ಗುರುವಾರ , ಫೆಬ್ರವರಿ 20, 2020
31 °C

ಕೊಡವರನ್ನು ಎಸ್‌ಟಿ ಪಟ್ಟಿಗೆ ಸೇರಿಸಿದರೆ ಗಿರಿಜನರಿಗೆ ಅನ್ಯಾಯ: ಆದಿವಾಸಿ ನಾಯಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ‘ಕೊಡವರನ್ನು ಪರಿಶಿಷ್ಟ ಪಟ್ಟಿಗೆ ಸೇರಿಸಿದರೆ ನೈಜ ಗಿರಿಜನರು ಸಮಾಜದ ಮುಖ್ಯವಾಹಿನಿಗೆ ಬಾರದೇ ಹಿಂದುಳಿಯುತ್ತಾರೆ. ಕೊಡವರನ್ನು ಎಸ್‌.ಟಿ ಪಟ್ಟಿಗೆ ಸೇರಿಸಿ ಎನ್ನುವ ಬೇಡಿಕೆಯೇ ಅವಮಾನಕಾರಿ’ ಎಂದು ಆದಿವಾಸಿ ಭಾರತ್ ಮಹಾಸಭಾದ ಜಿಲ್ಲಾ ಘಟಕ ಅಧ್ಯಕ್ಷ ಬಿ.ಕೆ.ಅಪ್ಪು ತಿಳಿಸಿದರು.

‘ಕೊಡವ ಜನಾಂಗವು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಸಬಲವಾಗಿದೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಪ್ರತಿಪಾದಿಸಿದರು.

ಆರ್ಥಿಕವಾಗಿ ಸಬಲವಾಗಿದ್ದರೂ ಕೊಡವ ನ್ಯಾಷನಲ್‌ ಕೌನ್ಸಿಲ್ ಅಧ್ಯಕ್ಷ ನಾಚಪ್ಪ ಅವರು ಎಸ್‌.ಟಿ ಪಟ್ಟಿಯಲ್ಲಿ ಸೇರಿಸಬೇಕೆಂದು ಹೋರಾಟ ನಡೆಸುತ್ತಿದ್ದಾರೆ. ಕೊಡವ ಜನಾಂಗಕ್ಕೆ ‘ಬುಡಕಟ್ಟು ಮಾನ್ಯತೆ’ ದೊರಕಬೇಕೆಂಬ ಹಕ್ಕೊತ್ತಾಯ ಖಂಡನೀಯ ಎಂದು ಹೇಳಿದರು.

ನೈಜ ಗಿರಿಜನರಿಗೆ ಮೊದಲು ಸಮರ್ಪಕವಾಗಿ ಯೋಜನೆಗಳನ್ನು ತಲುಪಿಸುವ ಕೆಲಸವಾಗಲಿ. ಅತೀಹೆಚ್ಚು ಭೂಮಿ ಹೊಂದಿದ ಕೊಡವರು ಕೈಗೊಂಡಿರುವ ಹಕ್ಕೊತ್ತಾಯ ಕೈಬಿಡಬೇಕು. ಕೊಡವ ಕುಲಶಾಸ್ತ್ರ ಅಧ್ಯಯನ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕೆಂದು ಒತ್ತಾಯಿಸಿದರು.

ಸಿ.ಪಿ.ಐ.ಎಂ (ರೆಡ್‌ಸ್ಟಾರ್) ಪಕ್ಷದ ಪ್ರಮುಖ ಕೆ.ಎ.ನಿರ್ವಾಣಪ್ಪ ಮಾತನಾಡಿ, ‘ಕೊಡಗನ್ನು ವೀರ– ಶೂರರ ನಾಡೆಂದು ಬಣ್ಣಿಸುತ್ತಾರೆ. ಕೊಡವರು ಮುಂದಿಟ್ಟಿರುವ ಬೇಡಿಕೆ ನಿಜಕ್ಕೂ ಅವಮಾನಕಾರಿ ಅಲ್ಲವೇ’ ಎಂದು ಪ್ರಶ್ನಿಸಿದರು.

ರೈತ ಸಂಘದ ಕಾರ್ಯದರ್ಶಿ ಎಚ್.ವಿ.ಸಣ್ಣಪ್ಪ, ‘ಮೀಸಲಾತಿ ನೀಡಬೇಕಾದರೆ ಕೆಲವು ಮಾನದಂಡಗಳಿದೆ. ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ದುರ್ಬಲರಾಗಿದ್ದರೆ ಅವರಿಗೆ ಮೀಸಲಾತಿ ನೀಡಿ ಅವರನ್ನು ಮೇಲೆತ್ತುವ ಕೆಲಸವಾಗಬೇಕು. ಅದೇ ಉಳ್ಳವರಿಗೆ ಮೀಸಲಾತಿ ಕಲ್ಪಿಸಿದರೆ ದುರ್ಬಲರು ಏನು ಮಾಡಬೇಕು ಎಂದು ಪ್ರಶ್ನಿಸಿದರು.

‘ಕೊಡವರು ಎಲ್ಲಾ ಕ್ಷೇತ್ರದಲ್ಲಿ ಸದೃಢರಾಗಿದ್ದಾರೆ. ಮೂಲನಿವಾಸಿಗಳೆಂಬ ಕಾರಣಕ್ಕೆ ಮೀಸಲಾತಿ ಕೇಳುತ್ತಿರುವುದು ಸರಿಯಲ್ಲ’ ಎಂದು ಪ್ರತಿಪಾದಿಸಿದರು.

‘ಇದರಿಂದ ಮೀಸಲಾತಿ ತನ್ನ ಅರ್ಥ ಮತ್ತು ಮಹತ್ವ ಕಳೆದುಕೊಳ್ಳುತ್ತದೆ. ಕೊಡವರು ರಾಜಕೀಯವಾಗಿ ಮುಂದುವರಿದಿರುವ ಹಿನ್ನೆಲೆಯಲ್ಲಿ ಸರ್ಕಾರದ ಯೋಜನೆಗಳು ಅವರ ಪಾಲಾಗಿ ನೈಜ ಗಿರಿಜನರು ಅಭಿವೃದ್ಧಿಯಿಂದ ವಂಚಿತರಾಗುತ್ತಾರೆ’ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಆದಿವಾಸಿ ಮಹಾಸಭಾದ ಪದಾಧಿಕಾರಿಗಳಾದ ಜೆ.ಡಿ.ರಘು, ಯಶೋದಾ, ಶಂಕ್ರು ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು