ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಚಟುವಟಿಕೆ ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ಸೂಚನೆ

Last Updated 17 ಜೂನ್ 2020, 14:11 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯಗಳು ಇನ್ನು ಅನ್‌ಲಾಕ್‌ನತ್ತ ಹೆಜ್ಜೆ ಇಡಬೇಕು. ನಿರ್ಬಂಧಗಳನ್ನು ಕಡಿಮೆ ಮಾಡಿ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚು ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ.

ದೇಶದಲ್ಲಿ ಆರ್ಥಿಕ ಚಟುವಟಿಕೆ ಇನ್ನಷ್ಟು ಚುರುಕು ಪಡೆಯಲು ಆತ್ಮನಿರ್ಭರ್ ಪ್ಯಾಕೇಜ್ ನೆರವಾಗಲಿದೆ ಎಂದು ಅವರು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ವಿಡಿಯೊ ಸಂವಾದ ಕಾರ್ಯಕ್ರಮದಲ್ಲಿ ಹೇಳಿದರು.

ಕೋವಿಡ್‌ ನಿಯಂತ್ರಣದೊಂದಿಗೆ ಆರ್ಥಿಕ ಚಟುವಟಿಕೆ ಪುನಶ್ಚೇತನಕ್ಕೆ ಒತ್ತು ನೀಡಿರುವ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಚಿಕಿತ್ಸಾ ಸೌಲಭ್ಯ: ರಾಜ್ಯದಲ್ಲಿ ಒಂದು ಲಕ್ಷ ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆಗೆ ಅಗತ್ಯ ಮೂಲಸೌಕರ್ಯ ಒದಗಿಸಲಾಗಿದ್ದು, ಅದನ್ನು 2 ಲಕ್ಷಗಳಿಗೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದರು.

ರಾಜ್ಯದಲ್ಲಿ 673 ಫೀವರ್ ಕ್ಲಿನಿಕ್‌ಗಳನ್ನು ಸ್ಥಾಪಿಸುವ ಮೂಲಕ ಆಸ್ಪತ್ರೆಗಳು ಸೋಂಕು ಹರಡುವ ತಾಣಗಳಾದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದರು.

ರಾಜ್ಯದಲ್ಲಿರುವ 1.68 ಕೋಟಿ ಕುಟುಂಬಗಳ ಪೈಕಿ 1.5 ಕೋಟಿ ಕುಟುಂಬಗಳ ಸಮೀಕ್ಷೆ ನಡೆಸಿದ್ದು, ಕೋವಿಡ್ ಸೋಂಕಿನಿಂದ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇರುವ ವ್ಯಕ್ತಿಗಳ ಮಾಹಿತಿ ದಾಖಲಿಸಲಾಗಿದೆ. ಇದರಿಂದ ಮುನ್ನೆಚ್ಚರಿಕೆ ವಹಿಸಲು ಹಾಗೂ ಇಂತಹ ವ್ಯಕ್ತಿಗಳ ಬಗ್ಗೆ ವಿಶೇಷ ಕಾಳಜಿ ವಹಿಸಲು ಸಾಧ್ಯವಾಗಿದೆ ಎಂದೂ ಯಡಿಯೂರಪ್ಪ ವಿವರಿಸಿದರು.

ಪ್ರತಿ 10 ಲಕ್ಷ ಜನಸಂಖ್ಯೆಗೆ 7,500 ಪರೀಕ್ಷೆ ನಡೆಸಲಾಗುತ್ತಿದ್ದು, ಶೇ 1.6 ರಷ್ಟು ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ದೈನಂದಿನ ಬೆಳವಣಿಗೆ ದರ ಶೇಕಡಾ 3.6 ರಷ್ಟಿದೆ ಎಂದರು.

ಕೋವಿಡ್ ಸೋಂಕಿತರಿಗೆ ಉತ್ತಮ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಟೆಲಿ ಐಸಿಯು ವ್ಯವಸ್ಥೆ ರೂಪಿಸಲಾಗಿದ್ದು, ತಜ್ಞ ವೈದ್ಯರೊಂದಿಗೆ ರಾಜ್ಯದ ವಿವಿಧ ಭಾಗಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರು ನಿರಂತರ ಸಂಪರ್ಕದಲ್ಲಿದ್ದು ಸಲಹೆ, ಮಾರ್ಗದರ್ಶನ ನೀಡಲಾಗುತ್ತಿದೆ ಎಂದು ವಿವರಿಸಿದರು.

ಸಭೆಯ ಪ್ರಾರಂಭದಲ್ಲಿ ಲಡಾಖ್‌ನಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT