ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಯು ಮಾಲಿನ್ಯ: ಮಂಗಳೂರಿನಲ್ಲೂ ಶುದ್ಧ ಗಾಳಿಯ ಕೊರತೆ

ಹೆಚ್ಚಿಸುತ್ತಿರುವ ಹೊಗೆ ಉಗುಳುವ ವಾಹನಗಳು; ಹೆಚ್ಚಿದ ಸೀಸದ ಪ್ರಮಾಣ
Last Updated 25 ಡಿಸೆಂಬರ್ 2018, 19:39 IST
ಅಕ್ಷರ ಗಾತ್ರ

ಮಂಗಳೂರು: ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಇರುವ ನಗರದಲ್ಲಿಯೂ ಈಗ ಶುದ್ಧ ಗಾಳಿಯ ಕೊರತೆ ಎದುರಾಗಿದೆ. ವಾಯುಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬೆಂಗಳೂರಿನ ನಂತರ ಮಂಗಳೂರಿನ ನಾಗರಿಕರೂ ಗಂಡಾಂತರ ಎದುರಿಸುವಂತಾಗಿದೆ.

ಆ್ಯಂಟಿ ಪೊಲ್ಯೂಷನ್‌ ಡ್ರೈವ್‌ (ಎಪಿಡಿ) ಫೌಂಡೇಷನ್‌ ನಡೆಸಿರುವ ಅಧ್ಯಯನ ವರದಿಯಲ್ಲಿ ಈ ಅಂಶಗಳು ಬಹಿರಂಗವಾಗಿವೆ. ಅದರಲ್ಲೂ ಹೆಚ್ಚಾಗಿ ನಗರದ ಗಾಳಿಯಲ್ಲಿ ಸೀಸದ ಪ್ರಮಾಣ ಪತ್ತೆಯಾಗಿದ್ದು, ಅಪಾಯದ ಗಂಟೆಯನ್ನು ಬಾರಿಸಿದೆ.

ಗಾಳಿಯಲ್ಲಿ ಸೀಸದ ಅಂಶಗಳು ನಿಗದಿತ ಪ್ರಮಾಣಕ್ಕಿಂತ ಹೆಚ್ಚಾಗಿರುವುದು ‘ಶುದ್ಧ ಗಾಳಿ’ ಯೋಜನೆಯನ್ವಯ ಸೇಂಟ್ ಜಾರ್ಜ್‍ಸ್ ಹೋಮಿಯೋಪತಿ ಜತೆಗೂಡಿ ಎಪಿಡಿ ಫೌಂಡೇಷನ್ ನಡೆಸಿದ ವಿಸ್ತೃತ ಅಧ್ಯಯನದಿಂದ ಬಹಿರಂಗವಾಗಿದೆ.

ಅಧ್ಯಯನ ನಡೆಸಿದ ಸಂದರ್ಭದಲ್ಲಿ ನಗರದ ಕೆಲವು ಪ್ರದೇಶಗಳಲ್ಲಿ ಪಾರ್ಟಿಕ್ಯುಲೇಟ್ ಮ್ಯಾಟರ್ 2.5 (ಪಿಎಂ), ಪಿಎಂ10 ಹಾಗೂ ಸೀಸದ ಅಂಶಗಳು ಪತ್ತೆಯಾಗಿವೆ. ಬಂಟ್ಸ್ ಹಾಸ್ಟೆಲ್, ಪಂಪ್‌ವೆಲ್ ಹಾಗೂ ಬೈಕಂಪಾಡಿ ಪ್ರದೇಶಗಳಲ್ಲಿ ಪಿಎಂ 2.5 ಹಾಗೂ ಪಿಎಂ 10 ಅಂಶಗಳು ಹಾಗೂ ಪಿವಿಎಸ್ ಜಂಕ್ಷನ್, ಬಂಟ್ಸ್ ಹಾಸ್ಟೆಲ್, ಬಂದರು, ಮಹಾನಗರ ಪಾಲಿಕೆ, ಪಂಪ್‌ವೆಲ್ ಮತ್ತು ಬೈಕಂಪಾಡಿ ಪ್ರದೇಶಗಳಲ್ಲಿ ಪಿಎಂ 2.5 ಅಂಶ ಮಿತಿಗಿಂತ ಹೆಚ್ಚಾಗಿದೆ.

ವಾಹನಗಳಿಂದಲೇ ಅಧಿಕ: ನಗರದಲ್ಲಿ ಬೃಹತ್‌ ಪ್ರಮಾಣದ ಕೈಗಾರಿಕೆಗಳಿದ್ದರೂ, ಅತಿ ಹೆಚ್ಚಿನ ವಾಯು ಮಾಲಿನ್ಯ ಉಂಟಾಗುತ್ತಿರುವುದು ವಾಹನಗಳಿಂದ. ಅದರಲ್ಲೂ ಹೊಗೆ ಉಗುಳುವ ಶೇ 10 ರಷ್ಟು ವಾಹನಗಳು ಮಾಲಿನ್ಯಕ್ಕೆ ಅಪಾಯಕಾರಿ ಕೊಡುಗೆ ನೀಡುತ್ತಿವೆ ಎಂಬುದು ಎಪಿಡಿ ಅಧ್ಯಯನದಲ್ಲಿ ಬಹಿರಂಗವಾಗಿದೆ.

‘ನಗರದ ಹೆಚ್ಚಿನ ಕಡೆಗಳಲ್ಲಿ ಒಟ್ಟಾರೆ ವಾಯು ಗುಣಮಟ್ಟ ಉತ್ತಮವಾಗಿದೆ ಎಂದು ಅಧ್ಯಯನದಲ್ಲಿ ಕಂಡು ಬಂದರೂ, ದೀರ್ಘಾವಧಿಯಲ್ಲಿ ಪರಿಸ್ಥಿತಿ ಹದಗೆಡುವ ಸಾಧ್ಯತೆಯಿದೆ. ವಾಯು ಮಾಲಿನ್ಯವನ್ನು ಸಂಪೂರ್ಣ ನಿಯಂತ್ರಿಸಲು ಕೂಡಲೇ ಕ್ರಮ ಕೈಗೊಳ್ಳಬೇಕಾಗಿದೆ’ ಎಂದು ಎಪಿಡಿ ಫೌಂಡೇಷನ್ ಸಂಸ್ಥಾಪಕ ಅಬ್ದುಲ್ಲ ಎ. ರೆಹಮಾನ್‌ ಹೇಳುತ್ತಾರೆ.

‘ದೇಶದೆಲ್ಲೆಡೆ ಬಿಎಸ್-IV ವಾಹನ ಗಳು ಕಡ್ಡಾಯವಾಗಿದ್ದರೆ, ಮಂಗಳೂರಿನ ರಸ್ತೆಗಳಲ್ಲಿ ಇನ್ನೂ ಬಿಎಸ್-III ವಾಹನಗಳನ್ನು ನೋಡಬಹುದಾಗಿದೆ. ಮೋಟಾರು ವಾಹನ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಲ್ಲಿ ವಾಯು ಮಾಲಿನ್ಯವನ್ನು ತಕ್ಕಮಟ್ಟಿಗೆ ನಿಯಂತ್ರಿಸು ವುದು ಸಾಧ್ಯ’ ಎಂದು ಹೇಳುತ್ತಾರೆ.

ಅಧ್ಯಯನ ಹೇಗೆ?

ಸರ್ಕಾರದ ವತಿಯಿಂದ ವಾಯು ಗುಣಮಟ್ಟ ಅಳತೆ ಮಾಪಕವನ್ನು ಬೈಕಂಪಾಡಿಯ ಕೈಗಾರಿಕಾ ಪ್ರದೇಶದಲ್ಲಿ ಇರಿಸಲಾಗಿದೆ. ನಗರದ ಜನವಸತಿ, ಕಚೇರಿ ಮತ್ತು ಪ್ರವಾಸೋದ್ಯಮ ಪ್ರದೇಶಗಳಲ್ಲಿ ವಾಯು ಮಾಲಿನ್ಯ ಪ್ರಮಾಣದ ಮಾಹಿತಿ ಸಂಗ್ರಹ ಇದರಿಂದ ಸಾಧ್ಯವಾಗುವುದಿಲ್ಲ. ಎಪಿಡಿಯು ‘ಶುದ್ಧಗಾಳಿ’ ಯೋಜನೆಯ ಮೂಲಕ ನಗರ ಪ್ರದೇಶದಲ್ಲಿ ತಪಾಸಣೆ ಮಾಡುತ್ತಿದೆ.

ಮೊದಲ ಬಾರಿಗೆ ನಡೆಸಿದ ಅಧ್ಯಯನದ ಭಾಗವಾಗಿ ನಗರದಲ್ಲಿ ಆರು ವಾಯು ಮಾಲಿನ್ಯಕಾರಕಗಳನ್ನು ಪರಿಶೀಲಿಸಲಾಗಿತ್ತು. ಪಾರ್ಟಿಕ್ಯುಲೇಟ್ ಮ್ಯಾಟರ್ (ಪಿಎಂ), ಪಿಎಂ 10 (10 ಮೈಕ್ರೋಮೀಟರ್ ಹಾಗೂ ಅದಕ್ಕಿಂತ ಕಡಿಮೆ ವ್ಯಾಸವುಳ್ಳ ಅಂಶಗಳು) ಮತ್ತು ಪಿಎಂ2.5 (ದೇಹದೊಳಗೆ ಉಸಿರಾಟದ ಮೂಲಕ ಹೋಗಬಹುದಾದ ಸೂಕ್ಷ್ಮ ಕಣಗಳು) ಎಂಬುದನ್ನು ವಿಭಾಗಿಸಲಾಗಿತ್ತು.

ಪಿಎಂ 2.5 ಕಣಗಳು ದೇಹದೊಳಗೆ ಉಸಿರಾಟದ ಮೂಲಕ ಸೇರಿದ್ದೇ ಆದಲ್ಲಿ, ಹೃದಯ ಮತ್ತು ಶ್ವಾಸಕೋಶದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದರ ಜತೆಗೆ ಇತರ ಮಾಲಿನ್ಯಕಾರಕಗಳಾದ ನೈಟ್ರೋಜನ್ ಡೈಆಕ್ಸೈಡ್, ಸಲ್ಫರ್ ಡೈಆಕ್ಸೈಡ್ ಹಾಗೂ ಸೀಸದ ಪ್ರಮಾಣವನ್ನು ಅಳೆಯಲಾಗಿದೆ.

ಸ್ಟಾಪ್‌ ಸ್ಮೋಕಿ ವೆಹಿಕಲ್‌ ಅಭಿಯಾನದಡಿ 174 ರಸ್ತೆ ಬದಿ ವ್ಯಾಪಾರಿಗಳ ಶ್ವಾಸಕೋಶ ಸಾಮರ್ಥ್ಯದ ಪರೀಕ್ಷೆ ಕೈಗೊಳ್ಳಲಾಗಿತ್ತು. ಆ ಪೈಕಿ 104 (ಶೇ 59.7) ಜನರಲ್ಲಿ ಯಾವುದೇ ತೊಂದರೆ ಇಲ್ಲ. ಆದರೆ 61 ಜನರು (ಶೇ 35) ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದಾರೆ. ಅವರಲ್ಲಿ 51 ಜನರು ಧೂಮಪಾನ ಮಾಡದೇ ಇರುವವರಾಗಿದ್ದರು.

ಪ್ರಮುಖ ಅಂಶಗಳು

* 5 ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿರುವ ಶೇ 22.3 ರಷ್ಟು ಪೊಲೀಸರಲ್ಲಿ ಸಮಸ್ಯೆ

* 5 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದ ಶೇ 26.3 ರಷ್ಟು ಸಂಚಾರ ಪೊಲೀಸರಲ್ಲಿ ತೊಂದರೆ

* ಶ್ವಾಸಕೋಶದ ತೊಂದರೆಗಳಿಂದ ಬಳಲುತ್ತಿರುವ ಶೇ 19ರಷ್ಟು ಆಟೊರಿಕ್ಷಾ ಚಾಲಕರು

* ಶೇ 35 ರಷ್ಟು ಬೀದಿ ಬದಿ ವ್ಯಾಪಾರಿಗಳಲ್ಲಿ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆ

* ಮಂಗಳೂರಿನ ಬೈಕಂಪಾಡಿ, ಲಾಲ್ ಬಾಗ್, ಪಿವಿಎಸ್, ಅತ್ತಾವರ, ಬಿಜೈ, ಬಂದರು, ಸೆಂಟ್ರಲ್ ಮಾರ್ಕೆಟ್,
ಬಂಟ್ಸ್ ಹಾಸ್ಟೆಲ್ ಪ್ರದೇಶಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಸೀಸ ಪತ್ತೆ

* ಕೇವಲ ಶೇ 10ರಷ್ಟು ಸಣ್ಣ ಪ್ರಮಾಣದ ಹೊಗೆ ಉಗುಳುವ ವಾಹನಗಳು ಈ ಹೆಚ್ಚಿನ ವಾಯು ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿವೆ.

* ನಗರದ 12 ವಿವಿಧ ಪ್ರದೇಶಗಳಲ್ಲಿ ಒಂದು ವಾರ ಅಧ್ಯಯನ ನಡೆಸಿದ ಎಪಿಡಿ ತಂಡ.

* ಎಪಿಡಿ ನಡೆಸಿದ ಪಲ್ಮನರಿ ಫಂಕ್ಷನ್‌ ಟೆಸ್ಟ್‌ ಮೊದಲ ಹಂತವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಡಿಎಲ್‌ಸಿಒ ಅಥವಾ ಚೆಸ್ಟ್ ರೇಡಿಯಾ ಗ್ರಫಿ ಪರೀಕ್ಷೆಗಳನ್ನು ಮಾಡಬಹುದು

ಡಾ. ಇರ್ಫಾನ್ ಕಂಡಾಲ್,ಶ್ವಾಸಕೋಶ ತಜ್ಞರು

*ಸಿಎನ್‌ಜಿ ಲಭ್ಯಗೊಳಿಸಬೇಕು. ಸಾರ್ವಜನಿಕ ಸಾರಿಗೆಗೆ ಸಿಎನ್‌ಜಿ /ಎಲ್‌ಪಿಜಿ ಉಪಯೋಗಿಸುವತ್ತ ಗಮನ ಹರಿಸಬೇಕು. ಸಮಸ್ಯೆ ಹೆಚ್ಚಾಗದಂತೆ ಕ್ರಮ ಕೈಗೊಳ್ಳಬೇಕು

ಅಬ್ದುಲ್ಲ ಎ. ರೆಹಮಾನ್,ಎಪಿಡಿ ಫೌಂಡೇಶನ್‌ ಸಂಸ್ಥಾಪಕ

*ವಾಹನಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವ ಪ್ರಾಮುಖ್ಯತೆಯನ್ನು ಈ ಆಂದೋಲನ ಎತ್ತಿ ತೋರಿ ಸುತ್ತದೆ. ವಾಹನಗಳ ಮಾಲೀಕರು ಈ ಬಗ್ಗೆ ಗಮನ ನೀಡಬೇಕು.

–ಜಾನ್‌ ಮಿಸ್ಕಿತ್‌, ಪ್ರಾದೇಶಿಕ ಸಾರಿಗೆ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT