತ 77 ಕೊಳೆಗೇರಿಗಳು ಇವೆ. ತುಮಕೂರು ನಗರದಲ್ಲಿಯೇ 26 ಘೋಷಿತ, 16 ಅಘೋಷಿತ ಕೊಳೆಗೇರಿಗಳಿವೆ.

ಈ 109 ಕೊಳೆಗೇರಿಗಳಲ್ಲಿ 22, 769 ಮನೆ/ ಗುಡಿಸಲುಗಳು ಇವೆ. 1,14,387 ನಿವಾಸಿಗಳು ಇದ್ದಾರೆ. ಈ ಘೋಷಿತ ಕೊಳೆಗೇರಿಗಳಲ್ಲಿಯೇ ಬಹುತೇಕ ಕುಟುಂಬಗಳು ಶೌಚಾಲಯಗಳನ್ನು ಹೊಂದಿಲ್ಲ. ಇನ್ನು ಅಘೋಷಿತ ಕೊಳೆಗೇರಿಗಳ ಸ್ಥಿತಿ ಕೇಳುವುದೇ ಬೇಡ. ನೀರಿನ ಸಮಸ್ಯೆ, ಯುಜಿಡಿ ಸಂಪರ್ಕ ಇಲ್ಲದಿರುವುದು, ಶೌಚ ಗುಂಡಿತೆಗೆಯಲು ಸ್ಥಳ ಇಲ್ಲದಿರುವುದು, ಶೌಚಾಲಯ ನಿರ್ಮಾಣಕ್ಕೆ ಸರ್ಕಾರವು ನಿಗದಿಪಡಿಸಿರುವ 4X4 ಜಾಗ ‘ದುಬಾರಿ’ ಆಗಿರುವುದರಿಂದ ಕೊಳೆಗೇರಿಗಳಲ್ಲಿ ಬಹುತೇಕರು ಶೌಚಾಲಯ ನಿರ್ಮಾಣಕ್ಕೆ ಮುಂದಾಗಿಲ್ಲ.

* ಇದನ್ನೂ ಓದಿ: ಶಿವಮೊಗ್ಗ: ಬೈಪಾಸ್ ಶೌಚಾಲಯ!

ಮಿಂಚಿ ಮರೆಯಾದ 'ಮೊಬೈಲ್ ಶೌಚಾಲಯ'

2016–17ನೇ ಸಾಲಿನಲ್ಲಿ ತುಮಕೂರಿನ ಕೊಳೆಗೇರಿಗಳಲ್ಲಿ ಪ್ರಾಯೋಗಿಕವಾಗಿ ಮೊಬೈಲ್ ಶೌಚಾಲಯ ವ್ಯವಸ್ಥೆ ಜಾರಿಗೊಳಿಸಲಾಗಿತ್ತು.  2X2 ಅಳತೆಯಲ್ಲಿ ಆರು ಕಮೋಡ್‌ಗಳನ್ನು ಅಳವಡಿಸಿದ್ದ ಟ್ರಾಕ್ಟರ್‌ ಬೆಳಿಗ್ಗೆ 5ರಿಂದ 9 ಮತ್ತು ಸಂಜೆ ಕೊಳೆಗೇರಿಗಳ ಬಳಿ ನಿಲ್ಲುತ್ತಿತ್ತು. ಇದು ಒಂದಿಷ್ಟು ಅನುಕೂಲವಾಗಿತ್ತು. ಆದರೆ ಇದು ಜಾರಿಯಾದ ವೇಗದಷ್ಟೇ ಕಣ್ಮರೆ ಆಯಿತು ಎನ್ನುವರು ನರಸಿಂಹಮೂರ್ತಿ.

ಎನ್‌.ಆರ್. ಕಾಲೊನಿ 58 ಎಕರೆ ಇದೆ. ಇಲ್ಲಿ 12 ಸಮುದಾಯ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಆದರೆ ಇವು ಒಂದು ಭಾಗದಲ್ಲಿ ಇವೆ. ಅಲ್ಲಿಗೆ ಮತ್ತೊಂದು ಬದಿಯ ಜನರು ಹೋಗುವುದಿಲ್ಲ. ನಿವಾಸಿಗಳಲ್ಲಿ ಅರಿವಿನ ಕೊರತೆಯೂ ಇದೆ ಎಂದರು.

* ಇದನ್ನೂ ಓದಿ: ಚಿತ್ರದುರ್ಗ ಗ್ರಾಮೀಣ ಪ್ರದೇಶದಲ್ಲಿ ನೀರಿನ ಕೊರತೆ|ಶೌಚ ಹೊರಗೆ...ವಸ್ತುಗಳು ಒಳಗೆ..

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)