ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿಥಿ ಶಿಕ್ಷಕರಿಗೆ ಬಾರದ ಗೌರವಧನ!

ಅತಂತ್ರವಾಗಿರುವ 22,150 ಮಂದಿ
Last Updated 18 ಡಿಸೆಂಬರ್ 2019, 19:41 IST
ಅಕ್ಷರ ಗಾತ್ರ

ಬೆಳಗಾವಿ: ರಾಜ್ಯದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರಿಗೆ ಬರೋಬ್ಬರಿ ಐದು ತಿಂಗಳಿಂದಲೂ ಗೌರವಧನ ನೀಡಿಲ್ಲ. ಜೀವನ ನಿರ್ವಹಿಸಲು ಈ ಶಿಕ್ಷಕರು ಪರದಾಡುವಂತಾಗಿದೆ.

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯು ತಾಲ್ಲೂಕು ಮಟ್ಟದಲ್ಲಿಯೇ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಅವಕಾಶ ಕಲ್ಪಿಸಿತ್ತು. 2019–20ನೇ ಸಾಲಿನಲ್ಲಿ 22,150 ಮಂದಿಯನ್ನು ನೇಮಕ ಮಾಡಿಕೊಂಡು, ಅವರ ಪೈಕಿ 11,585 ಶಿಕ್ಷಕರಿಗೆ ವರ್ಷ ಪೂರ್ತಿ ಕೆಲಸದ ಭರವಸೆ ನೀಡಲಾಗಿದೆ. ಉಳಿದವರಿಗೆ ಕಾಯಂ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಕೊನೆಗೊಳ್ಳುವ ತನಕ ಮಾತ್ರ ಎಂದು ಹೇಳಲಾಗಿದೆ.

ಜುಲೈ ಹಾಗೂ ಆಗಸ್ಟ್‌ನಿಂದ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಇದಾದ ಬಳಿಕ ಒಂದು ತಿಂಗಳ ಗೌರವಧನವೂ ಈ ‘ಅತಿಥಿ’ಗಳಿಗೆ ಸಿಕ್ಕಿಲ್ಲ.

‘ಕಾಯಂ ಶಿಕ್ಷಕರಿಗೆ ಸರಿಸಮನಾಗಿ ಕೆಲಸ ನಿರ್ವಹಿಸುವ ನಮಗೆ ಗೌರವಧನ ನೀಡದೇ ಅನ್ಯಾಯ ಮಾಡಲಾ
ಗುತ್ತಿದೆ. ಮುಖ್ಯಶಿಕ್ಷಕರು ಹಾಗೂ ಅಧಿಕಾರಿಗಳನ್ನು ಕೇಳಿದರೆ ‘ಈ ತಿಂಗಳು ಬರಬಹುದು’ ಎಂದೇ ಹೇಳುತ್ತಿದ್ದಾರೆ. ವೇತನವೇ ಬಾರದಿದ್ದರೆ ಕೆಲಸ ಮಾಡುವುದು ಹಾಗೂ ಜೀವನ ನಡೆಸುವುದು ಹೇಗೆ?’ ಎಂದು ಕೆಲವು ಶಿಕ್ಷಕರು ‘ಪ್ರಜಾವಾಣಿ’ಯೊಂದಿಗೆ ಅಳಲು ತೋಡಿಕೊಂಡರು.

ನಂಬಿಕೊಂಡಿದ್ದೇವೆ: ‘ಈ ಶೈಕ್ಷಣಿಕ ವರ್ಷದಲ್ಲಿ ನೇಮಕವಾದ ನಮಗೆ ವೇತನವೇ ಸಿಕ್ಕಿಲ್ಲ. ದೀಪಾವಳಿ ಹಬ್ಬಕ್ಕೆ ಮೊದಲನೇ ಕಂತು ಬಿಡುಗಡೆ ಆಗಬಹುದು ಎಂದು ನಂಬಿದ್ದೆವು. ಆದರೆ, ಬರಲಿಲ್ಲ. ಇದರಿಂದಾಗಿ ಬಹುತೇಕರು ಕುಟುಂಬ ನಿರ್ವಹಣೆಗೆ ಪರದಾಡುತ್ತಿದ್ದೇವೆ. ಡಿಸೆಂಬರ್‌ ಅಂತ್ಯಕ್ಕಾದರೂ ಗೌರವಧನ ನೀಡಿದರೆ ಅನುಕೂಲವಾಗುತ್ತದೆ’ ಎಂದು ಚಿಕ್ಕೋಡಿ ತಾಲ್ಲೂಕು ಗಳಗತಾದ ಪ್ರಣವ ಜಾಧವ ಕೋರಿದರು.

‘ಕಳೆದ ವರ್ಷ ಜನವರಿಯಲ್ಲಿ ಕೆಲವು ತಿಂಗಳ ಗೌರವಧನ ಕೊಡಲಾಗಿತ್ತು. ಹೀಗೆಲ್ಲ ವಿಳಂಬ ಮಾಡದೇ ಪ್ರತಿ ತಿಂಗಳೂ ನೀಡಿದರೆ ಅನುಕೂಲವಾಗುತ್ತದೆ’ ಎಂದು ಶಿಕ್ಷಕರೊಬ್ಬರು ಹೇಳಿದರು.

‘ನೆರೆ ಸಂತ್ರಸ್ತರ ಪರಿಹಾರಕ್ಕೆ ಹಣ ಹೊಂದಿಸಲು ಸರ್ಕಾರ ಆದ್ಯತೆ ನೀಡಿದೆ. ಹೀಗಾಗಿ, ಅತಿಥಿ ಶಿಕ್ಷಕರ ಗೌರವಧನ ಬಿಡುಗಡೆ ಮಾಡಿಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಅತಿಥಿ ಶಿಕ್ಷಕರಿಗೆ ಗೌರವಧನ ತಲುಪದ ದೂರುಗಳಿವೆ. ಈ ಮಾಸಾಂತ್ಯಕ್ಕೆ ಬಿಡುಗಡೆಯಾಗಲಿದೆ ಎಂದು ಮಾಹಿತಿ ಇದೆ.

- ಎ.ಬಿ. ಪುಂಡಲೀಕ, ಡಿಡಿಪಿಐ, ಬೆಳಗಾವಿ ಶೈಕ್ಷಣಿಕ ಜಿಲ್ಲೆ

ಈ ವಿಷಯ ನನ್ನ ಗಮನಕ್ಕೆ ಇದೀಗ ಬಂದಿದೆ. ಗೌರವಧನವನ್ನು ಕೂಡಲೇ ಬಿಡುಗಡೆ ಮಾಡಲು ಕ್ರಮ ಜರುಗಿಸುತ್ತೇನೆ.

- ಎಸ್.ಸುರೇಶ್ ಕುಮಾರ್‌, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT