ಸೋಮವಾರ, ನವೆಂಬರ್ 18, 2019
25 °C
ಹೊಸಪೇಟೆ ಪೊಲೀಸರಿಂದ 13 ಆರೋಪಿಗಳ ಬಂಧನ, ₹62 ಲಕ್ಷದ ಸ್ವತ್ತು ವಶ

ಬಳ್ಳಾರಿ ಜೈಲಲ್ಲಿದ್ದುಕೊಂಡೇ ಮನೆಗಳವಿಗೆ ಸಂಚು!

Published:
Updated:

ಬಳ್ಳಾರಿ: ಹೊಸಪೇಟೆಯ ಆಭರಣ ವ್ಯಾಪಾರಿ ಗುರುರಾಜ್‌ ಅವರ ಮನೆಯಲ್ಲಿ 1 ಕೆಜಿ 220 ಗ್ರಾಂ ಚಿನ್ನಾಭರಣ ಹಾಗೂ ₨ 9 ಲಕ್ಷ ನಗದು ಕಳವು ಮಾಡಲು ಬಳ್ಳಾರಿ ಜೈಲಿನಲ್ಲೇ ಸಂಚು ರೂಪುಗೊಂಡಿತ್ತು ಎಂಬುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.

‘ಜೈಲಿನಲ್ಲಿದ್ದುಕೊಂಡೇ ಶೋಯೆಬ್‌, ಶ್ಯಾಂ ಮತ್ತು ಹನುಮಂತ ಎಂಬುವವರು ಸಂಚು ರೂಪಿಸಿದ್ದರು. ಅದಕ್ಕೆ ತಕ್ಕಂತೆ, ಹೊರಗಿದ್ದ ಆರೋಪಿಗಳು ಕಳವು ಮಾಡಿದ್ದರು. ಆ ಹಿನ್ನೆಲೆಯಲ್ಲಿ ಒಟ್ಟು 13 ಮಂದಿಯನ್ನು ಬಂಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ನಗರದ ತಮ್ಮ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಜೈಲಿನಲ್ಲಿದ್ದವರು ಹೇಗೆ ಸಂಚು ರೂಪಿಸಿದ್ದರು. ಕಳವು ಪ್ರಕರಣ ಹೇಗೆ ನಡೆಯಿತು. ಬಂಧಿತ ಆರೋಪಿಗಳ ನಡುವಿನ ಸಂಬಂಧಗಳ ಕುರಿತು ಹೆಚ್ಚಿನ ಮಾಹಿತಿಯನ್ನು ಸದ್ಯಕ್ಕೆ ನೀಡಲು ಸಾಧ್ಯವಿಲ್ಲ’ ಎಂದು ಎಸ್ಪಿ ಹೇಳಿದರು.

‘ಸೆಪ್ಟೆಂಬರ್‌ 17ರಂದು ನಡೆದಿದ್ದ ಮನೆಗಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸಪೇಟೆ ಪೊಲೀಸರು ಅಕ್ಟೋಬರ್‌ 14ರಂದು ಆರೋಪಿಗಳಾದ ಬೆಂಗಳೂರಿನ ಸಚಿನ್‌, ಹೊಸಪೇಟೆಯ ದರ್ಶನ್‌ ಮತ್ತು ಗೋಣಿಬಸಪ್ಪ ಅವರನ್ನು ಬಂಧಿಸಿ ಅವರಿಂದ ಸ್ವಲ್ಪ ಪ್ರಮಾಣದ ಆಭರಣ, ಬೈಕ್‌ ವಶಪಡಿಸಿಕೊಂಡಿದ್ದರು. ನ್ಯಾಯಾಲಯದ ಮುಂದೆ ಹಾಜರುಪಡಿಸಿ ಮತ್ತೆ ವಶಕ್ಕೆ ಪಡೆದು ಹೆಚ್ಚಿನ ತನಿಖೆ ನಡೆಸಿದಾಗ, ಆರೋಪಿಗಳು ಹೊಸಪೇಟೆಯಲ್ಲಿ 2017ರಿಂದ 2019ರವರೆಗೆ 1 ಸರ, 2 ಮೋಟರ್‌ ಸೈಕಲ್ ಕಳವು ಹಾಗೂ 2 ಮನೆಗಳಲ್ಲಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡರು’ ಎಂದು ತಿಳಿಸಿದರು.

‘ಈ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ, ಕಮಲಾಪುರದ ಬಸವರಾಜ, ಸಂಡೂರಿನ ಗುರ್ರಪ್ಪ, ಹಗರಿಬೊಮ್ಮನಹಳ್ಳಿಯ ಫೈರೋಜ್‌, ಸಂದೀಪ್‌, ಕರೀಂ ಹಾಗೂ ಆರು ಮಂದಿಯನ್ನು ಬಂಧಿಸಿ 1ಕೆಜಿ 225 ಗ್ರಾಂ ಚಿನ್ನಾಭರಣ, ₨ 16 ಲಕ್ಷ ನಗದು, ಬೈಕ್‌ ಸೇರಿ ₨ 62 ಲಕ್ಷ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

‘ಹೊಸಪೇಟೆಯಲ್ಲಿ ಹೆಚ್ಚು ಕಳವು ಪ್ರಕರಣಗಳು ನಡೆಯುತ್ತಿದ್ದುದು, ಗುರುರಾಜ್‌ ಅವರ ಮನೆಯಲ್ಲಿ ಹೆಚ್ಚಿನ ಮೊತ್ತ ಕಳುವಾಗಿದ್ದ ಹಿನ್ನೆಲೆಯಲ್ಲೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಲಾವಣ್ಯ ನೇತೃತ್ವದಲ್ಲಿ ಹೊಸಪೇಟೆ ಉಪವಿಭಾಗದ ಇನ್‌ಸ್ಪೆಕ್ಟರ್‌ಗಳಾದ ಸಿದ್ದೇಶ್ವರ್‌,ಪರಸಪ್ಪ ಭಜಂತ್ರಿ, ಪ್ರಸಾದ್‌ ಗೋಖಲೆ, ನಾರಾಯಣ, ಮಹಾಂತೇಶ್‌ ಸಜ್ಜನ್‌, ಸುಭಾಷ್‌ ಅವರನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು. ಅವರೊಂದಿಗೆ ತಳಹಂತದ ಸಿಬ್ಬಂದಿ ಸೇರಿ ಉತ್ತಮ ಪರಿಶ್ರಮ ತೋರಿದ್ದಾರೆ’ ಎಂದು ಶ್ಲಾಘಿಸಿದರು.

ಜೈಲಲ್ಲಿರುವ ಅಣ್ಣನೇ ಸೂತ್ರಧಾರಿ!

ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸಚಿನ್‌ ಅಣ್ಣನಾದ ಶ್ಯಾಂ ಬಳ್ಳಾರಿ ಜೈಲಿನಲ್ಲಿದ್ದುಕೊಂಡೇ ಇಡೀ ಪ್ರಕರಣವನ್ನು ಆರಂಭದಿಂದ ಅಂತ್ಯದವರೆಗೂ ರೂಪಿಸಿದ್ದ’ ಎಂದು ತನಿಖಾ ತಂಡದಲ್ಲಿದ್ದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರಕರಣದ ಬಗ್ಗೆ ಜೈಲಲ್ಲಿದ್ದುಕೊಂಡೇ ಶ್ಯಾಂ ತನ್ನ ತಮ್ಮನೊಂದಿಗೆ ಮೊಬೈಲ್‌ಫೋನ್‌ನಲ್ಲಿ ಮಾತನಾಡಿರುವ ದಾಖಲೆಗಳು ಲಭ್ಯವಾಗಿವೆ. ಜೈಲಲ್ಲಿ ಆತನಿಗೆ ಹೇಗೆ ಫೋನ್‌ ದೊರಕಿತು ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ’ ಎಂದು ಮಾಹಿತಿ ನೀಡಿದರು.

ಪ್ರತಿಕ್ರಿಯಿಸಿ (+)