ಸೋಮವಾರ, ಆಗಸ್ಟ್ 3, 2020
23 °C
ಪ್ರತಿ ವರ್ಷದಂತೆ ಈ ಬೇಸಿಗೆಯಲ್ಲಿಲ್ಲ ಚಿಣ್ಣರ ಅಂಗಳ ಶೈಕ್ಷಣಿಕ ಕಾರ್ಯಕ್ರಮ

ಶಿಕ್ಷಕರು ಚುನಾವಣೆಯೊಳಗೆ, ಮಕ್ಕಳು ಶಾಲೆ ಹೊರಗೆ!

ಪೀರ್‌ಪಾಷಾ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪಾಠ ಮಾಡುವ ಶಿಕ್ಷಕರೆಲ್ಲ ಚುನಾವಣಾ ಕೆಲಸಕ್ಕೆ ನಿಯೋಜನೆಗೊಂಡಿರುವುದರಿಂದ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಪಾಠಶಾಲೆಯೊಳಗೆ ಕರೆತರುವ ವಿಶೇಷ ಶೈಕ್ಷಣಿಕ ಕಾರ್ಯಕ್ರಮಗಳು ಈ ಬೇಸಿಗೆಯಲ್ಲಿ ನಡೆಯುತ್ತಿಲ್ಲ.

ವಯಸ್ಕರ ಮೂಲಭೂತ ಹಕ್ಕಾದ ಮತ ಚಲಾವಣೆಗೆ ಶಿಕ್ಷಕರು ಶ್ರಮಿಸುತ್ತಿರುವುದರಿಂದ, ಮಕ್ಕಳು ತಮ್ಮ ಮೂಲಭೂತ ಹಕ್ಕಾದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಶೈಕ್ಷಣಿಕ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಇಲಾಖೆ ಯೋಜಿತ ಪೂರ್ವತಯಾರಿ ಮಾಡಿಕೊಳ್ಳದಿರುವುದರಿಂದಲೇ ಇಂತಹ ಪರಿಸ್ಥಿತಿ ಎದುರಾಗಿದೆ ಎಂದು ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಶಿಕ್ಷಣ ಇಲಾಖೆಯು ಪ್ರತಿವರ್ಷ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಸಮೀಕ್ಷೆಯಿಂದ ಗುರುತಿಸುತ್ತದೆ. ಅಕ್ಷರ ಜ್ಞಾನದಿಂದ ವಂಚಿತರಾದ ಆ ಮಕ್ಕಳನ್ನು ಮರಳಿ ನಿರ್ದಿಷ್ಟ ತರಗತಿಗಳಿಗೆ ದಾಖಲಾಗುವಂತೆ ಮಾಡಲು ಪ್ರತಿ ಬೇಸಿಗೆಯಲ್ಲಿ ವಿಶೇಷ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದೆ. ಈ ಬಾರಿ ಚುನಾವಣಾ ಕಾರ್ಯದ ಕಾರಣ ಮುಂದಿಟ್ಟುಕೊಂಡು ಆ ಶೈಕ್ಷಣಿಕ ಚಟುವಟಿಕೆಗಳನ್ನು ಸದ್ಯ ಕೈಬಿಟ್ಟಿದೆ.

‘ಅಗತ್ಯವಾಗಿರುವ ಶೈಕ್ಷಣಿಕ ಕಾರ್ಯಕ್ರಮಗಳನ್ನು ಚುನಾವಣೆಯ ನೆಪದಿಂದ ನಿಲ್ಲಿಸಬಾರದು. ಒಂದು ಬೇಸಿಗೆಯಲ್ಲಿ ಇಂತಹ ಕಾರ್ಯಕ್ರಮಗಳು ನಡೆಯದಿದ್ದರೆ, ಶಾಲೆಯಿಂದ ಹೊರಗುಳಿದ ಮಕ್ಕಳ ಒಂದು ವರ್ಷದ ಕಲಿಕಾ ಅವಧಿಯನ್ನು ಕಿತ್ತುಕೊಂಡಂತೆ ಆಗುತ್ತದೆ’ ಎಂದು ಶಿಕ್ಷಣ ತಜ್ಞ ವಿ.ಪಿ.ನಿರಂಜನಾರಾಧ್ಯ ಅಭಿಪ್ರಾಯಪಟ್ಟರು.

‘ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗಳಿಗೆ ಕರೆತರಬೇಕು ಎಂಬ ಕಾಳಜಿ ಇಲಾಖೆಗೆ ಇದೆ. ಹಾಗಾಗಿ ಚಿಣ್ಣರ ಅಂಗಳ, ಚಿಣ್ಣರ ತಂಗುಧಾಮದಂತಹ ಕಾರ್ಯಕ್ರಮಗಳನ್ನು ಜೂನ್‌ ತಿಂಗಳಿನಿಂದ ಆರಂಭಿಸಲು ಯೋಜಿಸುತ್ತಿದ್ದೇವೆ’ ಎಂದು ಸಮಗ್ರ ಶಿಕ್ಷಣ ಅಭಿಯಾನದ ರಾಜ್ಯ ಯೋಜನಾ ನಿರ್ದೇಶಕ ಎಂ.ಟಿ.ರೇಜು ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಶೈಕ್ಷಣಿಕ ವರ್ಷ ಪ್ರಾರಂಭವಾದರೆ ಶಿಕ್ಷಕರಿಗೆ ಪಠ್ಯಬೋಧನೆಯೊಂದಿಗೆ ಪಠ್ಯೇತರ ಚಟುವಟಿಕೆಗಳ ಕೆಲಸವೂ ಇರುತ್ತದೆಯಲ್ಲ ಎಂದು ಕೇಳಿದರೆ, ‘ಪ್ರಾಮಾಣಿಕವಾಗಿ ಹಾಗೂ ಆತ್ಮಸಾಕ್ಷಿಯಿಂದ ಕೆಲಸ ಮಾಡುವ ಶಿಕ್ಷಕರೆಲ್ಲ ಇಲಾಖೆ ಸೂಚಿಸುವ ಕೆಲಸಗಳನ್ನು ಚಾಚೂ ತಪ್ಪದೆ ಮಾಡಿಕೊಂಡು ಬಂದಿದ್ದಾರೆ. ಅದೇ ರೀತಿ ಈ ಜವಾಬ್ದಾರಿಯನ್ನೂ ನಿಭಾಯಿಸಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಂಗಾರಿನ(ಜೂನ್‌) ಬಳಿಕ ಗ್ರಾಮೀಣ ಪ್ರದೇಶಗಳಲ್ಲಿ ಬಹುತೇಕ ಮಕ್ಕಳು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಅವರನ್ನು ಮತ್ತೆ ಶಾಲೆಗಳಿಗೆ ಕರೆತರುವುದು ಕಷ್ಟಸಾಧ್ಯವಲ್ಲವೇ ಎಂದು ಕೇಳಿದಾಗ,‘ಆದಷ್ಟು ಪ್ರಯತ್ನವನ್ನು ನಮ್ಮ ಶಿಕ್ಷಕರು ಮಾಡಲಿದ್ದಾರೆ’ ಎಂದರು.
*

ಚುನಾವಣೆ ಮುಗಿದ ತಕ್ಷಣ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಶೈಕ್ಷಣಿಕ ಕಾರ್ಯಕ್ರಮ ಆರಂಭಿಸಲು ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಳ್ಳುತ್ತೇವೆ.

ಫಾದರ್‌ ಆ್ಯಂಟನಿ ಸೆಬಾಸ್ಟಿಯನ್‌, ಅಧ್ಯಕ್ಷ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ

*

ಶಾಲೆ ಬಿಟ್ಟ ಮಕ್ಕಳನ್ನು ಕರೆತರಲು ಇರುವ ಕಾರ್ಯಕ್ರಮಗಳು

* ವಸತಿ ಸಹಿತ ವಿಶೇಷ ಕಲಿಕೆ(ಚಿಣ್ಣರ ಅಂಗಳ, ಚಿಣ್ಣರ ತಂಗುಧಾಮ)

* ವಸತಿರಹಿತ 6 ತಿಂಗಳ ವಿಶೇಷ ಕಲಿಕೆ (ಟೆಂಟ್‌ ಶಾಲೆಗಳು)

* ವಸತಿ ನಿಲಯಗಳ ವ್ಯವಸ್ಥೆ

**

ಅಂಕಿ–ಅಂಶ

70,116– ಶಾಲೆಯಿಂದ ಹೊರಗುಳಿದ ಮಕ್ಕಳು

39,059– ಶಾಲೆಯಿಂದ ಹೊರಗುಳಿದ ಬಾಲಕರು

31,054– ಶಾಲೆಯಿಂದ ಹೊರಗುಳಿದ ಬಾಲಕಿಯರು

3– ಶಾಲೆಬಿಟ್ಟ ತೃತೀಯಲಿಂಗಿ ಮಕ್ಕಳು

(2018–19ನೇ ಸಾಲಿನ ಸಮೀಕ್ಷೆ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು