ಎಲ್ಲ ಪ್ರಕರಣಗಳು ತನಿಖಾ ವ್ಯಾಪ್ತಿಗೆ: ಬಿಜೆಪಿ ಪಟ್ಟು

7

ಎಲ್ಲ ಪ್ರಕರಣಗಳು ತನಿಖಾ ವ್ಯಾಪ್ತಿಗೆ: ಬಿಜೆಪಿ ಪಟ್ಟು

Published:
Updated:

ಬೆಂಗಳೂರು: ‘ಆಪರೇಷನ್‌ ಕಮಲದ ಆಡಿಯೊ ಪ್ರಕರಣದ ತನಿಖೆ ಹೊಣೆಯನ್ನು ಯಾವುದೇ ಕಾರಣಕ್ಕೂ ವಿಶೇಷ ತನಿಖಾ ತಂಡಕ್ಕೆ ಒಪ್ಪಿಸಬಾರದು. ಒಂದು ವೇಳೆ ಒಪ್ಪಿಸಿದರೆ, 2008ರಿಂದ ಇಲ್ಲಿವರೆಗೆ ನಡೆದಿರುವ ಎಲ್ಲ ಪ್ರಕರಣಗಳನ್ನೂ ತನಿಖಾ ವ್ಯಾಪ್ತಿಗೆ ಸೇರಿಸಬೇಕು’ ಎಂದು ಬಿಜೆಪಿ ಸದಸ್ಯರು ಆಗ್ರಹಿಸಿದರು.

ವಿಧಾನಸಭೆಯಲ್ಲಿ ಮಂಗಳವಾರ ಮಾತನಾಡಿದ ಬಿಜೆಪಿ ಸದಸ್ಯರು, ‘ನ್ಯಾಯಾಂಗ ತನಿಖೆ ಅಥವಾ ಸದನ ಸಮಿತಿಯಿಂದಲೇ ತನಿಖೆ ನಡೆಸಬೇಕು’ ಎಂದು ಪಟ್ಟು ಹಿಡಿದರು.

ಬಿಜೆಪಿಯ ಕೆ.ಜಿ.ಬೋಪಯ್ಯ, ‘ಸ್ಟಿಂಗ್‌ ಆಪರೇಷನ್‌ ಸಹ ನೇರ ಸಾಕ್ಷಿ ಆಗುವುದಿಲ್ಲ. ಬಜೆಟ್‌ ಮಂಡನೆಗೆ ಮುನ್ನ ಎಲ್ಲ ಕೆಲಸಗಳನ್ನು ಕೈಬಿಟ್ಟು ಮುಖ್ಯಮಂತ್ರಿ ಪತ್ರಿಕಾಗೋಷ್ಠಿ ನಡೆಸಿ ಸಭಾಧ್ಯಕ್ಷರ ಹೆಸರು ಹೇಳುವ ಅಗತ್ಯ ಏನಿತ್ತು. ಸಭಾಧ್ಯಕ್ಷರ ಕೈಯಲ್ಲಿ ದೂರು ಕೊಟ್ಟವರ ಅಧೀನದಲ್ಲೇ ತನಿಖೆ ನಡೆಸಿದರೆ ಸಹಜ ನ್ಯಾಯ ಆಗುವುದಿಲ್ಲ’ ಎಂದು ಪ್ರತಿಪಾದಿಸಿದರು.

ಬಿ.ಶ್ರೀರಾಮುಲು, ‘ಕೆ.ಜಿ.ಬೋಪಯ್ಯ ವಿಧಾನಸಭಾಧ್ಯಕ್ಷರಾಗಿದ್ದ ಕಾಲದಿಂದ ಇಲ್ಲಿಯವರೆಗೆ ನಡೆದಿರುವ ಎಲ್ಲ ಘಟನಾವಳಿಗಳನ್ನು ತನಿಖೆ ಮಾಡಿಸಿ. ಆಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ತನಿಖಾ ವ್ಯಾಪ್ತಿಗೆ ಸೇರಿಸಬೇಕು’ ಎಂದರು.

ಈ ಮಾತಿಗೆ ಸಚಿವರು ಹಾಗೂ ಆಡಳಿತ ಪಕ್ಷಗಳ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಸಚಿವರಾದ ಜಮೀರ್‌ ಅಹ್ಮದ್‌ ಖಾನ್‌ ಹಾಗೂ ವೆಂಕಟ ರಾವ್ ನಾಡಗೌಡ ಅವರನ್ನು ಉದ್ದೇಶಿಸಿ ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌, ‘ಸಚಿವರು ಮಸಾಲೆ ತಿನ್ನುವುದನ್ನು ಕಡಿಮೆ ಮಾಡಬೇಕು. ಹೀಗೆ ಎದ್ದು ನಿಂತು ಗಲಾಟೆ ಮಾಡಿದರೆ ಹೇಗೆ’ ಎಂದು ಪ್ರಶ್ನಿಸಿದರು.

ಎಸ್‌.ಸುರೇಶ್‌ ಕುಮಾರ್‌, ‘ಎಸ್‌ಐಟಿಯ ಇತಿಹಾಸ ಎಂತಹುದು ಎಂಬುದು ನಮ್ಮೆಲ್ಲರಿಗೂ ಗೊತ್ತಿದೆ. ವಿಧಾನಸಭಾಧ್ಯಕ್ಷರ ಪ್ರಕರಣಕ್ಕೆ ಸೀಮಿತವಾಗಿ ವಿಚಾರಣೆ ನಡೆಯುವುದು ಅನುಮಾನ. ವಿಧಾನಸಭಾಧ್ಯಕ್ಷರಾಗಿದ್ದ ವೇಳೆ ಬೋಪಯ್ಯ ಅವರ ಮೇಲೆ ದೈಹಿಕ ಹಲ್ಲೆ ನಡೆದಿತ್ತು. ಅವರ ಮೇಲೆ ರಾಕೆಟ್‌, ಮೈಕ್‌ ಬಿಸಾ
ಡಿದ್ದಕ್ಕೆ ಸಾಕ್ಷಿ ಆಗಿದ್ದೇವೆ. ವಿಧಾನಸಭೆಯ ಬಾಗಿಲನ್ನು ಜಾಡಿಸಿ ಒದ್ದ ಘಟನೆಯನ್ನೂ ನೋಡಿದ್ದೇವೆ’ ಎಂದರು.

‘ಬಂಟ್ವಾಳದ ಶಾಸಕ ರಾಜೇಶ್‌ ನಾಯಕ್‌ ಅವರು ಭಾನುವಾರ ಮಂಗಳೂರಿನಿಂದ ಬೆಂಗಳೂರಿಗೆ ವಿಮಾನದಲ್ಲಿ ಬರುತ್ತಿದ್ದರು. ಈ ವೇಳೆ, ಆಡಳಿತ ಪಕ್ಷದ ವಿಧಾನ ಪರಿಷತ್‌ ಸದಸ್ಯರೊಬ್ಬರು ಪಕ್ಕದಲ್ಲಿ ಕುಳಿತಿದ್ದರು. ಪ್ರಕರಣವನ್ನು ರಾಜ್ಯ ಸರ್ಕಾರ ಎಸ್‌ಐಟಿ ತನಿಖೆಗೆ ಒಪ್ಪಿಸಲಿದೆ ಎಂದು ಅವರು ಹೇಳಿದ್ದರು. ಈ ವಿಷಯ ಅವರಿಗೆ ಹೇಗೆ ಗೊತ್ತಾಯಿತು’ ಎಂದು ಪ್ರಶ್ನಿಸಿದರು.

ಕೆ.ಆರ್‌.ರಮೇಶ್‌ ಕುಮಾರ್‌, ‘ಆ ಸದಸ್ಯರು ಒಂದೋ ಜೋತಿಷ್ಯ ಹೇಳಿರಬಹುದು. ಇಲ್ಲದಿದ್ದರೆ ಅವರು ಮುಖ್ಯಮಂತ್ರಿಗೆ ಆಪ್ತರೂ ಆಗಿರಬಹುದು. ನಾನು ಮುಖ್ಯಮಂತ್ರಿ ಅವರ ಜತೆಗೆ ಸಮಾಲೋಚನೆ ನಡೆಸಿ ಈ ನಿರ್ಧಾರಕ್ಕೆ ಬಂದಿದ್ದೇನೆ ಎಂಬಂತಿದೆ ಈ ಮಾತು. ಮುಖ್ಯಮಂತ್ರಿ ಹೇಳಿದಂತೆ ಕೇಳುವವ ಎಂಬ ಮಾತು ₹50 ಕೋಟಿ ಪಡೆದುದಕ್ಕಿಂತ ದುಬಾರಿ ಆಪಾದನೆ’ ಎಂದರು.

ಸುರೇಶ್ ಕುಮಾರ್‌, ‘ಈ ಪ್ರಕರಣವನ್ನು ಹಕ್ಕುಬಾದ್ಯತಾ ಸಮಿತಿಗೆ ನೀಡಿ ತನಿಖೆ ಪೂರ್ಣಗೊಳಿಸಲು 15 ದಿನಗಳ ಕಾಲಾವಕಾಶ ನೀಡಬಹುದು. ಅವರಿಗೆ ತಜ್ಞರ ನೆರವು ಪಡೆಯಬಹುದು’ ಎಂದರು. ತನಿಖೆಗೆ ಎಸ್‌ಐಟಿಗೆ ಒಪ್ಪಿಸಿದರೆ ಕೆಟ್ಟ ಪರಂಪರೆಗೆ ನಾಂದಿ ಆಗಲಿದೆ ಎಂದೂ ಎಚ್ಚರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !