ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೋನ್‌ ಕದ್ದಾಲಿಕೆ: ಅಲೋಕ್‌ ಕುಮಾರ್‌ ನಿವಾಸದಲ್ಲಿ ಸಿಬಿಐ ಅಧಿಕಾರಿಗಳ ಪರಿಶೀಲನೆ

Last Updated 26 ಸೆಪ್ಟೆಂಬರ್ 2019, 19:52 IST
ಅಕ್ಷರ ಗಾತ್ರ

ಬೆಂಗಳೂರು: ಎಚ್‌.ಡಿ. ಕುಮಾರಸ್ವಾಮಿಯವರ ಸರ್ಕಾರದಲ್ಲಿ ನಡೆದಿತ್ತು ಎನ್ನಲಾದ ರಾಜಕಾರಣಿಗಳು ಮತ್ತು ಅಧಿಕಾರಿಗಳ ಫೋನ್‌ ಕರೆಗಳ ಕದ್ದಾಲಿಕೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ ಸಿಬಿಐ ಅಧಿಕಾರಿಗಳು ಕೆಎಸ್‌ಆರ್‌ಪಿ ಎಡಿಜಿಪಿ ಅಲೋಕ್‌ ಕುಮಾರ್‌ ಅವರ ಮನೆ ಹಾಗೂ ಕಚೇರಿ ಮೇಲೆ ಗುರುವಾರ ಬೆಳಿಗ್ಗೆ ಶೋಧ ನಡೆಸಿದರು.

ಅಲೋಕ್ ಕುಮಾರ್ ಕುಟುಂಬದವರಿಗೆ ಮನೆಯೊಳಗೆ ದಿಗ್ಬಂಧನ ಹಾಕಲಾಗಿತ್ತು. ಮನೆ ಒಳಗಡೆಯಿಂದ ಚಿಲಕ ಹಾಕಲಾಗಿತ್ತು. ಮೊಬೈಲ್ ಫೋನ್ ಬಳಸದಂತೆ ಪೊಲೀಸ್‌ ಅಧಿಕಾರಿ ಹಾಗೂ ಕುಟುಂಬದವರಿಗೆ ನಿರ್ಬಂಧ ಹೇರಲಾಗಿತ್ತು. ಸಂಜೆಯ ವೇಳೆಗೆ ಶೋಧ ಕಾರ್ಯ ಮುಗಿಸಿ ಅಧಿಕಾರಿಗಳು ಹಿಂತಿರುಗಿದರು.

ದೇಶಾದ್ಯಂತ ಭಾರಿ ಸದ್ದು ಮಾಡಿದ ಫೋನ್‌ ಕರೆಗಳ ಕದ್ದಾಲಿಕೆ ಪ್ರಕರಣ, ರಾಜ್ಯ ರಾಜಕೀಯ ವಲಯದಲ್ಲೂ ಭಾರಿ ಕೋಲಾಹಲ ಸೃಷ್ಟಿಸಿತ್ತು. ಆನಂತರ, ಬಿ.ಎಸ್‌. ಯಡಿಯೂರಪ್ಪನವರ ಸರ್ಕಾರ ಇದರ ತನಿಖೆಯನ್ನು ಸಿಬಿಐಗೆ ಒಪ್ಪಿಸಿತ್ತು. ಫೋನ್ ಕದ್ದಾಲಿಕೆ ನಡೆದಿದ್ದ ಸಮಯದಲ್ಲಿ ಅಲೋಕ್‌ ಕುಮಾರ್‌ ಕೇಂದ್ರ ಅಪರಾಧ ವಿಭಾಗದ ಪೊಲೀಸ್‌ ಕಮಿಷನರ್‌ ಮತ್ತು ಬೆಂಗಳೂರು ಪೊಲೀಸ್‌ ಕಮಿಷನರ್‌ ಆಗಿ ಕಾರ್ಯ ನಿರ್ವಹಿಸಿದ್ದರು.

ಇಲ್ಲಿನ ಜಾನ್ಸನ್‌ ಮಾರುಕಟ್ಟೆ ಬಳಿಯಲ್ಲಿರುವ ಅಲೋಕ್‌ ಕುಮಾರ್ ಅವರ ಮನೆ ಮತ್ತು ನೃಪತುಂಗ ರಸ್ತೆಯ ಪೊಲೀಸ್‌ ಕೇಂದ್ರ ಸ್ಥಾನದಲ್ಲಿರುವ ಕಚೇರಿಗೆ ಎರಡು ಪ್ರತ್ಯೇಕ ತಂಡಗಳಲ್ಲಿ ಧಾವಿಸಿದ ಸಿಬಿಐ ಅಧಿಕಾರಿಗಳು, ಕದ್ದಾಲಿಕೆ ಮಾಡಿದ್ದ ಫೋನ್‌ ಕರೆಗಳ ಸಂಭಾಷಣೆ ಆಡಿಯೋ ಒಳಗೊಂಡ ಪೆನ್ ಡ್ರೈವ್ ಗಾಗಿ ತಡಕಾಡಿದರು. ಸೈಬರ್‌ ಕ್ರೈಂ ತಾಂತ್ರಿಕ ವಿಭಾಗದಿಂದ ಈ ಆಡಿಯೋ ಸಂಭಾಷಣೆಯನ್ನು ಪೆನ್ ಡ್ರೈವ್‌ನಲ್ಲಿ ಕಾಪಿ ಮಾಡಲಾಗಿತ್ತು.

ಅಲೋಕ್‌ ಕುಮಾರ್‌ ಅವರ ಸೂಚನೆ ಮೇಲೆ ತಾಂತ್ರಿಕ ವಿಭಾಗದ ಇನ್‌ಸ್ಪೆಕ್ಟರ್‌ ಮಿರ್ಜಾ ಅಲಿ ಪೆನ್ ಡ್ರೈವ್‌ನಲ್ಲಿ ಆಡಿಯೋ ಸಂಭಾಷಣೆಯನ್ನು ಕಾಪಿ ಮಾಡಿದ್ದರು. ಪೊಲೀಸ್‌ ಕಮಿಷನರ್‌ ಅವರೇ ಟಿ.ವಿ ಮಾಧ್ಯಮಗಳಿಗೆ ಅದನ್ನು ರವಾನಿಸಿದ್ದರು. ಈ ಸಂಗತಿಯನ್ನು ಮಿರ್ಜಾ ಅಲಿ ಸಿಬಿಐ ಅಧಿಕಾರಿಗಳಿಗೆ ಹೇಳಿದ್ದಾರೆ ಎನ್ನಲಾಗಿದೆ.

‘ಮಿರ್ಜಾ ಅಲಿ ಕೊಟ್ಟಿದ್ದ ಪೆನ್‌ ಡ್ರೈವ್‌ನಲ್ಲಿದ್ದ ಸಂಭಾಷಣೆಯನ್ನು ಕಾಪಿ ಮಾಡಿಕೊಂಡು ಅವರಿಗೇ ಡ್ರೈವ್‌ ಅನ್ನು ಹಿಂತಿರುಗಿಸಿದ್ದೆ’ ಎಂದು ಅಲೋಕ್‌ ಕುಮಾರ್‌ ಸಿಬಿಐಗೆ ತಿಳಿಸಿದ್ದರು. ಆದರೆ, ಅದನ್ನು ವಾಪಸ್‌ ಪಡೆದಿಲ್ಲ ಎಂದು ಮಿರ್ಜಾ ಹೇಳಿದ್ದಾರೆ. ಹೀಗಾಗಿ, ಸಿಬಿಐ ಅಧಿಕಾರಿಗಳು ಬುಧವಾರ ಕೋರ್ಟ್‌ನಿಂದ ಸರ್ಚ್‌ ವಾರೆಂಟ್ ಪಡೆದಿದ್ದರು.

ಕೆಲ ಫೋನ್‌ ಕರೆಗಳ ಆಡಿಯೋ ದತ್ತಾಂಶ (ಮಿರರ್ ಇಮೇಜ್) ಸಂಗ್ರಹಿಸಲಾಗಿದೆ ಎಂಬ ವಿಷಯ ತನಿಖೆಯಿಂದ ಗೊತ್ತಾಯಿತು. ಈ ದತ್ತಾಂಶ ಅಲೋಕ್ ಕುಮಾರ್ ಮನೆಯಲ್ಲಿರಬಹುದು ಎಂಬ ಶಂಕೆಯಿಂದ ಸಿಬಿಐ ದಾಳಿ ನಡೆಸಿದೆ. ಅವರ ಮನೆಯಲ್ಲಿ ಮಹತ್ವದ ದಾಖಲೆಗಳು ಸಿಕ್ಕಿವೆ ಎನ್ನಲಾಗಿದೆ.

ಸಿಬಿಐ, ಫೋನ್ ಕರೆಗಳ ಕದ್ದಾಲಿಕೆಗೆ ಸಂಬಂಧಿಸಿದಂತೆ ಈಗಾಗಲೇ ಕೆಲವು ಇನ್‌ಸ್ಪೆಕ್ಟರ್‌ಗಳು, ಎಸಿಪಿಗಳು ಹಾಗೂ ಟಿ.ವಿ ಮಾಧ್ಯಮದ ಪ್ರತಿನಿಧಿಗಳನ್ನು ಪ್ರಶ್ನಿಸಿದೆ.

ಹೂಡಿಕೆದಾರರಿಂದ ₹ 80 ಕೋಟಿಗೂ ಅಧಿಕ ಹಣ ದೋಚಿರುವ ಇಂಜಾಜ್‌ ಇಂಟರ್‌ ನ್ಯಾಷನಲ್‌ ಸಂಸ್ಥೆ ಮಾಲೀಕ ಮಿಸ್ಬಾವುದ್ದೀನ್‌ ಎಂಬಾತನ ಚಲನವಲನದ ಮೇಲೆ ನಿಗಾ ಇಡಲು ಸಿಸಿಬಿ ಪೊಲೀಸರು ಫೋನ್‌ ಕರೆಗಳ ಕದ್ದಾಲಿಕೆ ಮಾಡುತ್ತಿದ್ದಾಗ, ಫರಾಜ್‌ ಎಂಬಾತನ ಜತೆ ಈಗಿನ ಪೊಲೀಸ್‌ ಕಮಿಷನರ್‌ ಭಾಸ್ಕರರಾವ್‌ ನಡೆಸಿದ್ದಾರೆನ್ನಲಾದ ಸಂಭಾಷಣೆ ರೆಕಾರ್ಡ್‌ ಆಗಿತ್ತು.

ಬಿಎಸ್‌ವೈ ಸರ್ಕಾರ ರಾವ್‌ ಅವರನ್ನು ಆಗಸ್ಟ್‌ 2ರಂದು ಪೊಲೀಸ್‌ ಕಮಿಷನರ್‌ ಆಗಿ ನೇಮಿಸುವ ತೀರ್ಮಾನ ಮಾಡಿದ್ದರಿಂದ ಅಲೋಕ್‌ ಕುಮಾರ್‌ ಅಸಮಾಧಾನಗೊಂಡು ಅದನ್ನು ಟಿ.ವಿ ಚಾನಲ್‌ಗಳಿಗೆ ಬಿಡುಗಡೆ ಮಾಡಿದ್ದರು. ಇದರಿಂದ ಇಡೀ ಪ್ರಕರಣ ಬಯಲಾಯಿತು ಎಂದು ಹೇಳಲಾಗುತ್ತಿದೆ.

ಅಲೋಕ್‌ ಕುಮಾರ್‌ ಮನೆಗೆ ಕಾರಿನಲ್ಲಿ ಬಂದಿದ್ದ ಸಿಬಿಐ ಅಧಿಕಾರಿಗಳು
ಅಲೋಕ್‌ ಕುಮಾರ್‌ ಮನೆಗೆ ಕಾರಿನಲ್ಲಿ ಬಂದಿದ್ದ ಸಿಬಿಐ ಅಧಿಕಾರಿಗಳು

ಎಚ್‌ಡಿಕೆ ಪಾತ್ರ ಕುರಿತು ಪರಿಶೀಲನೆ?
‘ಫೋನ್‌ ಕರೆಗಳ ಕದ್ದಾಲಿಕೆ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರ ಕೈವಾಡ ಇದೆಯೇ?’ ಎಂಬ ಬಗ್ಗೆ ಸಿಬಿಐ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ದಾಳಿಗೂ ನನಗೂ ಸಂಬಂಧವಿಲ್ಲ: ಎಚ್‌ಡಿಕೆ
‘ಅಲೋಕ್‌ ಕುಮಾರ್‌ ಮನೆ ಮೇಲೆ ಸಿಬಿಐ ದಾಳಿ ನಡೆಸಿದ್ದಕ್ಕೂ, ನನಗೂ ಸಂಬಂಧ ಇಲ್ಲ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌. ಡಿ. ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

‘ಅವರ ಮನೆ ಮೇಲೆ ದಾಳಿ ನಡೆದರೆ ನಾನೇಕೆ ತಲೆ ಕೆಡಿಸಿಕೊಳ್ಳಲಿ?ನನ್ನ ತನಿಖೆಗೆ ಬೇಕಾದರೂ ಬರಲಿ,ದೇಶದ ಕಾನೂನು ಯಾರ ಮೇಲೆ ಬೇಕಾದರೂ ತನಿಖೆ ನಡೆಸಲು ಅವಕಾಶ ನೀಡಿದೆ.ಅದಕ್ಕೆ ಯಾಕೆ ಗಾಬರಿ ಆಗಬೇಕು. ಅಲೋಕ್ ಕುಮಾರ್ ಈಗಲೂ ದಕ್ಷ ಅಧಿಕಾರಿ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.‌

‘ಎಲ್ಲರ ಅವಧಿಯಲ್ಲೂ ಫೋನ್‌ ಕದ್ದಾಲಿಕೆ ಮಾಡುತ್ತಾರೆ. ಇದರ ಬಗ್ಗೆ ನನ್ನನ್ನು ಏಕೆ ಕೇಳುತ್ತೀರಿ, ನನಗೇನು ಸಂಬಂಧ?’ ಎಂದು ಅವರು ಸಿಡುಕಿದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT