ಮಂಗಳವಾರ, ಜೂಲೈ 7, 2020
27 °C
ಎಪಿಎಂಸಿ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ ವಾಪಸ್ ಕಳುಹಿಸಿದ ರಾಜ್ಯಪಾಲ

ಎಪಿಎಂಸಿ ಕಾಯ್ದೆ ತಿದ್ದುಪಡಿ: ಕಾರ್ಪೊರೇಟ್ ಕಂಪನಿಗೆ ಕೆಂಪುಹಾಸು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರೈತ ಸಮುದಾಯಕ್ಕೆ ಅನುಕೂಲವಾಗುವ ರೀತಿಯಲ್ಲಿ ಕೃಷಿ ಉತ್ಪನ್ನಗಳ ಮಾರಾಟ ಹಾಗೂ ಖರೀದಿಗೆ ಇದ್ದ ನಿರ್ಬಂಧ ಸಡಿಲಿಸಿ, ಈ ಕ್ಷೇತ್ರದಲ್ಲಿ ಬೃಹತ್‌ ಕಾರ್ಪೊರೇಟ್ ಕಂಪನಿಗಳಿಗೆ ಅವಕಾಶ ಮಾಡಿಕೊಡಲು ರಾಜ್ಯ ಸರ್ಕಾರ ಮುಂದಾಗಿದೆ.

ಈ ಉದ್ದೇಶಕ್ಕಾಗಿ ತರಾತುರಿಯಲ್ಲಿ ಕರ್ನಾಟಕ ಕೃಷಿ ಉತ್ಪನ್ನಗಳ ಮಾರಾಟ(ನಿಯಂತ್ರಣ ಮತ್ತು ಅಭಿವೃದ್ಧಿ)(ಎರಡನೇ ತಿದ್ದುಪಡಿ) ಮಸೂದೆ
ಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಸರ್ಕಾರ ಮುಂದಡಿ ಇಟ್ಟಿತ್ತು. ಸಚಿವ ಸಂಪುಟದಲ್ಲಿ ಚರ್ಚೆಯನ್ನೂ ನಡೆಸದೇ ರಾತ್ರೋರಾತ್ರಿ ಸುಗ್ರೀವಾಜ್ಞೆ ಸಿದ್ಧಪಡಿಸಿ ಅನುಮೋದನೆಗಾಗಿ ರಾಜಭವನಕ್ಕೆ ಕಳುಹಿಸಲಾಗಿತ್ತು.

‘ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದು ಮಂಡಿಸಿ’ ಎಂದು ಷರಾ ಬರೆದಿರುವ ರಾಜ್ಯಪಾಲ ವಜುಭಾಯಿ ವಾಲಾ, ಸುಗ್ರೀವಾಜ್ಞೆಯ ಕಡತವನ್ನು ಮಂಗಳವಾರ ಸಂಜೆ ವಾಪಸ್ ಕಳುಹಿಸಿದ್ದಾರೆ ಎಂದು ಮೂಲಗಳು ‘ಪ್ರಜಾವಾಣಿ‘ಗೆ ಖಚಿತಪಡಿಸಿವೆ. 

’ತತ್‌ಕ್ಷಣವೇ ಕಾಯ್ದೆಗೆ ತಿದ್ದುಪಡಿ ತಂದು ಈ ಸಂಬಂಧ ಕೇಂದ್ರಕ್ಕೆ ಮಾಹಿತಿ ಸಲ್ಲಿಸಬೇಕು’ ಎಂದು ಇದೇ 5ರಂದು ಕೇಂದ್ರ ಕೃಷಿ ಸಚಿವಾಲಯ ರಾಜ್ಯಕ್ಕೆ ಪತ್ರ ಬರೆದಿತ್ತು. ಕೇಂದ್ರದ ನಿರ್ದೇಶನದ ಮೇರೆಗೆ ಸಚಿವ ಸಂಪುಟದ ಒಪ್ಪಿಗೆ ಪಡೆಯದೇ ಸುಗ್ರೀವಾಜ್ಞೆ ತರಲು ನಿರ್ಧರಿಸಲಾಗಿತ್ತು. ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದು ಮತ್ತೊಮ್ಮೆ ರಾಜ್ಯಪಾಲರ ಮುಂದೆ ಮಂಡಿಸಲಾಗುವುದು ಎಂದು ಮೂಲಗಳು ಹೇಳಿವೆ.

ಎಪಿಎಂಸಿಗೆ ಬಾಗಿಲು: ಈಗಿರುವ 1966ರ ಎಪಿಎಂಸಿ ಕಾಯ್ದೆಯು ರೈತರ ಹಿತವನ್ನೇ ಪ್ರಧಾನವಾಗಿ ಹೊಂದಿದೆ. 1986ರಲ್ಲಿ ಇದಕ್ಕೆ ತಿದ್ದುಪಡಿ ತಂದು ಕಾಯ್ದೆಯನ್ನು ಮತ್ತ‌ಷ್ಟು ಬಲಿಷ್ಠಗೊಳಿಸಲಾಗಿತ್ತು. 

ರೈತರು ಬೆಳೆಯುವ  ಕೃಷಿ ಉತ್ಪನ್ನಗಳನ್ನು ಎಪಿಎಂಸಿಗೆ ತಂದು ಮಾರಾಟ ಮಾಡಬೇಕು. ಖರೀದಿದಾರರು ಎಪಿಎಂಸಿಯಲ್ಲಿ ನೋಂದಣಿ ಮಾಡಿಸಿಕೊಂಡು, ಪರವಾನಗಿ ಪಡೆದು ಖರೀದಿ ಮಾಡುವಂತೆ ಇದು ಷರತ್ತು ಒಡ್ಡುತ್ತಿತ್ತು. ಆನ್‌ಲೈನ್‌ ವಹಿವಾಟು ಆರಂಭಿಸಿದ ಬಳಿಕ ದೇಶದ ಯಾವುದೇ ಮೂಲೆಯಲ್ಲಿ ಕುಳಿತಾದರೂ ಬಿಡ್ ಮಾಡಲು ಅವಕಾಶ ಕಲ್ಪಿಸಲಾಗಿತ್ತು.

ಗ್ರಾಹಕರಿಗೆ ಪೂರೈಸುವ ಹಾಗೂ ಸಂಸ್ಕರಿತ, ಪ್ಯಾಕೇಜ್ ಆಹಾರ ಪೂರೈಸುವ ದೊಡ್ಡ ಕಾರ್ಪೊರೇಟ್ ಕಂಪನಿಗಳು, ಬಹುರಾಷ್ಟ್ರೀಯ ಕಂಪನಿಗಳು ರೈತರಿಂದ ನೇರವಾಗಿ ಖರೀದಿಸಲು ಸಾಧ್ಯವಿರಲಿಲ್ಲ. ಎಪಿಎಂಸಿಯಲ್ಲಿ ಪರವಾನಗಿ ಪಡೆದ ವ್ಯಾಪಾರಿಗಳಿಂದ ಖರೀದಿಸಬಹುದಿತ್ತು. ತಮ್ಮದೇ ಪ್ರಾಂಗಣ (ಯಾರ್ಡ್‌) ಹೊಂದಿರುವ ಕಂಪನಿಗಳು ರೈತರಿಂದ ಖರೀದಿ ಮಾಡಬೇಕಾದರೆ ಕೃಷಿ ಮಾರುಕಟ್ಟೆ ನಿರ್ದೇಶನಾಲಯದ ಜತೆ ಒಪ್ಪಂದ ಮಾಡಿಕೊಳ್ಳುವುದು ಕಡ್ಡಾಯವಾಗಿತ್ತು. ಇದರ ಹಿಂದೆ ರೈತರಿಗೆ ಅಲ್ಪ ಮಟ್ಟಿನ ಬೆಲೆ ಖಾತ್ರಿ ಕೊಡಿಸುವ ಉದ್ದೇಶ ಇತ್ತು.

ಎಪಿಎಂಸಿ ಪ್ರಾಂಗಣದಿಂದ ಹೊರಗೆ ಅಥವಾ ಒಡಂಬಡಿಕೆಯ ಪ್ರಾಂಗಣ ಹೊಂದಿದವರು ಮಾತ್ರ ಖರೀದಿ ಮಾಡಬಹುದು ಎಂಬ ಷರತ್ತನ್ನು ತೆಗೆದು ಹಾಕಿ ಸುಗ್ರೀವಾಜ್ಞೆ ತರಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

ವಾಲ್ ಮಾರ್ಟ್‌, ಜಿಯೋ  ಮಾರ್ಕೆಟಿಂಗ್‌, ಅಮೆಜಾನ್‌, ಫ್ಲಿಪ್‌ಕಾರ್ಟ್‌ನಂತಹ ಕಂಪನಿಗಳಿಗೆ ಅವಕಾಶ ಮಾಡಿಕೊಡಲು ಇದನ್ನು ತರಲಾಗುತ್ತಿದೆ. ಅದಕ್ಕಾಗಿ ಲಾಕ್ ಡೌನ್ ಸಮಯದಲ್ಲೇ ತಿದ್ದುಪಡಿ ತರುವಂತೆ ಕೇಂದ್ರ ಒತ್ತಡ ಹೇರಿದೆ ಎಂದು ರೈತ ಸಂಘಟನೆಗಳು ಆಪಾದಿಸಿವೆ.

ಕಾರ್ಮಿಕ ಕಾಯ್ದೆ ತಿದ್ದುಪಡಿಗೂ ಸುಗ್ರೀವಾಜ್ಞೆ

ಕಾರ್ಮಿಕರ ದುಡಿಮೆಯ ಅವಧಿಯನ್ನು 12 ಗಂಟೆಗೆ ಹೆಚ್ಚಿಸುವುದೂ ಸೇರಿದಂತೆ ಹಲವು ಮಾರ್ಪಾಡುಗಳನ್ನು ಒಳಗೊಂಡಿರುವ ಕಾರ್ಮಿಕ ಕಾಯ್ದೆಗೆ ತಿದ್ದುಪಡಿಗಾಗಿ ಸುಗ್ರೀವಾಜ್ಞೆ ತರಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ.

ಕಾರ್ಮಿಕರ ಹಿತಕಾಯುವ ಕಾಯ್ದೆಗೆ ತರಾತುರಿಯಲ್ಲಿ ತಿದ್ದುಪಡಿ ತರುವ ಅವಶ್ಯಕತೆ ಏನಿದೆ ಎಂದು ಕಾರ್ಮಿಕ ಸಂಘಟನೆಗಳು, ವಿರೋಧ ಪಕ್ಷದ ನಾಯಕರು ಪ್ರಶ್ನಿಸಿದ್ದಾರೆ.

‘ಉದ್ಯಮಿಗಳನ್ನು ಕಾಪಾಡಲು ಹೊಸ ಕಾನೂನು ತರುವ ಅಗತ್ಯವಿಲ್ಲ’ ಎಂದು ಜೆಡಿಎಸ್ ನಾಯಕ ಎಚ್‌.ಡಿ.ಕುಮಾರಸ್ವಾಮಿ ಪ್ರತಿಪಾದಿಸಿದ್ದಾರೆ.

‘ಕಾರ್ಮಿಕರ ಕಾನೂನುಗಳನ್ನು ಅಮಾನತು ಮಾಡಿ ಕೈಗಾರಿಕೆಗಳ ಆಡಳಿತ ವರ್ಗಕ್ಕೆ ಸಹಾಯ ಮಾಡಲು ಸರ್ಕಾರ ಹೊರಟಿದೆ’ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

***

ಕಾಯ್ದೆ ತಿದ್ದುಪಡಿಯು ಬಹುರಾಷ್ಟ್ರೀಯ ಕಂಪನಿಗಳಿಗೆ ಅನುಕೂಲ ಮಾಡಿಕೊಡಲು ನಡೆಸಿರುವ ಸಂಚು. ಇದರಿಂದ ರೈತರಿಗೆ ಭಾರಿ ಅನ್ಯಾಯವಾಗಲಿದೆ.

- ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು