ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಘೋಷಿಸಿದ್ದು ‘ಬೋಗಸ್‌ ಪ್ಯಾಕೇಜ್‌’: ಕಾಂಗ್ರೆಸ್ ಮುಖಂಡ ಸಲೀಂ ಅಹಮದ್‌

Last Updated 28 ಮೇ 2020, 14:17 IST
ಅಕ್ಷರ ಗಾತ್ರ

ಮಡಿಕೇರಿ: ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿದ್ದ 20 ಲಕ್ಷ ಕೋಟಿ ಪ್ಯಾಕೇಜ್‌ ‘ಬೋಗಸ್‌ ಪ್ಯಾಕೇಜ್‌’ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆ.ಪಿ.ಸಿ.ಸಿ) ಕಾರ್ಯಾಧ್ಯಕ್ಷ ಸಲೀಂ ಅಹಮದ್‌ ಟೀಕಿಸಿದರು.

ನಗರದಲ್ಲಿರುವ ಕೊಡಗು ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಪ್ರತಿಯೊಬ್ಬರ ಅಕೌಂಟ್‌ಗೆ ₹ 15 ಲಕ್ಷ ಹಾಕುತ್ತೇವೆ ಎಂದು ಪ್ರಧಾನಿ ಹೇಳಿದ್ದರು. ಇದುವರೆಗೂ ಯಾರಿಗೆ ಆ ಹಣ ಹಾಕಿದ್ದಾರೆ. ಅದರಂತೆಯೇ ಇದು ಸಹ ಬೋಗಸ್‌ ಪ್ಯಾಕೇಜ್’ ಎಂದು ಆಪಾದಿಸಿದರು.

‘ಕೊರೊನಾದಿಂದ ಆರ್ಥಿಕ ಸಂಕಷ್ಟ ಎದುರಾಗಿದೆ. ₹ 50 ಸಾವಿರ ಕೋಟಿ ಪ್ಯಾಕೇಜ್‌ ಘೋಷಣೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದೆವು. ಪುಟ್ಟ ರಾಜ್ಯಗಳಾದ ತೆಲಂಗಾಣ ಹಾಗೂ ಕೇರಳ ಸರ್ಕಾರ ಪ್ಯಾಕೇಜ್‌ ಘೋಷಣೆ ಮಾಡಿದ್ದರೂ ಕರ್ನಾಟಕದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಮಾತ್ರ ದೊಡ್ಡಮೊತ್ತ ಪ್ಯಾಕೇಜ್‌ ನೀಡಲಿಲ್ಲ’ ಎಂದು ದೂರಿದರು.

ಸಚಿವರಲ್ಲಿಯೇ ಸಮನ್ವಯತೆ ಇಲ್ಲ. ಹೀಗಾಗಿಯೇ ಕೊರೊನಾದ ಬಗ್ಗೆ ಮಾಹಿತಿ ನೀಡುವ ಜವಾಬ್ದಾರಿಯನ್ನು ಸಚಿವ ಎಸ್‌.ಸುರೇಶ್‌ಕುಮಾರ್‌ ಅವರಿಗೆ ನೀಡಲಾಗಿದೆ. ಪಿಪಿಇ ಕಿಟ್, ಕೊರೊನಾ ಪರೀಕ್ಷಾ ಕಿಟ್‌, ಸ್ಯಾನಿಟೈಸರ್‌ ಖರೀದಿಯಲ್ಲಿ ದೊಡ್ಡ ಮೊತ್ತದ ಭ್ರಷ್ಟಾಚಾರ ನಡೆದಿದೆ. ಮುಂದಿನ ದಿನಗಳಲ್ಲಿ ಜನರಿಗೆ ಈ ಕುರಿತು ಮಾಹಿತಿ ನೀಡಲಾಗುವುದು ಎಂದು ಹೇಳಿದರು.

ರಾಜ್ಯದಿಂದ ಬೇರೆ ಬೇರೆ ರಾಜ್ಯಕ್ಕೆ ಹೊರಟ್ಟಿದ್ದ ವಲಸೆ ಕಾರ್ಮಿಕರಿಗೆ ಬಸ್‌ ಹಾಗೂ ರೈಲು ವ್ಯವಸ್ಥೆ ಮಾಡಿರಲಿಲ್ಲ. ಬೆಂಗಳೂರಿನ ಮೆಜಿಸ್ಟಿಕ್‌ಗೆ ಕೆಪಿಸಿಸಿ ಅಧ್ಯಕ್ಷರು ತೆರಳಿ, ಒಂದು ಕೋಟಿ ರೂಪಾಯಿ ನೀಡುವುದಾಗಿ ಘೋಷಣೆ ಮಾಡಿ ತಕ್ಷಣವೇ ಚೆಕ್‌ ನೀಡಿದರು. ಅದಾದ ಮೇಲೆ, ಕಾಂಗ್ರೆಸ್‌ಗೆ ಅದರ ಶ್ರೇಯಸ್ಸು ಹೋಗಲಿದೆ ಎಂಬ ಕಾರಣದಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕಾರ್ಮಿಕರಿಗೆ ಉಚಿತ ಪ್ರಯಾಣದ ವ್ಯವಸ್ಥೆ ಮಾಡಿದರು ಎಂದು ಸಲೀಂ ಹೇಳಿದರು.

ಕಾಂಗ್ರೆಸ್‌ ವತಿಯಿಂದ ₹ 100 ಕೋಟಿ ಮೊತ್ತದಲ್ಲಿ ರೈತರಿಂದ ಬೆಳೆ ಖರೀದಿ ಮಾಡಲಾಗಿದೆ ಎಂದು ಹೇಳಿದರು.

ಮಾರ್ಚ್‌ 11ರಂದು ಡಿ.ಕೆ.ಶಿವಕುಮಾರ್‌ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಆದರೆ, ಕೊರೊನಾ ಸೋಂಕಿನ ಕಾರಣಕ್ಕೆ, ಪದಗ್ರಹಣ ಸಾಧ್ಯವಾಗಿರಲಿಲ್ಲ. ಜೂನ್‌ 7ರಂದು ಬೆಂಗಳೂರಿನಲ್ಲಿ ಸರಳವಾಗಿ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ. ಇನ್ನು ಆಯಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪದಗ್ರಹಣ ಸಮಾರಂಭದ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ, ಝೂಮ್‌ ಆ್ಯಪ್‌ ಮೂಲಕ ಪ್ರಸಾರಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ರಾಜ್ಯದ 8 ಸಾವಿರ ಸ್ಥಳಗಳಲ್ಲಿ ನೇರ ಪ್ರಸಾರವಾಗಲಿದೆ ಎಂದು ಸಲೀಂ ಅಹಮದ್‌ ಹೇಳಿದರು

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೆ.ಕೆ.ಮಂಜುನಾಥ್‌ ಕುಮಾರ್‌, ಮಾಜಿ ಶಾಸಕ ಇಬ್ರಾಹಿಂ ಮಾಸ್ಟರ್, ಮಿಟ್ಟು ಚೆಂಗಪ್ಪ, ವೀಕ್ಷಕಿ ಮಂಜುಳಾರಾಜ್‌, ವಿಧಾನ ಪರಿಷತ್‌ ಸದಸ್ಯ ಧರ್ಮಸೇನಾ, ಟಿ.ಪಿ.ರಮೇಶ್, ಚಂದ್ರಕಲಾ, ಚಂದ್ರಮೌಳಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT