ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಆಸ್ಪತ್ರೆಗಳಿಗೆ ದರ ಪಟ್ಟಿ ಸಿದ್ಧ

ಕೊರೊನಾ ಸೋಂಕಿತರಿಗೆ ಚಿಕಿತ್ಸೆ: ಸಚಿವ ಸಂಪುಟದಲ್ಲಿ ಅನುಮೋದನೆಯೊಂದೇ ಬಾಕಿ
Last Updated 19 ಜೂನ್ 2020, 20:18 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳನ್ನೂ ಬಳಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಸೋಂಕಿತರಿಗೆ ನೀಡುವ ಚಿಕಿತ್ಸೆಗೆ ಶುಲ್ಕದ ಪಟ್ಟಿಯನ್ನುಕೋವಿಡ್ ಕಾರ್ಯಪಡೆಯು ಸಿದ್ಧಪಡಿಸಿದೆ.

ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಬಿ.ಶ್ರೀರಾಮುಲು ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಅವರನ್ನು ಒಳಗೊಂಡ ಕೋವಿಡ್–19 ಕಾರ್ಯಪಡೆಯು ಚಿಕಿತ್ಸಾ ವೆಚ್ಚದ ಬಗ್ಗೆ ಚರ್ಚಿಸಿ, ಅಂತಿಮ ನಿರ್ಧಾರಕ್ಕೆ ಬಂದಿದೆ. ಸಚಿವ ಸಂಪುಟದಲ್ಲಿ ಅನುಮೋದನೆ ದೊರೆತ ಬಳಿಕ ಖಾಸಗಿ ಆಸ್ಪತ್ರೆಗಳು ಕೂಡಾ ಸೋಂಕಿತರಿಗೆ ನಿಗದಿತ ದರದಲ್ಲಿ ಚಿಕಿತ್ಸೆ ನೀಡಬಹುದಾಗಿದೆ. ಕೆಲ ದಿನಗಳ ಹಿಂದಷ್ಟೆ ಚಿಕಿತ್ಸೆ ಸಂಬಂಧ ಖಾಸಗಿ ಆಸ್ಪತ್ರೆಗಳು ಶುಲ್ಕಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದವು. ಕರ್ನಾಟಕ ಆರೋಗ್ಯ ಕಾಳಜಿ ಸಂಘಟನೆಗಳ ಒಕ್ಕೂಟದ (ಎಫ್‌ಎಚ್‌ಎಕೆ) ಪ‍್ರತಿನಿಧಿ ಸೇರಿ 8 ಮಂದಿ ಸದಸ್ಯರ ದರ ನಿಗದಿ ಸಮಿತಿ, ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಯೋಜನೆಯಡಿ ಬಿಪಿಎಲ್ ಕುಟುಂಬದ‌ ರೋಗಿಗಳಿಗೆ ಕ್ರಮವಾಗಿ ಸಾಮಾನ್ಯ ವಾರ್ಡ್‌ಗೆ ₹ 5,200, ಆಮ್ಲಜನಕ ಸಹಿತ ವಾರ್ಡ್‌ಗೆ ₹ 7,000, ತೀವ್ರ ನಿಗಾ ಘಟಕಕ್ಕೆ ₹ 8,500 ಹಾಗೂವೆಂಟಿಲೇಟರ್ ಸಹಿತ ಐಸಿಯುವಿಗೆ ₹ 10,000 ಶುಲ್ಕಕ್ಕೆ ಬೆಂಬಲ ವ್ಯಕ್ತಪಡಿಸಿತ್ತು. ಆದರೆ, ಸಾಮಾನ್ಯ ರೋಗಿ ಗಳಿಗೆ ಪ್ರಸ್ತಾಪಿಸಿದ ಶುಲ್ಕದಲ್ಲಿ ಶೇ 20ರಷ್ಟು ಕಡಿತ ಮಾಡುವಂತೆ ಸೂಚಿಸಿತ್ತು. ಶುಲ್ಕ ಇಳಿಕೆ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.

ಹಾಸಿಗೆಗಳು ಮೀಸಲು:ಸರ್ಕಾರಿ ಕೋವಿಡ್ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ಉಂಟಾದಲ್ಲಿ ಖಾಸಗಿ ಆಸ್ಪತ್ರೆಗಳು ಕೊರೊನಾ ಸೋಂಕಿತರಿಗೆ ಮೀಸಲಿಡುವ ಒಟ್ಟು ಹಾಸಿಗೆಗಳಲ್ಲಿ ಶೇ 50 ರಷ್ಟನ್ನು ಸರ್ಕಾರಿ ಆಸ್ಪತ್ರೆಗಳು ಶಿಫಾರಸು ಮಾಡುವ ರೋಗಿಗಳಿಗೆ ಮೀಸಲಿಡಬೇಕು.

ಉಳಿದ ಶೇ 50 ರಷ್ಟು ಹಾಸಿಗೆಗಳಿಗೆ ರೋಗಿಗಳನ್ನು ನೇರವಾಗಿ ದಾಖಲಿಸಿ ಕೊಳ್ಳುವ ವ್ಯವಸ್ಥೆ ರೂಪಿಸಬೇಕು ಎಂಬ ಅಭಿಪ್ರಾಯವು ಸಭೆಯಲ್ಲಿ ವ್ಯಕ್ತವಾಗಿದೆ.

‘ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಕಾರ್ಯಪಡೆಯಲ್ಲಿ ದರದ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ವೇಳೆ ವಿವಿಧ ರಾಜ್ಯಗಳ ಖಾಸಗಿ ಆಸ್ಪತ್ರೆಗಳಲ್ಲಿ ನಿಗದಿ ಪಡಿಸಿರುವ ದರದ ವಿವರಗಳನ್ನು ಪರಿಶೀಲಿಸಿದ್ದೇವೆ. ಸಚಿವ ಸಂಪುಟ ಸಭೆಯಲ್ಲಿ ದರ ಅಂತಿಮಗೊಳ್ಳಲಿದ್ದು, ಬಳಿಕ ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ಅವಕಾಶ ನೀಡಲಾಗುವುದು’ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT