ಸೋಮವಾರ, ಜುಲೈ 13, 2020
29 °C

ಮೂರು ಜಿಲ್ಲೆಗಳಲ್ಲಿ 'ಆರೆಂಜ್ ಅಲರ್ಟ್'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ದಕ್ಷಿಣ ಕನ್ನಡ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ ಇದೇ 30 ಮತ್ತು 31ರಂದು ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆಯಾಗಲಿದ್ದು, ಎರಡೂ ದಿನಗಳ ಕಾಲ 'ಆರೆಂಜ್ ಅಲರ್ಟ್' ಘೋಷಿಸಿರುವುದಾಗಿ ಹವಾಮಾನ ಇಲಾಖೆ ತಿಳಿಸಿದೆ.

ಉಡುಪಿ, ಉತ್ತರ ಕನ್ನಡ, ಚಾಮರಾಜನಗರ, ಹಾಸನ, ಕೋಲಾರ, ಮೈಸೂರು, ಮಂಡ್ಯ, ರಾಮನಗರ, ತುಮಕೂರು ಜಿಲ್ಲೆಗಳಲ್ಲೂ ಭಾರಿ ಮಳೆಯಾಗುವ ಸಾಧ್ಯತೆ ಇದ್ದು,'ಯೆಲ್ಲೊ ಅಲರ್ಟ್' ಘೋಷಿಸಿದೆ. ಜೂನ್ 1ರಿಂದ ಕರಾವಳಿಯಲ್ಲಿ ಹೆಚ್ಚು ಮಳೆಯಾಗಲಿದೆ. ಉತ್ತರ ಒಳನಾಡಿನ ಕೆಲವೆಡೆ ಗುಡಗು, ಸಿಡಿಲು ಸಹಿತ ಚದುರಿದಂತೆ ಮಳೆಯಾಗಲಿದೆ.

ಚಾಮರಾಜನಗರ ಜಿಲ್ಲೆಯ ಯಳಂದೂರಿನಲ್ಲಿ ಶುಕ್ರವಾರ 6 ಸೆಂ.ಮೀ ಮಳೆಯಾಗಿದೆ. ಮಲೆಮಹದೇಶ್ವರ ಬೆಟ್ಟ 4, ಮಾಲೂರು, ಕನಕಪುರ, 3, ಮೈಸೂರು, ಬೇಗೂರು, ಕೃಷ್ಣರಾಜಸಾಗರ 2, ಮಂಡ್ಯ, ಪಾಂಡವಪುರ, ಮಳವಳ್ಳಿ, ಶ್ರೀರಂಗಪಟ್ಟಣ, ಹೊಸಕೋಟೆ, ಬಂಗಾರಪೇಟೆ, ರಾಮನಗರದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ. ಕಲಬುರ್ಗಿಯಲ್ಲಿ 42.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ.

ಸಿಡಿಲಿಗೆ ಯುವಕ, ಆಡುಗಳು ಸಾವು

ಬೆಂಗಳೂರು: ಬೀದರ್, ಕಲಬುರ್ಗಿ, ಕೊಡಗು ಜಿಲ್ಲೆಯ ವಿವಿಧೆಡೆ ಮಳೆಯಾಗಿದೆ. ಬೀದರ್‌ ಜಿಲ್ಲೆಯಲ್ಲಿ ಸಿಡಿಲು ಬಡಿದು ಯುವಕರೊಬ್ಬರು ಸತ್ತಿದ್ದಾರೆ. ಇನ್ನೊಂದು ಪ್ರಕರಣದಲ್ಲಿ 15 ಆಡುಗಳು ಸಿಡಿಲಿಗೆ ಬಲಿಯಾಗಿವೆ.

ಬೀದರ್ ಜಿಲ್ಲೆಯಲ್ಲಿ ಔರಾದ್ ತಾಲ್ಲೂಕಿನ ಹಿಪ್ಪಳಗಾಂವ ಗ್ರಾಮದಲ್ಲಿ ಶುಕ್ರವಾರ ಸಿಡಿಲು ಬಡಿದು ಮಾರುತಿ ಅಶೋಕ ಸಿಂಗೋಡೆ (28) ಸಾವನ್ನಪ್ಪಿದ್ದಾರೆ. ಠಾಣಾಕುಶನೂರ ಸಮೀಪದ ತಾಂಡಾದಲ್ಲಿ ಪ್ರತಾಪ ಆಡೆ ಅವರಿಗೆ ಸೇರಿದ 15 ಆಡುಗಳು ಸಿಡಿಲಿಗೆ ಬಲಿಯಾಗಿವೆ.

ಕಮಲನಗರ, ಔರಾದ್ ಹಾಗೂ ಭಾಲ್ಕಿಯಲ್ಲಿ ಶುಕ್ರವಾರ ಸಾಧಾರಣ ಮಳೆಯಾಗಿದೆ. ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ವೆಂಕಟಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಜೆ 40 ನಿಮಿಷಕ್ಕೂ ಹೆಚ್ಚು ಹೊತ್ತು ಉತ್ತಮ ಮಳೆಯಾಯಿತು.

ಕೊಡಗು ಜಿಲ್ಲೆಯ ಕುಶಾಲನಗರ, ಕೂಡಿಗೆ, ಹೆಬ್ಬಾಲೆಯಲ್ಲಿ ಶುಕ್ರವಾರ ಸಾಧಾರಣ ಮಳೆಯಾಗಿದೆ. ಮೈಸೂರಿನಲ್ಲಿ, ಮಂಡ್ಯ ಜಿಲ್ಲೆಯ ನಾಗಮಂಗಲ, ಚಾಮರಾಜನಗರ ಜಿಲ್ಲೆಯ ಯಳಂದೂರು, ಗುಂಡ್ಲುಪೇಟೆ, ಕೊಳ್ಳೇಗಾಲದಲ್ಲಿ ರಾತ್ರಿ ಬಿರುಸಿನ ಮಳೆಯಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು