ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ವಿಶ್ಲೇಷಣೆ | ಈಗೇಕೆ ಸಿಡಿಯಿತು ದೇವೇಗೌಡರ ‘ಮಧ್ಯಂತರ ಚುನಾವಣೆ’ ಬಾಂಬ್

Last Updated 21 ಜೂನ್ 2019, 8:44 IST
ಅಕ್ಷರ ಗಾತ್ರ

ಬೆಂಗಳೂರು: ವಿಶ್ವ ಯೋಗದಿನದ ಪ್ರಯುಕ್ತ ತಮ್ಮ ಮಾಧ್ಯಮ ಪ್ರತಿನಿಧಿಗಳನ್ನು ಮನೆಗೆ ಆಹ್ವಾನಿಸಿದ್ದ ದೇವೇಗೌಡರು ಏಕಾಏಕಿ ‘ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯಬಹುದು’ ಎನ್ನುವ ಬಾಂಬ್ ಸಿಡಿಸಿದರು. ಆದರೆ ರಾಜ್ಯ ರಾಜಕೀಯದ ಆಂತರ್ಯ ಅರಿತವರಿಗೆ ಇದು ಅಷ್ಟೇನೂ ಅನಿರೀಕ್ಷಿತ ಎನಿಸಿರಲಿಲ್ಲ. ರಾಜಕೀಯ ಚದುರಂಗದ ಆಟದಲ್ಲಿ ಮಾಗಿರುವ ದೇವೇಗೌಡರ ಈ ನಡೆಯ ಹಿನ್ನೆಲೆಯನ್ನು ಗಮನಿಸಿದಾಗ ಈಚೆಗೆ ನಡೆದ ಕೆಲ ರಾಜಕೀಯ ಬೆಳವಣಿಗೆಗಳು, ರಾಹುಲ್‌ಗಾಂಧಿ ಭೇಟಿ, ಸಿದ್ದರಾಮಯ್ಯ ವಿಚಾರ ಪ್ರಸ್ತಾಪಿಸಬೇಕಾಗುತ್ತದೆ.

ಜೂನ್ 10ರಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ನವದೆಹಲಿಯಲ್ಲಿ ಭೇಟಿಮಾಡಿದ್ದ ದೇವೇಗೌಡರು,ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ವಿರುದ್ಧ ದೂರು ನೀಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ದೆಹಲಿಯತುಘಲಕ್‌ ರಸ್ತೆಯಲ್ಲಿರುವ ರಾಹುಲ್‌ ಗಾಂಧಿ ನಿವಾಸದಲ್ಲಿಸುಮಾರು ಅರ್ಧ ಗಂಟೆ ಮಾತುಕತೆ ನಡೆಸಿದ್ದ ದೇವೇಗೌಡರು ‘ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದ ಕಾಂಗ್ರೆಸ್‌ನ ಕೆಲವು ಹಿರಿಯ ಮುಖಂಡರನ್ನು ಸಂಪುಟದಿಂದ ಕೈಬಿಡುವ ಬಗ್ಗೆ ದೇವೇಗೌಡರು ಚರ್ಚಿಸಿದ್ದರು’ ಎಂದು ಹೇಳಲಾಗಿತ್ತು.

ಇದರ ನಂತರದ ಬೆಳವಣಿಗೆ ಎಂಬಂತೆ ಜೂನ್ 19ರಂದು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದ ಸಿದ್ದರಾಮಯ್ಯ,‘ರಾಜ್ಯದಲ್ಲಿ ಸರ್ಕಾರ ರಚಿಸಿದ್ದರಿಂದ ಸಂಘಟನಾತ್ಮಕವಾಗಿ ಕಾಂಗ್ರೆಸ್‌ಗೆ ಬಲವಾದ ಪೆಟ್ಟು ಬಿದ್ದಿದ್ದು, ಮೈತ್ರಿಯನ್ನು ಎಷ್ಟು ದಿನ ಮುಂದುವರಿಸಬೇಕು ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಿ’ ಎಂದು ಸಲಹೆ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿಬಂದವು. ‘ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಕೇವಲ ಒಂದು ಸ್ಥಾನ ಪಡೆಯಲು ಮೈತ್ರಿಯೇ ಕಾರಣ. ನಾವು ಮಿತ್ರ ಪಕ್ಷವಾಗಿದ್ದರೂ ನಮ್ಮದೇನೂ ನಡೆಯುತ್ತಿಲ್ಲ’ ಎಂದು ರಾಹುಲ್ ಗಾಂಧಿ ಎದುರು ಅಲವತ್ತುಕೊಂಡಿದ್ದರು ಎನ್ನಲಾಗಿತ್ತು.

ಇದಕ್ಕೆ ಪ್ರತಿಕ್ರಿಯೆ ಎನ್ನುವಂತೆ ಜೂನ್ 20ರಂದು ಪ್ರತಿಕ್ರಿಯಿಸಿದ್ದದೇವೇಗೌಡರು, ‘ನನ್ನಿಂದ ಸರ್ಕಾರಕ್ಕೆ ಯಾವುದೇ ಅಪಾಯ ಆಗುವುದಿಲ್ಲ. ಪುರಸಭೆ, ಪಟ್ಟಣ ಪಂಚಾಯಿತಿ ಚುನಾವಣೆಗಳಿಗೆಸಿದ್ಧವಾಗುವಂತೆ ಹೇಳಿದ್ದೇನೆಯೇ ಹೊರತು ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಯುತ್ತದೆ ಎಂದು ಹೇಳಿಲ್ಲ’ ಎಂದು ಸ್ಪಷ್ಟಪಡಿಸಿದ್ದರು. ಇದಾದ ಒಂದೇ ದಿನದಲ್ಲಿ ದೇವೇಗೌಡರು ‘ಮಧ್ಯಂತರ ಚುನಾವಣೆ’ಯ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಗ್ರಾಮ ವಾಸ್ತವ್ಯಕ್ಕೆಂದು ಬೆಂಗಳೂರಿನಿಂದ ಹೊರಟಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ,ಯಾದಗಿರಿ ತಲುಪಿದ ಕೆಲವೇ ನಿಮಿಷಗಳಲ್ಲಿ ದೇವೇಗೌಡರ ಹೇಳಿಕೆಯೂ ಹೊರಬಿದ್ದಿದೆ. ಪಳಗಿದ ರಾಜಕಾರಿಣಿ ದೇವೇಗೌಡರು ‘ಮಧ್ಯಂತರ ಚುನಾವಣೆ’ ಹೇಳಿಕೆ ನೀಡಿದಈ ಟೈಮಿಂಗ್ ಇದೀಗ ಕುತೂಹಲ ಕೆರಳಿಸಿರುವ ಸಂಗತಿ.

ಸಿದ್ದರಾಮಯ್ಯ ಸುಮ್ಮನಾಗಿಸುವ ತಂತ್ರ

ದೆಹಲಿಯಲ್ಲಿ ರಾಹುಲ್ ಗಾಂಧಿಯನ್ನು ಭೇಟಿಯಾಗಿದ್ದ ಸಿದ್ದರಾಮಯ್ಯ, ‘ರಾಜ್ಯದಲ್ಲಿಮೈತ್ರಿಯನ್ನು ಇನ್ನೆಷ್ಟು ದಿನ ಮುಂದುವರಿಸ್ತೀರಿ ತೀರ್ಮಾನ ಮಾಡಿ.ನಾವು ಎಲ್ಲೆಲ್ಲಿ ಮೈತ್ರಿ ಮಾಡಿಕೊಂಡೆವೋ, ಅಲ್ಲೆಲ್ಲಾ ಹಿನ್ನಡೆ ಅನುಭವಿಸಿದ್ದೇವೆ’ ಎಂದು ದೂರಿದ್ದರು. ಈ ವಿಷಯ ದೇವೇಗೌಡರಿಗೆ ನಿನ್ನೆ (ಜೂನ್ 20) ಗೊತ್ತಾಗಿದೆ. ಅದಕ್ಕೆ ಪ್ರತಿಕ್ರಿಯೆ ಎನ್ನುವಂತೆ ಇಂದು ‘ಮಧ್ಯಂತರ ಚುನಾವಣೆ’ಯ ಹೇಳಿಕೆ ಹೊರ ಬಂದಿದೆ.

ನಿನ್ನೆ ದೇವೇಗೌಡರು ಮಾತನಾಡುವಾಗ ಮಧ್ಯಂತರ ಚುನಾವಣೆಯ ಬಗ್ಗೆ ಯಾವುದೇ ವಿಷಯ ಪ್ರಸ್ತಾಪಿಸಿರಲಿಲ್ಲ. ‘ಮೈತ್ರಿ ಸರ್ಕಾರ ಸುಭದ್ರ’ ಎಂದೇ ಹೇಳಿದ್ದರು. ಆದರೆ ನಿನ್ನೆ ರಾತ್ರಿ ದೇವೇಗೌಡರಿಗೆ ಸಿದ್ದರಾಮಯ್ಯ–ರಾಹುಲ್‌ಗಾಂಧಿ ಸಂವಾದದ ಬಿಸಿ ಅರಿವಾಗಿದೆ ಎನ್ನಲಾಗಿದೆ. ‘ರಾಜ್ಯದಲ್ಲಿ ಇದೇ ರೀತಿ ಮೈತ್ರಿ ಸರ್ಕಾರ ಮುಂದುವರಿಸಿದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಇನ್ನಷ್ಟು ಬಲಹೀನವಾಗಲಿದೆ.ಈ ಸರ್ಕಾರದಲ್ಲಿ ಯಾರೂ ನಮ್ಮ ಶಾಸಕರು ಮಾತು ಕೇಳುತ್ತಿಲ್ಲ, ಅವರ ಅಳಲಿಗೆ ಬೆಲೆ ಇಲ್ಲ’ ಎಂದು ರಾಹುಲ್‌ಗಾಂಧಿಗೆಸಿದ್ದರಾಮಯ್ಯ ದೂರು ಹೇಳಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಜೆಡಿಎಸ್‌ಗೆತುಮಕೂರು, ಮಂಡ್ಯ ಲೋಕಸಭಾ ಕ್ಷೇತ್ರಗಳನ್ನು ಬಿಟ್ಟುಕೊಡುವ ಮೂಲಕಗೆಲ್ಲುವು ಅವಕಾಶ ಕಳೆದುಕೊಂಡೆವು’ ಎಂದು ಸಿದ್ದರಾಮಯ್ಯ ರಾಹುಲ್‌ಗಾಂಧಿಗೆ ಹೇಳಿದ್ದರು. ಇಂದು ದೇವೇಗೌಡರು ಈ ಎರಡೂ ಕ್ಷೇತ್ರಗಳ ಬಗ್ಗೆ ಪ್ರಸ್ತಾಪಿಸುತ್ತಾ, ‘ತುಮಕೂರು ನಾವು ಕೇಳಿದ್ದಲ್ಲ, ಮೈಸೂರು ಉಳಿಸಿಕೊಳ್ಳಲು ಅವರುತುಮಕೂರು ಬಿಟ್ಟುಕೊಟ್ಟರು’ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಲು ಇದು ಮುಖ್ಯ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಮೈತ್ರಿ ಧರ್ಮ

ಮೈತ್ರಿ ಧರ್ಮ ಪಾಲನೆಯಾಗುತ್ತಿಲ್ಲ ಎಂದು ಇಷ್ಟು ದಿನ ಕಾಂಗ್ರೆಸ್ ಶಾಸಕರು ಅಲವತ್ತುಕೊಳ್ಳುತ್ತಿದ್ದರು. ಸಿದ್ದರಾಮಯ್ಯ ಆ ಕುರಿತು ಪ್ರಸ್ತಾಪಿಸುತ್ತಿದ್ದರು. ಆದರೆ ಈಗ ದೇವೇಗೌಡರಿಗೂ ಇದೇ ಭಾವನೆ ಬಂದಂತೆ ಇದೆ.ಸಿದ್ದರಾಮಯ್ಯ ಮತ್ತು ದೇವೇಗೌಡರ ನಡುವಣ ಹಗ್ಗಜಗ್ಗಾಟದ ಫಲವಾಗಿ ದೇವೇಗೌಡರು ‘ಮಧ್ಯಂತರ ಚುನಾವಣೆ’ಯ ದಾಳ ಉರುಳಿಸುತ್ತಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಮಣಿಯುವರೇ ಸಿದ್ದು

ದೇವೇಗೌಡರು ಇಂದು ಉರುಳಿಸಿರುವ ರಾಜಕೀಯ ದಾಳವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಕಾಂಗ್ರೆಸ್ ಶಾಸಕರ ಆಂತರ್ಯ ಅರಿತು ಸಿದ್ದರಾಮಯ್ಯ ಅವರನ್ನು ಮಣಿಸಲು ಯತ್ನಿಸಿರುವಂತೆ ಕಾಣಿಸುತ್ತದೆ. ಚುನಾವಣೆಗೆ ಹೋದರೆ ವೈಯಕ್ತಿಕವಾಗಿ ದೇವೇಗೌಡರ ಕುಟುಂಬಕ್ಕೆ ಅಥವಾ ಪಕ್ಷವಾಗಿ ಜೆಡಿಎಸ್‌ಗೆ ಹೆಚ್ಚೇನೂ ನಷ್ಟವಿಲ್ಲ. ಅದರೆ ಕಾಂಗ್ರೆಸ್ ವಿಚಾರ ಹಾಗಲ್ಲ. ಅಲ್ಲಿ ಯಾರಿಗೂ ಈಗ ಚುನಾವಣೆ ಬೇಕಿಲ್ಲ. ಅಧಿಕಾರ ಕಳೆದುಕೊಂಡಿರುವ, ಲೋಕಸಭಾ ಚುನಾವಣೆಯಲ್ಲಿ ಹೀನಾಯ ಪ್ರದರ್ಶನ ನೀಡಿರುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ದಿಟ್ಟ ನಾಯಕತ್ವ ವಹಿಸಿಕೊಳ್ಳುವ ವ್ಯಕ್ತಿಗಳೂ ಕಾಣಿಸುತ್ತಿಲ್ಲ. ಕಾಂಗ್ರೆಸ್‌ನ ಈಸಂಕಷ್ಟ ಸ್ಥಿತಿ ಗೊತ್ತಿರುವುದರಿಂದಲೇ ದೇವೇಗೌಡರು ‘ಚುನಾವಣೆ’ ದಾಳ ಉರುಳಿಸಿದ್ದಾರೆ ಎನ್ನಲಾಗಿದೆ.

ಕುಮಾರಸ್ವಾಮಿ ಸಿದ್ಧ

‘ದೇವೇಗೌಡರ ಹೇಳಿಕೆಗೆ ಹೊಸಬಣ್ಣ ಹಚ್ಚಬೇಡಿ, ಸರ್ಕಾರ ಸುಭದ್ರವಾಗಿದೆ. ಮಧ್ಯಂತರ ಚುನಾವಣೆ ಪ್ರಶ್ನೆ ಇಲ್ಲ’ ಎಂದು ಯಾದಗಿರಿಯಲ್ಲಿ ಇಂದು ಮುಂಜಾನೆ ಹೇಳಿರುವಕುಮಾರಸ್ವಾಮಿ ಅವರ ನಡೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವರೂ ಚುನಾವಣೆಗೆ ಸಿದ್ಧ ಎನ್ನುವ ಸಂದೇಶ ಕೊಡಲು ಹೊರಟಂತೆ ಭಾಸವಾಗುತ್ತೆ. ಇಷ್ಟ ದಿನ ಇಲ್ಲದ ಗ್ರಾಮ ವಾಸ್ತವ್ಯ ಈಗ ದಿಢೀರ್ ಶುರುವಾಗಿದೆ. ಉತ್ತರ ಕರ್ನಾಟಕದಲ್ಲಿ ಪಕ್ಷಕ್ಕೆ ಪ್ರಬಲ ನೆಲೆ ಇರುವ ತಾಲ್ಲೂಕುಗಳಲ್ಲಿಯೇ ಅವರ ವಾಸ್ತವ್ಯ ನಡೆಯಲಿರುವುದುವಿಶೇಷ.

ಒಂದೇ ಏಟಿಗೆ ಎರಡು ಹಕ್ಕಿ

ಕಾಂಗ್ರೆಸ್‌ನಂತೆ ಬಿಜೆಪಿಗೂ ಈಗ ಮಧ್ಯಂತರ ಚುನಾವಣೆ ಬೇಕಿಲ್ಲ. ‘ನಿಮಗಾಗದಿದ್ದರೆ ನಮಗೆ ಬಿಡಿ, ನಾವು ಸರ್ಕಾರ ಮಾಡುತ್ತೇವೆ’ ಎಂದಿರುವಯಡಿಯೂರಪ್ಪ ಅವರ ಹೇಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ಅರ್ಥವಾಗುತ್ತೆ. ಇಷ್ಟು ದಿನ ಸರ್ಕಾರ ಬೀಳಿಸಿ, ಅಧಿಕಾರ ಹಿಡಿಯುವ ಹುಮ್ಮಸ್ಸಿನಲ್ಲಿದ್ದ ಬಿಜೆಪಿಗೆ ಈ ಅಂಥ ಉತ್ಸಾಹವೂ ಉಳಿದಿಲ್ಲ. ಇನ್ನೊಂದೆಡೆಸಂದಿಗ್ಧ ಸ್ಥಿತಿಯಲ್ಲಿರುವ ಕಾಂಗ್ರೆಸ್‌ಗೂ ಚುನಾವಣೆ ಬೇಕಿಲ್ಲ. ಹೀಗೆ ಎರಡೂ ಪಕ್ಷಗಳಎದುರು ಚುನಾವಣೆ ಗುಮ್ಮ ಮುಂದಿಟ್ಟು, ಇಬ್ಬರನ್ನೂ ಮಣಿಸಿ, ಅಧಿಕಾರ ಉಳಿಸಿಕೊಳ್ಳುವುದು ದೇವೇಗೌಡ– ಕುಮಾರಸ್ವಾಮಿ ಅವರ ರಾಜಕೀಯ ನಡೆ ಎಂದು ಹೇಳಲಾಗುತ್ತಿದೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT