ಬುಧವಾರ, ಏಪ್ರಿಲ್ 1, 2020
19 °C
10 ವರ್ಷಗಳಲ್ಲಿ 70 ಪ್ರಕರಣ ದಾಖಲು; ಸಂಜಯ್‌ ಗುಬ್ಬಿ ತಂಡದ ವರದಿ

ತೆರೆದ ಬಾವಿ– ಚಿರತೆಗಳಿಗೆ ಕಂಟಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯದಲ್ಲಿ ತೆರೆದ ಬಾವಿಗಳ ರೂಪದಲ್ಲಿ ಚಿರತೆಗಳಿಗೆ ಅಸಾಮಾನ್ಯ ಅಪಾಯವೊಂದು ಎದುರಾಗಿದೆ. 10 ವರ್ಷಗಳಲ್ಲಿ 70 ಚಿರತೆಗಳು ಬಾವಿಗೆ ಬಿದ್ದಿವೆ.

ಇದರ ಬಗ್ಗೆ ವನ್ಯಜೀವಿ ವಿಜ್ಞಾನಿ ಸಂಜಯ್ ಗುಬ್ಬಿ ಮತ್ತು ತಂಡದವರು ನಡೆಸಿದ ಸಂಶೋಧನೆಯ ವೈಜ್ಞಾನಿಕ ಲೇಖನವು ‘ಆರಿಕ್ಸ್’ ವೈಜ್ಞಾನಿಕ ನಿಯತಕಾಲಿಕೆಯಲ್ಲಿ ಇತ್ತೀಚೆಗೆ ಪ್ರಕಟವಾಗಿದೆ.

ಭಾರತದಲ್ಲಿ ಚಿರತೆಗಳು ಆವಾಸಸ್ಥಾನ ನಾಶ, ನೈಸರ್ಗಿಕ ಬಲಿಪ್ರಾಣಿಗಳ ಕೊರತೆ, ಕಳ್ಳಬೇಟೆ ಮತ್ತು ಅಪಘಾತಗಳಂತಹ ಅಪಾಯಗಳನ್ನು ಎದುರಿಸುತ್ತಿವೆ. ಆದರೆ, ತೆರೆದ ಬಾವಿಗಳಿಂದ ಚಿರತೆಗಳಿಗಾಗುತ್ತಿರುವ ಅಪಾಯ ಕಡೆಗಣಿಸಲಾಗಿದ್ದು, ಮೊದಲ ಬಾರಿಗೆ ವ್ಯವಸ್ಥಿತ ರೂಪದಲ್ಲಿ ಈ ಬಗ್ಗೆ ದತ್ತಾಂಶ ಸಂಗ್ರಹಿಸಲಾಗಿದೆ. 2008ರಿಂದ 2017ರ ವರೆಗೆ ಚಿರತೆಗಳು ತೆರೆದ ಬಾವಿಗಳಲ್ಲಿ ಬಿದ್ದ 70 ಘಟನೆಗಳನ್ನು ಅಧ್ಯಯನ ತಂಡವು ದಾಖಲಿಸಿದೆ.

ಈ ಘಟನೆಗಳು ರಾಜ್ಯದ 10 ಜಿಲ್ಲೆಗಳಲ್ಲಿ ದಾಖಲಾಗಿವೆ. ಅತಿ ಹೆಚ್ಚು ಉಡುಪಿ ಜಿಲ್ಲೆಯಲ್ಲಿ (36 ಅಥವಾ ಶೇ 46), ತುಮಕೂರು (9 ಅಥವಾ ಶೇ 13), ರಾಮನಗರ (9 ಅಥವಾ ಶೇ 13) ಮತ್ತು ಉತ್ತರ ಕನ್ನಡದಲ್ಲಿ (8 ಅಥವಾ ಶೇ 11) ಪ್ರಕರಣಗಳು ದಾಖಲಾಗಿವೆ.

ಮಳೆಗಾಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ (ಶೇ 53) ಚಿರತೆಗಳು ಬಾವಿಗೆ ಬಿದ್ದಿವೆ. ಹೆಚ್ಚು ಮಳೆಯಾಗುವ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಸಮಯದಲ್ಲಿ ಅಧಿಕ ಮಳೆಯಿಂದಾಗಿ ಬೆಳಕಿನ ಪ್ರಮಾಣ ಕಡಿಮೆಯಿರುವುದರಿಂದ, ಚಿರತೆಗಳು ಬಾವಿಗೆ ಬೀಳುವ ಪ್ರಮಾಣ ಹೆಚ್ಚಿರಬಹುದು. ತುಮಕೂರು ಮತ್ತು ರಾಮನಗರ ಜಿಲ್ಲೆಯಲ್ಲಿ ಚಿರತೆಗಳು ಬತ್ತಿಹೋದ ಬಾವಿಗಳಲ್ಲಿ ಬೀಳುವುದು ಹೆಚ್ಚು.

ಹೆಚ್ಚಿನ ಘಟನೆಗಳಲ್ಲಿ ಅರಣ್ಯ ಇಲಾಖೆಯವರು ಚಿರತೆಗಳನ್ನು ರಕ್ಷಿಸಿದ್ದಾರೆ. ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆಯ ನಂತರ 29 (ಶೇ 41) ಚಿರತೆಗಳನ್ನು ಸ್ಥಳಾಂತರಿಸಲಾಯಿತು. 28 (ಶೇ 40) ಚಿರತೆಗಳನ್ನು ಅದೇ ಸ್ಥಳಗಳಲ್ಲಿ ಕಾಡಿಗೆ ಬಿಡಲಾಯಿತು ಅಥವಾ ಬಾವಿಯಿಂದ ಹೊರಬಂದು ಕಾಡಿಗೆ ಹೋಗಲು ಅನುವು ಮಾಡಿಕೊಡಲಾಯಿತು. 8 ಚಿರತೆಗಳು (ಶೇ 11) ಪ್ರಾಣ ಕಳೆದುಕೊಂಡವು ಮತ್ತು 5 (ಶೇ 7) ಚಿರತೆಗಳಿಗೆ ಗಂಭೀರ ಗಾಯಗಳಾಗಿದ್ದರಿಂದ ಮೃಗಾಲಯಗಳಿಗೆ ಕಳುಹಿಸಲಾಯಿತು.

‘ಚಿರತೆಗಳು ಬಾವಿಗೆ ಬೀಳುವುದರಿಂದ ಅವುಗಳ ಮೇಲೆ ಮಾನಸಿಕ ಒತ್ತಡ ಉಂಟಾಗಬಹುದು. ಗಾಯ ಮತ್ತು ಸಾವಿಗೂ ಕಾರಣವಾಗಬಹುದು ಹಾಗೂ ಒಂದೊಮ್ಮೆ ಚಿರತೆ ಬಾವಿಯಿಂದ ಹೊರಬಂದರೆ ಜನರಿಗೆ ಅಪಾಯವನ್ನುಂಟುಮಾಡುವ ಸಾಧ್ಯತೆಯಿರುತ್ತದೆ. ಜನವಸತಿ ಪ್ರದೇಶಕ್ಕೆ ಹೆಚ್ಚು ಹೆಚ್ಚು ಚಿರತೆಗಳು ಬರುತ್ತಿರುವ ಈ ಸಮಯದಲ್ಲಿ ಇಂತಹ ಹೊಸ ಸಮಸ್ಯೆಯನ್ನು ಕಡಿಮೆಗೊಳಿಸಲು ಬಾವಿಯ ಸುತ್ತ ಕಟ್ಟೆ ಕಟ್ಟಬೇಕು’ ಎಂದು ಸಂಜಯ್ ಗುಬ್ಬಿ ತಿಳಿಸಿದ್ದಾರೆ.

‘ಚಿರತೆಗಳು ಬಾವಿಗೆ ಬಿದ್ದ ಎಲ್ಲಾ ಬಾವಿಗಳು ಅಸುರಕ್ಷಿತವಾಗಿದ್ದವು ಮತ್ತು ತೆರೆದಿದ್ದವು. ಅವುಗಳಲ್ಲಿ ಪ್ರಾಣಿ ಹೊರಬರಲು ಮೆಟ್ಟಿಲುಗಳಂತಹ ಯಾವುದೇ ರಚನೆಗಳಿರಲಿಲ್ಲ. ಇಂತಹ ಬಾವಿಗಳನ್ನು ಅರಣ್ಯ ಇಲಾಖೆಯವರು ಕ್ಯಾಂಪಾ, ಪರಿಸರ ಅಭಿವೃದ್ಧಿ ಸಮಿತಿಗಳು ಮತ್ತು ಇತರ ಸಮುದಾಯ ಸಂರಕ್ಷಣಾ ಯೋಜನೆಗಳಡಿ ಸುರಕ್ಷಿತಗೊಳಿಸಲು ಕ್ರಮ ಕೈಗೊಳ್ಳಬೇಕು’ ಎಂದು ಅವರು ಸಲಹೆ ನೀಡಿದ್ದಾರೆ.

ಬಾವಿಗೆ ಬಿದ್ದು 11 ವನ್ಯಜೀವಿಗಳು ಸಾವು

ಅಧ್ಯಯನದ ಅವಧಿಯಲ್ಲಿ ಇತರ 27 ವನ್ಯಜೀವಿ ಪ್ರಭೇದಗಳು ತೆರೆದ ಬಾವಿಗೆ ಬಿದ್ದ ಪ್ರಕರಣಗಳನ್ನು ಲೇಖಕರು ದಾಖಲಿಸಿದ್ದಾರೆ. ಕರಡಿ, ಆನೆ, ಕಾಟಿ, ಕಡವೆ, ಕಾಡುಕುರಿ, ಕೃಷ್ಣಮೃಗ, ಕಪ್ಪಲು ನರಿ, ಮೊಸಳೆ ಮತ್ತು ಪುನುಗು ಬೆಕ್ಕುಗಳು ತೆರೆದ ಬಾವಿಗಳಲ್ಲಿ ಬಿದ್ದ ಘಟನೆಗಳನ್ನು ದಾಖಲಿಸಿದ್ದಾರೆ. ಈ ಪೈಕಿ, 11  ವನ್ಯಜೀವಿಗಳು ಮೃತಪಟ್ಟಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು