ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಕ್ವಿಜ್‌| ಬಾಣದಂತೆ ತೂರಿ ಬಂತು ವಿದ್ಯಾರ್ಥಿಗಳಿಂದ ಜಾಣ ಉತ್ತರ

ಸೀಟಿನ ತುದಿಗೆ ತಂದು ಕುಳ್ಳಿರಿಸಿದ ಪ್ರಶ್ನೆಗಳು l
Last Updated 30 ಜನವರಿ 2020, 19:45 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರಜಾವಾಣಿ ಕ್ವಿಜ್‌ ಚಾಂಪಿಯನ್‌ಷಿಪ್‌’ನ ಆರನೇ ಆವೃತ್ತಿಯ ಅಂತಿಮ ಸುತ್ತು ಗುರುವಾರ ಇಲ್ಲಿ ನಡೆದಿದ್ದು, ಜಾಣ ಪ್ರಶ್ನೆಗಳಿಗೆ ಬಾಣದಂತೆ ತೂರಿ ಬಂದ ಉತ್ತರಗಳು ವಿದ್ಯಾರ್ಥಿಗಳ ಬೌದ್ಧಿಕ ಮಟ್ಟವನ್ನು ತೋರಿಸಿದವು.

ಇಲ್ಲಿನ ಸೆಂಟ್ರಲ್ ಕಾಲೇಜ್‌ ಆವರಣದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಮೊದಲು ನಡೆದ ಬೆಂಗಳೂರು ವಲಯ ಹಾಗೂ ಬಳಿಕ ನಡೆದ ಅಂತಿಮ ಸುತ್ತಿನ ಸ್ಪರ್ಧೆಗಳಲ್ಲಿ ಪ್ರಶ್ನೆಗಳು ಕಠಿಣವಾಗಿಯೇ ಇದ್ದವು. ಆದರೆ ಪ್ರಚಲಿತ ವಿದ್ಯಮಾನಗಳನ್ನು ಗಮನಿಸುತ್ತಿದ್ದ ಹಲವಾರು ವಿದ್ಯಾರ್ಥಿಗಳಿಗೆ ಇವುಗಳು ಅಂತಹ ಕಷ್ಟಕರವಾಗಿ ಕಾಣಿಸಲೇ ಇಲ್ಲ. ಕೊನೆಯ ಸುತ್ತಿನಲ್ಲಂತೂ ಎರಡು ಪ್ರಶ್ನೆಗಳಿಗೆ ವೇದಿಕೆಯಲ್ಲಿದ್ದ 12 ತಂಡಗಳಿಗೂ ಉತ್ತರ ನೀಡುವುದು ಸಾಧ್ಯವಾಗದೇ ಹೋದಾಗ ಸಭಿಕರ ಸ್ಥಾನದಲ್ಲಿದ್ದ ವಿದ್ಯಾರ್ಥಿಗಳೇ ಉತ್ತರ ಹೇಳಿಬಿಟ್ಟರು.

ಟೈಬ್ರೇಕರ್‌ ಮೂಲಕವೇ ವಿಜೇತರು, ಎರಡನೇ ರನ್ನರ್‌ ಅಪ್‌ ತಂಡವನ್ನು ಆಯ್ಕೆ ಮಾಡಿದ್ದು ಸ್ಪರ್ಧೆಯ ತುರುಸಿಗೆ ಸಾಕ್ಷಿಯಾಗಿತ್ತು.

‘ಮಕ್ಕಳ ಉತ್ಸಾಹ, ಅವರ (ಅ)ಸಾಮಾನ್ಯ ಜ್ಞಾನ ಬೆರಗುಗೊಳಿಸುವಂತದ್ದು.ಒಂದು ವೇಳೆ ಇಲ್ಲಿ ಕ್ವಿಜ್‌ ನಡೆಯುತ್ತಿದ್ದಾಗ ಅಮಿತಾಭ್‌ ಬಚ್ಚನ್ ಅಥವಾ ಪುನೀತ್ ರಾಜಕುಮಾರ್ ಬಂದಿದ್ದರೆ, ಇಲ್ಲಿನ ಪ್ರಶ್ನೆಗಳು, ಮಕ್ಕಳ ಉತ್ತರ, ಕ್ವಿಜ್ ನಡೆಸಿದ ಮೇಘವಿ ಮಂಜುನಾಥ್‌ಅವರ ಶೈಲಿಯನ್ನು ಗಮನಿಸಿ ನಿಸ್ಸಂಕೋಚವಾಗಿ ಜೈ ಹೋ ಎನ್ನುತ್ತಿದ್ದರು’ ಎಂದು‍ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಹೇಳಿದರು.

ಬೆಂಗಳೂರು ನಗರ ಸಂಚಾರ ವಿಭಾಗದ ಜಂಟಿ ಆಯುಕ್ತ ಡಾ.ಬಿ.ಆರ್‌.ರವಿಕಾಂತೇ ಗೌಡ ಮಾತನಾಡಿ, ‘ಜಮಖಂಡಿ, ರಾಯಚೂರಿನಂತಹ ಪ್ರದೇಶಗಳಿಂದ ಬಂದ ಮಕ್ಕಳಿಗೆ ಇಂತಹ ದೊಡ್ಡ ವೇದಿಕೆ ಸಿಕ್ಕಿ ಪ್ರತಿಭೆ ಪ್ರದರ್ಶಿಸಿದಾಗ ಇತರ ವಿದ್ಯಾರ್ಥಿಗಳಿಗೂ ಸ್ಫೂರ್ತಿಯಾಗುತ್ತಾರೆ. ಇದರಿಂದ ವಿದ್ಯಾರ್ಥಿಗಳ ಆತ್ಮವಿಶ್ವಾಸ ವೃದ್ಧಿಸುತ್ತದೆ. ಓದಿನ ಜತೆಗೆ ಆತ್ಮವಿಶ್ವಾಸವನ್ನೂ ಹೆಚ್ಚಿಸಿಕೊಳ್ಳಬೇಕಾಗುತ್ತದೆ. ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಬಳಗ ಇಂತಹ ವೇದಿಕೆ ಒದಗಿಸಿ ಸಾಮಾಜಿಕ ಕಾಳಜಿ ಮತ್ತು ಜವಾಬ್ದಾರಿಯನ್ನು ಹೆಚ್ಚು ಪ್ರಚುರಪಡಿಸಿದೆ’ ಎಂದರು.

ಬೆಳಿಗ್ಗೆ ಬೆಂಗಳೂರು ವಲಯ ಮಟ್ಟದ ಕ್ವಿಜ್‌ ಚಾಂಪಿಯನ್‌ಷಿಪ್‌ ನಡೆಯಿತು. ವಿಜೇತ ತಂಡಕ್ಕೆ ಬಿಬಿಎಂಪಿವಿಶೇಷ ಆಯುಕ್ತ (ಯೋಜನೆಗಳು) ರವಿಕುಮಾರ್‌ ಸುರಪುರ್‌,ಬಿಡದಿಯ ಶಶಿ ತಟ್ಲೆ ಇಡ್ಲಿ ಹೋಟೆಲ್‌ನ ಮಾಲೀಕ ಬಿ.ಸಿ.ಶಶಿಕುಮಾರ್‌, ದೀಕ್ಷಾ ಶಿಕ್ಷಣ ಸಮೂಹದ ಸಹ ಸಂಸ್ಥಾಪಕಿ ಲಲಿತಾ ಶ್ರೀಧರ್‌ ಅವರು ವಲಯ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿದರು.ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಬೆಂಗಳೂರು ಹಾಲು ಒಕ್ಕೂಟದ (ಬಮೂಲ್‌) ಪ್ರಧಾನ ವ್ಯವಸ್ಥಾಪಕ (ಮಾರುಕಟ್ಟೆ) ಡಾ.ಬಿ.ಪಿ.ಸುರೇಶ್‌, ‘ಪ್ರಜಾವಾಣಿ’ ಆನ್‌ಲೈನ್‌ ಸಂಪಾದಕ ಅವಿನಾಶ್‌ ಬೈಪಡಿತ್ತಾಯ ಪಾಲ್ಗೊಂಡಿದ್ದರು. ಆರಂಭದಲ್ಲಿ ಎರಡು ಸರಿ ಉತ್ತರಗಳನ್ನು ನೀಡಿದ ಬೆಂಗಳೂರು ಪ್ರೆಸಿಡೆನ್ಸಿ ಶಾಲೆಯ ವೀರ್‌ ಮತ್ತು ಹಾಸನದ ಗಗನ್‌ ಅವರು ಕಾರ್ಯಕ್ರಮ ಉದ್ಘಾಟಿಸುವ ಅವಕಾಶ ಪಡೆದುಕೊಂಡರು. ‘ಪ್ರಜಾವಾಣಿ‘ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ,ಕ್ರೀಡಾ ವಿಭಾಗದ ಮುಖ್ಯಸ್ಥ ಪಿ.ನಾಗೇಶ್‌ ಶೆಣೈ ಬಹುಮಾನ ವಿತರಣಾ ಸಮಾರಂಭದಲ್ಲಿದ್ದರು.

ಅವಳಿಗಳ ‘ತ್ರಿವಳಿ’ ತಂಡ!

‘ಪ್ರಜಾವಾಣಿ ಕ್ವಿಜ್‌ ಚಾಂಪಿಯನ್‌ಷಿಪ್‌’ನ ಅಂತಿಮ ಸ್ಪರ್ಧೆಯಲ್ಲಿ ಹೆಚ್ಚು ಗಮನ ಸೆಳೆದಿದ್ದು ಅವಳಿಗಳಿದ್ದ ಮೂರು ತಂಡಗಳು.

ಮೈಸೂರಿನ ಶ್ರೀರಾಮಕೃಷ್ಣ ವಿದ್ಯಾಶಾಲೆಯ ಗಗನ್ ಮತ್ತು ಗೌರವ್, ದಾವಣಗೆರೆ ತರಳಬಾಳು ಐಸಿಎಸ್‌ಇ ಶಾಲೆಯ ಶಶಾಂಕ್‌ ಮತ್ತು ಶ್ರೇಯಸ್‌ ಹಾಗೂ ರಾಯಚೂರಿನ ಎಸ್‌ಆರ್‌ಎಸ್‌ ಪ್ರೌಢಶಾಲೆಯ ಸಂದೀಪ್‌ ಮತ್ತು ಸುದೀಪ್‌ ಅವಳಿ ಸಹೋದರರು ಸ್ಪರ್ಧೆಯನ್ನು ಒಟ್ಟಾಗಿ ಎದುರಿಸಿದರು.

‘ಇಬ್ಬರೂ ಒಂದೇ ತರಗತಿಯಲ್ಲಿರುವುದರಿಂದ ಮತ್ತು ಜೊತೆಯಾಗಿಯೇ ಇರುವುದರಿಂದ ಸಿದ್ಧತೆ ನಡೆಸಲು ಸುಲಭವಾಗುತ್ತದೆ. ಒಗ್ಗೂಡಿ ಚರ್ಚಿಸಲು ಹೆಚ್ಚು ಸಮಯ ಸಿಗುವುದರಿಂದ ಇಂತಹ ಸ್ಪರ್ಧೆಗಳಲ್ಲಿ ಕಠಿಣ ಪ್ರಶ್ನೆಗಳನ್ನು ಎದುರಿಸುವುದಕ್ಕೆ ತುಂಬಾ ಅನುಕೂಲವಾಗುತ್ತದೆ’ ಎಂದು ಸಹೋದರರು ಹೇಳಿದರು.

***

ಈ ಕ್ವಿಜ್‌ ಚಾಂಪಿಯನ್‌ಷಿಪ್‌ ಅತ್ಯುತ್ತಮವಾಗಿತ್ತು. ಒಂದೂ ಕೆಟ್ಟ ಪ್ರಶ್ನೆ ಇರಲಿಲ್ಲ. ಯಾವುದೇ ವಿಷಯವನ್ನು ಆಳವಾಗಿ ಓದಿದ್ದರಿಂದ ಗೆಲುವು ಸಾಧ್ಯವಾಯಿತು.

- ಆದಿತ್ಯ ಆಚಾರ್ಯ, ಕ್ರೈಸ್ಟ್‌ ಅಕಾಡೆಮಿ, ಬೆಂಗಳೂರು

***

ಸ್ಪರ್ಧೆಯ ಗುಣಮಟ್ಟ ರಾಷ್ಟ್ರಮಟ್ಟದ ಚಾಂಪಿಯನ್‌ ಷಿಪ್‌ಗಳಿಗೆ ಸಮಾನವಾಗಿತ್ತು. ಪ್ರತಿ ಸುತ್ತಿನ ಎಲ್ಲ ಪ್ರಶ್ನೆಗಳೂ ಗುಣಮಟ್ಟದಿಂದ ಕೂಡಿದ್ದವು

ಆದಿತ್ಯ ರಾವ್, ಕ್ರೈಸ್ಟ್‌ ಅಕಾಡೆಮಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT